Cini NewsSandalwood

“ಜಸ್ಟ್ ಪಾಸ್” ಹಾಡುಗಳು ಬಿಡುಗಡೆ ಮಾಡಿದ ಶಾಸಕ ಪ್ರದೀಪ್ ಈಶ್ವರ್

Spread the love

ಚಿಕ್ಕ ಬಳ್ಳಾಪುರ ಕ್ಷೇತ್ರದ ಹಾಲಿ ಶಾಸಕರು ಹಾಗೂ ಪರಿಶ್ರಮ ಅಕಾಡೆಮಿಯ ಸ್ಥಾಪಕರು ಆದ ಪ್ರದೀಪ್ ಈಶ್ವರ್, ರಾಯ್ಸ್ ಎಂಟರ್ ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕೆ.ವಿ.ಶಶಿಧರ್ ನಿರ್ಮಿಸಿರುವ, ಕೆ.ಎಂ.ರಘು ನಿರ್ದೇಶನದ ಹಾಗೂ ಶ್ರೀ, ಪ್ರಣತಿ ನಾಯಕ-ನಾಯಕಿಯಾಗಿ ನಟಿಸಿರುವ “ಜಸ್ಟ್ ಪಾಸ್” ಚಿತ್ರದ ಹಾಡನ್ನು ಖ್ಯಾತ ಪತ್ರಕರ್ತ ವಿಶ್ವವಾಣಿಯ ಮುಖ್ಯ ಸಂಪಾದಕ ವಿಶ್ವೇಶ್ವರ ಭಟ್ ಅವರ ಜೊತೆಗೂಡಿ ಬಿಡುಗಡೆ ಮಾಡಿದರು. ಕವಿರಾಜ್ ಬರೆದಿರುವ, ಹರ್ಷವರ್ಧನ್ ರಾಜ್ ಸಂಗೀತ ನೀಡಿರುವ “ಟೈಮಿಗೇ ಟೈಮೇನೇ ದುಶ್ಮನ್” ಎಂಬ ಯುವಕರಿಗೆ ಪ್ರಿಯವಾಗುವ ಈ ಗೀತೆ A2 ಮ್ಯೂಸಿಕ್ ಮೂಲಕ ಬಿಡುಗಡೆಯಾಗಿ ಎಲ್ಲರ ಮನ ಗೆಲ್ಲುತ್ತಿದೆ.

ಪ್ರಪಂಚದಲ್ಲಿ ಹೆಚ್ಚು ಅಂಕ ಬಂದವರಿಗೆ ಸಾಕಷ್ಟು ಕಾಲೇಜುಗಳಿದೆ. ಆದರೆ “ಜಸ್ಟ್ ಪಾಸ್” ಆದವರಿಗಾಗಿಯೇ ನಮ್ಮ ಚಿತ್ರದಲ್ಲಿ ಕಾಲೇಜು ತೆರೆಯಲಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡು ಹಾಗೂ ಟೀಸರ್ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಇಂದು ಈ ಹಾಡನ್ನು ನಾನು ಇಷ್ಟಪಡುವ ಬರಹಗಾರರಾದ ವಿಶ್ವೇಶ್ವರ ಭಟ್ ಹಾಗೂ ಶಾಸಕರಾದ ಪ್ರದೀಪ್ ಈಶ್ವರ್ ಬಿಡುಗಡೆ ಮಾಡಿದ್ದು ಬಹಳ ಖುಷಿಯಾಗಿದೆ.

ಏಕೆಂದರೆ ಪರಿಶ್ರಮ ಅಕಾಡೆಮಿಯ ಮೂಲಕ ಪ್ರದೀಪ್ ಈಶ್ವರ್ ಅವರು ಸಹ ಸಾಕಷ್ಟು ಜಸ್ಟ್ ಪಾಸ್ ಆದ ವಿದ್ಯಾರ್ಥಿಗಳನ್ನು ಫಸ್ಟ್ ಕ್ಲಾಸ್ ಬರುವ ಹಾಗೆ ಮಾಡುತ್ತಿದ್ದಾರೆ. ಅವರು ನಮ್ಮ ಚಿತ್ರದ ಹಾಡನ್ನು ಬಿಡುಗಡೆ ಮಾಡಿದ್ದು ನಿಜಕ್ಕೂ ಹೆಮ್ಮೆ ಎಂದು ತಿಳಿಸಿದ ನಿರ್ದೇಶಕ ಕೆ.ಎಂ.ರಘು, ಪ್ರದೀಪ್ ಈಶ್ವರ್ ತಮ್ಮ “ಪರಿಶ್ರಮ” ಪುಸ್ತಕದಲ್ಲಿ ಬರೆದುಕೊಂಡಿರುವ ಜೀವನದ ಕುರಿತಾದ ನಾಲ್ಕು ಅರ್ಥಗರ್ಭಿತ ಸಾಲುಗಳನ್ನು ವಾಚಿಸಿದರು.

ಪ್ರದೀಪ್ ಈಶ್ವರ್ ಹಾಗೂ ವಿಶ್ವೇಶ್ವರ ಭಟ್ ಅವರು ನಮ್ಮ ಚಿತ್ರದ ಹಾಡನ್ನು ಬಿಡುಗಡೆ ಮಾಡಿ ಹಾರೈಸಿದ್ದಾರೆ ಅವರಿಗೆ ಹಾಗೂ ನನ್ನ ಚಿತ್ರತಂಡಕ್ಕೆ ಧನ್ಯವಾದ ಎಂದರು ನಿರ್ಮಾಪಕ ಕೆ.ವಿ.ಶಶಿಧರ್. ನಮ್ಮ ದೇಶದ ಅತೀ ಹೆಚ್ಚು ಶ್ರೀಮಂತರೆಲ್ಲಾ “ಜಸ್ಟ್ ಪಾಸ್” ಹಾಗೂ ಅದಕ್ಕಿಂತ ಸ್ವಲ್ಪ ಹೆಚ್ಚು ಅಂಕ ಪಡೆದಿರುವವರೆ ಎಂದು ಮಾತನಾಡಿದ ವಿಶ್ವೇಶ್ವರ ಭಟ್ ಅವರು ಚಿತ್ರದ ಹಾಡುಗಳು ತುಂಬಾ ಚೆನ್ನಾಗಿದೆ. ಚಿತ್ರದ ಹೆಸರು “ಜಸ್ಟ್ ಪಾಸ್” ಅಷ್ಟೇ. ಆದರೆ ಗಳಿಕೆಯಲ್ಲಿ “ಫಸ್ಟ್ ಕ್ಲಾಸ್” ಆಗಲಿ ಎಂದು ಹಾರೈಸಿದರು.

ನಿಜವಾಗಲೂ ನಮ್ಮ ದೇಶದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದರೆ ಅದು “ಜಸ್ಟ್ ಪಾಸ್” ಆದರಿಂದ ಮಾತ್ರ. ಉದಾಹರಣೆಗೆ ನಾನೇ. ಜೀವನದಲ್ಲಿ ಸಾಕಷ್ಟು ಕಷ್ಟಪಟ್ಟ ನಾನು, ಇಂದು “ಪರಿಶ್ರಮ” ಅಕಾಡೆಮಿ ಸ್ಥಾಪಿಸಿ ಐನ್ನೂರಕ್ಕೂ ಹೆಚ್ಚು ಜನರಿಗೆ ಕೆಲಸ ನೀಡಿದ್ದೇನೆ. ವರ್ಷಕ್ಕೆ ಸಾಕಷ್ಟು ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಿಂದ ವೈದ್ಯರಾಗುತ್ತಿದ್ದಾರೆ. ಹಾಗಂತ ನೀವು rank ಬರಬೇಡಿ ಎಂದು ಹೇಳುತ್ತಿಲ್ಲ. ಆದರೆ “ಜಸ್ಟ್ ಪಾಸ್” ಆದೆ ಅಂತ ಬೇಜಾರು ಮಾಡಿಕೊಳ್ಳಬೇಡಿ. ನನಗೆ ತಿಳಿದ ಹಾಗೆ ಈ ಚಿತ್ರದ ಕಥೆಯೂ ಇದೇ ರೀತಿ ಇರಬಹುದು. “ಜಸ್ಟ್ ಪಾಸ್” ಚಿತ್ರ ಚೆನ್ನಾಗಿ ಓಡಲಿ ಎಂದು ಶಾಸಕ ಪ್ರದೀಪ್ ಈಶ್ವರ್ ತಮ್ಮದೇ ಮಾತಿನ ಶೈಲಿಯಲ್ಲಿ ಚಿತ್ರತಂಡಕ್ಕೆ ಶುಭ ಕೋರಿದರು ‌.

ನಾಯಕ ಶ್ರೀ, ನಾಯಕಿ ಪ್ರಣತಿ, ನಟ ಸುಚೇಂದ್ರ ಪ್ರಸಾದ್, ಸಂಗೀತ ನಿರ್ದೇಶಕ ಹರ್ಷವರ್ಧನ್ ರಾಜ್, ಛಾಯಾಗ್ರಾಹಕ ಸುಜಯ್ ಕುಮಾರ್ ಮುಂತಾದ ಚಿತ್ರತಂಡದ ಸದಸ್ಯರು “ಜಸ್ಟ್ ಪಾಸ್” ಬಗ್ಗೆ ಮಾತನಾಡಿದರು.

Visited 1 times, 1 visit(s) today
error: Content is protected !!