Cini NewsMovie Review

‘ರಂಗಸಮುದ್ರ’ದಲ್ಲಿ ತಾತ ಮೊಮ್ಮಗನ ಬದುಕಿನಲ್ಲಿ ವಿದ್ಯೆಯೇ ಆಸ್ತಿ(ಚಿತ್ರವಿಮರ್ಶೆ-ರೇಟಿಂಗ್ : 3.5 /5)

Spread the love

ರೇಟಿಂಗ್ : 3.5 /5

ಚಿತ್ರ : ರಂಗಸಮುದ್ರ
ನಿರ್ದೇಶಕ : ರಾಜಕುಮಾರ್ ಅಸ್ಕಿ
ನಿರ್ಮಾಪಕ : ಹೊಯ್ಸಳ ಕೊಣನೂರು
ಸಂಗೀತ : ದೇಸಿ ಮೋಹನ್
ಛಾಯಾಗ್ರಹಕ : ಆರ್. ಗಿರಿ
ತಾರಾಗಣ : ರಂಗಾಯಣ ರಘು , ರಾಘವೇಂದ್ರ ರಾಜಕುಮಾರ್, ಸ್ಕಂದ ತೇಜಸ್ , ಸಂಪತ್ ರಾಜ್ , ಗುರುರಾಜ್ ಹೊಸಕೋಟೆ , ಉಗ್ರಂ ಮಂಜು , ಮೋಹನ್ ಜುನೇಜ್ , ಕಾರ್ತಿಕ್ ರಾವ್ , ದಿವ್ಯಗೌಡ , ಮಹೇಂದ್ರ, ಪ್ರೀತಂ , ಪ್ರಥಮ್ ಹಾಗೂ ಮುಂತಾದವರು…

ಗ್ರಾಮೀಣ ಭಾಗದಲ್ಲಿ ಇಂದಿಗೂ ಕೂಡ ನಮ್ಮ ಸೋಡಿನ ಆಚಾರ , ವಿಚಾರ , ಸಂಸ್ಕೃತಿ , ಕಲೆ , ಪದ್ಧತಿ ನಡೆದುಕೊಂಡು ಬರುತ್ತಿದೆ. ಅಂತದೇ ಒಂದು ಕರ್ನಾಟಕ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಇರುವಂತ “ರಂಗಸಮುದ್ರ” ದ ಊರಿನಲ್ಲಿ ನಡೆಯುವ ತಾತ ಮೊಮ್ಮಗನ ಪ್ರೀತಿ , ಬಾಂಧವ್ಯ , ಬೆಸುಗೆಯಲ್ಲಿ ಶಿಕ್ಷಣ ಎಷ್ಟು ಮುಖ್ಯ , ಸಾಹುಕಾರ ಹಾಗೂ ಬಡವರ ನಡುವಿನ ಅಂತರ , ಜಾನಪದ ದೇಸಿ ಕಲೆಯ ಶಕ್ತಿ , ತುಂಟ ಹುಡುಗರ ಆಟ ಪಾಠ , ಶಿಕ್ಷಕರು ಎಡವಟ್ಟಿನ ಪ್ರೇಮ ಪ್ರಸಂಗ ಹೀಗೆ ಒಂದಷ್ಟು ಪಯಣದ ಹಾದಿಯಲ್ಲಿ ಗಮನ ಸೆಳೆಯುವಂತಹ ಸಂದೇಶ ಹೇಳುವ ಕಥಾಂದರ ಒಳಗೊಂಡಿರುವಂತಹ “ರಂಗಸಮುದ್ರ” ಈ ವಾರ ತೆರೆಯ ಮೇಲೆ ಬಂದಿದೆ.

ಸುಂದರವಾದ ಪರಿಸರದ ಊರು “ರಂಗಸಮುದ್ರ”. ಆ ಊರಿನ ಹಿರಿಯ ಜೀವ ಚೆನ್ನಪ್ಪ (ರಂಗಾಯಣ ರಘು). ಆಸಕ್ತ ಹುಡುಗರನ್ನೆಲ್ಲ ಒಗ್ಗೂಡಿಸಿ ಡೊಳ್ಳು ಕುಣಿತದ ದೇಸಿ ಕಲೆಯನ್ನು ಪಸರಿಸುವುದೇ ಅವನ ಉದ್ದೇಶ. ಚೆನ್ನಪ್ಪನ ಡೊಳ್ಳು ಕುಣಿತಕ್ಕೆ ಇಡೀ ಊರೇ ಕುಣಿದು ಕೊಪ್ಪಡಿಸುವಂತೆ ಮಾಡುವ ಶಕ್ತಿವಂತ. ತಾನಾಯಿತು ತನ್ನ ಮುದ್ದಾದ ಮೊಮ್ಮಗ ಮಹಾಲಿಂಗ ಉರುಫ್ ಗೂಬೇ (ಸ್ಕಂದ ತೇಜಸ್).

ಬಡಸ್ಥಿತಿ ಯಲ್ಲಿದ್ದರೂ ಯಾರ ದರ್ಪ , ದಬ್ಬಾಳಿಗೂ ಬಗ್ಗದೆ ಮೊಮ್ಮಗನನ್ನ ಶಾಲೆಗೆ ಕಳಿಸುತ್ತಾ ನೆಮ್ಮದಿ ಬದುಕು ಸಾಗಿಸುವವನು. ಇನ್ನು ಮೊಮ್ಮಗ ಗೂಬೇ ತನ್ನ ಗೆಳೆಯರೊಟ್ಟಿಗೆ ಶಾಲೆಯಲ್ಲಿ ತುಂಟಾಟ , ತರ್ಲೆಯಲ್ಲಿ ಎತ್ತಿದ ಕೈ ಯಾಗಿರುತ್ತಾನೆ. ಇನ್ನು ಮಂಗಳೂರು ಮೇಷ್ಟ್ರು ಭಟ್ (ಕಾರ್ತಿಕ್ ರಾವ್) ಉತ್ತರ ಕರ್ನಾಟಕದ ಖಡಕ್ ಮಕ್ಕಳಿಗೆ ಪಾಠ ಹೇಳಿಕೊಡಲು ಹರಸಾಹಸ ಮಾಡುತ್ತಾರೆ. ಇದರ ನಡುವೆ ಅದೇ ಶಾಲೆಯ ವಾಣಿ (ದಿವ್ಯಗೌಡ) ಟೀಚರನ್ನು ಇಷ್ಟಪಡುತ್ತಾನೆ. ಇವರಿಬ್ಬರ ಲವ್ ಟ್ರ್ಯಾಕ್ ಕಂಡರು ಕಾಣದಂತೆ ಸಾಗುತ್ತದೆ.

ಊರ ಸಾಹುಕಾರ (ಸಂಪತ್ ರಾಜ್) ಕೆಲವು ಮಕ್ಕಳನ್ನು ಸೇರಿದಂತೆ ಕಷ್ಟದಲ್ಲಿ ಇರುವವರನ್ನು ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡು ಜೀತ ಮಾಡಿಸುತ್ತಿರುತ್ತಾನೆ. ಅವನ ಶ್ರೀಮಂತಿಕೆ ಆತನ ಕಾರು ಊರಿನ ಯಾರೊಬ್ಬರೂ ಕೂಡ ಎದುರುವಾದಿಸಿದಂತೆ ಮಾಡಿರುತ್ತದೆ. ಈ ಶ್ರೀಮಂತನ ಪುಟ್ಟ ಮಗಳು ನಂದಿನಿ ಕೂಡ ಎಲ್ಲಾ ಮಕ್ಕಳಂತೆ ಅದೇ ಶಾಲೆಯಲ್ಲಿ ಓದುತ್ತಾಳೆ. ಕಾರು ಇರುವುದು ಶ್ರೀಮಂತರಿಗೆ ಮಾತ್ರ , ಅದಿದ್ದರೆ ಗೌರವ , ಭಯಪಡುವಂತಿಲ್ಲ ಎಂಬ ಭಾವನೆ ಮಕ್ಕಳ ಮನಸ್ಸಿನ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ.

ಒಮ್ಮೆ ಊರ ಜಾತ್ರೆಯಲ್ಲಿ ಸಾಹುಕಾರನಿಂದ ಕಾರಿನ ಸಂಬಂಧ ಚೆನ್ನಪ್ಪನಿಗೆ ಅವಮಾನವಾಗುತ್ತದೆ. ಇದನ್ನ ಕಣ್ಣಾರೆ ಕಂಡ ಮೊಮ್ಮಗ ಸಾಹುಕಾರನಿಗೆ ತನ್ನ ತಾತನನ್ನು ಕಾರಿನಲ್ಲಿ ಊರ ಸುತ್ತ ಕರೆದೊಯ್ಯುವೆ ಎಂದು ಸವಾಲು ಹಾಕುತ್ತಾನೆ. ತಾತನಿಗಾಗಿ ಕಾರು ತರಲು ನಿರ್ಧರಿಸಿ ಗೆಳೆಯರೊಟ್ಟಿಗೆ ಊರು ಬಿಟ್ಟು ಹೋಗುತ್ತಾನೆ. ಈತ ತಾತನಿಗೆ ಮೊಮ್ಮಗನಿಲ್ಲದೆ ಜೀವ ಚಡಪಡಿಸುತ್ತಾ ಹುಡುಕಲಾರಂಭಿಸುತ್ತಾನೆ. ಮುಂದೆ ಬರುವ ಕೆಲವು ಸಂದರ್ಭಗಳು ಬದುಕಿನ ದಿಕ್ಕನ್ನೇ ಬದಲಿಸುವ ದಾರಿಯನ್ನ ತೋರುವ ಅಂತಕ್ಕೆ ಬಂದು ನಿಲ್ಲುತ್ತದೆ.

ಮೊಮ್ಮಗ ಕಾರು ತರುತ್ತಾನಾ..
ತಾತ ಸ್ಥಿತಿ ಏನಾಗುತ್ತೆ…
ಸಾಹುಕಾರನ ದರ್ಪ ಮುರಿಯುತ್ತಾ…
ಮೂಲ ಸಂದೇಶ ಏನು…
ಈ ಎಲ್ಲಾ ವಿಚಾರ ತಿಳಿಯಬೇಕಾದರೆ ಒಮ್ಮೆ ಈ ರಂಗಸಮುದ್ರ ಚಿತ್ರ ನೋಡಬೇಕು.

ಈ ಚಿತ್ರದ ಪ್ರಮುಖ ಕೇಂದ್ರ ಬಿಂದು ರಂಗಾಯಣ ರಘು ಚೆನ್ನಪ್ಪನ ಪಾತ್ರವನ್ನ ಜೀವಿಸಿದ್ದಾರೆ. ಮೊಮ್ಮಗನ ಪ್ರೀತಿಯ ತಾತನಾಗಿ ಅಭಿನಯಿಸುವುದರ ಜೊತೆಗೆ ಅಲ್ಲಿನ ಸೊಗಡು , ಕಲೆಯ , ಮಾತಿನ ಶೈಲಿ , ಭಾವನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.ಇನ್ನು ಮೊಮ್ಮಗನಾಗಿ ಅಭಿನಯಿಸಿರುವ ಸ್ಕಂದ ಕೂಡ ಗಮನ ಸೆಳೆಯುವಂತೆ ಅಭಿನಯಿಸಿದ್ದು , ಉಜ್ವಲ ಭವಿಷ್ಯವಿರುವ ಪ್ರತಿಭೆಯಾಗಿ ಕಾಣಿಸಿಕೊಂಡಿದ್ದಾನೆ.

ಇನ್ನು ಮತ್ತೊಬ್ಬ ಪ್ರತಿಭೆ ಮಹೇಂದ್ರ ಕೂಡ ತನ್ನ ನಟನ ಸಾಮರ್ಥ್ಯವನ್ನು ಅಚ್ಚುಕಟ್ಟಾಗಿ ತೋರಿಸಿದ್ದಾನೆ. ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ರಾಘವೇಂದ್ರ ರಾಜಕುಮಾರ್ ರವರ ಪಾತ್ರ ಕೂಡ ಇಡೀ ಕಥೆಯ ಸ್ಪೂರ್ತಿದಾಯಕ ಸಂದೇಶದ ಮೂಲಕ ಗಮನ ಸೆಳೆಯುತ್ತದೆ. ಊರ ಸಾಹುಕಾರನಾಗಿ ಸಂಪತ್ ಕುಮಾರ್ ಅವನ ಬಂಟನಾಗಿ ಉಗ್ರಂ ಮಂಜು ಗಮನ ಸೆಳೆಯುವಂತೆ ನಟಿಸಿದ್ದಾರೆ ಇನ್ನು ಮೇಷ್ಟ್ರು ಪಾತ್ರದಲ್ಲಿ ಕಾರ್ತಿಕ್ ರಾವ್ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಅದೇ ರೀತಿ ನಟಿ ದಿವ್ಯಗೌಡ ಕೂಡ ಸಿಕ್ಕ ಅವಕಾಶ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಮಿಮಿಕ್ರಿ ಗೋಪಿ, ಮೋಹನ್ ಜುನೇಜ್ , ಮೂಗು ಸುರೇಶ್ , ಗುರುರಾಜ್ ಹೊಸಕೋಟೆ ಸೇರಿದಂತೆ ಎಲ್ಲಾ ಪಾತ್ರದಾರಿಗಳು ಚಿತ್ರಕ್ಕೆ ಉತ್ತಮ ಸಾಥ್ ನೀಡಿದ್ದಾರೆ.

ಇನ್ನು ಯುವ ನಿರ್ದೇಶಕ ರಾಜ್‌ಕುಮಾರ್ ಅಸ್ಕಿ ಆಯ್ಕೆ ಮಾಡಿಕೊಂಡಿರುವ ಕಥೆ ವಿಭಿನ್ನವಾಗಿದೆ. ಗ್ರಾಮೀಣ ಭಾಗದ ಕಲೆ , ಸಂಸ್ಕೃತಿಯ ಜೊತೆಗೆ ಶಿಕ್ಷಣವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುವುದನ್ನು ಸಮರ್ಥವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ತಾತ ಮೊಮ್ಮಗನ ಬಾಂಧವ್ಯ , ಸ್ಥಿತಿ ಗತಿ , ಸ್ನೇಹ , ಪ್ರೀತಿ , ವೈಶ್ಯಮ್ಯ ಜೊತೆಗೆ ಸಂದೇಶದ ಬೆಳಕು ಗಮನ ಸೆಳೆಯುತ್ತದೆ. ಆದರೆ ಚಿತ್ರಕಥೆಯ ಓಟ ವೇಗ ಮಾಡಬೇಕಿತ್ತು , ಕೆಲವು ಸನ್ನಿವೇಶಗಳು ಇದ್ದಲ್ಲೇ ಗಿರ್ಕಿ ಹೊಡೆದಂತಿದೆ. ಆದರೆ ಪ್ರಯತ್ನ ಉತ್ತಮವಾಗಿದೆ.

ಇಂತಹ ಸೊಗಡಿನ ಚಿತ್ರ ನಿರ್ಮಾಣ ಮಾಡಿರುವ ನಿರ್ಮಾಪಕರ ಧೈರ್ಯವನ್ನು ಕೂಡ ಮೆಚ್ಚಲೇಬೇಕು. ಇನ್ನು ಛಾಯಾಗ್ರಹಕ ಆರ್. ಗಿರಿ ಕ್ಯಾಮೆರಾ ಕೈಚಳಕ ಉತ್ತಮವಾಗಿ ಮೂಡಿಬಂದಿದೆ. ಅಷ್ಟೇ ಸೊಗಸಾಗಿ ದೇಸಿ ಮೋಹನ್ ಸಂಗೀತ ಹಾಗೂ ಡೇನಿಯಲ್ ಕಿರಣ್ ಹಿನ್ನೆಲೆ ಸಂಗೀತ ಗಮನ ಸೆಳೆಯುವಂತಿದೆ. ಒಟ್ಟರೆ ಯಾವುದೇ ಮುಜುಗರವಿಲ್ಲದಂತೆ ಕುಟುಂಬ ಸಮೇತ ನೋಡುವಂತಹ ಚಿತ್ರ  ಇದಾಗಿದೆ.

Visited 2 times, 1 visit(s) today
error: Content is protected !!