Cini NewsSandalwood

ಆನೆಗುಡ್ಡೆ ವಿನಾಯಕ ಸನ್ನಿಧಿಯಲ್ಲಿ “ಕಾಂತಾರ” ಹೊಸ ಅಧ್ಯಾಯ ಶುರು, ಫಸ್ಟ್ ಲುಕ್ ಬಿಡುಗಡೆ

Spread the love

ತುಳುನಾಡಿನ ಆರಾಧ್ಯ ದೈವ ಹಾಗೂ ಅದರ ಆಚರಣೆ, ಪದ್ಧತಿ, ನೋವು, ನಲಿವಿನ ಸುತ್ತ ಸಾಗಿದ “ಕಾಂತಾರ” ಚಿತ್ರ ಕನ್ನಡದಲ್ಲಿ ಬಿಡುಗಡೆಗೊಂಡು ಪ್ರಚಂಡ ಯಶಸ್ಸನ್ನ ಕಂಡು ಬೇರೆ ಭಾಷೆಗಳಿಗೆ ಡಬ್ ಆಗಿ ಇಡೀ ವಿಶ್ವದಾದ್ಯಂತ ಗಮನ ಸೆಳೆದು , ಚಿತ್ರರಂಗವೇ ಒಮ್ಮೆ ತಿರುಗಿ ನೋಡುವ ಹಾಗೇ ಮಾಡಿ ದಾಖಲೆಯ ಕಲೆಕ್ಷನ್ ಅನ್ನು ಪಡೆದುಕೊಂಡಿತ್ತು. ಇದರ ಮುಂದುವರೆದ ಭಾಗ ಬರುತ್ತಾ ಎಂಬ ಪ್ರಶ್ನೆಗೆ ಒಂದು ಉತ್ತರ ಸಿಕ್ಕಿದೆ.

ಈಗ “ಕಾಂತಾರ” ಚಿತ್ರದ (ಪ್ರೀಕ್ವೆಲ್) ಚಾಪ್ಟರ್-1 ಬರಲಿದ್ದು, ಈ ಚಿತ್ರದ ಫಸ್ಟ್ ಲುಕ್ ಹಾಗೂ ಮುಹೂರ್ತ ಸಮಾರಂಭ ಕಾರ್ಯಕ್ರಮ ಕುಂದಾಪುರದ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ಸನ್ನಿಧಿಯಲ್ಲಿ ನೆರವೇರಿದೆ. ಹೊಂಬಾಳೆ ಫಿಲಂಸ್ ನಡಿಯಲ್ಲಿ ವಿಜಯ್ ಕಿರಗೊಂದೂರು ನಿರ್ಮಾಣದ ಕೆಜಿಎಫ್ , ಕೆಜಿಎಫ್ -2 , ಕಾಂತಾರ ಚಿತ್ರಗಳು ದಾಖಲೆಯ ಯಶಸ್ಸನ್ನ ಗಳಿಸಿ ಇಡೀ ವಿಶ್ವದ ಗಮನವನ್ನು ಸೆಳೆದಿದೆ.

ಈಗ “ಕಾಂತಾರ ಚಾಪ್ಟರ್-1” (ಫ್ರೀಕ್ವೆಲ್) ಕೂಡ ಯಶಸ್ಸನ್ನ ಪಡೆಯುವ ಹಾದಿಯಲ್ಲಿ ಇಡೀ ತಂಡ ಶ್ರಮ ವಹಿಸಲು ಮುಂದಾಗಿದೆ. ಈಗಾಗಲೇ ಈ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಹುಟ್ಟಿಕೊಂಡಿದ್ದು , ಸ್ಕ್ರಿಪ್ಟ್ ಕೆಲಸಗಳು ಮುಗಿದಿದೆಯಂತೆ. ಸದ್ಯ ಲೊಕೇಶನ್ ಹುಡುಕಾಟದಲ್ಲಿದ್ದು , ರಂಗಭೂಮಿ ಪ್ರತಿಭೆಗಳು , ಸೇರಿದಂತೆ ಹೊಸ ಪ್ರತಿಭೆಗಳಿಗೂ ಕೂಡ ಅವಕಾಶ ನೀಡುವ ಆಲೋಚನೆ ಚಿತ್ರತಂಡದಲ್ಲಿ ಇದೆಯಂತೆ.

ಇನ್ನು ವಿಶೇಷವಾಗಿ ಈ ಚಿತ್ರದ ಮುಹೂರ್ತದ ಜೊತೆಗೆ ಫಸ್ಟ್‌ ಲುಕ್‌ ರಿಲೀಸ್‌ ಮಾಡುವ ಮೂಲಕ ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದ್ದಾರೆ. ನಟ ರಿಷಬ್ ಶೆಟ್ಟಿ ನಟಿಸಿ , ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಕೈಯಲ್ಲಿ ತ್ರಿಶೂಲ ಇಟ್ಟುಕೊಂಡು, ಉದ್ದ ಗಡ್ಡವನ್ನು ಬಿಟ್ಟಿದ್ದಾರೆ.

ಇನ್ನೊಂದು ಕೈಯಲ್ಲಿ ಕೊಡಲಿ ರೀತಿಯ ಆಯುಧವನ್ನು ಇಟ್ಟುಕೊಂಡು ರೌದ್ರ ಅವತಾರವನ್ನು ತಾಳಿದ್ದಾರೆ. ಯುದ್ದದಲ್ಲಿ ಹೋರಾಡುವ ರೀತಿ ತೋರಿಸಲಾಗಿದೆ. ಇವೆಲ್ಲವೂ ಚಿತ್ರದ ಕಥೆಯ ಒಳನೋಟ ಹೇಳಿದಂತಿದೆ. ಈಗಾಗಲೇ 7 ಭಾಷೆಯಲ್ಲೂ ಪೋಸ್ಟರ್‌ ರಿಲೀಸ್‌ ಮಾಡಲಾಗಿದೆ. ಕೆಲವು ಮೂಲಗಳ ಪ್ರಕಾರ ʼಕಾಂತಾರʼ ಪ್ರೀಕ್ವೆಲ್‌ ನಲ್ಲಿ ಪಂಜುರ್ಲಿ ದೈವದ ಮೂಲ ಹಾಗೂ ಹುಟ್ಟಿನ ಕಥೆ ಇರಲಿದೆ ಎನ್ನಲಾಗಿದೆ.

ಈಗ ಹೊರ ಬಂದಿರುವ ಅಜನೀಶ್‌ ಅವರ ಮ್ಯೂಸಿಕ್‌ ಟೀಸರ್‌ ವೀಕ್ಷಕರನ್ನು ರೋಮಾಂಚನ ಗೊಳಿಸಿದೆ. ಬೆಳ್ಳಿ ಪರದೆ ಮೇಲೆ ಮತ್ತೊಮ್ಮೆ ದೈವತ್ವದ ದರ್ಶನವನ್ನು ಅದ್ದೂರಿಯಾಗಿ ತರುವ ಪ್ರಯತ್ನವಾಗುತ್ತಿದೆ ಎಂಬ ಮಾತು ಕೇಳಿ ಬರ್ತಿದೆ. ಒಟ್ನಲ್ಲಿ ರಿಷಬ್ ಶೆಟ್ಟಿಯ ಆಲೋಚನೆಗೆ ತಕ್ಕಂತೆ ಹೊಂಬಾಳೆ ಫಿಲಂಸ್ ನ ಮೂಲಕ ನಿರ್ಮಾಣಗೊಳ್ಳುತ್ತಿರುವ ಈ ಕಾಂತಾರ ಚಾಪ್ಟರ್-1 ಚಿತ್ರದ ಚಿತ್ರೀಕರಣ ಡಿಸೆಂಬರ್ ತಿಂಗಳಲ್ಲಿ ಆರಂಭಗೊಳ್ಳಲಿದ್ದು , ಮುಂದಿನ ವರ್ಷ ತೆರೆಯ ಮೇಲೆ ರಾರಾಜಿಸಲಿದೆಯಂತೆ.

Visited 1 times, 1 visit(s) today
error: Content is protected !!