ಯುವ ಪ್ರತಿಭೆಗಳ “ಮಾಜರ್”ಚಿತ್ರದ ಟ್ರೇಲರ್ ಬಿಡುಗಡೆ.
ಜನವರಿ 15 ಕ್ಕೆ ತೆರೆಗೆ ಬರಲಿದೆ ಡಾ||ಮುರುಗನಂದನ್ ನಿರ್ಮಾಣದ ಹಾಗೂ ಲೋಕಲ್ ಲೋಕಿ ನಿರ್ದೇಶನದ “ಮಾಜರ್”* ಚಿತ್ರ . ಸಂಗೀತ ಸಿನಿ ಹೌಸ್ ಲಾಂಛನದಲ್ಲಿ ಡಾ||ಮುರುಗನಂದನ್ ಎಮ್(ಪುಲಿಮುರುಗನ್) ಅವರು ನಿರ್ಮಿಸಿರುವ, ಲೋಕಲ್ ಲೋಕಿ ನಿರ್ದೇಶನದೊಂದಿಗೆ ಪ್ರಮುಖಪಾತ್ರದಲ್ಲೂ ನಟಿಸಿರುವ “ಮಾಜರ್” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಸಾಕಷ್ಟು ಕುತೂಹಲ ಮೂಡಿಸಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ದೇಶದಲ್ಲಿ ನಾನು ಕಂಡಿರುವ ನಿರ್ಭಯ ಹತ್ಯೆ ಮೊದಲಾದ ದುರಂತಗಳೆ ಈ ಕಥೆ ಬರೆಯಲು ಮುಖ್ಯ ಕಾರಣ. ಇಂತಹ ಕೃತ್ಯಗಳನ್ನು ಪ್ರತಿಯೊಬ್ಬರು ಖಂಡಿಸಬೇಕು. ಹೆಣ್ಣುಮಕ್ಕಳಿಗೆ ನ್ಯಾಯ ಸಿಗಬೇಕು ಎಂಬುದೆ “ಮಾಜರ್” ಚಿತ್ರದ ಮುಖ್ಯ ಉದ್ದೇಶ. ನಾನು ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಮುಖ್ಯಪಾತ್ರದಲ್ಲಿ ಅಭಿನಯ ಕೂಡ ಮಾಡಿದ್ದೇನೆ. ಮುರುಗನಂದನ್ ಅವರು ನಿರ್ಮಾಣ ಮಾಡಿದ್ದಾರೆ. ಎ.ಟಿ.ರವೀಶ್ ಸಂಗೀತ ನಿರ್ದೇಶನ, ರಾಜೇಶ್ ರಾಮನಾಥ್ ಹಿನ್ನಲೆ ಸಂಗೀತ ಹಾಗೂ ಗಗನ್ ಗೌಡ, ವಿನಯ್ ಗೌಡ, ಜಗನ್ ಬಾಬು ಅವರ ಛಾಯಾಗ್ರಹಣ “ಮಾಜರ್” ಚಿತ್ರಕ್ಕಿದೆ. ಶ್ರೀಹಾನ್, ದೀಪಕ್, ಉಗ್ರಂ ರವಿ, ಸಂಭ್ರಮಶ್ರೀ, ರಾಜು, ರಂಜನ್, ಅಜಯ್ ಶರ್ಮ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಜನವರಿ 15 ರ ಸಂಕ್ರಾಂತಿ ದಿನದಂದು ನಮ್ಮ ಚಿತ್ರ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಲೋಕಲ್ ಲೋಕಿ ತಿಳಿಸಿದರು.

ನಾನು ಉದ್ಯಮಿ ಹಾಗೂ ರಾಜಕಾರಣಿ. ಚಿತ್ರ ನಿರ್ಮಾಣ ಮಾಡಬೇಕೆಂಬುದು ನನಗೆ ಮೊದಲಿನಿಂದಲೂ ಆಸೆ. ಅದು ಈ ಚಿತ್ರದ ಮೂಲಕ ಈಡೇರಿದೆ. ನನ್ನ ನಿರ್ಮಾಣದ ಮೊದಲ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಮುರುಗನಂದನ್. ನಟಿ ಸಂಭ್ರಮಶ್ರೀ ಮಾತನಾಡಿ ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯವನ್ನು ತೆರೆಯ ಮೇಲೆ ನೋಡಿದಾಗಲೇ ಇಷ್ಟು ಭಯ ಆಗತ್ತೆ. ಇನ್ನೂ ಅನುಭವಿಸಿದವರ ಕಷ್ಟ ನೆನೆಸಿಕೊಳ್ಳಲು ಆಗುವುದಿಲ್ಲ. ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಕೊನೆಯಾಗಬೇಕು ಎಂದರು. ಚಿತ್ರದಲ್ಲಿ ನಟಿಸಿರುವ ಶ್ರೀಹಾನ್, ದೀಪಕ್, ಅಜಯ್ ಶರ್ಮ, ರಾಜು, ರಂಜನ್, ಉಗ್ರಂ ರವಿ ಹಾಗೂ ನೃತ್ಯ ನಿರ್ದೇಶಕಿ ಗೀತಾ ಮತ್ತು ನೃತ್ಯ ನಿರ್ದೇಶಕ ರಂಜನ್ “ಮಾಜರ್” ಕುರಿತು ಮಾತನಾಡಿದರು.