ಇದೇ 25ಕ್ಕೆ “ಮಾರ್ಕ್”ಎಂಟ್ರಿ.. ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಜರುಗಿದ ಪ್ರೀ-ರಿಲೀಸ್ ಇವೆಂಟ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾ ಈಗಾಗಲೇ ಕುತೂಹಲ ಹೆಚ್ಚಿಸಿದೆ . ಟ್ರೇಲರ್, ಹಾಡುಗಳ ಮೂಲಕ ಪ್ರೇಕ್ಷಕರಿಗೆ ಆಮಂತ್ರಣ ಕೊಟ್ಟಿದೆ. ನಿನ್ನೆ ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಪ್ರೀ ರಿಲೀಸ್ ಕಾರ್ಯಕ್ರಮ ಜರುಗಿದೆ. ಸುದೀಪ್ ಅವರ ಸಿನಿಮಾದ ಹಾಡುಗಳ ಗಾಯನ, ನೃತ್ಯ ಪ್ರದರ್ಶನ ನಡೆಯಿತು. ಈ ಕಾರ್ಯಕ್ರಮದಲ್ಲಿ ಕಿಚ್ಚನ ಪಡೆ ಮಿಂದೆದ್ದಿತು. ಮಾರ್ಕ್ ಪ್ರೀ ರಿಲೀಸ್ ಇವೆಂಟ್ ನಲ್ಲಿ ಚಿತ್ರದ ತಾರಾ ಬಳಗ ನವೀನ್ ಚಂದ್ರ, ಗೋಪಾಲಕೃಷ್ಣ ದೇಶಪಾಂಡೆ, ಪ್ರತಾಪ್ ನಾರಾಯಣ್, ಅರ್ಚನಾ ಕೊಟ್ಟಿಗೆ, ರೋಶಿನಿ ಪ್ರಕಾಶ್, ಮಾಲ್ತೇಶ್, ಅಶ್ವಿನ್ ಹಾಸನ್, ಗುರುಸೋಮ್ ಸುಂದರ್ ಭಾಗಿಯಾಗಿದ್ದರು. ಸಿಸಿಎಲ್ ಆಟಗಾರರು ಕಿಚ್ಚನಿಗೆ ಡ್ಯಾನ್ಸ್ ಪರ್ಫಾಮೆನ್ಸ್ ಮೂಲಕ ಗೌರವ ಸಲ್ಲಿಸಿದರು.
ಬಳಿಕ ಮಾತನಾಡಿದ ಸುದೀಪ್, “ಎಲ್ಲರೂ ಹೇಗಿದ್ದೀರಿ? 2003ರಲ್ಲಿ ಇಲ್ಲಿ ಒಂದು ಪ್ರೋಗ್ರಾಂ ಮಾಡಿದ ಬಳಿಕ ಮತ್ತೆ ಇಲ್ಲಿಗೆ ಬರಲು ಇವತ್ತೇ ಅವಕಾಶ ಸಿಕ್ಕಿದ್ದು. ಬಹಳ ಚೆನ್ನಾಗಿ, ಸುಂದರವಾಗಿ ಸ್ವಾಗತಿಸಿದ್ದಕ್ಕೆ ಧನ್ಯವಾದಗಳು. ಮಾತಾಡೊದಕ್ಕೆ ತುಂಬಾ ಆಸೆ ಇದೆ. ಕೆಲವು ಕಂಟ್ರೋಲ್ ಮಾಡಿಕೊಂಡು ಮಾತಾಡುತ್ತೀನಿ. ಹುಬ್ಬಳ್ಳಿಗೆ ಬಂದು ಈ ಕಾರ್ಯಕ್ರಮ ಮಾಡೋದಕ್ಕೆ ಒಂದು ದೊಡ್ಡ ಕಾರಣ ಇದೆ. ಕೆಲವು ಮಾತು ಈ ಹುಬ್ಬಳಿಗೆ ಬಂದು ವೇದಿಕೆ ಮೇಲೆ ಮಾತಾಡಿದರೆ ಇಡೀ ಕರ್ನಾಟಕಕ್ಕೆ ಎಲ್ಲಿ ತಟ್ಟಬೇಕೋ ತಟ್ಟುತ್ತೆ, ಹೇಗೆ ತಟ್ಟಬೇಕೋ ತಟ್ಟುತ್ತೆ. ಯಾವ ಭರ್ಜರಿಯಲ್ಲಿ ತಟ್ಟಬೇಕೋ ತಟ್ಟುತ್ತೆ. ಪ್ರತಿ ಬಾರಿ ಈ ಊರಲ್ಲಿ ನಮಗೆ ಸಿಕ್ಕ ಪ್ರೀತಿ, ವಿಶ್ವಾಸ, ಬೆಂಬಲವನ್ನು ನಾವು ಎಂದಿಗೂ ಮರೆಯಲ್ಲ. ಈ ವೇದಿಕೆಗೆ ಬಂದ ಎಲ್ಲ ಸ್ನೇಹಿತರಿಗೆ, ಜನಸಾಗರಕ್ಕೆ, ನನ್ನ ಕುಟುಂಬಕ್ಕೆ ಧನ್ಯವಾದ” ಎಂದರು.
ಮಾತು ಮುಂದುವರಿದ ಅವರು, “ಜುಲೈ 5ರಂದು ಒಂದು ಪ್ರಾಮಿಸ್ ಮಾಡಿದ್ದೆ. ಡಿಸೆಂಬರ್ 25ನೇ ತಾರೀಕು ಬಾಗಿಲು ತಟ್ಟುತ್ತೇನೆ ಅಂತ. ಜೋರಾಗಿ ತಟ್ಟುತ್ತಾ ಇದ್ದೇವೆ ನಾವು. ಈ ಜರ್ನಿಯಲ್ಲಿ 25ಕ್ಕೆ ಥಿಯೇಟರ್ನಲ್ಲಿ ಒಂದು ಸಿನಿಮಾ ಬಿಡುಗಡೆ ಆಗುತ್ತೆ. ಆದರೆ ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿ ಆಗುತ್ತಾ ಇದೆ. ಈ ವೇದಿಕೆ ಮೇಲಿಂದ ಹೇಳ್ತಾ ಇದ್ದೇನೆ. ಯುದ್ಧಕ್ಕೆ ಸಿದ್ಧ. ಯಾಕೆಂದರೆ ನಾವು ನಮ್ಮ ಮಾತಿಗೆ ಬದ್ಧ” ಎಂದು ಕಿಚ್ಚ ಸವಾಲು ಹಾಕಿದರು.
ಮಾರ್ಕ್ ಸಿನಿಮಾ ಡಿಸೆಂಬರ್ 25 ಕ್ಕೆ ಬಿಡುಗಡೆ ಆಗುತ್ತಿದ್ದು, ವಿಜಯ್ ಕಾರ್ತಿಕೇಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾನಲ್ಲಿ ಸುದೀಪ್ ಜೊತೆಗೆ ಶೈನ್ ಟಾಮ್ ಚಾಕೊ, ಯೋಗಿ ಬಾಬು ಇನ್ನೂ ಕೆಲವು ಪ್ರತಿಭಾವಂತ ನಟರು ನಟಿಸಿದ್ದಾರೆ. ಕಿಚ್ಚ ಕ್ರಿಯೇಷನ್ ಹಾಗೂ ಸತ್ಯ ಜ್ಯೋತಿ ಬ್ಯಾನರ್ನಡಿ ಮಾರ್ಕ್ ಚಿತ್ರ ನಿರ್ಮಾಣವಾಗಿದೆ.
