ತೀವ್ರ ಪ್ರೀತಿಯ ರೋಚಕ ಕಥಾನಕ… “Iam God” (ಚಿತ್ರವಿಮರ್ಶೆ-ರೇಟಿಂಗ್ : 4/5)
ರೇಟಿಂಗ್ : 4/5
ಚಿತ್ರ : Iam God
ನಿರ್ದೇಶಕ , ನಿರ್ಮಾಪಕ : ರವಿಗೌಡ
ಸಂಗೀತ : ಅಜನೀಶ್ ಲೋಕನಾಥ್
ಛಾಯಾಗ್ರಹಣ : ಜಿತಿನ್ ದಾಸ್
ತಾರಾಗಣ : ರವಿಗೌಡ , ವಿಜೇತಾ ಪರಿಕ್ , ರವಿಶಂಕರ್ , ಅವಿನಾಶ್ , ಅರುಣ ಬಾಲರಾಜ್ , ನಿರಂಜನ್ ಕುಮಾರ್ ಹಾಗೂ ಮುಂತಾದವರು…
ಕೆಲವೊಮ್ಮೆ ಅನುಭವ ನಮಗಾಗದಿದ್ದರೂ… ಆಗಿದ್ದವರನ್ನು ನೋಡಿ ಎಚ್ಚರಗೊಳ್ಳಬೇಕಾಗುವುದು ಬಹಳ ಮುಖ್ಯ…
ಹೆಣ್ಣನ್ನು ಪೂಜಿಸುವೆ… ಹೆಣ್ಣನ್ನ ಗೌರವಿಸುವೆ…
ಹೆಣ್ಣು ನೀನು ಹೆಣ್ಣಾಗಿರು…
ಇಂತಹ ಹಲವು ಅರ್ಥಪೂರ್ಣ ಸಂಭಾಷಣೆ ಚಿತ್ರದುದ್ದಕ್ಕೂ ಎಲ್ಲರನ್ನ ಜಾಗೃತಿ ಮೂಡಿಸುವಂತಿದೆ.
Iam God…God is Great… ಎಂದಾಕ್ಷಣ ನಮಗೆ ನೆನಪಿಗೆ ಬರುವುದು A ಚಿತ್ರದ ನಟ , ನಿರ್ದೇಶಕ ಉಪೇಂದ್ರ. ಅವರ ಶಿಷ್ಯನ ಸಾರಥ್ಯದಲ್ಲಿ ಬಂದಿರುವಂತಹ ಚಿತ್ರವೇ “Iam God”.
ಜೀವನದಲ್ಲಿ ಅತಿಯಾದ ಪ್ರೀತಿ , ನಂಬಿಕೆ , ವಿಶ್ವಾಸ ನಿರೀಕ್ಷೆಗೂ ಮೀರಿದಂತಹ ಅನುಭವವನ್ನು ಕೊಡುತ್ತದೆ. ಅದರಲ್ಲೂ ಕಾಲೇಜಿನ ತೀವ್ರ ಪ್ರೀತಿಯ ಎದುರು ತಂದೆ-ತಾಯಿ , ವಿದ್ಯೆ ಹೇಳಿಕೊಡುವ ಗುರುಗಳು , ಸ್ನೇಹಿತರು ಯಾರು ಲೆಕ್ಕಕ್ಕೆ ಬರುವುದಿಲ್ಲ. ಯಾಕೆಂದರೆ ಪ್ರೀತಿಯ ಆಳ ಅಂತದ್ದು , ಮೀನಿನ ಹೆಜ್ಜೆಯನ್ನು ಕಂಡು ಹಿಡಿಯಬಹುದು… ಆದರೆ ಹೆಣ್ಣಿನ ಮನಸ್ಸಿನ ಆಳವನ್ನು ಕಂಡು ಹಿಡಿಯುವುದು ಕಷ್ಟವೇ ಸರಿ… ಇಂಥದ್ದೇ ಒಂದು ಪ್ರೀತಿಯ ನಿಗೂಢ ಕಥಾನಕದಲ್ಲಿ ಸೈಕಿಕ್ ನ ಹಿಂದಿರುವ ರೋಚಕ ಘಟನೆಗಳ ಸುತ್ತ ಬೆಸೆದುಕೊಂಡು ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “Iam God”.
ಕಾಲೇಜಿನ ಟಾಪರ್ ಸ್ಟುಡೆಂಟ್ ದೇವ (ರವಿಗೌಡ) ಯಾರನ್ನು ಕೇರ್ ಮಾಡದೆ ತನ್ನಿಷ್ಟದಂತೆ ತನಗಾಗಿ ಬದುಕುವ ಹುಡುಗ , ಇವನ ಧೈರ್ಯ , ನೋಟ , ನುಡಿಗೆ ಮನಸೋತು ಇಷ್ಟಪಡುವ ಹುಡುಗಿ ಬಿಂದು (ವಿಜೇತಾ). ಕಾಲೇಜು ಕ್ಯಾಂಪಸ್ ನಲ್ಲಿ ಪ್ರೇಮಿಗಳು ಕಿಸ್ ಮಾಡುತ್ತಾ ಮುದ್ದಾಡುವುದರ ಬಗ್ಗೆ ವಿರೋಧ ಪಡಿಸಲು ಯಾರು ಮುಂದೆ ಬರುವುದಿಲ್ಲ. ಪ್ರಿನ್ಸಿಪಲ್ ಮೂಲಕ ಮಾಹಿತಿ ತಿಳಿಯುವ ತಂದೆ ತಾಯಿ ಕೂಡ ಮಗನಿಗೆ ಬುದ್ಧಿ ಹೇಳಿದರು ಯಾವುದೇ ಪ್ರಯೋಜನ ಆಗುವುದಿಲ್ಲ, ತೀವ್ರ ಪ್ರೀತಿಯಿಂದ ದೇವು ತನ್ನ ಬಿಂದು ಬಗೆ ಯಾರೇ ಮಾತನಾಡಿ , ಕಣ್ಣಾಕಿದ್ರು ಬಿಡುವುದಿಲ್ಲ. ಅವನು ಉಸಿರೇ ತನ್ನ ಪ್ರೇಯಸಿ ಎಂದು ಬದುಕುತ್ತಾನೆ.
ಮತ್ತೊಂದೆಡೆ ಮುಖವಾಡದ ವ್ಯಕ್ತಿ ಸುಂದರ ಹುಡುಗಿಯರನ್ನು ಹಿಂಬಾಲಿಸುತ್ತಾ ಅವರ ಕೈ ಬೆರಳನ್ನು ಕತ್ತರಿಸಿ ಜೀವ ಇರುವಾಗಲೇ ಸುಟ್ಟು ಸಂಭ್ರಮಿಸುತ್ತಾನೆ. ಇದು ಪೊಲೀಸ್ ಇಲಾಖೆಗೆ ದೊಡ್ಡ ತಲೆ ನೋವಾಗಿ ಈ ಸೈಕಿಕ್ನನ್ನು ಹಿಡಿಯಲು ದೊಡ್ಡ ಜಾಲವನ್ನೇ ಬೀಸುತ್ತಾರೆ. ಇದಕ್ಕಾಗಿ ಅನುಭವಿ ಖಡಕ್ ಅಧಿಕಾರಿ ಭರತ್ (ರವಿಶಂಕರ್) ಗೆ ಈ ಸೀರಿಯಲ್ ಕಿಲ್ಲರ್ ಹಿಡಿಯಲು ಕೇಸ್ ನೀಡುತ್ತಾರೆ.
ಇನ್ನು ಈ ಭರತ್ ಗೆ ಹೆಣ್ಣು ಎಂದರೆ ಕಣ್ಣು , ಅದೇ ಅವನ ವೀಕ್ನೆಸ್. ಇನ್ನು ಈ ಕೇಸ್ ವಿಚಾರವಾಗಿ ರಾಹುಲ್ ಹಾಗೂ ನಂದಿನಿ ಭರತ್ ಗೆ ಸಾತ್ ನೀಡುತ್ತಾರೆ. ಈ ಕೊಲೆಗಳ ಮೂಲ ಹುಡುಕುತ್ತಾ ಇನ್ಸ್ಪೆಕ್ಟರ್ ಮುಂದಾದರೆ , ಮತ್ತೊಂದೆಡೆ ಪ್ರೇಮಿ ದೇವ ತನ್ನ ಪ್ರೇಯಸಿ ಬಿಂದುಗಳನ್ನು ಮದುವೆ ಆಗುವ ನಿರ್ಧಾರ ಮಾಡುವಷ್ಟರಲ್ಲಿ ಒಂದಷ್ಟು ಗೊಂದಲ ಹಾಗೂ ಅನಿರೀಕ್ಷಿತ ಘಟನೆಗಳು ಎದುರಾಗುತ್ತಾ ಹೋಗುತ್ತದೆ. ಇದು ಎರಡು ಟ್ರ್ಯಾಕ್ ನಲ್ಲಿ ಸಾಗುವ ಕಥೆ ಅನ್ನುವಷ್ಟರಲ್ಲಿ ಎರಡು ವಿಚಾರಕ್ಕೂ ಸಂಬಂಧವಿದೆ ಎನ್ನುವ ಹಂತಕ್ಕೆ ಬಂದು ನಿಲ್ಲುತ್ತದೆ. ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಯಾವುದು ಸತ್ಯ… ಯಾವುದು ಸುಳ್ಳು… ಹೆಣ್ಣು ಹಾಗೂ ಹಣ ಯಾವುದು ಮಾಯೆಯೋ… ಕ್ಲೈಮಾಕ್ಸ್ ಹೇಳುವ ಸತ್ಯ ಏನು… ಇದೆಲ್ಲವೂ ಬಹಳ ರೋಚಕವಾಗಿದ್ದು , ಎಲ್ಲರೂ ಚಿತ್ರಮಂದಿರದಲ್ಲಿ ಈ ವಿಚಾರ ನೋಡಬೇಕು.
ಇದೊಂದು ವಿಭಿನ್ನ ಚಿತ್ರವಾಗಿದ್ದು , ಪ್ರಸ್ತುತ ಕಾಲಘಟ್ಟಕ್ಕೂ ಸೂಕ್ತವಾಗಿದ್ದು , ಪ್ರೀತಿಸುವ ಹೃದಯಗಳ ಮಿಡಿತ , ಸಂಬಂಧಗಳ ಸೆಳೆತ , ಮನೆಯವರ ತುಡಿತದ ನಡುವೆ ಬದುಕು ಹೇಳುವ ಪಾಠ ಏನು… ಯಾವ ಸಂದರ್ಭದಲ್ಲಿ ಯಾವುದು ಮುಖ್ಯ , ಹೇಗೆ ಇರಬೇಕು ಎಂಬ ಸೂಕ್ಷ್ಮತೆಯ ಜೊತೆಗೆ ಕನ್ನಡಿಯಂತ ಜೀವನದ ಮುಂದೆ ಕಣ್ತೆರೆಸಿದಂತೆ ಒಂದು ಉತ್ತಮ ಚಿತ್ರವನ್ನ ನಿರ್ದೇಶನ ನಿರ್ಮಾಣದ ಜೊತೆಗೆ ನಾಯಕ ನಟನಾಗಿ ಅಭಿನಯಿಸಿರುವ ರವಿ ಗೌಡ ರ ಸಾಮರ್ಥ್ಯ ಮೆಚ್ಚಲೇಬೇಕು.

ಚಿತ್ರಕಥೆಯಲ್ಲಿ ಇನ್ನಷ್ಟು ವೇಗ ಮಾಡಬಹುದಿತ್ತು, ಇವರು ಉಪೇಂದ್ರ ಗರಡಿಯಲ್ಲಿ ಪಳಗಿದ್ದು , ರಿಯಲ್ ಸ್ಟಾರ್ ಶೈಲಿಯ ಛಾಯೆ ಅಲ್ಲಲ್ಲಿ ಕಾಣುತ್ತಾ ಹೋಗುತ್ತದೆ. ಕೆಲವೊಮ್ಮೆ ಉಪೇಂದ್ರ ಅವರಂತೆ ಕಾಣುವ ರವಿ ಗೌಡ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದು , ಚಂದನವನಕ್ಕೆ ಮತ್ತೊಬ್ಬ ಬುದ್ಧಿವಂತ ನಿರ್ದೇಶಕ ಸಿಕ್ಕಂತಾಗಿದೆ. ನಾಯಕಿ ವಿಜೇತಾ ಪರೀಕ್ ಬಹಳ ಮುದ್ದಾಗಿ ಕಾಣುತ್ತಾ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಪಾತ್ರಕ್ಕೆ ನ್ಯಾಯವನ್ನು ನೀಡಿದ್ದಾರೆ. ಮೈ ಚಳಿ ಬಿಟ್ಟು ನಟಿಸಿರುವ ಇವರಿಬ್ಬರು ಬಾಲಿವುಡ್ ಚಿತ್ರಕ್ಕಿಂತ ಕಮ್ಮಿ ಇಲ್ಲ ಎನ್ನುವಂತೆ ಕಾಣುತ್ತಾರೆ.
ಕೆಲವೊಂದು ದೃಶ್ಯಗಳು ನೋಡಲು ಮಜುಗರ ಅನಿಸಿದರೂ ಚಿತ್ರಕ್ಕೆ ಅವಶ್ಯಕವಾಗಿದೆ. ಇನ್ವೆಸ್ಟಿಗೇಷನ್ ಅಧಿಕಾರಿಯಾಗಿ ನಟ ರವಿಶಂಕರ್ ಎಂದಿನಂತೆ ತಮ್ಮ ಆರ್ಭಟದ ನಟನೆಯನ್ನು ಮುಂದುವರೆಸಿದ್ದಾರೆ. ಇನ್ನು ನಾಯಕನ ತಂದೆಯಾಗಿ ಅವಿನಾಶ್, ತಾಯಿಯಾಗಿ ಅರುಣ ಬಾಲರಾಜ್ ಉತ್ತಮವಾಗಿ ಅಭಿನಯಿಸಿದ್ದು ಉಳಿದಂತೆ ಬರುವ ಎಲ್ಲಾ ಪಾತ್ರಗಳು ಉತ್ತಮ ಸಾಥ್ ನೀಡಿದೆ. ಚಿತ್ರದ ಹೈಲೈಟ್ಗಳಲ್ಲಿ ಅಜಿನೀಶ್ ಲೋಕನಾಥ್ ಸಂಗೀತ , ಹಿನ್ನೆಲೆ ಸಂಗೀತ , ಜಿತಿನ್ ದಾಸ್ ಛಾಯಾಗ್ರಹಣ , ಸುರೇಶ್ ಆರ್ಮುಗಂ ಸಂಕಲನ ಸೇರಿದಂತೆ ತಾಂತ್ರಿಕವಾಗಿ ತಂಡ ಅಚ್ಚುಕಟ್ಟಾಗಿ ತನ್ನ ಕೆಲಸವನ್ನ ನಿಭಾಯಿಸಿದೆ. ಇದೊಂದು ಪಕ್ಕ ಸಸ್ಪೆನ್ಸ್ , ಥ್ರಿಲ್ಲರ್ , ಲವ್ ಸ್ಟೋರಿ ಕಂಟೆಂಟ್ ಒಳಗೊಂಡಿದ್ದು , ಯುವ ಪೀಳಿಗೆಯನ್ನು ಬಹಳ ಬೇಗ ಸೆಳೆಯುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬಹುದು.