ನೈಜ ಘಟನೆಯ ಪ್ರೇಮ ಪರ್ವ ” ಲವ್ ಯು ಮುದ್ದು” (ಚಿತ್ರವಿಮರ್ಶೆ -ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಲವ್ ಯು ಮುದ್ದು
ನಿರ್ದೇಶಕ : ಕುಮಾರ್
ನಿರ್ಮಾಪಕ : ಕಿಶನ್ ಟಿ.ಎನ್.
ಸಂಗೀತ : ಅನಿರುದ್ಧ್ ಶಾಸ್ತ್ರೀ
ಛಾಯಾಗ್ರಹಣ : ಕೃಷ್ಣ ದೀಪಕ್
ತಾರಾಗಣ : ಸಿದ್ದು ಮೂಲಿಮನಿ , ರೇಷ್ಮಾ , ರಾಜೇಶ್ ನಟರಂಗ, ತಬಲ ನಾಣಿ, ಗಿರೀಶ್ ಶಿವಣ್ಣ, ಶ್ರೀವತ್ಸ , ಸ್ವಾತಿ ಹಾಗೂ ಮುಂತಾದವರು…
ಸಾಮಾನ್ಯವಾಗಿ ಒಂದು ಮಾತಿದೆ , ಪ್ರೀತಿಗೆ ಸಾವಿಲ್ಲ… ಪ್ರೀತಿ ಅಜರಾಮರ… ಮುಗ್ಧ , ನಿರ್ಮಲವಾದ ಪ್ರೀತಿ ಎಂದೆಂದಿಗೂ ಜೀವಂತ ಎನ್ನುವಂತೆ ಈ ವಾರ ತೆರೆಯ ಮೇಲೆ ಒಂದು ನೈಜ ಘಟನೆಯನ್ನು ಇಟ್ಕೊಂಡು ಅದಕ್ಕೆ ದೃಶ್ಯ ರೂಪಕವಾಗಿ ಮಹಾರಾಷ್ಟ್ರದ ಸೊಲ್ಲಾಪುರದ ಯುವ ದಂಪತಿಗಳಾದ ಆಕಾಶ್ ನಾರಾಯಣ್ಕರ್ ಮತ್ತು ಅಂಜಲಿ ಭಾಯ್ ಶಿಂಧೆ ಜೀವನದ ಕೆಲವು ಘಟನೆಗಳನ್ನು ಪ್ರಮುಖವಾಗಿ ಬಳಸಿಕೊಂಡು “ಲವ್ ಯು ಮುದ್ದು” ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ.
ಇನ್ನು ಈ ಚಿತ್ರದ ಕಥಾಹಂದರದಲ್ಲಿ ನಾಯಕ ಕರ್ಣ (ಸಿದ್ದು ಮೂಲಿಮನಿ) ತನ್ನ ತಂದೆ (ರಾಜೇಶ್ ನಟರಂಗ) ಜೊತೆ ವಾಸ. ತಾಯಿಯನ್ನು ಕಳೆದುಕೊಂಡಿರುವ ಕರ್ಣನಿಗೆ ಒಂದು ಮುದ್ದಾದ ಹುಡುಗಿಯನ್ನು ನೋಡಿ ಮದುವೆ ಮಾಡಿಸುವ ಆಸೆ ತಂದೆಗೆ. ಆದರೆ ಕರ್ಣ ನಿಗೆ ಮದುವೆ ಬಗ್ಗೆ ಆಸಕ್ತಿ ಕಡಿಮೆ , ತನ್ನ ತಂದೆ ತಾಯಿ ಪ್ರೀತಿಸಿ ಮದುವೆ ಆದ ವಿಚಾರ ತಿಳಿದಿರುವ ಕರ್ಣನಿಗೆ ತನ್ನ ತಾಯಿಯಷ್ಟೇ ಒಳ್ಳೆಯ ಹುಡುಗಿ ಸಿಗಬೇಕೆಂಬ ಆಸೆ.
ಮಗನ ಇಷ್ಟುದಂತೆ ಹುಡುಗಿ ಹುಡುಕಲು ಮುಂದಾಗುವ ತಂದೆ, ಇದರ ನಡುವೆ ತನ್ನ ತಾಯಿಯನ್ನು ನೋಡಲು ಫಾರ್ಮ್ ಹೌಸ್ ಬರುವ ಕರ್ಣ ತಾಯಿಯ ಸಮಾಧಿ ಬಳಿ ಬಂದು ತನ್ನ ಮನದ ಮಾತನ್ನು ಹಂಚಿಕೊಳ್ಳುತ್ತಾನೆ.
ವಾಹಿನಿ ಒಂದರಲ್ಲಿ ಕೆಲಸ ಮಾಡುವ ಕರ್ಣ ಫೋಟೋಗ್ರಾಫಿ ಮಾಡುವುದು ತನ್ನ ಹವ್ಯಾಸ ಮಾಡಿಕೊಂಡಿರುತ್ತಾನೆ. ಅಚಾನಕ್ಕಾಗಿ ಕಾಲೇಜ್ ಫೆಸ್ಟಿವಲ್ ಒಂದರಲ್ಲಿ ಮುದ್ದಾದ ಟೀಚರ್ ನೋಡುವ ಕರ್ಣ ಮೊದಲ ನೋಟಕ್ಕೆ ಮನಸೋತು ಇಷ್ಟಪಡುತ್ತಾನೆ. ಆಕೆಯಿಂದ ಒಂದು ಏಟನ್ನು ಪಡೆಯುತ್ತಾನೆ. ಸೆಕ್ಯೂರಿಟಿ ಗಾರ್ಡ್ (ತಬಲಾ ನಾಣಿ) ಮೂಲಕ ಸತ್ಯ ತಿಳಿಯುವ ನಾಯಕಿ ಸುಮತಿ (ರೇಷ್ಮಾ . ಎಲ್) ಕರ್ಣ ಬಳಿ ಕ್ಷಮೆ ಕೇಳಲು ಚಡಪಡಿಸುತ್ತಾಳೆ.
ನಂತರ ಇವರೊಬ್ಬರ ಭೇಟಿ ಸ್ನೇಹ , ಸಲುಗೆಯಿಂದ ಪ್ರೀತಿಯ ಕಡೆ ತಿರುಗುತ್ತದೆ.

ತನ್ನ ತಾಯಿಯ ಆಶೀರ್ವಾದ ಸಿಕ್ಕಿತೆಂದು , ತನ್ನ ತಂದೆಗೆ ಪ್ರೇಯಸಿನ ಪರಿಚಯ ಮಾಡಿ ಮದುವೆ ಮಾಡಿಕೊಳ್ಳಲು ಸಿಟಿಗೆ ಬರುತ್ತಾನೆ. ಇತ್ತ ತಂದೆ ಕೂಡ ಮಗನಿಗೆ ಒಂದು ಹುಡುಗಿಯನ್ನು ನೋಡಿ ನಿಶ್ಚಿತಾರ್ಥ ಮಾಡಲು ಸಿದ್ಧನಾಗಿರುತ್ತಾನೆ. ಈ ವಿಚಾರ ತಿಳಿಯುವ ಸುಮತಿ ಕಂಗಾಲಾಗಿ ಒಬ್ಬಳೇ ಹೊರಬರುವಾಗ ಗೋರ ಆಕ್ಸಿಡೆಂಟ್ ಆಗುತ್ತದೆ. ಕೋಮ ಹಂತಕ್ಕೆ ಹೋಗುವ ಸುಮತಿಯನ್ನು ಉಳಿಸಿಕೊಳ್ಳಲು ಹಗಲಿರಲಿನ್ನದೆ ದುಡಿಯುವ ಕರ್ಣ ಬಹಳಷ್ಟು ಸಮಸ್ಯೆಯನ್ನು ಎದುರಿಸುತ್ತಾನೆ. ಇದಕ್ಕೆಲ್ಲಾ ತಂದೆ ಕಾರಣ ಎಂದು ಕೋಪಗೊಳ್ಳುತ್ತಾನೆ.
ಆದರೆ ಇದರ ಹಿಂದೆ ಒಂದು ಕಾಣದ ಕೈ ಕೈವಾಡ ಇರುತ್ತದೆ.
ಕರ್ಣ ಪಡುವ ಕಷ್ಟ ಏನು…
ಸುಮತಿ ಬದುಕುತ್ತಾಳಾ… ಇಲ್ಲವಾ…
ಕಾಣದ ಕೈವಾಡ ಯಾರದು..?
ಕ್ಲೈಮಾಕ್ಸ್ ಉತ್ತರ ಏನು… ಇದಕ್ಕೆಲ್ಲದಕ್ಕೂ ಒಮ್ಮೆ ನೀವು ಈ ಚಿತ್ರವನ್ನು ನೋಡಬೇಕು.
ಒಂದು ನೈಜ್ಯ ಘಟನೆಗೆ ಚಿತ್ರರೂಪಕ ನೀಡಿ ಮನ ಮಿಡಿಯುವಂತೆ ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಕುಮಾರ್ , ಕಾಮಿಡಿ ಜನಾರ್ ನಿಂದ ಹೊರಬಂದು ಲವ್ , ಎಮೋಷನಲ್ ಕಂಟೆಂಟ್ ಗೆ ಇನ್ನಷ್ಟು ಪರಿಪಕ್ವತೆ ಮಾಡಿಕೊಳ್ಳಬೇಕಿತ್ತು ಅನಿಸುತ್ತದೆ. ಚಿತ್ರಕಥೆ ವೇಗವಾಗಿ ಸಾಗಿ ಎಮೋಷನ್ಸ್ ಗೆ ಸಮಯ ತಪ್ಪಿದಂತಿದೆ.
ಒಟ್ಟಾರೆ ಗಮನ ಸೆಳೆಯುವಂತಹ ಅಂಶಗಳು ಚಿತ್ರದಲ್ಲಿ ಕಾಣುತ್ತದೆ. ಒಂದು ವಿಭಿನ್ನ ಚಿತ್ತವನ್ನು ನಿರ್ಮಿಸಿರುವ ನಿರ್ಮಾಪಕರ ಆಲೋಚನೆಯೂ ಮೆಚ್ಚಲೇಬೇಕು. ಇನ್ನು ಹಾಡುಗಳು ಇಂಪಾಗಿದ್ದು , ಮನಸ್ಸನ್ನು ಸೆಳೆಯುತ್ತದೆ. ಅದೇ ರೀತಿ ಛಾಯಾಗ್ರಹಕರ ಕೈಚಳಕವು ಉತ್ತಮವಾಗಿದೆ. ಸಂಕಲನ ಸೇರಿದಂತೆ ತಾಂತ್ರಿಕವಾಗಿ ತಂಡ ಬಹಳ ಶ್ರಮ ಪಟ್ಟಂತಿದೆ. ಇನ್ನು ನಾಯಕನಿಗೆ ಅಭಿನಯಿಸಿರುವ ಸಿದ್ದು ಮೂಲಿಮನಿ ಲವಲವಿಕೆಯ ಹುಡುಗನಾಗಿ , ಪ್ರೇಮಿಯಾಗಿ, ನೊಂದ ಜೀವವಾಗಿ ಉತ್ತಮ ಅಭಿನಯವನ್ನು ನೀಡಿ ನೋಡುಗರ ಗಮನ ಸೆಳೆಯುತ್ತಾರೆ. ಡ್ಯಾನ್ಸ್ ಗೂ ಜೈ ಎಂದಿರುವ ಸಿದ್ದುಗೆ ಉತ್ತಮ ಭವಿಷ್ಯವಿದೆ.
ಇನ್ನು ನಾಯಕಿಯಾಗಿ ಅಭಿನಯಿಸಿರುವ ರೇಷ್ಮಾ ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡು , ಪಾತ್ರಕ್ಕೆ ನ್ಯಾಯ ಒದಗಿಸಲು ಶ್ರಮಪಟ್ಟಿದ್ದಾರೆ. ಇನ್ನು ನಾಯಕನ ತಂದೆಯ ಪಾತ್ರದಲ್ಲಿ ರಾಜೇಶ್ ನಟರಂಗ ಉತ್ತಮ ಅಭಿನಯವನ್ನು ನೀಡಿ ಜೀವ ತುಂಬಿದ್ದಾರೆ. ಸೆಕ್ಯೂರಿಟಿ ಗಾರ್ಡಾಗಿ ತಬಲಾ ನಾಣಿ ಪ್ರೇಮಿಗಳಿಗೆ ಪಾರಿವಾಳದಂತೆ ಮಿಂಚಿದ್ದಾರೆ.
ಸ್ನೇಹಿತನಾಗಿ ಸಿಗುವ ಶ್ರೀವತ್ತ ಶಾಮ್ ತನ್ನ ಸೋಶಿಯಲ್ ಮೀಡಿಯಾ ರಿಲ್ಸ್ನ ಎಡವಟ್ಟಿನ ಮೂಲಕ ಗಮನ ಸೆಳೆಯುತ್ತಾರೆ. ಉಳಿದಂತೆ ಗಿರೀಶ್ ಶಿವಣ್ಣ , ಸ್ವಾತಿ ಗುರುದಥ್ ಸೇರಿದಂತೆ ಅನೇಕ ಕಲಾವಿದರು ಚಿತ್ರಕ್ಕೆ ಉತ್ತಮ ಸಾಥ್ ನೀಡಿದ್ದಾರೆ. ಒಂದು ನೈಜ ಘಟನೆಗೆ ಜೀವ ತುಂಬಿರುವ ಈ ಚಿತ್ರದಲ್ಲಿ ಪ್ರೀತಿಯೇ ಸರ್ವಸ್ವ , ಪ್ರೀತಿಯೇ ಸಕಲ ಅನ್ನೋದನ್ನ ಮನಮುಟ್ಟುವಂತೆ ಹೇಳಿರುವ ಈ ಚಿತ್ರವನ್ನು ಎಲ್ಲರೂ ನೋಡುವಂತಿದೆ.
