ಕಂಠೀರವ ಸ್ಟುಡಿಯೋದಲ್ಲಿ ‘ದಿಗ್ಲುಪುರ’ ಚಿತ್ರಕ್ಕೆ ಮುಹೂರ್ತ
ಕನ್ನಡದಲ್ಲಿ ಬ್ಲಾಕ್ ಮ್ಯಾಜಿಕ್ ಆಧಾರಿತ ಚಿತ್ರಗಳು ತೀರ ವಿರಳ. ದಶಕಗಳ ಹಿಂದೆ ಏಟು ಎದಿರೇಟು, ಇತ್ತೀಚಿನ ಕಟಕ ಅದ್ಭುತವಾದ ಮಾಟ ಮಂತ್ರದ ಕಾನ್ಸೆಪ್ಟ್ ಒಳಗೊಂಡ ಚಿತ್ರಗಳಾಗಿದ್ದವು. ಬಹಳ ದಿನಗಳ ನಂತರ ಅಂಥದೇ ಎಳೆ ಇರುವ ಚಿತ್ರವೊಂದು ಸೆಟ್ಟೇರಿದೆ. ಅದರ ಹೆಸರು ದಿಗ್ಲುಪುರ. ಕಳೆದ ಶುಕ್ರವಾರ ಕಂಠೀರವ ಸ್ಟುಡಿಯೋದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು.
ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮುಹೂರ್ತ ದೃಶ್ಯಕ್ಕೆ ಕ್ಲಾಪ್ ಮಾಡಿದರು. ದ ಡೆಡ್ ವಾಕ್ ಇನ್ ಸ್ಕೇರಿ ವಿಲೇಜ್ ಎಂಬ ಅಡಿಬರಹ ಇರೋ ಈ ಚಿತ್ರಕ್ಕೆ ಮನೋಜ್ಞ ಮನ್ವಂತರ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ರೇರ್ ವಿಜನ್ ಮೂವೀ ಮೇಕರ್ಸ್ ಮೂಲಕ ಆರ್.ವಿ.ಎಂ.ಎಂ. ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ. ರಮೇಶ್ ಪಂಡಿತ್, ಲಯ ಕೋಕಿಲ, ಫರ್ದಿನ್ ಅಹ್ಮದ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಮನೋಜ್ಞ ಮನ್ವಂತರ ಒಂದೊಳ್ಳೆ ಕಂಟೆಂಟ್ ಇಟ್ಟುಕೊಂಡು ಸಿನಿಮಾ ಮಾಡಿದರೆ ಗೆಲುವು ಖಂಡಿತ. ದಿಗ್ಲುಪುರ ಒಂದು ಸ್ಕೇರಿ ವಿಲೇಜ್. ಕಲ್ಟ್ ಹಾರರ್ ಸಬ್ಜೆಕ್ಟ್. ಮೊಲದಬಾರಿಗೆ ಜೆಮ್ ಸ್ಕೇರ್ ಕಾನ್ಸೆಪ್ಟ್ ಬಳಸುತ್ತಿದ್ದೇವೆ. ಅಲ್ಲಲ್ಲಿ ನೋಡಿದ, ಕಂಡು ಕೇಳಿದ ಕಾಲ್ಪನಿಕ ವಿಷಯ ಇಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದೇನೆ. ಭಯ ಅಂದರೇನು?, ಅದರ ಸ್ವರೂಪ ಹೇಗಿರುತ್ತೆ?, ಮನುಷ್ಯ ಸತ್ತರೂ ಆತನ ಆಲೋಚನೆಗಳು ಸಾಯಲ್ಲ ಅನ್ನೋದೇ ಈ ಚಿತ್ರದ ಕಾನ್ಸೆಪ್ಟ್. 80ರ ದಶಕದಲ್ಲಿ ದಿಗ್ಲುಪುರ ಎಂಬ ಕಾಲ್ಪನಿಕ ಹಳ್ಳಿಯಲ್ಲಿ ನಾನು ಹೆಚ್ಚು, ನೀನು ಹೆಚ್ಚು ಅಂತ ಬದುಕುತ್ತಿರುವ ಬ್ಲಾಕ್ ಮ್ಯಾಜಿಷಿಯನ್ಸ್ ತಮ್ಮ ಮಂತ್ರಶಕ್ತಿಯಿಂದ ತಮ್ಮನ್ನು ವಿರೋಧಿಸುವ ಜನರನ್ನು ಕೊಲ್ಲೋ ಪ್ರಯತ್ನ ಮಾಡುತ್ತಾರೆ.
ಅಂಥಾ ಸ್ಕೇರಿ ಹಳ್ಳಿಗೆ ಯಾರೂ ಸಹ ಹೋಗುವ ಧೈರ್ಯ ಮಾಡುತ್ತಿರಲಿಲ್ಲ.ಹಾಗೆ ಹೋದವರು ನಿಗೂಢವಾಗಿ ಸಾವನ್ನಪ್ಪುತ್ತಿರ್ತಾರೆ. ಆದರೂ ಐದು ಜನ ನಾಯಕರು ಧೈರ್ಯಮಾಡಿ ಅಲ್ಲಿಗೆ ಹೋಗಿ ಅದರ ಹಿಂದಿರೋ ರಹಸ್ಯ ಬಯಲಿಗೆಳೆದು ಜಯಿಸಿ ಹೊರಬರುತ್ತಾರೆ. ಅದರೆ ಅಲ್ಲಿಂದ ಬಂದ ಮೇಲೆ ಅವರೂ ಸಹ ಸಾವನ್ನಪ್ಪುತ್ತಾರೆ. ಇದಕ್ಕೆಲ್ಲ ಕಾರಣವೇನು ಎನ್ನುವುದೇ ದಿಗ್ಲುಪುರ ಚಿತ್ರದ ಎಳೆ. 4 ಹಂತಗಳಲ್ಲಿ 60. ದಿನ ರಾಮನಗರ, ಚನ್ನಪಟ್ಟಣ, ತೈಲೂರು, ಮುತ್ತತ್ತಿ, ತಲಕಾಡು ಸುತ್ತಮುತ್ತ ಶೂಟಿಂಗ್ ನಡೆಸುವ ಪ್ಲಾನಿದೆ ಎಂದರು.
ಹಿರಿಯನಟ ರಮೇಶ್ ಪಂಡಿತ್, ಲಯ ಕೋಕಿಲ ಆ ಊರಿನ ಇಬ್ಬರು ಪ್ರಬಲ ಮಂತ್ರವಾದಿಗಳಾಗಿ ಕಾಣಿಸಿಕೊಳ್ಳುತ್ತಿದ್ದು ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ಉಳಿದಂತೆ ಸುಹಾಸ್, ಪ್ರಮೋದ್, ಲತಾ ನಾಗರಾಜ್, ಮಹೇಶ್, ಯಶವಂತ್, ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಪ್ರಸಾದ್ ನಾಯಕ್ ಅವರ ಛಾಯಾಗ್ರಹಣ, ವೆಂಕಿ ಯುವಿಡಿ ಅವರ ಸಂಕಲನ ಈ ಚಿತ್ರಕ್ಕಿದೆ.