*”ಕಾಂತಾರ ಅಧ್ಯಾಯ 1′” ಚಿತ್ರದ ಬುಕಿಂಗ್ ಭರ್ಜರಿ ಓಪನಿಂಗ್*.
ಅಕ್ಟೋಬರ್ 2 ರಂದು ಏಕಕಾಲದಲ್ಲಿ ಗಾಂಧಿನಗರದ ಸಂತೋಷ್ , ತ್ರಿವೇಣಿ , ಅನುಪಮ ಚಿತ್ರಮಂದಿಗಳಲ್ಲಿ “ಕಾಂತಾರ” ದ ಬೆಳಕು.
ಬಹುನಿರೀಕ್ಷಿತ ‘ಕಾಂತಾರ- ಅಧ್ಯಾಯ 1’ ಟ್ರೇಲರ್ ಬಿಡುಗಡೆ ಆಗುತ್ತಿದ್ದಂತೆ ಎಲ್ಲರಲ್ಲೂ ಚಿತ್ರ ನೋಡುವ ಕಾತುರ ಹೆಚ್ಚಾಗಿದೆ. ಹಾಗಾಗಿಯೇ ಇಂದು ಕೆಲವು ಸಿಂಗಲ್ ಹಾಗೂ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಬುಕಿಂಗ್ ಓಪನ್ ಆಗಿದ್ದ ಬುಕ್ ಮೈಶೋ ಸೇರಿದಂತೆ ಎಲ್ಲೆಡೆ ಟಿಕೆಟ್‌ಗಳು ಭರ್ಜರಿಯಾಗಿ ಮಾರಾಟವಾಗಿವೆಯಂತೆ.
ಈಗಾಗಲೇ ಬೆಂಗಳೂರಿನಲ್ಲಿ ಮೊದಲ ದಿನಕ್ಕೆ 1000ಕ್ಕೂ ಹೆಚ್ಚು ಪ್ರದರ್ಶನಗಳು ನಡೆಯಲಿದೆಯಂತೆ. ಸುಮಾರು 5 ದಿನಗಳ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ನ ಶೋ ಟಿಕೆಟ್ ನೀಡುತ್ತಿದ್ದಾರೆ ಎಂಬ ಮಾಹಿತಿ ಹೊರ ಬಂದಿದೆ. ಇದು ಕನ್ನಡ ಚಿತ್ರರಂಗಕ್ಕೆ ಒಂದು ಒಳ್ಳೆ ಬೆಳವಣಿಗೆ ಆಗಿದ್ದು , ಕಾಂತಾರ ಚಿತ್ರದ ಶಕ್ತಿ ಎಂದೇ ಹೇಳಬಹುದು. ಅದರಲ್ಲೂ ವಿಶೇಷವಾಗಿ ಸಿಂಗಲ್ ಸ್ಕ್ರೀನ್‌ಗಳಲ್ಲಿ ಮೊದಲ ಪ್ರದರ್ಶನ ಬೆಳಿಗ್ಗೆ 6:30ಕ್ಕೆ ಆರಂಭವಾಗಲಿದ್ದು , ಮಲ್ಟಿಪ್ಲೆಕ್ಸ್‌ಗಳಲ್ಲಿ ಬೆಳಿಗ್ಗೆ 7 ಗಂಟೆಯ ನಂತರ ಶೋ ಆರಂಭವಾಗಲಿದೆಯಂತೆ.
ಹೊಂಬಾಳೆ ಫಿಲ್ಮ್ಸ್ ಮೂಲಕ ಯಶಸ್ವಿ ನಿರ್ಮಾಪಕ ವಿಜಯ್ ಕಿರಗಂದೂರ್ ನಿರ್ಮಾಣದ ಕಾಂತಾರ ಚಿತ್ರವು 07 ಭಾಷೆಗಳಲ್ಲಿ ನಿರ್ಮಾಣವಾಗಿದ್ದು , ಇಡೀ ಭಾರತದಾದ್ಯಂತ 7,000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗುತ್ತಿದೆ. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ ಅಧ್ಯಾಯ 1” ಸಿನಿಮಾದ ಪ್ರೀಕ್ವೆಲ್ (ಹಿಂದಿನ ಕಥೆ) ಎಳೆಯನ್ನ ಹೊಂದಿದೆಯಂತೆ. ಇದು ಬನವಾಸಿಯ ಕದಂಬರೊಂದಿಗೆ ತುಳುನಾಡಿನ ದೈವದ ಕಥೆ ಪ್ರಾರಂಭವಾಗಿ , ನಾಗಾಸಾಧು, ಮನುಷ್ಯ ಮತ್ತು ದೈವದ ನಡುವೆ ಸಂಪರ್ಕ ಬೆಸೆಯುವ ಕಥಾನಕ ಒಳಗೊಂಡಿದೆಯಂತೆ. ಇದೆಲ್ಲದರ ಕೇಂದ್ರಬಿಂದುವಾಗಿ ನಟ ರಿಷಬ್ ಶೆಟ್ಟಿ ಕಾಣಿಸಿಕೊಳ್ಳಲಿದ್ದು , ಈಗಾಗಲೇ ಬಿಡುಗಡೆಗೊಂಡಿರುವ ಟ್ರೇಲರ್ ಬಹಳಷ್ಟು ವಿಚಾರವನ್ನು ಹೇಳುತ್ತಾ ಹೋಗಿದೆ. ಯುವರಾಣಿಯಾಗಿ ರುಕ್ಮಿಣಿ ವಸಂತ್ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಬೆಸೆದುಕೊಂಡಿದೆ. ಇನ್ನು ಚಿತ್ರದಲ್ಲಿ ಬಹಳಷ್ಟು ಪ್ರಮುಖ ಅಂಶಗಳು ಇದ್ದು , ವಿಶೇಷವಾಗಿ ಅಜನೀಶ್ ಲೋಕನಾಥ್ ಸಂಗೀತ , ಕಲಾ ನಿರ್ದೇಶನದ ಸೇಟ್ಗಳು , ವಿಎಕ್ಸ್ ಫಿಕ್ಸ್ ತಂತ್ರಗಾರಿಕೆ ಸೇರಿದಂತೆ ಬಹಳಷ್ಟು ಕುತೂಹಲಕಾರಿ ದೃಶ್ಯಗಳನ್ನ ತೆರೆಯ ಮೇಲೆ ಸಿಗಲಿದೆಯಂತೆ.
ಈ “ಕಾಂತಾರ ಅಧ್ಯಾಯ 1” ಚಿತ್ರವು ಅಕ್ಟೋಬರ್ 2 ರಂದು ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಹಿಂದಿಯಲ್ಲಿ ಎಎ ಫಿಲ್ಮ್ಸ್ , ಕೇರಳದಲ್ಲಿ ಪೃಥ್ವಿರಾಜ್ ಪ್ರೊಡಕ್ಷನ್ಸ್ , ಮತ್ತು ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮೈತ್ರಿ ಮೂವಿ ಮೇಕರ್ಸ್ ಮತ್ತು ಗೀತಾ ಆರ್ಟ್ಸ್ ವಿತರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿವೆ. ಇತ್ತೀಚಿಗಷ್ಟೇ ಕರ್ನಾಟಕ ಸರ್ಕಾರವು ಇತ್ತೀಚೆಗೆ ಎಲ್ಲಾ ಚಿತ್ರಮಂದಿರಗಳಲ್ಲಿ ಟಿಕೆಟ್ ದರವನ್ನು ಗರಿಷ್ಠ 200 ರೂಪಾಯಿಗೆ ನಿಗದಿಪಡಿಸಿತ್ತು. ಆದರೆ, ಕರ್ನಾಟಕ ಹೈಕೋರ್ಟ್‌ನ ತೀರ್ಪಿನಿಂದ ಈ ನಿರ್ಧಾರಕ್ಕೆ ತಡೆಯಾಜ್ಞೆ ಬಿದ್ದಿದೆ. ಇದರಿಂದಾಗಿ ಟಿಕೆಟ್ ದರಗಳು ದುಬಾರಿಯಾಗಿದ್ದು, 400 , 700 , 1000 ರೂಪಾಯಿಗಳವರೆಗೆ ಕೆಲವು ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಏರಿಕೆಯಾಗಲಿದೆಯಂತೆ. ಇದರಿಂದ ಚಿತ್ರ ಪ್ರೇಮಿಗಳು ಒಂದೆಡೆ ಬೇಸರ ವ್ಯಕ್ತಪಡಿಸಿದರು , ಚಿತ್ರ ನೋಡುವ ಕುತೂಹಲದಿಂದ ಇದ್ಯಾವುದನ್ನು ಲೆಕ್ಕಿಸದೆ ಟಿಕೆಟ್ ಪಡೆಯಲು ಮುಂದಾಗಿದ್ದಾರೆ ಎಂಬ ಮಾಹಿತಿ ಹೊರ ಬಂದಿದೆ. ಅಕ್ಟೋಬರ್ 1ರಂದು 2,500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪೇಯ್ಡ್ ಪ್ರೀಮಿಯರ್‌ಗಳನ್ನು ಆಯೋಜಿಸಲಾಗಿದೆಯಂತೆ. ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಾ ಎಂಬ ಕುತೂಹಲ ಹೆಚ್ಚಾಗಿದ್ದು , ಚಿತ್ರ ಬಿಡುಗಡೆ ನಂತರವೇ ಚಿತ್ರ ಯಾವ ದಿಕ್ಕಿನತ್ತ ಸಾಗುತ್ತದೆ ಎಂಬುದನ್ನ ಕಾದು ನೋಡಬೇಕು.