ನಿರ್ದೇಶಕನ ಕನಸು ಕಂಡವನ ಬದುಕು ಬವಣೆ “ಅಂದೊಂದಿತ್ತು ಕಾಲ” (ಚಿತ್ರವಿಮರ್ಶೆ -ರೇಟಿಂಗ್ : 4/5)
ರೇಟಿಂಗ್ : 4/5
ಚಿತ್ರ : ಅಂದೊಂದಿತ್ತು ಕಾಲ
ನಿರ್ದೇಶಕ : ಕೀರ್ತಿ ಕೃಷ್ಣಪ್ಪ
ನಿರ್ಮಾಪಕ : ಭುವನ್ ಸುರೇಶ್
ಸಂಗೀತ : ರಾಘವೇಂದ್ರ. ವಿ
ಛಾಯಾಗ್ರಹಣ : ಅಭಿಷೇಕ್ ಕಾಸರಗೋಡು
ತಾರಾಗಣ : ವಿನಯ್ ರಾಜ್ ಕುಮಾರ್ , ಅದಿತಿ ಪ್ರಭುದೇವ್ , ನಿಶಾ ರವಿಕೃಷ್ಣನ್ , ವಿ. ರವಿಚಂದ್ರನ್ , ಅರುಣಾ ಬಾಲರಾಜ್ , ಧರ್ಮೇಂದ್ರ ಅರಸ್, ಜಗಪ್ಪ , ಕಡ್ಡಿಪುಡಿ ಚಂದ್ರು ಹಾಗೂ ಮುಂತಾದವರು…
ಜೀವನದಲ್ಲಿ ಪ್ರತಿಯೊಬ್ಬರಿಗೂ ಆಸೆ , ಆಕಾಂಕ್ಷಿಗಳು , ಗುರಿ ಇದ್ದೇ ಇರುತ್ತದೆ. ಅದು ಕೈಗೂಡಬೇಕಾದರೆ ನಿರಂತರ ಶ್ರಮವೂ ಅಷ್ಟೇ ಅಗತ್ಯ ಹಾಗೂ ಬೆಂಬಲವು ಮುಖ್ಯವಾಗುತ್ತದೆ. ಸುಂದರ ಹಳ್ಳಿಯಲ್ಲಿ ತಂದೆ ತಾಯಿಯ ಮಡಿಲಲ್ಲಿ ಬೆಳೆದು ಶಾಲೆಗೆ ಹೋಗುತ್ತಿದ್ದ ಮುಗ್ಧ ಹುಡುಗನಿಗೆ ಸಿನಿಮಾನೇ ಜೀವನ , ಉಸಿರು ಮಾಡಿಕೊಂಡು ಬಾಲ್ಯದಿಂದಲೂ ಖ್ಯಾತ ನಿರ್ದೇಶಕ ಪುಟ್ಟಣ್ಣ ನವರ ಸ್ಪೂರ್ತಿಯೊಂದಿಗೆ ನಾನು ದೊಡ್ಡ ನಿರ್ದೇಶಕ ನಕ್ಕಬೇಕೆಂಬ ಮಹದಾಸೆಯೊಂದಿಗೆ ಮುಂದೆ ಸಾಗುವವನ ಬದುಕಿನಲ್ಲಿ ಎದುರಾಗುವ ಏರಿಳಿತ , ಸ್ನೇಹ , ಪ್ರೀತಿ , ಕಷ್ಟಗಳ ನಡುವೆ ಗುರಿ ಮುಟ್ಟುತ್ತಾನೋ.. ಇಲ್ಲವೋ… ಎಂಬ ಸಿನಿಮಾ ನಂಟಿನ ಕಥಾನಕವನ್ನು ಈ ವಾರ ಪ್ರೇಕ್ಷಕರ ಮುಂದೆ ತಂದಿರುವಂತಹ ಚಿತ್ರ “ಅಂದೊಂದಿತ್ತು ಕಾಲ”.
ಮಾವಿನಕೆರೆ ಎಂಬ ಗ್ರಾಮದ ಟೆಂಟ್‌ವೊಂದರಲ್ಲಿ ಪ್ರೊಜೆಕ್ಟರ್ ಆಪರೇಟರ್ ಮುತ್ತಯ್ಯ(ಧರ್ಮೇಂದ್ರ ಅರಸ್) ಹಾಗೂ (ಅರುಣಾ ಬಾಲರಾಜ್) ರ ಮಗ ಕುಮಾರ (ವಿನಯ ರಾಜ್‌ಕುಮಾರ್) ಕನ್ನಡ ಮೀಡಿಯಂ ಶಾಲೆಯಲ್ಲಿ ಓದುತ್ತಿರುವಾಗ ಪುಟ್ಟಣ್ಣ ಅವರ ನಿರ್ದೇಶನದ ನಾಗರಹಾವು ಸಿನಿಮಾ ನೋಡಿ ತಾನೊಬ್ಬ ನಿರ್ದೇಶಕನಾಗಬೇಕೆಂಬ ಕನಸು ಕಟ್ಟಿಕೊಳ್ಳುತ್ತಾನೆ, ಈತನಿಗೆ ನಾಲ್ಕು ಜನ ಗೆಳೆಯರು, ಹೈಸ್ಕೂಲ್ ಓದುವಾಗಲೇ ಸಾಕ್ಷಿ(ನಿಶಾ) ಎಂಬ ವಿದ್ಯಾರ್ಥಿನಿಯ ಮೇಲೆ ಕ್ರಶ್ ಆಗುತ್ತದೆ, ಆದರೆ ಆ ಕ್ರಶ್ ಬಹಳ ಕಾಲ ನಿಲ್ಲಲ್ಲ , ಮಗ ಚೆನ್ನಾಗಿ ಓದಿ ಕೆಲಸಕ್ಕೆ ಸೇರಿ ತಮ್ಮನ್ನು ಸಾಕುತ್ತಾನೆಂದು ಕನಸು ಕಾಣುತ್ತಿರೋ ಪೋಷಕರು, ಈ ನಡುವೆ ತಾನು ನಿರ್ದೇಶಕನಾಗಬೇಕೆಂದು ಕನಸು ಕಾಣೋ ಕುಮಾರ, ಹೇಗಾದರೂ ತನ್ನ ಕನಸು ನನಸು ಮಾಡಿಕೊಳ್ಳಲೇ ಬೇಕೆಂಬ ಹಠದಿಂದ ಬೆಂಗಳೂರಿಗೆ ಬಂದಿಳಿಯುತ್ತಾನೆ, ಪುಟ್ಟಣ್ಣ ಕಣಗಾಲ್‌ರನ್ನು ದೇವರಂತೆ ಆರಾಧಿಸುವ ಕುಮಾರನಿಗೆ ತಾನೂ ಕೂಡ ಅವರಂತೆಯೇ ಒಳ್ಳೆಯ ಸಿನಿಮಾ ಮಾಡಬೇಕೆಂಬ ಆಸೆ.
ಆದರೆ ಆತ ದೊಡ್ಡವನಾದ ಮೇಲೆ ಅವಕಾಶ ಅಷ್ಟು ಸುಲಭವಾಗಿ ಸಿಗಲ್ಲ ಎನ್ನುವುದು ಗೊತ್ತಾಗುತ್ತದೆ, ತನ್ನ ಮೇಷ್ಟು(ದೊಡ್ಡರಂಗೇಗೌಡರು) ಕೊಟ್ಟ ಸಲಹೆ ಮೇರೆಗೆ ಬೆಂಗಳೂರಲ್ಲಿ ಮ್ಯಾನೇಜರ್ ಸಂಪಂಗಿ (ಕಡ್ಡಿಪುಡಿ ಚಂದ್ರು) ಯನ್ನು ಸಂಪರ್ಕಿಸಿ, ಕಡೆಗೂ ನಿರ್ದೇಶಕನೊಬ್ಬನ ಬಳಿ ಕುಮಾರ ಸಹಾಯಕನಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ, ತನ್ನಲ್ಲಿ ಎಷ್ಟೇ ಪ್ರತಿಭೆಯಿದ್ದರೂ ಸಹ, ಕೆಲ ನಿರ್ದೇಶಕರು ಬೆಳೆಯಲು ಬಿಡಲ್ಲ ಎನ್ನುವುದು ಕೆಲವೇ ದಿನಗಳಲ್ಲಿ ಕುಮಾರನಿಗೆ ಅರಿವಾಗುತ್ತದೆ, ಆದರೂ ತನ್ನ ತಾಯಿಯ ಕನಸನ್ನು ಈಡೇರಿಸಲು ಎಷ್ಟೇ ಅವಮಾನ , ಅಪಮಾನ ಎದಿರಾದರೂ ಸಹನೆಯಿಂದ ಕಾಯುತ್ತಾನೆ, ಇದರ ನಡುವೆ ಮ್ಯೂಸಿಕ್ ಟೀಚರ್ ಕೆಲಸ ಮಾಡುವ ವಸುಂದರ (ಅತಿಥಿ ಪ್ರಭುದೇವ್) ಸಿಗುತ್ತಾಳೆ.
ಕುಮಾರನ ನಡೆ ನುಡಿ ಕಂಡು ಆತನಿಗೆ ಸಹಕಾರಿಯಾಗಿ ನಿಲ್ಲುತ್ತಾಳೆ , ಜೊತೆಯಲ್ಲಿ ಅವನ ಪ್ರೀತಿಯನ್ನು ಕೂಡ ಹಂಬಲಿಸುತ್ತಾಳೆ. ಇದರ ನಡುವೆ ಒಂದಷ್ಟು ಸಮಸ್ಯೆಗಳು ಎದುರಾಗಿ ಕೊನೆಗೂ ಕುಮಾರ್ ಡೈರೆಕ್ಟರ್ ಆದನೇ… ತನ್ನ ತಾಯಿಯ ಕನಸನ್ನು ನನಸು ಮಾಡಿದನೇ… ಇಲ್ಲವೇ…ವಸುಂದರ ಗೆ ಪ್ರೀತಿ ಸಿಗುತ್ತಾ… ಇಲ್ಲವಾ… ಎನ್ನುವುದನ್ನು ನೀವು ಚಿತ್ರಮಂದಿರದಲ್ಲಿ ಬಂದು ನೋಡಬೇಕು.
ಈ ಚಿತ್ರದ ನಿರ್ದೇಶಕ ಕೀರ್ತಿ ಕೃಷ್ಣ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು
ಬಣ್ಣದ ಲೋಕದ ಪ್ರಪಂಚ , ಅದರಲ್ಲೂ ಪರದೆಯ ಹಿಂದೆ ಸಾಧನೆ ಮಾಡುವ ಪ್ರತಿಯೊಬ್ಬರ ಹಾದಿ ಆರಂಭದಲ್ಲಿ ಕಷ್ಟಕರವಾಗಿಯೇ ಇರುತ್ತದೆ. ಅಂಥ ಒಬ್ಬ ಸಾಧಕನ ಕಥೆಯನ್ನು ತೆರೆಯ ಮೇಲೆ ತಂದಿದ್ದಾರೆ. ದೂರದಿಂದ ನೋಡುವವರಿಗೆ ಚಿತ್ರರಂಗ ಕಲರ್ ಫುಲ್ ಆಗಿಯೇ ಕಾಣಿಸುತ್ತದೆ. ಆದರೆ ನಿರ್ದೇಶಕನಾಗಬೇಕು ಅಥವಾ ಚಿತ್ರರಂಗದಲ್ಲಿ ಏನಾದರೂ ಸಾಧನೆ, ಹೆಸರು ಮಾಡಬೇಕು ಎಂಬ ಕನಸು ಕಾಣೋ ಪ್ರತಿಯೊಬ್ಬರಿಗೂ ಅಂದೊಂದಿತ್ತು ಕಾಲ ಸಿನಿಮಾ ಕನೆಕ್ಟ್ ಆಗುತ್ತದೆ.
ಚಿತ್ರರಂಗಕ್ಕೆ ಬರುವ ಹೊಸಬರ ಸಂಕಷ್ಟ, ಅಪಮಾನಗಳನ್ನು ಈ ಸಿನಿಮಾದಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ. ಕಥೆಯಲ್ಲಿ ಏನು ಹೊಸತನ ಇಲ್ಲದಿದ್ದರೂ, ಚಿತ್ರಕಥೆಯಲ್ಲಿ ಗಮನ ಸೆಳೆದಿದ್ದು , ವಿಶೇಷವಾಗಿ ತಾಯಿ ಮಗನ ಬಾಂಧವ್ಯದ ಸಂದರ್ಭ ಮನಮುಟ್ಟುತ್ತದೆ. ಸಿನಿಮಾ ನಂಟಿನ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕ ಭುವನ್ ಸುರೇಶ್ ಕೂಡ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದು , ಉತ್ತಮ ಚಿತ್ರವನ್ನು ಪ್ರೇಕ್ಷಕರಿಗೆ ನೀಡಿದ್ದಾರೆ. ಇನ್ನು ಇಡೀ ಚಿತ್ರದ ಹೈಲೈಟ್ ಅಂದರೆ ವಿ.ರಾಘವೇಂದ್ರ ಸಂಗೀತದ ಮೋಡಿ ಚಿತ್ರವನ್ನು ಆವರಿಸಿಕೊಂಡಿದೆ. ಸುಂದರ ದೃಶ್ಯಗಳನ್ನು ಅಭಿಷೇಕ್ ಕಾಸರಗೋಡು ಚಿತ್ರಸಿದ್ದು , ಸಂಕಲನ ಸೇರಿದಂತೆ ತಾಂತ್ರಿಕವಾಗಿ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ.
ಇನ್ನು ಈ ಚಿತ್ರದಲ್ಲಿ ಎರಡು ವಿಭಿನ್ನ ಶೇಡ್ ಗಳಲ್ಲಿ ಮಿಂಚಿರುವ ನಟ ವಿನಯ್ ರಾಜಕುಮಾರ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವುದರಲ್ಲಿ ಶ್ರಮ ಪಟ್ಟಿದ್ದಾರೆ. ವರನಟ ಡಾ.ರಾಜ್‌ಕುಮಾರ್ ಅವರ ಕುಟುಂಬದ ಮೂರನೇ ಕುಡಿಯಾದ ವಿನಯ್ ಚಿಕ್ಕ ವಯಸ್ಸಿನಿಂದಲೇ ಚಿತ್ರೋದ್ಯಮವನ್ನು ನೋಡಿಕೊಂಡೇ ಬೆಳೆದವರು. ಹಾಗಾಗಿ ಚಿತ್ರರಂಗದೊಳಗಿನ ಕಷ್ಟ-ಸುಖದ ಬಗ್ಗೆ ಚೆನ್ನಾಗಿ ಅರಿವಿದೆ. ಅವಕಾಶ ಹುಡುಕಿಕೊಂಡು ಗಾಂಧಿ ನಗರಕ್ಕೆ ಬರುವ ಹೊಸಬರ ಹೋರಾಟ, ಸಂಕಷ್ಟ ಹೇಗಿರುತ್ತದೆ ಎಂಬುದನ್ನು ಕೂಡ ಅವರು ಕಂಡಿರುತ್ತಾರೆ.
ಅಂತಹ ಒಬ್ಬ ನಿರ್ದೇಶಕನ ಕಷ್ಟ ಸುಖದ ಹಾದಿಯ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದು, ಅದರಲ್ಲೂ ಹೈಸ್ಕೂಲ್ ಯುವಕನಾಗಿ ಗಮನ ಸೆಳೆಯುತ್ತಾರೆ.ಇನ್ನು ಶಾಲಾ ದಿನಗಳ ಗೆಳತಿಯಾಗಿ ಅಭಿನಯಿಸಿರುವ ನಿಶಾ ರವಿ ಕೃಷ್ಣನ್ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಗಮನ ಸೆಳೆಯುತ್ತಾರೆ. ಅದೇ ರೀತಿ ಮತ್ತೋರ್ವ ನಟಿ ಅದಿತಿ ಪ್ರಭುದೇವ್ ಕೂಡ ಗೆಳೆಯನಿಗೆ ಸಹಕಾರಿಗೆ ನಿಲ್ಲುವ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.
ಇಬ್ಬರು ನಾಯಕಿಯರ ಹಾಡುಗಳು ಸೇರಿದಂತೆ ತಾಯಿ ಮಗನ ಮನಮುಟ್ಟುವ ಹಾಡು ಕೂಡ ಹುಡುಗರ ಗಮನವನ್ನು ಸೆಳೆಯುತ್ತದೆ. ಇನ್ನು ವಿಶೇಷ ಪಾತ್ರದಲ್ಲಿ ಬರುವ ರವಿಚಂದ್ರನ್ ಪಾತ್ರ ಎಲ್ಲಾ ಬಾಲ್ಯದ ಸ್ನೇಹಿತರ ನೆನಪು ಮೂಡುವಂತೆ ಮಾಡುತ್ತದೆ. ತಾಯಿ ಪಾತ್ರದಲ್ಲಿ ಅರುಣಾ ಬಾಲರಾಜ್ ನೆನಪಲ್ಲುಳಿಯುತ್ತಾರೆ. ಇನ್ನುಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದ್ದು , ಒಟ್ಟಾರೆ ಇಡೀ ಕುಟುಂಬ ಕುಳಿತು ನೋಡುವಂತಹ ಚಿತ್ರ ಇದಾಗಿದೆ.