Cini NewsSandalwood

ಬಹು ನಿರೀಕ್ಷಿತ ಸೆಬಾಸ್ಟಿನ್ ಡೇವಿಡ್ “ಪೆನ್ ಡ್ರೈವ್” ಚಿತ್ರ ಜುಲೈ 4ರಂದು ಬಿಡುಗಡೆ.

Spread the love

ಆರ್ ಹೆಚ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಎನ್ ಹನುಮಂತರಾಜು ಹಾಗೂ ಲಯನ್ ಎಸ್ ವೆಂಕಟೇಶ್ ನಿರ್ಮಾಣದ, ಸೆಬಾಸ್ಟಿನ್ ಡೇವಿಡ್ ನಿರ್ದೇಶನದ ಹಾಗೂ “ಬಿಗ್ ಬಾಸ್” ಖ್ಯಾತಿಯ ತನಿಷಾ ಕುಪ್ಪಂಡ, ಕಿಶನ್ ಹಾಗೂ ಕನಸಿನ ರಾಣಿ ಮಾಲಾಶ್ರೀ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ “ಪೆನ್ ಡ್ರೈವ್” ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು.

ಡಾ||ವಿ.ನಾಗೇಂದ್ರಪ್ರಸಾದ್ ಹಾಡುಗಳನ್ನು ಬರೆದು ಸಂಗೀತ ನೀಡಿದ್ದಾರೆ. ಆಡಿಯೋ ಬಿಡುಗಡೆ ಸಮಾರಂಭಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ನರಸಿಂಹಲು, ಪದಾಧಿಕಾರಿಗಳಾದ ಶಿಲ್ಪ ಶ್ರೀನಿವಾಸ್, ಕುಶಾಲ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

“ಪೆನ್ ಡ್ರೈವ್” ಆರಂಭವಾಗಲು ನಿರ್ಮಾಪಕ ಲಯನ್ ವೆಂಕಟೇಶ್ ಕಾರಣ. ಅನಂತರ ಹನುಮಂತರಾಜು ಅವರು ನಿರ್ಮಾಣಕ್ಕೆ ಸಾಥ್ ನೀಡಿದರು. ನಿರ್ಮಾಪಕರು ಹಾಗೂ ಚಿತ್ರತಂಡದ ಸಹಕಾರದಿಂದ ಅಂದುಕೊಂಡ ಹಾಗೆ ಸಿನಿಮಾ ಮೂಡಿಬಂದಿದೆ. ವಿ.ನಾಗೇಂದ್ರ ಪ್ರಸಾದ್ ಸಂಗೀತ ನೀಡಿರುವ ಚಿತ್ರದ ಎಲ್ಲಾ ಹಾಡುಗಳು ಚೆನ್ನಾಗಿದೆ.

ನನ್ನ ಹಿಂದಿನ ಚಿತ್ರಗಳಲ್ಲೂ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಥಾಹಂದರವಿತ್ತು. ಇದರಲ್ಲೂ ಜನರು ಅದನ್ನು ನಿರೀಕ್ಷಿಸಬಹುದು‌.‌ “ಪೆನ್ ಡ್ರೈವ್”, ಕಳೆದವರ್ಷ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿದ ಪದ. ನಮ್ಮ ಚಿತ್ರಕ್ಕೆ ಈ ಶೀರ್ಷಿಕೆಯಿಟ್ಟ ಮೇಲೆ‌ ಅನೇಕ ಅನಾಮಾಧೇಯ ಕರೆಗಳನ್ನು ಸ್ವೀಕರಿಸಿದ್ದೇನೆ.‌ ಈ ಶೀರ್ಷಿಕೆ ಇಟ್ಟಿದ್ದು ಏಕೆ? ಎಂಬ ಪ್ರಶ್ನೆಯನ್ನು ಸಾಕಷ್ಟು ಜನ ಕೇಳಿದ್ದಾರೆ. ಸಾಕಷ್ಟು ಅಡೆತಡೆಗಳನ್ನು ದಾಟಿ ನಮ್ಮ ಚಿತ್ರ ಜುಲೈ 4 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ‌‌. ಎಲ್ಲರೂ ನೋಡಿ ಹಾರೈಸಿ ಎಂದರು ನಿರ್ದೇಶಕ ಸೆಬಾಸ್ಟಿನ್ ಡೇವಿಡ್.

ನಾನು ಈ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ. ಒಂದೊಳ್ಳೆ ತಂಡದ ಜೊತೆಗೆ ಕೆಲಸ ಮಾಡಿದ್ದೇನೆ. ಕಿಶನ್ ಅವರ ಜೊತೆಗೆ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದೇನೆ ಎಂದು ನಟಿ ತನಿಷಾ ಕುಪ್ಪಂಡ ತಿಳಿಸಿದರು . “ಬಿಗ್ ಬಾಸ್” ನಂತರ ನಾನು ನಟಿಸಿರುವ ಮೊದಲ ಚಿತ್ರವಿದು. ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಟ ಕಿಶನ್.

ಹಾಡು ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಹಾಗೂ ಚಿತ್ರತಂಡದವರಿಗೆ ಧನ್ಯವಾದ ತಿಳಿಸಿ ಮಾತನಾಡಿದ ನಿರ್ಮಾಪಕರಾದ ಹನುಮಂತ ರಾಜು ಹಾಗೂ ಲಯನ್ ಎಸ್ ವೆಂಕಟೇಶ್ ಅವರು ಚಂದನ್ ಫಿಲಂಸ್ ಮೂಲಕ ರಾಜ್ಯಾದ್ಯಂತ 150 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಜುಲೈ 4 ರಂದು ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ.

ನಮ್ಮ ಚಿತ್ರಕ್ಕೆ ಎಲ್ಲರೂ ಪ್ರೋತ್ಸಾಹ ನೀಡಿ. ಚಿತ್ರಮಂದಿರಗಳಿಗೆ ಬಂದು ಚಿತ್ರ ನೋಡಿ ಎಂದರು. ಸಂಗೀತ ನಿರ್ದೇಶಕ ಹಾಗೂ ಗೀತರಚನೆಕಾರ ವಿ.ನಾಗೇಂದ್ರಪ್ರಸಾದ್, ಛಾಯಾಗ್ರಾಹಕ ಪಿ.ವಿ.ಆರ್ ಸ್ವಾಮಿ, ಸಹ ನಿರ್ದೇಶಕ ನಾಗೇಶ್, ನಟ ಕರಿಸುಬ್ಬು, ಟೈಗರ್ ವೆಂಕಟೇಶ್ ಮುಂತಾದವರು “ಪೆನ್ ಡ್ರೈವ್” ಕುರಿತು ಮಾತನಾಡಿದರು.

Visited 1 times, 1 visit(s) today
error: Content is protected !!