ಕಡಲ ಕಿನಾರೆಯ ಆಕ್ಷನ್ , ಲವ್ ಕಥಾನಕ “ಜಿಗರ್” ಟ್ರೈಲರ್ ರಿಲೀಸ್.
ಬೆಳ್ಳಿ ಪರದೆಯ ಮೇಲೆ ಮತ್ತೊಂದು ಕರಾವಳಿ ಭಾಗದ ಚಿತ್ರ ಅಬ್ಬರಿಸಲು ಸಜ್ಜಾಗಿದೆ. ಜೀವನದಲ್ಲಿ ಏನೇ ಎದುರಾದರೂ ಎದುರಿಸುವ ಗುಂಡಿಗೆ ಇರಬೇಕು , ಅಂತಹ ಗುಂಡಿಗೆ ಇರುವ ಕಥೆ “ಜಿಗರ್”. ಆಕ್ಷನ್ , ಲವ್ , ಕಾಮಿಡಿ ಸೇರಿದಂತೆ ಮಾಸ್ ಎಲಿಮೆಂಟ್ಸ್ ಒಳಗೊಂಡಿರುವ ಈ ಜಿಗರ್ ಚಿತ್ರವನ್ನ ಪೂಜಾ ವಸಂತಕುಮಾರ್ ನಿರ್ಮಿಸಿದ್ದು, ಇದು ಇವರ ನಿರ್ಮಾಣದ ಐದನೇ ಚಿತ್ರವಾಗಿದೆ.
ಪ್ರಥಮ ಬಾರಿಗೆ ಸೂರಿ ಕುಂದರ್ ನಿರ್ದೇಶನದಲ್ಲಿ ಹಾಗೂ ಲವರ್ ಬಾಯ್ ಆಗಿ ಕಾಣುತ್ತಿದ್ದ ನಟ ಮಾಸ್ ಆಕ್ಷನ್ ನಾಯಕನಾಗಿ ಮಿಂಚಲು ಮುಂದಾಗಿರುವ ಪ್ರವೀಣ್ ತೇಜ್ ನಾಯಕನಾಗಿ ನಟಿಸಿರುವ “ಜಿಗರ್” ಚಿತ್ರದ ಟ್ರೇಲರ್ ಅನ್ನು ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಕೋರಿದರು. ಸದ್ಯ ಬಿಡುಗಡೆಯಾಗಿ ಈ ಟ್ರೇಲರ್ ಬಾರಿ ವೈರಲ್ ಆಗಿದ್ದು , ಚಿತ್ರ ಜುಲೈ 5ರಂದು ತೆರೆಗೆ ಬರುತ್ತಿದೆ.
ಇನ್ನೂ ಈ ಚಿತ್ರದ ಕುರಿತು ಮಾತನಾಡಲು ಚಿತ್ರತಂಡ ಪತ್ರಗೋಷ್ಠಿಯನ್ನು ಆಯೋಜನೆ ಮಾಡಿದ್ದು , ಚಿತ್ರದ ನಾಯಕ ಪ್ರವೀಣ್ ತೇಜ್ ಮಾತನಾಡುತ್ತಾ ನಾನು ಪ್ರೇಮಕಥೆಗಳಿಗೆ ಸೀಮಿತನಾಗಿದ್ದವನನ್ನ ಈ ಚಿತ್ರದ ಮೂಲಕ ಆಕ್ಷನ್ ಹೀರೋ ಮಾಡಿದ್ದಾರೆ ನಿರ್ದೇಶಕರು. ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಜೀವ. ಉತ್ಸಾಹಿ ಯುವಕನೊಬ್ಬ ಫಿಶ್ ಟೆಂಡರ್ ಶಿಪ್ ನಲ್ಲಿ ಭಾಗಿಯಾಗುತ್ತಾನೆ.
ಆಮೂಲಕ ಭೂಗತಲೋಕಕ್ಕೂ ಕಾಲಿಡುತ್ತಾನೆ. ಅಲ್ಲಿಯೂ ಸಂಘಗಳಿರುತ್ತದೆ. ಸಂಘಗಳ ನಡುವೆ ಸಂಘರ್ಷವೂ ಇರುತ್ತದೆ. ಇದು ಚಿತ್ರದ ಪ್ರಮುಖ ಕಥಾಹಂದರ. ಇದರೊಟ್ಟಿಗೆ ಲವ್, ಆಕ್ಷನ್, ಕಾಮಿಡಿ ಕೂಡ ನಮ್ಮ ಚಿತ್ರದಲ್ಲಿದೆ. ಈ ಚಿತ್ರಕ್ಕಾಗಿ ನಮ್ಮ ಇಡೀ ತಂಡ ಬಹಳಷ್ಟು ಶ್ರಮ ಪಟ್ಟಿದೆ. ಇತ್ತೀಚಿಗೆ ಚಿತ್ರಮಂದಿರಗಳಿಗೆ ಸಿನಿಪ್ರಿಯರು ಬರುತ್ತಿಲ್ಲ , ಅವರು ಬರುವುದಕ್ಕಾಗಿ ಒಂದಷ್ಟು ಪ್ರಚಾರದ ಕಾರ್ಯವನ್ನು ಜೋರಾಗಿ ಮಾಡುತ್ತಿದ್ದೇವೆ, ನಿಮ್ಮೆಲ್ಲರ ಪ್ರೀತಿ ಸಹಕಾರ ಇರಲಿ ಜುಲೈ 05 ರಂದು ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿ ಎಂದರು.
ಇನ್ನು ಈ ಚಿತ್ರದ ನಿರ್ದೇಶಕ ಸೂರಿ ಕುಂದರ್ ಮಾತನಾಡುತ್ತ ಸುಮಾರು ಹದಿನೈದು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೇನೆ. ಸ್ವತಂತ್ರ ನಿರ್ದೇಶಕನಾಗಿ ಮೊದಲ ಚಿತ್ರ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. “ಜಿಗರ್” ಎಂದರೆ ಎರಡು ಗುಂಡಿಗೆವುಳ್ಳವನು ಹಾಗೂ ಯಾವುದಕ್ಕೂ ಅಂಜದವನು ಎಂದು ಅರ್ಥ. ಮಲ್ಪೆ , ಉಡುಪಿ, ಕುಂದಾಪುರ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ.
ಚಿತ್ರತಂಡದ ಸದಸ್ಯರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಜುಲೈ 5 ರಂದು “ಜಿಗರ್” ಬಿಡುಗಡೆಯಾಗಲಿದೆ. ನೋಡಿ ಪ್ರೋತ್ಸಾಹಿಸಿ ಎಂದರು. ಇನ್ನು ಈ ಚಿತ್ರದ ನಾಯಕಿ ವಿಜಯಶ್ರೀ ಕಲ್ಬುರ್ಗಿ ಇದೊಂದು ಹಳ್ಳಿ ಹುಡುಗಿಯ ಕಾಲೇಜ್ ಪಾತ್ರ . ಇದರಲ್ಲಿ ಲವ್ , ಸೆಂಟಿಮೆಂಟ್ ಎಲ್ಲವೂ ಇದೆ. ನಮಗೆ ನಿಮ್ಮ ಸಪೋರ್ಟ್ ಅಗತ್ಯ ಎಂದು ಕೇಳಿಕೊಂಡರು.
ನಟ ಯಶ್ ಶೆಟ್ಟಿ ಮಾತನಾಡುತ್ತಾ ನನ್ನ ಊರು ಉಡುಪಿ , ಮಲ್ಪೆ ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಮಲ್ಪೆ ಎಂದರೆ ನನಗೆ ಸ್ವಲ್ಪ ಭಯ. ಅಲ್ಲಿನ ಫಿಶ್ ಟೆಂಡರ್, ವೈವಾಟು , ಆರ್ಭಟವನಲ್ಲ ನಾನು ಕೇಳಿದ್ದೇನೆ. ಈ ಚಿತ್ರದಲ್ಲಿ ಮಲ್ಪೆ ಮುನ್ನ ಎಂಬ ಪಾತ್ರವನ್ನು ಕೂಡ ಮಾಡಿದ್ದೇನೆ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ಜಿಗರ್ ನೋಡಿ ಎಂದರು.
ಇನ್ನು ಈ ಚಿತ್ರದಲ್ಲಿ ಯುವ ಪ್ರತಿಭೆಗಳಾದ ದಿಲೀಪ್ ಪುಟ್ಟಸ್ವಾಮಿ, ಭವ್ಯ ಪೂಜಾರಿ, ಯೋಗೀಶ್ , ಕಿರಣ್, ಅನಿಕ್ ಸೇರಿದಂತೆ ಹಲವಾರು ಕಲಾವಿದರು ಈ ಚಿತ್ರದ ತಮ್ಮ ತಮ್ಮ ಪಾತ್ರಗಳ ಬಗ್ಗೆ ಹಂಚಿಕೊಂಡರು. ಇನ್ನು ಈ ಚಿತ್ರ ತಂಡಕ್ಕೆ ಶುಭ ಕೊರಲು ನಿರ್ಮಾಪಕರಾದ ನರಸಿಂಹಮೂರ್ತಿ , ನಟ ಧರ್ಮಣ್ಣ ಆಗಮಿಸಿ ಮಾತನಾಡುತ್ತ ಒಂದೊಳ್ಳೆ ಕಂಟೆಂಟ್ ಇಟ್ಕೊಂಡು ಚಿತ್ರತಂಡ ಬಂದಿದೆ. ಎಲ್ಲರೂ ಬಹಳ ಶ್ರಮಪಟ್ಟು ಮಾಡಿದ್ದಾರೆ, ಚಿತ್ರಕ್ಕೆ ಯಶಸ್ಸು ಸಿಗಲಿ ಎಂದು ಶುಭ ಕೋರಿದರು.
ಇನ್ನು ಈ ಚಿತ್ರದ ಸಂಗೀತ ನಿರ್ದೇಶಕ ರಿತ್ವಿಕ್ ಮುರಳಿಧರ್, ಗೀತರಚನೆಕಾರ ಗಣೇಶ್, ಛಾಯಾಗ್ರಾಹಕ ಶಿವಸೇನ ಮುಂತಾದವರು “ಜಿಗರ್” ಚಿತ್ರದ ಕುರಿತು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಬಹಳಷ್ಟು ನಿರೀಕ್ಷೆಯೊಂದಿಗೆ ಚಿತ್ರವನ್ನು ಜುಲೈ 5ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ.