Cini Reviews Cinisuddi Fresh Cini News 

ಮನೋರಂಜನೆಯ ಬುತ್ತಿ “ವೀಲ್ ಚೇರ್ ರೋಮಿಯೋ” (ಚಿತ್ರವಿಮರ್ಶೆ-ರೇಟಿಂಗ್ : 4.5/5)

ರೇಟಿಂಗ್ : 4.5/5

ಚಿತ್ರ : ವೀಲ್ ಚೇರ್ ರೋಮಿಯೋ
ನಿರ್ದೇಶಕ : ನಟರಾಜ್. ಜಿ. ನಿರ್ಮಾಪಕ : ಟಿ ವೆಂಕಟಾಚಲಯ್ಯ
ಸಂಭಾಷಣೆ : ಗುರು ಕಶ್ಯಪ್
ಸಂಗೀತ : ಬಿ. ಜೆ .ಭರತ್
ಛಾಯಾಗ್ರಹಣ : ಸಂತೋಷ್ ಪಾಂಡಿ
ತಾರಾಗಣ : ರಾಮ್ ಚೇತನ್, ಮಯೂರಿ, ಸುಚೇಂದ್ರ ಪ್ರಸಾದ್, ತಬಲಾ ನಾಣಿ, ರಂಗಾಯಣ ರಘು ಹಾಗೂ ಮುಂತಾದವರು…

ಪ್ರತಿಯೊಬ್ಬ ಮನುಷ್ಯನಲ್ಲೂ ಆಸೆ, ಆಕಾಂಕ್ಷೆಗಳು ತಪ್ಪಿದ್ದಲ್ಲ…
ಬೇಕು, ಬೇಡ ಎಂಬ ಎಲ್ಲಾ ಆಲೋಚನೆಗಳನ್ನು ತನ್ನೊಟ್ಟಿಗೆ ಇಟ್ಟುಕೊಂಡಿರುತ್ತಾನೆ. ಅದು ಆಯಾ ಕಾಲಘಟ್ಟಕ್ಕೆ ಹಾಗೂ ಸಮಯ ಸಂದರ್ಭಕ್ಕೆ ತಕ್ಕಂತೆ ತೆರೆದುಕೊಳ್ಳುತ್ತಾ ಹೋಗುತ್ತದೆ.
ಅಂತಹದ್ದೇ ಕೆಲವು ಸೂಕ್ಷ್ಮ ವಿಚಾರಗಳ ಹೂರಣವನ್ನು ಎತ್ತಿಕೊಂಡು ಚಿತ್ರದ ಶೀರ್ಷಿಕೆಯಲ್ಲೇ ಹೇಳಿರುವಂತೆ ವೀಲ್‌ ಚೇರ್‌ ರೋಮಿಯೋ ಬದುಕಿನ ಪಯಣದ ಸುಖ ದುಖಗಳ ಅನಾವರಣವಾಗುವ ಕಥಾ ಹಂದರವನ್ನು ಒಳಗೊಂಡಿರುವಂತ ಚಿತ್ರ ಇದಾಗಿದೆ.

ಮನುಷ್ಯರಾಗಿ ಹುಟ್ಟಿದ ಮೇಲೆ ಎಂತಹದ್ದೇ ಸಮಸ್ಯೆ ಬಂದರು ಬದುಕು ಸಾಗಿಸುವುದು ಬಹಳ ಮುಖ್ಯ. ಜೀವನದಲ್ಲಿ ಜುಗುಪ್ಸೆಗೊoಡು, ಹೆಂಡತಿ ಇಲ್ಲದೆ ಅಂಗವಿಕಲ ಮಗನನ್ನು ಇಟ್ಟುಕೊಂಡು ಬದುಕುವುದಕ್ಕಿಂತ ಸಾಯುವುದೇ ಮೇಲು ಎಂದು ಮುಂದಾಗುವ ತಂದೆ (ಸುಚೇಂದ್ರ ಪ್ರಸಾದ್) ಆಟೋ ಚಾಲಕ (ತಬ್ಲಾ ನಾಣಿ) ಗಾಡಿಯಲ್ಲಿ ಸಾಗುವಾಗ ಇವರ ತಳಮಳವನ್ನು ಅರಿಯುವ ಆಟೋ ಡ್ರೈವರ್ ಅಂಗವಿಕಲ ಆಶ್ರಮಕ್ಕೆ ಕರೆದೊಯ್ದು ಅಲ್ಲಿ ಇವರ ಮನ ಪರಿವರ್ತನೆ ಮಾಡಿ ಬದುಕು ಎಲ್ಲರಿಗೂ ಇದೆ.

ನಾವು ಕಂಡುಕೊಳ್ಳುವ ದಾರಿ ಮುಖ್ಯ ಎಂದು ತಿಳಿ ಹೇಳುತ್ತಾನೆ. ಕಾಲ ಕಳೆದಂತೆ ನಾಯಕ(ರಾಮ್ ಚೇತನ್) ಆತನಿಗೆ ವೀಲ್ ಚೇರ್ ಎಲ್ಲಾ ಆಗಿರುತ್ತೆ. ಕೈ-ಕಾಲುಗಳು ಸ್ವಾಧೀನ ಇಲ್ಲದಿದ್ದರೂ ಸ್ವಾವಲಂಭಿಯಾಗಿ ಬದುಕ ಬೇಕೆಂಬ ಆಸೆ ನಾಯಕ ಉಲ್ಲಾಸ್‌ ನದ್ದು. ಅದೇ ರೀತಿ ಮಗನಿಗೆ ಯಾವುದೇ ಕುಂದು ಕೊರತೆ ಬಾರದಂತೆ ಬಾಲ್ಯದಿಂದಲೂ ತನ್ನ ಆಸೆ ಆಕಾಂಕ್ಷೆಗಳನ್ನು ಈಡೇರಿಸುತ್ತಾ ಬರುವ ತಂದೆ.

ಅಂಗವಿಕಲನಾದರೂ ವಯಸ್ಸಿಗೆ ಬರುತ್ತಿದ್ದಂತೆ ಉಲ್ಲಾಸ್‌ನಿಗೆ ವಯೋಸಹಜ , ವ್ಯಾಮೋಹ, ಆಸೆ , ಮನೋಕಾಮನೆಯನ್ನು ತೀರಿಸಿಕೊಳ್ಳಲುವ ಬಯಕೆ.ಯಾವುದೇ ಮುಚ್ಚುಮರೆ ಇಲ್ಲದ ತಂದೆ ಮಗನ ಬಾಂಧವ್ಯದ ಎಲ್ಲಾ ವಿಚಾರವೂ ಸರಾಗವಾಗಿ ಹೊರಬರುತ್ತದೆ. ಇದನ್ನು ಅರಿಯುವ ತಂದೆ ಮಗನಿಗೆ ಮದುವೆ ಮಾಡಲು ಸಲುವಾಗಿ ಹುಡುಗಿಯರನ್ನು ಹುಡುಕಲು ಮುಂದಾಗುತ್ತಾನೆ.

ಆದರೆ ಯಾರೊಬ್ಬರೂ ಉಲ್ಲಾಸ್‌ ನಿಗೆ ಹೆಣ್ಣು ನೀಡಲು ಮುಂದಾಗುವುದಿಲ್ಲ. ಉಲ್ಲಾಸ್ ತನ್ನ ಆಸೆಯಂತೆ ಗೆಳೆಯ(ಗಿರಿ) ಜೊತೆ ವೇಶ್ಯಾಗೃಹಕ್ಕೆ ಹೋಗುತ್ತಾನೆ. ಅಲ್ಲಿನ ಹೆಣ್ಣುಮಕ್ಕಳ ಜಾಕ್ ಮಾಮ (ರಂಗಾಯಣ ರಘು) ನೆರವು ಪಡೆಯುತ್ತಾರೆ. ನಂತರ ನಾನಾ ಕಾರಣಕ್ಕೆ ಪೊಲೀಸ್ ಸ್ಟೇಷನ್, ಕೋರ್ಟ್ ಹೀಗೆ ನಾನಾ ಕಡೆ ಸುತ್ತಾಡುವಾಗ ಅಚಾನಕ್ಕಾಗಿ ನಾಯಕ ಉಲ್ಲಾಸ್ ಕಣ್ಣಿಗೆ ನಾಯಕಿ ಡಿಂಪಲ್ (ಮಯೂರಿ) ಕಾಣುತ್ತಾಳೆ.

ಇಲ್ಲಿಂದ ಚಿತ್ರದ ಓಟಕ್ಕೆ ಮತ್ತೊಂದು ತಿರುವು ಪಡೆದುಕೊಳ್ಳುತ್ತಾ ಹೋಗುತ್ತದೆ. ಕ್ಲೈಮ್ಯಾಕ್ಸ್ ಹಂತಕ್ಕೆ ಬರುವಷ್ಟರಲ್ಲಿ ಬಹಳಷ್ಟು ಏರಿಳಿತಗಳು ಎದುರಾಗುತ್ತದೆ…
ಅಪ್ಪ ಮಗ ಏನು ಮಾಡುತ್ತಾರೆ..? ರೋಮಿಯೋಗೆ ಜ್ಯೂಲಿಯೆಟ್‌ ಸಿಗುತ್ತಾಳಾ?
ಈ ಜರ್ನಿಯಲ್ಲಿ ಎದುರಾಗುವ ತೊಂದರೆಗಳು ಏನು…
ಹೀಗೆ ಹಲವು ಪ್ರಶ್ನೆಗಳು ಉತ್ತರ ನಿಮಗೆ ಸಿಗಬೇಕಾದರೆ ಒಮ್ಮೆ “ವೀಲ್‌ಚೇರ್‌ ರೋಮಿಯೋ’ ಸಿನಿಮಾವನ್ನ ಚಿತ್ರಮಂದಿರಗಳಿಗೆ ಹೋಗಿ ನೋಡಬೇಕು.

ಈ ಚಿತ್ರವನ್ನು ನಿರ್ದೇಶನ ಮಾಡುವ ನಟರಾಜ್ ಮೂಲತಃ ಬರಹಗಾರು, ಸೂಕ್ಷ್ಮ ವಿಚಾರದ ಕಥಾಹಂದರವನ್ನು ಬಹಳ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಚಿತ್ರಕಥೆ ಮಾಡುವುದರ ಜೊತೆಗೆ ಸರಳ ರೀತಿಯಲ್ಲಿ ಮನ ತಣಿಸುವ ಸಂಭಾಷಣೆ ಮೂಲಕ ಕಚಗುಳಿಯಿಡುತ್ತಾ ಇಡೀ ಚಿತ್ರವನ್ನು ಭಾವನಾತ್ಮಕವಾಗಿ ತೆರೆಮೇಲೆ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಸಿನಿಮಾದಲ್ಲಿ ಬೆರಳೆಣಿಕೆಯಷ್ಟು ಪಾತ್ರಧಾರಿಗಳು, ಅದಕ್ಕೆ ಪೂರಕವಾಗುವಂತಹ ಸಂಭಾಷಣೆ ಮೂಲಕ ಎಲ್ಲರನ್ನ ನಗಿಸುತ್ತಾ ಸಂದರ್ಭಕ್ಕೆ ತಕ್ಕಂತೆ ಕಥೆಯನ್ನು ತೆಗೆದುಕೊಂಡು ಹೋಗಿರುವ ರೀತಿ ವಿಭಿನ್ನವಾಗಿದೆ. ಇಡೀ ಚಿತ್ರದ ಹೈಲೈಟ್ ಗಳಲ್ಲಿ ಪ್ರಮುಖವಾದದ್ದು ಗುರು ಕಶ್ಯಪ್‌ ಅವರ ಪಂಚಿಂಗ್‌ ಡೈಲಾಗ್ಸ್‌. ಅದಕ್ಕೆ ತಕ್ಕಂತೆ ಕಲಾವಿದರ ಟೈಮಿಂಗ್‌ ಕೂಡ ಸಿನಿಮಾದ ಓಟಕ್ಕೆ ಪೂರಕವಾಗಿದೆ. ಚಿತ್ರದಲ್ಲಿ ಬರುವ ಪತಿ ಸನ್ನಿವೇಶಗಳನ್ನು ತಮ್ಮ ಮಾತಿನ ಚಟಾಕಿ ಮೂಲಕ ಎಲ್ಲರ ಗಮನ ಸೆಳೆಯುವಂತೆ ಮಾಡಿರುವ ಕೆಲಸ ಮಾತ್ರ ಅದ್ಭುತವಾಗಿದೆ.

ಚಿತ್ರದ ಹಾಡುಗಳು ಕೂಡ ಸಂದರ್ಭಕ್ಕೆ ತಕ್ಕಂತೆ ಗಮನ ಸೆಳೆಯುತ್ತ ಸಾಗಿದೆ. ಇನ್ನು ಚಿತ್ರದ ದ್ವಿತೀಯ ಭಾಗದ ಕೊನೆಯ ಹಂತದಲ್ಲಿ ಕೊಂಚ ನಿಧಾನ ಗತಿ ಅನಿಸುತ್ತಿದೆ. ವಿನಃ ಇನ್ನೆಲ್ಲವೂ ಚಿತ್ರಕ್ಕೆ ಪೂರಕವಾಗಿದೆ. ಇಂತಹ ವಿಭಿನ್ನ ಚಿತ್ರ ನಿರ್ಮಿಸಿದ ನಿರ್ಮಾಪಕರ ಧೈರ್ಯವನ್ನ ಮೆಚ್ಚಲೆಬೇಕು. ಸಂಗೀತ ನೀಡಿರುವ ಬಿ. ಜೆ. ಭರತ್ ಕೂಡ ಬಹಳ ಅಚ್ಚುಕಟ್ಟಾಗಿ ಜೀವ ತುಂಬಿದರೆ. ಅದೇ ರೀತಿ ಛಾಯಾಗ್ರಾಹಕ ಸಂತೋಷ್ ಪಾಂಡಿ ರವರ ಕೆಲಸ ಅಚ್ಚುಕಟ್ಟಾಗಿದೆ.

ಇದೇ ಮೊದಲ ಬಾರಿಗೆ ನಾಯಕನಾಗಿರುವ ರಾಮ್‌ ಚೇತನ್‌ ಕೂಡ ಬಹಳ ಅಚ್ಚುಕಟ್ಟಾಗಿ ತಮ್ಮ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಇಡೀ ಸಿನಿಮಾದಲ್ಲಿ ವೀಲ್‌ಚೇರ್‌ ಮೇಲೇ ಕುಳಿತೇ ರೋಮಿಯೋ ಆಗಿ ತಮ್ಮ ಪಾತ್ರವನ್ನು ನಿರ್ವಹಿಸಿರುವ ರೀತಿ ಸೊಗಸಾಗಿ ಮೂಡಿ ಬಂದಿದೆ. ಅದೇ ರೀತಿ ನಾಯಕಿಯಾಗಿ ಮಯೂರಿ ಅಂಧ ಹುಡುಗಿಯ ಪಾತ್ರದಲ್ಲಿ ಬಹಳ ಅಂದವಾದ ಅಭಿನಯ ನೀಡಿದ್ದಾರೆ.

ಉಳಿದಂತೆ ಜಾಕ್‌ ಮಾಮನಾಗಿ ರಂಗಾಯಣ ರಘು ಪಾತ್ರ ಚಿತ್ರದ ಹೈಲೆಟ್ ಗಳಲ್ಲಿ ಮತ್ತೊಂದು, ಅದೇ ರೀತಿ ಚಿತ್ರದ ನಾಯಕನ ತಂದೆಯಾಗಿ ಸುಚೇಂದ್ರ ಪ್ರಸಾದ್, ಆಟೋ ಚಾಲಕನಾಗಿ ತಬಲಾ ನಾಣಿ , ನಾಯಕನ ಗೆಳೆಯನಾಗಿ ಗಿರಿ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಕೂಡ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ಒಟ್ಟಾರೆ ಮನರಂಜನೆಯ ಜೊತೆಗೆ ಖುಷಿ ಪಡೆಯುವ ಆಸೆ ಇರುವ ಸಿನಿಪ್ರಿಯರಿಗಾಗಿ ಬಂದಿರುವಂತ ಈ “ವೀಲ್ ಚೇರ್ ರೋಮಿಯೋ” ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬಹುದು.

Related posts