Cinisuddi Fresh Cini News 

ಕೊನೆಗೂ ಈಡೇರಿದ ವಿಷ್ಣು ಅಭಿಮಾನಿಗಳ ಕನಸು, ಸ್ಮಾರಕಕ್ಕೆ ಭೂಮಿಪೂಜೆ

ಮೈಸೂರಿನ ಉದ್ಭೂರುಗೇಟ್ ಬಳಿ ನಿರ್ಮಾಣವಾಗುತ್ತಿರುವ ಡಾ.ವಿಷ್ಣುವರ್ಧನ್ ಅವರ ಸ್ಮಾರಕಭವನಕ್ಕೆ ಭೂಮಿಪೂಜೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗೃಹಕಚೇರಿ ಕೃಷ್ಣಾದಲ್ಲಿ ಆನ್‍ಲೈನ್ ಮೂಲಕ ನೆರವೇರಿಸಿದರು. ನಂತರ ಮಾತನಾಡಿದ ಅವರು, ಡಾ.ವಿಷ್ಣುವರ್ಧನ ಅವರ 70ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿದ್ದೇನೆ.

ವಿಷ್ಣುವರ್ಧನ್ ಕನ್ನಡನಾಡು ಕಂಡ ಅಪ್ರತಿಮ ಕಲಾವಿದರಲ್ಲಿ ಪ್ರಮುಖರು. ಶ್ರೇಷ್ಠ ನಾಯಕನಟರು ಮಾತ್ರವಲ್ಲದೇ ತಮ್ಮ ವ್ಯಕ್ತಿತ್ವದಲ್ಲೂ ಬಹಳಷ್ಟು ಶ್ರೇಷ್ಠ ಗುಣಗಳನ್ನು ಹೊಂದಿದ್ದು ಯುವಜನರಿಗೆ ಸ್ಪೂರ್ತಿಯ ಸೆಲೆಯಾಗಿದ್ದರು ಎಂದು ಅವರ ಹಿರಿಮೆಯನ್ನು ಹೊಗಳಿದರು.

ಅಭಿಮಾನಿಗಳ ಪಾಲಿಗೆ ಸಾಹಸಸಿಂಹ ಎಂದೇ ಪ್ರಖ್ಯಾತರಾದ ವಿಷ್ಣು ತಮ್ಮ ಶಿಸ್ತು, ಸಂಯಮಗಳಿಂದ ಎಲ್ಲರ ಪ್ರೀತಿ ಗೆದ್ದಿದ್ದರು. ಕನ್ನಡ ಚಿತ್ರರಂಗಕ್ಕೆ ಡಾ.ರಾಜ್‍ಕುಮಾರ್ ನಂತರದ ಪೀಳಿಗೆಯಲ್ಲಿ ಮಹತ್ವದ ಕೊಡುಗೆ ನೀಡಿರುವವರಲ್ಲಿ ಡಾ.ವಿಷ್ಣುವರ್ಧನ್ ಕೂಡ ಸೇರಿದ್ದಾರೆ.

ಸತತ 38 ವರ್ಷಗಳ ಕಾಲ, ನೂರಾರು ಸದಭಿರುಚಿಯ ಚಿತ್ರಗಳನ್ನು ಮಾಡುವ ಮೂಲಕ ಜನರ ಮನಸಿನಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ನಾಗರಹಾವು ಸಿನಿಮಾದಿಂದ ಆಪ್ತರಕ್ಷಕವರೆಗಿನ, ಅವರ ಸಾಧನೆಯನ್ನು ನಾನು ಸಾಕಷ್ಟು ಗಮನಿಸಿದ್ದೇನೆ.

ಅವರು ಸಿನಿಮಾರಂಗದ ಜೊತೆಗೆ ವಿಶೇಷವಾದ ಸಾಮಾಜಿಕ ಕಳಕಳಿಯನ್ನು ಹೊಂದಿದ್ದರು. ಸಮಾಜದ ಆಗು-ಹೋಗುಗಳ ಬಗ್ಗೆ ಸ್ಪಂದಿಸುವ ಮತ್ತು ಮಾನವೀಯತೆಯನ್ನು ತೋರುವ ವಿಶೇಷ ಗುಣ ಅವರಲ್ಲಿತ್ತು ಎಂದು ಯಡಿಯೂರಪ್ಪ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಸ್.ಟಿ. ಸೋಮಶೇಖರ್ ಮೈಸೂರಿನ ಹೊರ ವಲಯದ ಎಚ್.ಡಿ. ಕೋಟೆ ರಸ್ತೆಯ ಉದ್ಭೂರು ಗೇಟ್ ಬಳಿಯ ಹಾಲಾಳುವಿನಲ್ಲಿ ಐದೂವರೆ ಎಕರೆ ಜಾಗದಲ್ಲಿ ವಿಷ್ಣು ಅವರ ಸ್ಮಾರಕ ಭವನ ನಿರ್ಮಾಣವಾಗಲಿದ್ದು, ಚಿತ್ರ ಕಲಾವಿದರೊಬ್ಬರಿಗೆ ಈ ಮೂಲಕ ಸರ್ಕಾರ ಗೌರವ ಸಮರ್ಪಣೆ ಮಾಡಿದಂತಾಗಿದೆ.

ವಿಷ್ಣವರ್ಧನ್ ಅವರ ಹುಟ್ಟೂರಿನಲ್ಲಿಯೇ ಸ್ಮಾರಕ ನಿರ್ಮಾಣವಾಗಬೇಕೆಂಬ ಅಭಿಮಾನಗಳ ಕೂಗಿಗೆ ಪ್ರತಿಫಲ ಸಿಕ್ಕಂತಾಗಿದೆ. ವಿಷ್ಣು ಅವರ ವಿದ್ಯಾಭ್ಯಾಸ ಸಹ ಮೈಸೂರಿನಲ್ಲಿಯೇ ಆಗಿದ್ದು, ಅವರಿಗೂ ಹಾಗೂ ಮೈಸೂರಿಗೂ ಅವಿನಾಭಾವ ನಂಟಿದೆ. 11 ಕೋಟಿ ರೂ.ಗಳ ಯೋಜನೆ ಇದಾಗಿದ್ದು, ಈ ಜಾಗದ ಎರಡು ಎಕರೆಯಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣವಾಗಲಿದೆ.

ಜೊತೆಗೆ 6 ಅಡಿ ಎತ್ತರದ ವಿಷ್ಣುವರ್ಧನ್ ಅವರ ಪುತ್ಥಳಿಯೂ ತಲೆ ಎತ್ತುತ್ತಿರುವುದು ಸಂತಸದ ವಿಚಾರವಾಗಿದೆ. ಪುಣೆಯ ಫಿಲಂ ಅಂಡ್ ಟೆಲಿವಿಷನ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾದ ಶಾಖೆ ಸಹ ಇಲ್ಲಿ ಆರಂಭವಾಗಲಿದ್ದು, ಇದರ ಮೂಲಕ ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ಸಿಕ್ಕಂತಾಗುತ್ತದೆ.

ಅಲ್ಲದೆ, ಇಲ್ಲಿ ಮ್ಯೂಸಿಯಂ ಸಹ ನಿರ್ಮಾಣಗೊಳ್ಳುವುದರಿಂದ ವಿಷ್ಣು ಅವರ ನೆನಪುಗಳು ಚಿತ್ರರಸಿಕರ ಕಣ್ಮನ ಸೆಳೆಯಲಿದೆ ಎಂದು ಹೇಳಲು ಸಂತಸವಾಗುತ್ತದೆ ಎಂದು ಸೋಮಶೇಖರ್ ಹೇಳಿದ್ದಾರೆ.

Share This With Your Friends

Related posts