Cinisuddi Fresh Cini News 

ನಟ ವಿನೋದ್ ಪ್ರಭಾಕರ್ ರವರ ಟೈಗರ್ ಟಾಕಿಸ್ ಸಂಸ್ಥೆಯ ಪ್ರಥಮ ಕಾಣಿಕೆ “ಲಂಕಾಸುರ”.

ಸ್ಯಾಂಡಲ್ ವುಡ್ ನ ಟೈಗರ್ ಎಂದಾಕ್ಷಣ ನೆನಪಿಗೆ ಬರೋದೇ ಹಿರಿಯ ನಟ ಪ್ರಭಾಕರ್. ನಟ, ನಿರ್ಮಾಪಕ , ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪನ್ನು ಉಳಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದರು. ಈಗ ಇದೇ ಹಾದಿಯಲ್ಲಿ ಅವರ ಸುಪುತ್ರ ಮರಿ ಟೈಗರ್ ವಿನೋದ್ ಪ್ರಭಾಕರ್ ಹೆಜ್ಜೆ ಹಾಕಿದ್ದಾರೆ ಎನ್ನಬಹುದು. ತಮ್ಮ ನಟನೆಯ ಮೂಲಕ ಜನಮನಸೂರೆ ಗೊಂಡಿರುವ ವಿನೋದ್ ಪ್ರಭಾಕರ್ ಈಗ ನಿರ್ಮಾಪಕರಾಗಿದ್ದಾರೆ. ತಮ್ಮ ನಿರ್ಮಾಣದ ಮೊದಲ ಹೆಜ್ಜೆಯಾಗಿ‌ “ಲಂಕಾಸುರ” ಚಿತ್ರವನ್ನು ನಿರ್ಮಿಸುತ್ತಿದ್ದಾರೆ.‌ ವಿನೋದ್ ಪ್ರಭಾಕರ್ ರವರ ಶ್ರೀಮತಿ ನಿಶಾ ವಿನೋದ್ ಪ್ರಭಾಕರ್ ರವರು ಈ ಚಿತ್ರದ ನಿರ್ಮಾಪಕರು.

ತಮ್ಮ ನಿರ್ಮಾಣ ಸಂಸ್ಥೆಗೆ “ಟೈಗರ್ ಟಾಕಿಸ್” ಎಂಬ ಹೆಸರಿಟ್ಟರುವ ವಿನೋದ್ ಪ್ರಭಾಕರ್ ರವರು ತಮ್ಮ ತಂದೆ ಟೈಗರ್ ಪ್ರಭಾಕರ್ ಅವರನ್ನು ‌ಸ್ಮರಿಸಿಕೊಂಡು ಹೊಸಹೆಜ್ಜೆ ಇಟ್ಟಿದ್ದಾರೆ. ವಿನೋದ್ ‌ಪ್ರಭಾಕರ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ವಿಶೇಷ ಪಾತ್ರದಲ್ಲಿ ಲೂಸ್ ಮಾದ ಯೋಗಿ ಅಭಿನಯಿಸುತ್ತಿದ್ದಾರೆ . ಇದು ಇವರಿಬ್ಬರು ಒಟ್ಟಾಗಿ ಅಭಿನಯಿಸುತ್ತಿರುವ ಮೊದಲ ಚಿತ್ರ. ದೇವರಾಜ್, ರವಿಶಂಕರ್ ಮುಂತಾದವರ ತಾರಾಬಳಗ ಸಹ ಈ ಚಿತ್ರದಲ್ಲಿದೆ.

ಆಕ್ಷನ್ ಕಥಾಹಂದರದ ಈ ಚಿತ್ರವನ್ನು ಪ್ರಮೋದ್ ಕುಮಾರ್ ಡಿ ಎಸ್ ನಿರ್ದೇಶಿಸುತ್ತಿದ್ದಾರೆ. ಡಿರ್ಫೆಂಟ್ ಡ್ಯಾನಿ, ವಿ‌ನೋದ್, ಕುಂಪ್ಫು ಚಂದ್ರು, ಅರ್ಜುನ್ ರಾಜ್ ಹಾಗೂ ಚೇತನ್ ಡಿಸೋಜ ಸಾಹಸ ನಿರ್ದೇಶನ ಮಾಡಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ವಿಜೇತ್ ಕೃಷ್ಣ ಸಂಗೀತ ನೀಡಿದ್ದಾರೆ. ಭರ್ಜರಿ ಚೇತನ್ ಗೀತರಚನೆ ಮಾಡಿದ್ದಾರೆ. ಸಿದ್ಲಿಂಗು,ಜಯಮ್ಮನ ಮಗ ಹಾಗೂ ಐ ಲವ್ ಯು ಮುಂತಾದ ಜನಪ್ರಿಯ ಚಿತ್ರಗಳಿಗೆ ಛಾಯಾಗ್ರಹಕರಾಗಿ ಕಾರ್ಯನಿರ್ವಹಿಸಿರುವ ಸುಜ್ಞಾನ್(ಜ್ಞಾನ ಮೂರ್ತಿ) ಈ ಚಿತ್ರಕ್ಕೂ ಛಾಯಾಗ್ರಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುರಳಿ, ಮೋಹನ್ ರವರ ನೃತ್ಯ ನಿರ್ದೇಶನ ಹಾಗೂ ದೀಪು ಎಸ್ ಕುಮಾರ್ ರವರ ಸಂಕಲನ ಈ ಚಿತ್ರಕ್ಕಿದೆ. ಬೆಂಗಳೂರಿನಲ್ಲಿ ಈ ಚಿತ್ರದ ಚಿತ್ರೀಕರಣವು ಬಿರುಸಿನಿಂದ ಸಾಗಿದೆ.

Related posts