Cinisuddi Fresh Cini News 

“ವಿಕ್ರಾಂತ್ ರೋಣ” 3ಡಿ ಟ್ರೇಲರ್ ಬಿಡುಗಡೆಗೆ ತಾರೆಯರ ಸಮಾಗಮ.

ಸ್ಯಾಂಡಲ್ ವುಡ್ ನ ಬಹು ನಿರೀಕ್ಷೆಯ ಚಿತ್ರ “ವಿಕ್ರಾಂತ್ ರೋಣ” ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ 3D ಟ್ರೈಲರ್ ಹಾಗೂ ರಾ ರಾ ರಕ್ಕಮಾ ಹಾಡಿನ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಚಿತ್ರದ ಬಿಡುಗಡೆ ದಿನಾಂಕವೂ ಈಗಾಗಲೇ ನಿಗದಿಯಾಗಿದೆ. ಬೆಂಗಳೂರಿನ ಒರಾಯನ್ ಮಾಲ್ ನ ಪಿವಿಆರ್ ಸ್ಕ್ರೀನ್ ನಲ್ಲಿ ಈ ಚಿತ್ರದ ಟ್ರೇಲರ್ ಹಾಗೂ ಹಾಡನ್ನ 3ಡಿಯಲ್ಲಿ ಹೊರತರಲಾಯಿತು. ಈ ಸುಂದರ ಸಮಾರಂಭದಲ್ಲಿ ಸ್ಯಾಂಡಲ್ ವುಡ್ ನ ನಟರುಗಳಾದ ರವಿಚಂದ್ರನ್, ಶಿವರಾಜ್‍ಕುಮಾರ್, ರಮೇಶ್ ಅರವಿಂದ್, ಧನಂಜಯ, ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ, ರಾಜ್ ಶೆಟ್ಟಿ, ಸೃಜನ್, ನಿರ್ದೇಶಕ ಇಂದ್ರಜಿತ್‍ ಲಂಕೇಶ್ ಹಾಗೂ ಅನೇಕ ಚಿತ್ರೋದ್ಯಮದ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರದ ಕುರಿತು ಹಾಗೆಯೇ ಅವರ ಕಾರ್ಯವೆಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಿನಿ ಎಂಟರ್‍ಪ್ರೈಸಸ್, ಕಿಚ್ಚ ಕ್ರಿಯೇಶನ್ಸ್  ಹಾಗೂ ಸಲ್ಮಾನ್‍ಖಾನ್ ಪ್ರೊಡಕ್ಷನ್ ಸಹಯೋಗದೊಂದಿಗೆ ತ್ರೀಡಿಯಲ್ಲಿ ನಿರ್ಮಾಣವಾದ ಚಿತ್ರವಿದು. ನಿರ್ಮಾಪಕ ಜಾಕ್‍ಮಂಜು ಮಾತನಾಡಿ ಹೆಚ್ಚು-ಕಮ್ಮಿ ನಾಲ್ಕು ವರ್ಷ ವಿಕ್ರಾಂತ್‍ರೋಣ ಚಿತ್ರವನ್ನು ಬಿಟ್ಟು ಬೇರೇನನ್ನೂ ಯೋಚಿಸದ ನಿರ್ದೇಶಕ ಅನೂಪ್ ಭಂಡಾರಿ, ಚಿತ್ರಕ್ಕೆ ವೈಭವೋಪೇತ ಲುಕ್ ಕೊಟ್ಟಿರುವ ಕಲಾನಿರ್ದೇಶಕ ಶಿವಕುಮಾರ್, ಅದನ್ನು ಶ್ರೀಮಂತಗೊಳಿಸಿದ ಕ್ಯಾಮರಾಮನ್ ವಿಲಿಯಮ್ಸ್, ಹಾಡಿಗಾಗಿ ಜತೆಗೂಡಿದ ಜಾಕ್ವಲಿನ್ ಫರ್ನಾಂಡೀಸ್, ಇಡೀ ಚಿತ್ರ ನಿರ್ಮಾಣಕ್ಕೆ ಬಲ ತುಂಬಿದ ಸುದೀಪ್‍ರ ಪತ್ನಿ ಪ್ರಿಯಾ ಅವರನ್ನು ನೆನೆದರು. ನಾನು ಅನೂಪ್ ಸೇರಿ ಈ ಕಥೆಯನ್ನು ಸುದೀಪ್ ಅವರ ಬಳಿ ಚರ್ಚಿಸಿದಾಗ ಇದನ್ನು ಬೇರೆ ಲೆವೆಲ್‍ಗೆ ತಗೊಂಡು ಹೋಗೋಣ ಅಂದರು. ಆ ಬೇರೆ ಲೆವೆಲ್ ಏನೆಂದು ಇವತ್ತು ನನಗೆ ಗೊತ್ತಾಯ್ತು. ಎಲ್ಲರೂ ಮನೆಯಿಂದ ಹೊರಬರಲು ಭಯಪಡುವಂಥ ಕೋವಿಡ್ ಸಮಯದಲ್ಲಿ ನಮ್ಮ ತಂಡದವರೆಲ್ಲ ಜೊತೆ ಸೇರಿ ಕೆಲಸ ಮಾಡಿದ್ದಾರೆ. ಜಾಕ್ವೆಲಿನ್ ಅವರು ಹಾಡು ಮಾತ್ರವಲ್ಲದೆ ಸೀನ್‍ನಲ್ಲೂ ಕಾಣಿಸಿಕೊಂಡಿದ್ದಾರೆ. ಕನ್ನಡ ಬರದಿದ್ರೂ ಅರ್ಥಮಾಡಿಕೊಂಡು ಅಭಿನಯಿಸಿದ್ದಾರೆ. ಅಲ್ಲದೆ ಅವರು ಒಂದು ಸೀನ್ ಕೂಡ ರೀಟೇಕ್ ಮಾಡಿಲ್ಲ ಎಂದು ಹೊಗಳಿದರು.

ನಾಯಕ ಸುದೀಪ್ ಮಾತನಾಡಿ ರವಿಚಂದ್ರನ್, ಶಿವಣ್ಣ, ರಕ್ಷಿತ್ ಶೆಟ್ಟಿ, ರಮೇಶ್ ಅರವಿಂದ್, ರಿಶಭ್ ಶೆಟ್ಟಿ ಇವರೆಲ್ಲ ನನ್ನ ಮೇಲಿಟ್ಟಿರುವ ಸ್ನೇಹಕ್ಕೆ ಬೆಲೆಕೊಟ್ಟು ಹರಸಲು ಬಂದಿದ್ದಾರೆ. ರವಿಚಂದ್ರನ್ ಅವರು ಹೇಳಿದ ಮಾತನ್ನು ಫುಲ್‍ಫಿಲ್ ಮಾಡುತ್ತೇನೋ ಗೊತ್ತಿಲ್ಲ. ಆದರೆ ಅವರು ಅದನ್ನು ಕನೆಕ್ಟ್ ಮಾಡಿದ ರೀತಿ ಮನಮುಟ್ಟುವಂತಿತ್ತು. ನನ್ನ ಸಿನಿಮಾ ಬಗ್ಗೆ ಯಾವಾಗಲೂ ಒಬ್ಬರು ಜಡ್ಜ್ ಮಾಡುತ್ತಾರೆ. ಅವರ ಬಳಿ ಒಂದು ಕಥೆ ತೆಗೆದುಕೊಂಡು ಹೋದಾಗ, ಅವರು ಇನ್ನೊಂದು ಕಥೆಯಿದೆ ಕೇಳಿ ಅಂದರು. ನಾನು ಕೇಳ್ತೇನೆ ಅಂತಲೇ ಒಂದು ವಾರ ಕಾಯಿಸಿದೆ, ಇವತ್ತು ಈ ಸಿನಿಮಾ ಆಗಲು ಒಂದು ರೀತಿ ಪ್ರಿಯಾ ಅವರೇ ಕಾರಣ, ಇಂಥ ಸಿನಿಮಾ ಮಾಡು ಅಂತ ನನ್ನನ್ನು ಪ್ರೇರೇಪಿಸಿದ ನನ್ನ ಪತ್ನಿ ಪ್ರಿಯಾಗೆ ಧನ್ಯವಾದ ಹೇಳಲೇಬೇಕು. ಅನ್ನ ಬೆಂದಿದೆಯಾ ಅಂತ ನೋಡಲು ಒಂದಗುಳು ಪರೀಕ್ಷಿಸಿದರೆ ಸಾಕು, ಅನೂಪ್ ಕೆಲಸ ಏನೆಂದು ಈ ಟ್ರೈಲರೇ ಹೇಳುತ್ತದೆ ಒಬ್ಬ ಡೈರೆಕ್ಟರ್ ಕನಸು ಕಾಣುವುದು ದೊಡ್ಡದಲ್ಲ, ನಿರ್ಮಾಪಕ ಕನಸು ಕಾಣೋದು ದೊಡ್ದಲ್ಲ, ಅದರೆ ಅವರ ಕನಸಿಗೆ ತಕ್ಕಂತೆ ಸೆಟ್ ಹಾಕುವ ಮೂಲಕ ಕಲಾನಿರ್ದೇಶಕ ಶಿವಕುಮಾರ್ ಅದನ್ನು ಸಾಕಾರಗೊಳಿಸಿದ್ದಾರೆ. ಇನ್ನೂ ಚಿತ್ರದ ಛಾಯಾಗ್ರಹಣ ವಿಲಿಯಂ ಡೇವಿಡ್ ಕನಸಿನ ಕಥೆಗೆ ಜೀವ ತುಂಬಿದ್ದಾರೆ. ಜಾಕ್ ಮಂಜು ನನ್ನ ಬಾಲ್ಯದ ಗೆಳೆಯ, ಅವರಿಲ್ಲದೆ ಈ ಸಿನಿಮಾ ಸಾಧ್ಯವಿದ್ದಿಲ್ಲ ಎಂದು ಚಿತ್ರಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದರು. ಅದೇ ರೀತಿ ವಿಶೇಷ ಹಾಡೊಂದಕ್ಕೆ ಹೆಜ್ಜೆ ಹಾಕಿರುವ ಜಾಕ್ವೆಲಿನ್ ಫರ್ನಾಂಡಿಸ್, ನಿರ್ದೇಶಕ ಅನೂಪ್ ಭಂಡಾರಿ ಕೂಡ ತಮ್ಮ ಚಿತ್ರದ ಕುರಿತು ಮಾಹಿತಿಯನ್ನು ಹಂಚಿಕೊಂಡರು. ಇನ್ನು ಕಾರ್ಯಕ್ರಮದ ಕೊನೆಯಲ್ಲಿ ಎಕ್ಕಸಕ್ಕ ಹಾಡಿಗೆ ವೇದಿಕೆ ಮೇಲಿದ್ದವರೆಲ್ಲ ಹೆಜ್ಜೆ ಹಾಕಿದ್ದು ಮತ್ತೊಂದು ವಿಶೇಷವಾಗಿತ್ತು.

Related posts