Cini Reviews Cinisuddi Fresh Cini News 

ಆ್ಯಕ್ಷನ್ , ಫ್ಯಾಂಟಸಿ, ಅಡ್ವೆಂಚರ್ ರೋಚಕ ವಿಕ್ರಾಂತ್ ರೋಣ (ಚಿತ್ರವಿಮರ್ಶೆ -ರೇಟಿಂಗ್ : 4/5 )

ಚಿತ್ರ : ವಿಕ್ರಾಂತ್ ರೋಣ
ನಿರ್ದೇಶಕ : ಅನೂಪ್ ಭಂಡಾರಿ
ನಿರ್ಮಾಪಕ : ಜಾಕ್ ಮಂಜು , ಶಾಲಿನಿ ಮಂಜುನಾಥ್ ಸಂಗೀತ : ಅಜನೀಶ್ ಲೋಕನಾಥ್
ಛಾಯಾಗ್ರಹಕ : ವಿಲಿಯಮ್ ಡೇವಿಡ್
ತಾರಾಗಣ : ಕಿಚ್ಚ ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್, ರವಿಶಂಕರ್ ಗೌಡ, ಸಿದ್ದು ಮೂಲಿಮನಿ, ಮಿಲನ ನಾಗರಾಜ್ , ವಾಸುಕಿ ವೈಭವ್ ಹಾಗೂ ಮುಂತಾದವರು…

ರೇಟಿಂಗ್ : 4/5

ಸಿನಿಮಾ ಅನ್ನೋದೆ ಮಾಯಾ ಲೋಕ. ಇಲ್ಲಿ ಕೆಲವೊಮ್ಮೆ ಮ್ಯಾಜಿಕ್ , ಕೆಲವೊಮ್ಮೆ ಲಾಜಿಕ್ ಚಿತ್ರಗಳು ವರ್ಕೌಟ್ ಆಗುತ್ತೆ. ಆದರೆ ಯಾವುದೇ ಲಾಜಿಕ್, ಮ್ಯಾಜಿಕ್ ನೋಡದೆ ಮನರಂಜನೆಯ ದೃಷ್ಟಿಯೊಂದಿಗೆ ಆ್ಯಕ್ಷನ್, ಅಡ್ವೆಂಚರಸ್, ಫ್ಯಾಂಟಸಿ, ಥ್ರಿಲ್ಲರ್ ನಲ್ಲಿ ಮರ್ಡರ್ ಮಿಸ್ಟ್ರಿಯ ಮೂಲಕ ಟೆಕ್ನಿಕಲಿ 3ಡಿಯಲ್ಲಿ ಕುತೂಹಲ ಅಂಶಗಳೊಂದಿಗೆ ಮರ್ಡರ್ ಮಿಸ್ಟ್ರಿಯ ಹಾದಿಯಲ್ಲಿ ಕಮರೊಟ್ಟು ಊರಿನ ಕರಿನೆರಳು, ಪೊಲೀಸ್ ಬೇಟೆಯ ಆರ್ಭಟ, ಪ್ರೀತಿಯ ಸಿಂಚನ , ತಾಯಿಯ ಮಮತೆ, ಮಕ್ಕಳ ಸಾವಿನ ರಹಸ್ಯ ಹೀಗೆ ಹಲವು ಏರಿಳಿತಗಳ ತಳಮಳಗಳೊಂದಿಗೆ ಹೊರಬಂದಿರುವಂತಹ ಚಿತ್ರವೇ ವಿಕ್ರಾಂತ್ ರೋಣ.

ಇಡೀ ಚಿತ್ರದ ಕಥೆಯ ಕೇಂದ್ರಬಿಂದು ಕಮರೊಟ್ಟು ಎಂಬ ಊರು. ಕಾಡಿನ ಮದ್ಯೆ ಇರುವ ಮನೆ ಅಲ್ಲೊಂದು ಶಾಲೆ, ಪೋಲೀಸ್ ಸ್ಟೇಷನ್, ಊರ ಮುಖ್ಯಸ್ಥನ ಮನೆ ಹಾಗೂ ಅಲ್ಲೊಂದು ಪಾಳುಬಿದ್ದ ವರ್ಷಗಟ್ಟಲೆಯ ಬಾಗಿಲು ಮುಚ್ಚಿರುವ ಮನೆ. ಇದರ ಸುತ್ತವೇ ಕಥೆ ಸಾಗುತ್ತದೆ.

ದಕ್ಷಿಣ ಕನ್ನಡ ಜಲ್ಲೆಯ ಜನತೆ ಭಯ, ಭಕ್ತಿಯಿಂದ ಆಚರಿಸುವ ಭೂತಾರಾಧನೆಯ ಸಂದರ್ಭದಲ್ಲಿ ಹುಟ್ಟಿಕೊಳ್ಳುವ ಕಥೆ, ಮುಂದೆ ನಾನಾ ತಿರುವುಗಳನ್ನು ಪಡೆದು ಸಾಗುತ್ತ ಸೇಡಿನ ಕಿಡಿಯೊಂದು ಹೊತ್ತಿಕೊಳ್ಳಲು ಇದೇ ದೈವದ ಒಡವೆಗಳ ಕಳ್ಳತನ ಪ್ರಕರಣ ಕಾರಣವಾಗುತ್ತದೆ, ಮಾಡದ ಕಳ್ಳತನದ ಆಪಾದನೆ ಹೊತ್ತು ಒಂದಿಡೀ ಕುಟುಂಬವೇ ಸಾವಿಗೀಡಾಗುತ್ತದೆ.

ಅದರಲ್ಲಿ ಬದುಕುಳಿದ ಸಹೋದರರಿಬ್ಬರು ತಮ್ಮ ಕುಟುಂಬವನ್ನು ಸಾವಿನಂಚಿಗೆ ತಳ್ಳಿದವರ ಒಂದೊಂದೇ ಮಕ್ಕಳನ್ನು ಹತ್ಯೆ ಮಾಡುತ್ತಾ ತಮ್ಮ ಪ್ರತೀಕಾರ ತೀರಿಸಿಕೊಳ್ಳುತ್ತಾರೆ. ಊರಿನಲ್ಲಿ ನಡೆಯುವ ಸರಣಿ ಕೊಲೆಗಳು, ಆ ಎಲ್ಲ ಕೊಲೆಗಳಿಗೂ ಈ ಪದಗಳು… ಗರಗರ ಗರ ಗಗ್ಗರ ಜರ್ಭ ತಿರುನಲ್ಕುರಿ ನೆತ್ತರ ಪರ್ಭ ಉತ್ತರ ನೀಡುತ್ತದೆ.

ಇಡೀ ಊರೇ ಭಯದ ಅಂಚಿನಲ್ಲಿ ಮುಳುಗಿರುವಾಗ ಆ ಊರಿಗೆ ಭಯವೇ ಗೊತ್ತಿಲ್ಲದ ಪೊಲೀಸ್ ಅಧಿಕಾರಿ ವಿಕ್ರಾಂತ್ ರೋಣ ಬರುತ್ತಾನೆ. ಈ ಸರಣಿ ಕೊಲೆಗಳ ಕೇಸ್ ಮೇಲೆ ತುಂಬಾ ಆಸಕ್ತಿ. ವಿಕ್ರಾಂತ್ ರೋಣನ ತನಿಖೆ ಮುಂದುವರೆ ದಂತೆ ಆ ಕೊಲೆಗಳ ಬಗ್ಗೆ ಒಂದೊಂದೇ ಮಾಹಿತಿ ಹೊರಬೀಳುತ್ತಾ ಹೋಗುತ್ತದೆ, ಆ ಕತೆಯ ಮುಖ್ಯ ಪಾತ್ರಗಳ ಪರಿಚಯವೂ ಪ್ರೇಕ್ಷಕನಿಗೆ ಆಗುತ್ತಾ ಸಾಗುತ್ತದೆ.

ವಿಕ್ರಾಂತ್ ರೋಣನ ಕಣ್ಣು ಯಾವ ಪಾತ್ರದ ಮೇಲೆ ಬೀಳುತ್ತದೆಯೋ ಆ ಪಾತ್ರದ ಮೇಲೆ ಪ್ರೇಕ್ಷಕನಿಗೂ ಅನುಮಾನ ಹುಟ್ಟುತ್ತದೆ. ಆಟ ಅದೆಷ್ಟು ಗಾಢವಾಗುತ್ತಾ ಹೋಗುತ್ತದೆಯೆಂದರೆ ಪ್ರೇಕ್ಷಕನ ತಲೆತಿರುಗುವಂತೆ ಮಾಡುತ್ತದೆ. ಇನ್ನು ದ್ವಿತೀಯಾರ್ಧದಲ್ಲಿ ತನಿಖೆ ಇನ್ನಷ್ಟು ಚುರುಕುಗೊಂಡು ಪ್ರಕರಣದ ಬಗ್ಗೆ ನಿಧಾನವಾಗಿ ಸ್ಪಷ್ಟತೆ ದೊರಕಲು ಆರಂಭವಾಗುತ್ತದೆ. ಚಿತ್ರದ ಕ್ಲೈಮ್ಯಾಕ್ಸ್ ರೋಚಕವಾಗಿದ್ದು, ನಿಜವಾದ ಕೊಲೆಗಾರ ಯಾರು…
ಕಮರೊಟ್ಟು ನಲ್ಲಿ ನಡೆದ ಘಟನೆ ಏನು…
ಸೂತ್ರಧಾರಿ ಯಾರು…
ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ಪಡೆಯಬೇಕಾದರೆ ನೀವೆಲ್ಲರೂ ಚಿತ್ರಮಂದಿರಕ್ಕೆ ಬಂದು ವಿಕ್ರಾಂತ್ ರೋಣ ಚಿತ್ರವನ್ನ ನೋಡ್ಲೇಬೇಕು.

ಇಡೀ ಚಿತ್ರದ ಕೇಂದ್ರ ಬಿಂದು ಕಿಚ್ಚ ಸುದೀಪ್ ಎಂಟ್ರಿ ಎಂಟ್ರಿಯಾಗುತ್ತಿದ್ದಂತೆ ಒಂದೊಂದೇ ರಹಸ್ಯ ತೆರೆದುಕೊಳ್ಳುತ್ತಾ ಹೋಗುತ್ತದೆ. ಕಾಕಿ ಹಾಕಿಕೊಳ್ಳಧ್ದರು ಇನ್ಸ್ ಪೆಕ್ಟರ್ ಚಿತ್ರದಲ್ಲಿ ಅಬ್ಬರಿಸಿದ್ದಾರೆ. ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ ಸುದೀಪ್ ಪರ್ಫೆಕ್ಟ್ ಟೈಮಿಂಗ್ ನ ಖಡಕ್ ಡೈಲಾಗ್ , ಸಾಹಸ ದೃಶ್ಯಗಳು, ಡ್ಯಾನ್ಸ್ ಸ್ಟೆಪ್ಸ್ ಮೂಲಕ ಗಮನ ಸೆಳೆದಿದ್ದಾರೆ.

ಇನ್ನು 3ಡಿ ವರ್ಷನ್ ನೋಡುವಾಗ ಕೆಲವು ದೃಶ್ಯಗಳು ಮೈ ಜುಮ್ಮೆನಿಸುತ್ತದೆ. ಸುದೀಪ್ ಬರುವ ಪ್ರತಿಯೊಂದು ಸಂದರ್ಭವೂ ಬಹಳ ರೋಮಾಂಚನದೊಂದಿಗೆ ಕುತೂಹಲಭರಿತವಾಗಿ ಎಲ್ಲರ ಗಮನ ಸೆಳೆಯುತ್ತದೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ನಿರೂಪ್ ಭಂಡಾರಿ ಕೂಡ ವಿಭಿನ್ನ ಶೇಡ್ ನಲ್ಲಿ ನಿರೀಕ್ಷೆಗೂ ಮೀರಿದಂತ ಅಭಿನಯವನ್ನ ನೀಡಿದ್ದಾರೆ.

ಅಬ್ಬರ ಆತಂಕದ ನಡುವೆ ಮುದ್ದಾದ ಹುಡುಗಿ ನೀತಾ ಅಶೋಕ್ ಮೊದಲ ಚಿತ್ರದಲ್ಲೇ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಗಮನ ಸೆಳೆದಿದ್ದಾರೆ. ಸುದೀಪ್ ಪತ್ನಿಯಾಗಿ ಕಾಣಿಸಿಕೊಂಡಿರುವ ಮಿಲನಾ ನಾಗರಾಜ್ ಪಾತ್ರಕ್ಕೆ ಹೊಂದಿಕೊಂಡು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನು ಸೇಂದಿ ಮಾರುವ ಗಡಂಗ್ ರುಕ್ಕಮ್ಮನಾಗಿ ಕೆಲವೇ ಸಂಭಾಷಣೆ ಇದ್ದರು, ಹಾಡಿನ ಮೂಲಕ ಎಲ್ಲರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ ನಟಿ ಜಾಕ್ವೆಲಿನ್ ಫರ್ನಾಂಡಿಸ್.

ಇನ್ನು ಸುದೀಪ್ ಮಗಳ ಪಾತ್ರವನ್ನು ನಿರ್ವಹಿಸಿರುವ ಪುಟಾಣಿ ಸೇರಿದಂತೆ ಎಲ್ಲ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ಒಂದು ಅದ್ದೂರಿ ಚಿತ್ರವನ್ನು ನಿರ್ಮಾಪಕ ಜಾಕ್ ಮಂಜು ಹಾಗೂ ಶಾಲಿನಿ ಮಂಜುನಾಥ್ ಅವರು 2ಡಿ ಹಾಗೂ 3ಡಿಯಲ್ಲಿ ನಿರ್ಮಿಸುವ ಜೊತೆಗೆ ಅದ್ದೂರಿ ಪ್ರಚಾರದ ಮೂಲಕ ಬಿಡುಗಡೆ ಮಾಡಿರುವ ಇವರ ಧೈರ್ಯವನ್ನು ಮೆಚ್ಚಲೇಬೇಕು.

ಈ ಚಿತ್ರದ ನಿರ್ದೇಶನ ಮೂಡಿರುವಂಥ ಅನೂಪ್ ಭಂಡಾರಿ ಕುತೂಹಲಭರಿತ ರೋಮಾಂಚನಕಾರಿ ಚಿತ್ರ ತೆರೆಗೆ ತಂದಿದ್ದಾರೆ. ಇನ್ನು ರಂಗಿತರಂಗ ಚಿತ್ರದ ಗುಂಗಿನಿಂದ ಹೊರಬಂದಂತೆ ಕಾಣುತ್ತಿಲ್ಲ. ಒಬ್ಬ ಸ್ಟಾರ್ ಹೀರೋ ಚಿತ್ರ ಮಾಡುವಾಗ ಅವರನ್ನು ಪರದೆ ಮೇಲೆ ಪ್ರಸ್ತುತಪಡಿಸುವ ಕಥೆಯ ಜೊತೆಗೆ ಅಭಿಮಾನಿಗಳನ್ನ ದೃಷ್ಟಿಯಲ್ಲಿಟ್ಟುಕೊಂಡು ಸಾಗುವುದು ಮುಖ್ಯ ಎನಿಸುತ್ತದೆ.

ಆದರೂ ಒಂದು ಉತ್ತಮ ಪ್ರಯತ್ನವಾಗಿ 3ಡಿ ತಂತ್ರಜ್ಞಾನದ ಮೂಲಕ ಪ್ರೇಕ್ಷಕರ ಮುಂದೆ ತಂದು ಗಮನ ಸೆಳೆದಿದ್ದಾರೆ. ಅದೇ ರೀತಿ ಸಂಗೀತ ನೀಡಿರುವ ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಗಮನ ಸೆಳೆಯುವಂತೆ ಮೂಡಿಬಂದಿದ್ದು, ಗಡಂಗ್ ರಕ್ಕಮ್ಮ ಹಾಗೂ ತಂದೆ ಮಗಳ ಸೆಂಟಿಮೆಂಟ್ ಹಾಡು ಗಮನ ಸೆಳೆಯುತ್ತದೆ.

ಛಾಯಾಗ್ರಾಹಕ ವಿಲಿಯಮ್ ಡೇವಿಡ್ ಅವರ
ಕೈಚಳಕ ರೋಮಾಂಚನಕಾರಿ ಯಾಗಿದೆ. ಅಷ್ಟೇ ಅದ್ಭುತವಾಗಿ ಕಲಾ ನಿರ್ದೇಶಕ ಶಿವಕುಮಾರ್ ನಿರ್ಮಿಸಿದ ಕಾಡಿನ ಸೆಟ್‌ಗಳು ಪ್ರೇಕ್ಷಕರನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತವೆ. ಇನ್ನು ಉಳಿದಂತೆ ತಾಂತ್ರಿಕವಾಗಿ ಎಲ್ಲರ ಶ್ರಮವೂ ಕಾಣುತ್ತದೆ. ಇದೊಂದು ಅದ್ದೂರಿ ಫ್ಯಾಂಟಸಿ, ಮೈಜುಮ್ಮೆನ್ನಿಸುವ ರೋಮಾಂಚನಕಾರಿ ದೃಶ್ಯ ವೈಭವವಗಿ ಹೊರಬಂದಿದ್ದು, ವಿಕ್ರಾಂತ್ ರೋಣ ಚಿತ್ರವನ್ನು ಕುಟುಂಬ ಸಮೇತ ಹೋಗಿ ಎಲ್ಲರೂ ನೋಡಿ ಎಂಜಾಯ್ ಮಾಡಬಹುದು.

Related posts