Cinisuddi Fresh Cini News 

“ವಿಜಯಾನಂದ” ಚಿತ್ರಕ್ಕೆ ಕ್ರೇಜಿ ಸ್ಟಾರ್ ಹಾಗೂ ಗೋಲ್ಡನ್ ಸ್ಟಾರ್ ಚಾಲನೆ

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ದೊಡ್ಡ ಸಂಸ್ಥೆಯೇ ಪಾದಾರ್ಪಣೆ ಮಾಡುತ್ತಿದೆ. ಈಗಾಗಲೇ ಸಾರಿಗೆ , ಪತ್ರಿಕೋದ್ಯಮ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನ ಮೂಡಿಸಿಕೊಂಡಿರುವ ಸಂಸ್ಥೆ ವಿ.ಆರ್‌.ಎಲ್‌ ಸಮೂಹ. ಈ ಸಂಸ್ಥೆಯ ಸ್ಥಾಪಕರಾದ ವಿಜಯ ಸಂಕೇಶ್ವರ ಅವರ ಜೀವನ ಆಧರಿಸಿದ ಸಿನಿಮಾ ಸೆಟ್ಟೇರಿದೆ. ಈ ಚಿತ್ರಕ್ಕೆ “ವಿಜಯಾನಂದ” ಎಂಬ ಶೀರ್ಷಿಕೆ ಇಟ್ಟಿದ್ದು , ಚಿತ್ರದ ಮುಹೂರ್ತ ಸಮಾರಂಭ ಹುಬ್ಬಳ್ಳಿಯ ವರೂರು ನಲ್ಲಿರುವ ಅವರ ವಿ.ಆರ್.ಎಲ್ ಸಮೂಹದ ಪ್ರಧಾನ ಕಚೇರಿ ಆವರಣದಲ್ಲಿ ಬಹಳ ಅಚ್ಚುಕಟ್ಟಾಗಿ ಆಯೋಜಿಸಿದ್ರು.

ಈ ಒಂದು ಕಾರ್ಯಕ್ರಮಕ್ಕೆ ಮಾಧ್ಯಮ ಮಿತ್ರರನ್ನು ಹುಬ್ಬಳ್ಳಿಗೆ ಕರೆಸಿಕೊಂಡು ತಮ್ಮ ಪ್ರಧಾನ ಕಚೇರಿ ಹಾಗೂ ವಿ.ಆರ್.ಎಲ್ ಸಮೂಹ ಸಂಸ್ಥೆಯು ಕಾರ್ಯ ನಿರ್ವಹಿಸುವ ವೈಖರಿಯ ಪ್ರತ್ಯಕ್ಷ ದರ್ಶನವನ್ನು ಮಾಡಿಸಿದರು. ಹಾಗೆಯೇ ಮುಹೂರ್ತ ಸಮಾರಂಭಕ್ಕೂ ಅಚ್ಚುಕಟ್ಟಾದ ವೇದಿಕೆಯನ್ನು ಸಿದ್ಧಪಡಿಸಿದರು. ಹಿರಿಯ ನಟ ಅನಂತ್ ನಾಗ್ ಹಾಗೂ ನಟ ನಿಹಾಲ್ ಅಭಿನಯದ ಮೊದಲ ದೃಶ್ಯಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಸ್ವಿಚ್ ಆನ್ ಮಾಡಿದ್ರೆ, ಗೋಲ್ಡನ್ ಸ್ಟಾರ್ ಗಣೇಶ್ ಕ್ಲಾಪ್ ಮಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದ್ರು.

ವಿ.ಆರ್‌.ಎಲ್‌ ಫಿಲ್ಮ್ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ವಿಜಯ ಸಂಕೇಶ್ವರ ಅವರ ಪುತ್ರ ಆನಂದ ಸಂಕೇಶ್ವರ ರವರು ತಮ್ಮ ತಂದೆಯ ಬಯೋಪಿಕ್ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದಾರೆ. ಈ “ವಿಜಯಾನಂದ” ಚಿತ್ರವನ್ನ ಮಹಿಳಾ ನಿರ್ದೇಶಕಿ ಸಾರಥ್ಯ ವಹಿಸಿಕೊಂಡಿರೋದು ವಿಶೇಷ. ಹೌದು ಕನ್ನಡ ಚಿತ್ರರಂಗದ ಭೀಷ್ಮ ಎಂದೇ ಖ್ಯಾತಿ ಪಡೆದಂತಹ ಹಿರಿಯ ನಿರ್ದೇಶಕ ಜಿ.ವಿ. ಅಯ್ಯರ್ ಅವರ ಕುಟುಂಬದ ಕುಡಿ ರಿಶಿಕಾ ಶರ್ಮಾ ಎನ್ನುವುದು ಮತ್ತೊಂದು ವಿಶೇಷ. ಈಕೆ ಈ ಹಿಂದೆ ಟ್ರಂಕ್ ಎನ್ನುವ ವಿಭಿನ್ನ ಸಿನಿಮಾವನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದರು. ಈಗ “ವಿಜಯಾನಂದ” ಚಿತ್ರದ ಮೂಲಕ ವಿಜಯ ಸಂಕೇಶ್ವರ ಬಯೋಪಿಕ್ ಚಿತ್ರವನ್ನು ತೆರೆಮೇಲೆ ತರಲು ತಯಾರಿ ಮಾಡಿಕೊಂಡಿದ್ದಾರೆ.

ಈ ಬಯೋಪಿಕ್ ಚಿತ್ರವನ್ನು ಸಿದ್ಧಪಡಿಸಲು ನಿರ್ದೇಶಕಿ ರಿಶಿಕಾ ಶರ್ಮಾ ಬಹಳಷ್ಟು ಪೂರ್ವ ತಯಾರಿ ಮಾಡಿಕೊಂಡು , ವಿಜಯ ಸಂಕೇಶ್ವರ ಅವರ ಬಗ್ಗೆ ಬಹಳಷ್ಟು ಮಾಹಿತಿಯನ್ನು ವರ್ಷಗಟ್ಟಲೆಯಿಂದ ಕಲೆಹಾಕಿ ಅದಕ್ಕೊಂದು ರೂಪವನ್ನು ಸಿದ್ಧಪಡಿಸಿದ್ದಾರoತೆ.ಇದನ್ನ ಡಾಕ್ಯುಮೆಂಟರಿ ರೀತಿ ಮಾಡದೆ ಸಿನಿಮ್ಯಾಟಿಕ್ ಸಂಬಂಧಪಟ್ಟಂತೆ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡು ಮುನ್ನುಗ್ಗಿದ್ದಾರೆ. ವಿಜಯ ಸಂಕೇಶ್ವರ ರವರ ಬಾಲ್ಯ , ಶಿಕ್ಷಣ, ಬದುಕಿಗಾಗಿ ಅವರು ಒಂದು ಟ್ರಕ್‌ ನಿಂದ ಶುರುವಾದ ಅವರ ಉದ್ಯಮದ ಪ್ರಯಾಣ ನಂತರದಲ್ಲಿ ಉದ್ಯಮಿಯಾಗಿ ನಡೆದು ಬಂದ ಹಾದಿ ಹೀಗೆ 1950 ರಿಂದ 2018ರ ವರೆಗೆ ವಿಜಯ ಸಂಕೇಶ್ವರ ಅವರ ಜೀವನದ ಮಹತ್ವದ ಘಟ್ಟಗಳನ್ನು ಚಿತ್ರದಲ್ಲಿ ತೆರೆಯ ಮೇಲೆ ತರಲಾಗುತ್ತಿದೆಯoತೆ.

ಈ ಕಾರ್ಯಕ್ರಮದ ಕೇಂದ್ರಬಿಂದು ಹಾಗೂ ವಿ.ಆರ್.ಎಲ್ ಸಂಸ್ಥೆಯ ಸ್ಥಾಪಕರಾದಂತ ವಿಜಯ ಸಂಕೇಶ್ವರ ಮಾತನಾಡುತ್ತಾ ನನ್ನ ಬಯೋಪಿಕ್ ಚಿತ್ರವನ್ನು ನಮ್ಮ ಸಂಸ್ಥೆಯ ಮೂಲಕವೇ ನಿರ್ಮಾಣವಾಗದಿರುವುದು ಸಂತೋಷದ ವಿಚಾರ. ನನ್ನ ಮಗ ಆನಂದ್ ಇದರ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ನಿರ್ದೇಶಕಿ ರಿಷಿಕಾ ನಮ್ಮ ಬಳಿ ಬಂದು ನಿಮ್ಮ ಬಯೋಪಿಕ್ ಚಿತ್ರವನ್ನು ಮಾಡಲು ಮುಂದಾಗಿದ್ದೇವೆ. ಇದಕ್ಕೆ ತಾವು ಅನುಮತಿ ಕೊಡಿ ಎಂದಾಗ ನಾನು ಯೋಚಿಸಿ ನಾವು ಏನು ಸಾಧನೆ ಮಾಡಿದ್ದೇವೆ ಎಂದು ಹೇಳಿದೆ, ಆದರೆ ಆಕೆ ಇಲ್ಲ ನಾವು ಬಹಳಷ್ಟು ವಿಚಾರ ನಿಮ್ಮ ಬಗ್ಗೆ ತಿಳಿದುಕೊಂಡಿದ್ದೇವೆ.

ನೀವು ಒಪ್ಪಿಕೊಳ್ಳಿ ನಿರ್ಮಾಪಕರು ಕೂಡ ಸಿದ್ಧರಿದ್ದಾರೆ ಎಂದರು. ನಂತರ ನಾವೇ ಯೋಚಿಸಿ ನಮ್ಮ ಸಂಸ್ಥೆಯ ಮೂಲಕ ಈ ಚಿತ್ರವನ್ನ ನಿರ್ಮಾಣ ಮಾಡಿದರೆ ಸರಿ ಎಂದು ನಿರ್ಧರಿಸಿ ಮುಹೂರ್ತವನ್ನ ಆಚರಿಸಿದ್ದೇವೆ. ನಾನು ಸಿನಿಮಾ ಹೀರೋ ಆಗಬೇಕೆಂಬ ಕನಸನ್ನು ಹೊತ್ತು ಕೊಂಡಿದೆ. ಆದರೆ ಇಂದು ನನ್ನ ಜೀವನ ಆಧಾರಿಸಿದ ಚಿತ್ರ ಬರುತ್ತಿರುವುದು ಸಂತೋಷದ ವಿಚಾರ . ಈ ಮುಹೂರ್ತ ಸಮಾರಂಭಕ್ಕೆ ಚಿತ್ರರಂಗದ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಬಂದಿರುವುದು ಸಂತೋಷವಾಗಿದೆ.

ನಮ್ಮ ಸಂಸ್ಥೆಯಿಂದ ಇನ್ನಷ್ಟು ಚಿತ್ರಗಳನ್ನು ನಿರ್ಮಿಸಬೇಕೆಂಬ ಆಸೆ ನಮಗಿದೆ. ಮುಂದಿನ ದಿನಗಳಲ್ಲಿ ಯಾವ ರೀತಿ ಸಾಗಬೇಕು ಎಂಬ ಆಲೋಚನೆ ಮಾಡಿ ಆನಂದ ಸಂಕೇಶ್ವರ ರೊಂದಿಗೆ ಚರ್ಚಿಸಿ ಮುನ್ನುಗ್ಗುತ್ತೇವೆ. ನಾವು ಮಾಡಿದ ಎಲ್ಲಾ ಕೆಲಸವೂ ಯಶಸ್ಸು ಕಂಡಿದೆ. ಈ ಚಿತ್ರಂಗದಲ್ಲೂ ಕೂಡ ನಾವು ಬೇರೆಯದೇ ರೂಪದಲ್ಲಿ ಬರಲು ಸಿದ್ಧರಾಗಿದೇವೆ. ನಿಮ್ಮೆಲ್ಲರ ಪ್ರೀತಿ , ಪ್ರೋತ್ಸಾಹ ಇರಲಿ ಎನ್ನುತ್ತಾ ತಾವು ಬದುಕಿನಲ್ಲಿ ನಡೆದು ಬಂದ ಹಾದಿಯನ್ನು ಮೆಲುಕು ಹಾಕುತ್ತಾ ಈ ಚಿತ್ರತಂಡ ಆಸಕ್ತಿಯಿಂದ ಶ್ರಮವಹಿಸಿ ಕೆಲಸ ಮಾಡಲಿ ಎಂದು ಶುಭ ಕೋರಿದರು.

ಇನ್ನು ಈ ಚಿತ್ರದ ನಿರ್ಮಾಪಕರಾದ ಆನಂದ್ ಸಂಕೇಶ್ವರ ಮಾತನಾಡುತ್ತಾ ನಾವು ಚಿತ್ರರಂಗಕ್ಕೆ ಮೊದಲ ಬಾರಿ ಹೆಜ್ಜೆ ಇಡುತ್ತಿದ್ದೇವೆ. ಇದಕ್ಕೆ ಬಹಳಷ್ಟು ಪೂರ್ವ ತಯಾರಿ ಮಾಡಿಕೊಂಡು ಬರುತ್ತಿದ್ದೇನೆ. ಸಿನಿಮಾಗೆ ಏನೆಲ್ಲಾ ಬೇಕೋ ಅದನ್ನು ಅಚ್ಚುಕಟ್ಟಾಗಿ ಒದಗಿಸುತ್ತಿವೆ. ಹುಬ್ಬಳ್ಳಿಯಲ್ಲಿ ಬಹುತೇಕ ಜಾಗಗಳಲ್ಲಿ ಚಿತ್ರೀಕರಣ ಮಾಡುತ್ತೇವೆ. ಇದಕ್ಕಾಗಿ 18 ಸೆಟ್ ಗಳನ್ನು ಕೂಡ ಹಾಕಲಿದ್ದೇವೆ. ನಿರ್ದೇಶಕಿ ಹೇಳಿದ ರೀತಿಯೇ ನಮ್ಮ ಚಿತ್ರವನ್ನು ಹೊರತರಲು ಸಕಲ ರೀತಿಯ ಪ್ರಯತ್ನ ಮಾಡುತ್ತೇವೆ. ನಾವು ಈಗಾಗಲೇ ಸಾರಿಗೆ , ಪತ್ರಿಕೆ ಹಾಗೂ ವಾಹಿನಿ ಕ್ಷೇತ್ರಗಳಲ್ಲಿ ಅಚ್ಚುಕಟ್ಟಾದ ಕೆಲಸವನ್ನು ಮಾಡಿದೇವೆ. ಈಗ ಸಿನಿಮಾ ಕ್ಷೇತ್ರದಲ್ಲೂ ಭದ್ರ ನೆಲೆಯನ್ನು ಕಾಣುವ ಕನಸು ಇದೆ ಎಂದು ಹೇಳಿದರು.

ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕ್ರೇಜಿಸ್ಟಾರ್ ರವಿಚಂದ್ರನ್ ಮಾತನಾಡುತ್ತಾ ನಾವು ಸಿನಿಮಾಗಳಲ್ಲಿ ಹೀರೋ ಆದರೆ ವಿಜಯ ಸಂಕೇಶ್ವರ ಜೀವನದ ನಿಜವಾದ ಹೀರೋ. ಬಹಳಷ್ಟು ಸಮಸ್ಯೆಗಳನ್ನು ಎದುರಿಸಿ ಹಳ್ಳ ಕೊಳ್ಳಗಳನ್ನು ದಾಟಿ ಈಗ ಈ ಹಂತಕ್ಕೆ ಬಂದಿದ್ದಾರೆ. ಖಂಡಿತ ಇದೊಂದು ವಿಭಿನ್ನ ಚಿತ್ರವಾಗಿ ಹೊರ ಬರಲಿದೆ. ನಾನು ಕೂಡ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಇಡೀ ಚಿತ್ರತಂಡಕ್ಕೆ ಶುಭವಾಗಲಿ ಎಂದು ಹೇಳಿದರು.

ಮತ್ತೊಬ್ಬ ನಟ ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡುತ್ತಾ ವಿಜಯ ಸಂಕೇಶ್ವರ ಅವರಂಥ ಒಬ್ಬ ಸಾಧನೆ ವ್ಯಕ್ತಿಯ ಬಗ್ಗೆ ಚಿತ್ರ ಮಾಡುತ್ತಿರುವುದು ಒಳ್ಳೆಯ ವಿಷಯವೇ. ನಮ್ಮಲ್ಲಿ ಸಾಧಕರ ಚಿತ್ರಗಳು ಬರುವುದು ಬಹಳ ಮುಖ್ಯ. ಇಂತಹ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿರುವುದು ನನಗೆ ಸಂತೋಷದ ವಿಷಯವಾಗಿದೆ. ಇಡೀ ಚಿತ್ರತಂಡಕ್ಕೆ ಶುಭವಾಗಲಿ ಎಂದು ಹೇಳಿದರು.

ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ತುಂಬಿಕೊಂಡಿದೆ. ಪ್ರಮುಖವಾಗಿ ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ಯುವ ನಟ ನಿಹಾಲ್‌ ಅಭಿನಯಿಸುತ್ತಿದ್ದು , ಅವರ ಜೋಡಿಯಾಗಿ ಸಿರಿ ಪ್ರಹ್ಲಾದ್ ಕಾಣಿಸಿಕೊಳ್ತಿದ್ದಾರೆ. ಇನ್ನೂ ವಿಜಯ ಸಂಕೇಶ್ವರ ಅವರ ತಂದೆ ಬಿ.ಜಿ ಸಂಕೇಶ್ವರ ಪಾತ್ರದಲ್ಲಿ ಹಿರಿಯ ನಟ ಅನಂತ್‌ ನಾಗ್‌ ಹಾಗೂ ವಿಜಯ ಸಂಕೇಶ್ವರ ಅವರ ತಾಯಿ ಚಂದ್ರಮ್ಮ ಪಾತ್ರದಲ್ಲಿ ನಟಿ ವಿನಯ ಪ್ರಸಾದ್ ಕಾಣಿಸಿಕೊಳ್ಳುತ್ತಿದ್ದಾರೆ. ಆನಂದ್ ಸಂಕೇಶ್ವರ್ ಪಾತ್ರದಲ್ಲಿ ಭರತ್ ಬೋಪಣ್ಣ ನಟಿಸುತ್ತಿದ್ದು , ಅವರ ಜೋಡಿಯಾಗಿ ಅರ್ಚನ ಕೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ನಟ ಶೈನ್ ಶೆಟ್ಟಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಚಿತ್ರಕ್ಕೆ ಗೋಪಿ ಸುಂದರ್ ಸಂಗೀತ ನೀಡುತ್ತಿದ್ದು, ಕೀರ್ತನ್ ಪೂಜಾರಿ ಛಾಯಾಗ್ರಹಣ , ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ , ರವಿವರ್ಮ ಸಾಹಸ ಸಂಯೋಜನೆ , ಹೇಮಂತ್ ಕುಮಾರ್ ಮಾಡುತ್ತಿದ್ದಾರೆ.

ಈಗಾಗಲೇ ಈ ಚಿತ್ರಕ್ಕಾಗಿ ಹಲವಾರು ಸ್ಥಳೀಯ ಹಾಗೂ ಹೊರ ಜಿಲ್ಲೆಯ ಪ್ರತಿಭೆಗಳಿಗೆ ಅವಕಾಶವನ್ನು ನೀಡಲು ಆಡಿಷನ್ ಕೂಡ ನಡೆಸಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಈ ಒಂದು ಬಯೋಪಿಕ್ ಚಿತ್ರ ಎರಡೂವರೆ ಗಂಟೆಯಲ್ಲಿ ತೋರಿಸುವುದು ಬಹಳ ಕಷ್ಟವಾಗಿದೆಯoತೆ. ವಿಜಯ ಸಂಕೇಶ್ವರ ಅವರ ಜೀವನ ಹಾದಿಯ ಬಹಳಷ್ಟು ವಿಚಾರಗಳಿದ್ದು , ಅದೆಲ್ಲವನ್ನು ವೆಬ್ ಸೀರಿಸ್ ಮೂಲಕ ತೋರಿಸುವ ಪ್ರಯತ್ನ ಮಾಡುವ ಆಲೋಚನೆ ಇದೆಯಂತೆ. ಸದ್ಯ ಚಿತ್ರತಂಡ ಚಿತ್ರೀಕರಣಕ್ಕೆ ಹೊರಟಿದ್ದು , ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡಲಿದೆಯಂತೆ.

Related posts