“ಕಬ್ಜ” ಬಗ್ಗೆ ಉಪ್ಪಿಯ ಮನದ ಮಾತು…
ಸಿನಿಮಾ ಪ್ರಚಾರದ ಒತ್ತಡದ ನಡುವೆಯೂ ನಟ ಉಪೇಂದ್ರ ಸಮಯ ಮಾಡಿಕೊಂಡು ಮಾಧ್ಯಮದ ಮುಂದೆ ಹಾಜರಾಗಿ ಕಬ್ಜ ಚಿತ್ರದ ಬಗ್ಗೆ ಮನದಾಳದ ಮಾತುಗಳ ಜೊತೆಗೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ನೇರ ಉತ್ತರವನ್ನು ನೀಡಿದರು. ಈ ಕಬ್ಜ ಚಿತ್ರ ನಿರ್ದೇಶಕ ಆರ್. ಚಂದ್ರು ರವರ ಕನಸಿನ ಕೂಸು. ಸರಿಸುಮಾರು 4 ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಒಂದು ಅದ್ದೂರಿ ಮೇಕಿಂಗ್ ಚಿತ್ರವಾಗಿ ಇದೆ 17ನೇ ತಾರೀಕು ಬಿಡುಗಡೆಯಾಗುತ್ತಿದೆ. ನಾನು ಒಬ್ಬ ತಂತ್ರಜ್ಞಾನನಾಗಿ ಈ ಚಿತ್ರವನ್ನು ಬಹಳವಾಗಿ ಇಷ್ಟಪಡುತ್ತೇನೆ. ನಿರ್ದೇಶಕ ಆರ್. ಚಂದ್ರು ಈ ಕಥೆಯನ್ನು ಹೇಳಿದಾಗ ಇಂತಹ ಒಂದು ಚಿತ್ರವನ್ನು ನಾವು ಮಾಡಲು ಸಾಧ್ಯನಾ ಎಂದಿದೆ. ಅವರು ಫೋಟೋಶೂಟ್ ಗಾಗಿ ಬನ್ನಿ ಎಂದು ಕರೆದಿದ್ದರು, ಆಗ ಗೊತ್ತಾಯ್ತು ಅವರ ಆಲೋಚನೆ , ದೃಷ್ಟಿಕೋನ ಈ ಸಿನಿಮಾ ಬಗ್ಗೆ ಮಾಡಿಕೊಂಡಿರುವ ಪೂರ್ವ ತಯಾರಿ ತಿಳಿಯಿತು. ಅಲ್ಲಿಂದ ನಾನು ಈ ಚಿತ್ರದ ಚಿತ್ರೀಕರಣಕ್ಕಾಗಿ ನನ್ನ ಡೇಟ್ಸ್ ಗಳನ್ನು ನಿಗದಿಪಡಸದೆ ಯಾವಾಗ ಅವಶ್ಯಕತೆ ಇರುತೋ ಹಾಗೆಲ್ಲ ನಾನು ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದೆ, ಕೆಲವೊಮ್ಮೆ ನನ್ನ ದೃಶ್ಯಗಳ ಚಿತ್ರೀಕರಣ ಇಲ್ಲದಿದ್ದರೂ ಸಹ ನಾನು ಶೂಟಿಂಗ್ ಸೆಟಿನಲ್ಲಿ ಇರುತ್ತಿದ್ದೆ. ಈ ಚಿತ್ರದಲ್ಲಿ ಸ್ವತಂತ್ರ ಪೂರ್ವದ ಕಥೆ, ಅಂಡರ್ ವರ್ಲ್ಡ್ ಸಂಪರ್ಕ, ಆಕ್ಷನ್, ಸೆಂಟಿಮೆಂಟ್ ಸೇರಿದಂತೆ ಎಲ್ಲಾ ಅಂಶವು ಒಳಗೊಂಡಿದೆ.
ಆಯಾ ಕಾಲಘಟ್ಟಕ್ಕೆ ತಕ್ಕಂತೆ ಹಾಕಿರುವ ಅದ್ದೂರಿ ಸೆಟ್ಟುಗಳು, ಕಾಸ್ಟ್ಯೂಮ್ ಬಳಸಿರುವ ರೀತಿ, ಮ್ಯೂಸಿಕ್, ರೀ ರೆಕಾರ್ಡಿಂಗ್, ಕ್ಯಾಮೆರಾ ಕೈ ಚಳಕ ಎಲ್ಲವೂ ಅದ್ಭುತವಾಗಿ ಮೂಡಿ ಬಂದಿದೆ. ಇದೊಂದು ಅದ್ಭುತ ಮೇಕಿಂಗ್ ಚಿತ್ರ ಆದ್ರೂ ಇದ್ರಲ್ಲಿ ದೊಡ್ಡ ಸ್ಟಾರ್ ಗಳ ಸಮಾಗಮ ಇದೆ. ಈ ಚಿತ್ರದಲ್ಲಿ ಸುದೀಪ್ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಈ ಚಿತ್ರದಲ್ಲಿ ಮೊದಲೇ ನಿಗದಿಯಾಗಿತ್ತು. ಹಾಗೆ ಶಿವಣ್ಣ ಕೂಡ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದರು. ಕಬ್ಜ ಭಾಗ -2ಕ್ಕೆ ಇದು ಕನೆಕ್ಟ್ ಆಗುತ್ತಾ ಎನ್ನುವ ಪ್ರಶ್ನೆಗೆ ನಗುತ್ತಲೇ ಅದು ನಿರ್ದೇಶಕ ಚಂದ್ರುನವರನ್ನೇ ಕೇಳಬೇಕು, ಪ್ಲಾನ್ ಪ್ರಕಾರವೇ ಎಲ್ಲವು ನಡೆದಿದೆ. ಚಿತ್ರದ ಆರಂಭದಿಂದ ಇಲ್ಲಿವರೆಗೂ ಪ್ರತಿ ಹಂತದಲ್ಲೂ ನಿರ್ದೇಶಕ ಆರ್. ಚಂದ್ರು ಬಹಳಷ್ಟು ತಯಾರಿ ಮಾಡಿಕೊಂಡು ಸಾಗಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್ ಬಗ್ಗೆ ಎಲ್ಲರೂ ಮೆಚ್ಚಿಗೆ ಮಾತುಗಳ ಆಡುತ್ತಿದ್ದಾರೆ. ನನ್ನ ಸ್ನೇಹಿತರೊಬ್ಬರು ಕೂಡ ದೆಹಲಿಯಿಂದ ಕರೆ ಮಾಡಿ ಕಬ್ಜ ಚಿತ್ರದ ಟ್ರೈಲರ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು. ಹಾಗೆ ನನ್ನ ಮಡದಿ ಪ್ರಿಯಾಂಕಾ ರವರ ಸಂಬಂಧಿ ಒಬ್ಬರು ಕೂಡ ಕಬ್ಜ ಬಗೆ ಎಲ್ಲಾ ಕಡೆ ಮಾತುಗಳು ಕೇಳಿ ಬರುತ್ತಿದೆ ಎಂದಿದ್ದು ನನಗೆ ಬಹಳ ಖುಷಿ ಕೊಟ್ಟಿದೆ. ನಾನು ಕಬ್ಜ ಚಿತ್ರದ ನಮ್ಮ ಕನ್ನಡ ಭಾಷೆಯ ಡಬ್ಬಿಂಗ್ ಮಾತ್ರ ಮಾಡಿದ್ದೇನೆ. ಉಳಿದ ಭಾಷೆಗಳಿಗೆ ಬೇರೆಯವರು ಡಬ್ ಮಾಡಿದ್ದಾರೆ. ನಾವು ಪ್ರಚಾರಕ್ಕಾಗಿ ಮುಂಬೈ, ಆಂಧ್ರ ಪ್ರದೇಶ ಹಾಗೂ ಚೆನ್ನೈಗೆ ಭೇಟಿ ನೀಡಿದಾಗ ನಮಗೆ ಉತ್ತಮ ಬೆಂಬಲದ ಜೊತೆಗೆ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲಾ ಕಡೆ ಉತ್ತಮ ಪ್ರಚಾರ ಜೊತೆಗೆ ಅದ್ದೂರಿಯಾಗಿ ಬಿಡುಗಡೆ ತಯಾರಿ ಕೂಡ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಅನಿಸಿತ್ತು ಎಂದರು.
ಈ ಕಬ್ಜ ಚಿತ್ರ ನನ್ನ ನಟನೆಯ ಮೊದಲ ಪ್ಯಾನ್ ಇಂಡಿಯಾ ಚಿತ್ರ ಎಂದೇ ಹೇಳಬಹುದು. ನನ್ನ ನಟನೆಯ ಕೆಲವು ಚಿತ್ರಗಳು ಡಬ್ ಹಾಗೂ ರಿಮೇಕ್ ಕೂಡ ಬೇರೆ ಭಾಷೆಗಳಿಗೆ ಆಗಿದೆ. ಆದರೆ ಈ ಚಿತ್ರ ನನಗೆ ಬಹಳ ವಿಶೇಷವಾದ ಚಿತ್ರವಾಗಿದೆ. ಈ ಚಿತ್ರದ ಕಾನ್ಸೆಪ್ಟ್ ಯೂನಿವರ್ಸಲ್ ಆಗಿದ್ದು, ಇದು ಎಲ್ಲಾ ಭಾಷೆಗೂ ಹೊಂದುವಂತೆ ಕಥೆಯಾಗಿದೆ. ಇದೊಂದು ಉತ್ತಮ ಮೇಕಿಂಗ್ ಚಿತ್ರವಾಗಿದ್ದು, ವಿಭಿನ್ನ ಅನುಭವವನ್ನು ಖಂಡಿತ ನೀಡುತ್ತದೆ. ಇಂತಹ ಒಂದು ಚಿತ್ರವನ್ನು ನಿರ್ಮಿಸುವುದರ ಜೊತೆಗೆ ನಿರ್ದೇಶನ ಮಾಡಿರುವ ಆರ್. ಚಂದ್ರುಗೆ ಯಶಸ್ಸು ಖಂಡಿತ ಸಿಗಬೇಕು, ಇದೊಂದು ಮೇಕಿಂಗ್ ಚಿತ್ರವಾಗಿದ್ದು, ಆರ್ಟಿಸ್ಟ್ ಹಾಗೂ ಟೆಕ್ನಿಕಲ್ ಟೀಂ ಎಲ್ಲರೂ ಬಹಳ ಶ್ರಮ ಪಟ್ಟಿರುವುದು ಈ ಚಿತ್ರದಲ್ಲಿ ಖಂಡಿತ ಕಾಣುತ್ತದೆ ಎಂದು ಹೇಳಿದರು. ಹಾಗೆಯೇ ಮಾಧ್ಯಮದವರು ಕೇಳಿದ ಕೆಲವು ಹೈ ಬಜೆಟ್ ಮತ್ತು ಲೋ ಬಜೆಟ್ ಚಿತ್ರಗಳ ಮೇಕಿಂಗ್ ವಿಚಾರ , ಸ್ಟಾರ್ ನಟರುಗಳು ವರ್ಷಕ್ಕೆ ಮೂರು ನಾಲ್ಕು ಚಿತ್ರಗಳು ಮಾಡುವುದರ ಬಗ್ಗೆ , ಪ್ರಸ್ತುತ ಚಲನಚಿತ್ರಗಳ ಪರಿಸ್ಥಿತಿಗಳ ಕುರಿತಂತೆ ಮಾಹಿತಿ ತಿಳಿದುಕೊಂಡು ಕೆಲವೊಂದಕ್ಕೆ ಬುದ್ಧಿವಂತೆಯ ಉತ್ತರ ನೀಡಿ ಜಾಣ್ಮೆಯಿಂದಲೇ ನಗುತ್ತಲೇ ಸುಮ್ಮನಾದರು. ಅದೇನೆ ಇರಲಿ ಒಬ್ಬ ಸ್ಟಾರ್ ನಟ ತನ್ನ ಚಿತ್ರದ ಪ್ರಚಾರದ ಕಾರ್ಯ ನಿಮಿತ್ತ ತಂಡದೊಂದಿಗೆ ಸಾಗಿ ಪ್ರಚಾರದ ಕಾರ್ಯದಲ್ಲಿ ಭಾಗಿಯಾಗಿರುವುದು ಮೆಚ್ಚುವಂತ ವಿಚಾರವೇ. ಅದು ಮುದ್ರಣ, ದೃಶ್ಯ ಹಾಗೂ ಸಾಮಾಜಿಕ ಜಾಲತಾಣಗಳ ಎಲ್ಲಾ ಪತ್ರಕರ್ತರೊಂದಿಗೆ ಬೆರೆತು ಚಿತ್ರದ ಕುರಿತು ಸುಮಾರು ದಿನಗಳಿಂದ ಮಾಹಿತಿ ಹಂಚಿಕೊಂಡಿರುವ ಪರಿ ಉಳಿದ ತಾರೆಯರಿಗೂ ಇದು ಮಾದರಿಯಂತೆ ಕಂಡಿದೆ.
ಬಹಳಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿರುವ ಈ ಪ್ಯಾನ್ ಇಂಡಿಯಾ ಚಿತ್ರ ಕಬ್ಜ. ಈಗಾಗಲೇ ಅದ್ದೂರಿ ಪ್ರಚಾರ ಮಾಡಿದ್ದು, ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸಿದೆ. ವಿಶೇಷ ಅಂದರೆ ಈ ಚಿತ್ರ ಇದೇ 17ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಹುಟ್ಟು ಹಬ್ಬದ ದಿನದಂದು ಬಿಡುಗಡೆಯಾಗುತ್ತಿರುವುದು. ಅದ್ದೂರಿ ಮೇಕಿಂಗ್
ಮೂಲಕ ಸಿದ್ಧವಾಗಿರುವ ಈ ಕಬ್ಜ ಚಿತ್ರವನ್ನು ಆರ್. ಚಂದ್ರು ನಿರ್ಮಿಸಿ , ನಿರ್ದೇಶನ ಮಾಡಿದ್ದು, ರಿಯಲ್ ಸ್ಟಾರ್ ಉಪೇಂದ್ರ , ಕಿಚ್ಚ ಸುದೀಪ್ , ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ತ್ರಿಮೂರ್ತಿಗಳು ಅಭಿನಯಿಸಿದ್ದು, ದಕ್ಷಿಣ ಭಾರತದ ಖ್ಯಾತ ನಟಿ ಶ್ರೇಯ ಶರಣ್ ಸೇರಿದಂತೆ ಹಲವಾರು ಅನುಭವಿ ಕಲಾವಿದರ ಸಮಾಗಮವಿದೆ. ರವಿ ಬಸ್ರೂರು ಸಂಗೀತ ,ಎ.ಜೆ. ಶೆಟ್ಟಿ ಛಾಯಾಗ್ರಹಣವಿರುವ ಈ ಕಬ್ಜ ಚಿತ್ರವು ವಿಶ್ವದಾದ್ಯಂತ ಸಿನಿಪ್ರಿಯರನ್ನು ತನ್ನ ಕಬ್ಜಾದೊಳಗೆ ಸೇರಿಸಿಕೊಳ್ಳುವುದೇ ಎಂಬುದನ್ನು ಕಾದು ನೋಡಬೇಕಿದೆ.