ತೆರೆಗೆ ಬರುವ ತಯಾರಿಯಲ್ಲಿ ‘ಉದ್ಯೋಗಂ ಪುರುಷಲಕ್ಷಣಂ’ ಚಿತ್ರ
ಪುರುಷರಿಗೆ ಯಾವುದಾದರೂ ಒಂದು ಕೆಲಸ ಅಂತ ಇರಲೇಬೇಕು, ಆಗಲೇ ಆತನ ಜೀವನಕ್ಕೊಂದು ಬೆಲೆ ಬರುತ್ತದೆ. ಅದಕ್ಕೇ ಉದ್ಯೋಗಂ ಪುರುಷಲಕ್ಷಣಂ ಎನ್ನುವುದು. ಈಗ ಈ ನಾಣ್ಣುಡಿಯನ್ನೇ ತಮ್ಮ ಚಿತ್ರದ ಶೀರ್ಷಿಕೆಯನ್ನಾಗಿಸಿಕೊಂಡು ಯುವಕರ ತಂಡವೊಂದು ಚಿತ್ರ ನಿರ್ಮಾಣ ಮಾಡಿದೆ.
ಈ ಚಿತ್ರಕ್ಕೆ ಸುಜಿತ್ಕುಮಾರ್ ಕೆ.ಎಂ. ಕುಡ್ಲೂರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ರಿಲೀಸ್ಗೆ ರೆಡಿಯಾಗಿದೆ.
ರತ್ನಮಂಜರಿ ಖ್ಯಾತಿಯ ರಾಜ್ಚರಣ್, ರಿಧಿರಾವ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ನಿರ್ಮಾಪಕರು ರಾಕೇಶ್ ಚಲುವರಾಜು. ಈ ಚಿತ್ರದಲ್ಲಿ ಕೆಲಸಮಾಡುತ್ತಿರುವವರೆಲ್ಲ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಶಾಲೆಯಲ್ಲಿ ಕಲಿತವರು ಎನ್ನುವುದು ಇಲ್ಲಿ ವಿಶೇಷ.
ಯಾವುದೇ ಕೆಲಸವಿದಲ್ಲದ ನಾಲ್ವರು ಯವಕರ ಕಥೆಯನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಕಾಮಿಡಿ ಸಸ್ಪೆನ್ಸ್ ಜೊತೆಗೆ ತ್ರಿಕೋನ ಪ್ರೇಮಕಥೆಯೂ ಈ ಚಿತ್ರದಲ್ಲಿದೆ.
ಇತ್ತೀಚೆಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದ ಚಿತ್ರತಂಡ ಸಿನಿಮಾ ವಿಶೇಷತೆಗಳ ಕುರಿತಂತೆ ಮಾಹಿತಿ ಹಂಚಿಕೊಂಡಿತು. ನಟ ರಾಜ್ಚರಣ್ ಮಾತನಾಡಿ ಕಲಾವಿದನಾಗುವ ಕನಸಿಟ್ಟುಕೊಂಡು ಟೆಂಟ್ ಶಾಲೆಗೆ ಸೇರಿದ್ದೆ. ಕಿರುಚಿತ್ರವೊಂದರಲ್ಲಿ ಮಾಡ್ತಿರುವಾಗಲೇ ಸುಜಿತ್ ಕಾಲ್ಮಾಡಿ ಈ ಚಿತ್ರದ ಬಗ್ಗೆ ಹೇಳಿದರು.
ಇದೇ ಸಮಯದಲ್ಲಿ ರತ್ನಮಂಜರಿಯಲ್ಲೂ ಅವಕಾಶ ಸಿಕ್ಕಿತು. ಒಬ್ಬ ಲವರ್ಬಾಯ್, ಫ್ಲರ್ಟಿ ಹುಡುಗನಾಗಿ ನಾನೀ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪ್ರೀತಿ ಎನ್ನುವುದು ಎಲ್ಲರಿಗೂ ಒಂದೇ. ಒಬ್ಬ ಕಳ್ಳನ ಹೃದಯದಲ್ಲಿ, ಸುಳ್ಳನ ಹೃದಯದಲ್ಲಿ ಪ್ರೀತಿ ಅನ್ನೋದು ಒಂದೇ ರೀತಿಯಿರುತ್ತದೆ ಎನ್ನುವುದನ್ನು ಚಿತ್ರದಲ್ಲಿ ಹೇಳಿದ್ದೇವೆ.
ಇದೊಂದು ಕಾಮಿಡಿ ಲವ್ಸ್ಟೋರಿ ಎಂದು ಹೇಳಿದರು. ಚಿತ್ರದ ನಾಯಕಿ ರಿಧಿರಾವ್ ಮಾತನಾಡಿ ಚಿತ್ರದಲ್ಲಿ ನನ್ನದು ಪೃಥ್ವಿ ಎನ್ನುವ ಪಾತ್ರ. ಈ ಭೂಮಿಯ ಹಾಗೆ ನಾನು ಇಬ್ಬರೂ ನಾಯಕರ ಭಾರವನ್ನು ಹೊತ್ತುಕೊಂಡಿರುತ್ತೇನೆ. ಒಬ್ಬ ಹುಡುಗನ ಮೇಲೆ ಲವ್ ಆಗುತ್ತದೆ.
ಕೊನೆಗೆ ನಾನು ಯಾರಿಗೆ ಸಿಗುತ್ತೇನೆ ಎನ್ನುವುದೇ ಸಸ್ಪೆನ್ಸ್ ಎಂದು ಹೇಳಿಕೊಂಡರು. ಈ ಚಿತ್ರಕ್ಕೆ ಸತ್ಯ ರಾಧಾಕೃಷ್ಣ ಹಾಗೂ ಜತಿನ್ ದರ್ಶನ್ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅದರಲ್ಲಿ ಹಾಜರಿದ್ದ ಸತ್ಯ ರಾಧಾಕೃಷ್ಣ ಮಾತನಾಡುತ್ತ ಹಿಂದೆ ವಿರೂಪಾ ಚಿತ್ರದಲ್ಲಿ ನಾನು ಸುಜಿತ್ ವರ್ಕ್ ಮಾಡಿದ್ದೆವು, ಈಗ ಮತ್ತೆ ಜೊತೆಯಾಗಿದ್ದೇವೆ.
ಈ ಸಿನಿಮಾದಲ್ಲಿ ಎರಡು ಹಾಡುಗಳಿವೆ. ಅದರಲ್ಲಿ ಟೈಟಲ್ ಟ್ರ್ಯಾಕನ್ನು ನಾನೇ ಹಾಡಿದ್ದೇನೆ. ಆನಂದ್ ಆಡಿಯೋ ಮೂಲಕ ಹಾಡುಗಳನ್ನು ರಿಲೀಸ್ ಮಾಡಿದ್ದೇವೆ ಎಂದು ಹೇಳಿದರು.
ಈ ಚಿತ್ರದ ಮತ್ತೊದು ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಾವನ್ ಸೊಂಗ್ ಮಾತನಾಡುತ್ತ ನಾನು ಕೂಡ ಟೆಂಟ್ ಶಾಲೆಯಲ್ಲಿ ಕಲಿತವನು. ಇಷ್ಟಕಾಮ್ಯದಲ್ಲಿ ನಾವೆಲ್ಲ ಒಟ್ಟಿಗೇ ಕೆಲಸ ಮಾಡಿದ್ದೆವು. ನನ್ನದು ಒಬ್ಬ ಇನ್ನೋಸೆಂಟ್ ಲವರ್ಬಾಯ್ ಪಾತ್ರ. ಜೀವನದಲ್ಲಿ ಮನುಷ್ಯನಿಗೆ ಪ್ರೀತಿಯಷ್ಟೇ ಮುಖ್ಯವಲ್ಲ, ಉದ್ಯೋಗವೂ ಮುಖ್ಯ ಎನ್ನುವುದು ಈ ಸಿನಿಮಾದ ಕಥೆ ಎಂದು ಹೇಳಿದರು.
ಚಿತ್ರದ ಛಾಯಾಗ್ರಾಹಕರಾಗಿಯೂ ಸಂಕೇತ್ ಎಂ.ವೈ.ಎಸ್. ಹಾಗೂ ಮಧುಸೂದನ್ ಮ್ಯಾಡಿ ಸೇರಿ ಇಬ್ಬರು ಕೆಲಸ ಮಾಡಿದ್ದಾರೆ, ಅವರಲ್ಲಿ ಮಧುಸೂದನ್ ಮಾತನಾಡಿ ನಾನು ಕೂಡ ನಾಗತಿಹಳ್ಳಿ ಅವರ ಶಿಶ್ಯ. ಫಾರ್ಚೂನರ್ ಸೇರಿ ಮೂರ್ನಾಲ್ಕು ಚಿತ್ರಗಳಿಗೆ ಕೆಲಸ ಮಾಡಿದ್ದೇನೆ ಎಂದು ಹೇಳಿದರು. ಈಗಾಗಲೇ ಸೆನ್ಸಾರಾಗಿರುವ ಈ ಚಿತ್ರವನ್ನು ಡಿಸೆಂಬರ್ನಲ್ಲಿ ರಿಲೀಸ್ ಮಾಡುವ ಯೋಜನೆ ಚಿತ್ರತಂಡಕ್ಕಿದೆ