Cinisuddi Fresh Cini News 

ಸಾಮಾಜಿಕ ಜಾಲತಾಣದಲ್ಲಿ ತಾರೆಯರ ಟ್ರೆಂಡಿಂಗ್ ಪೈಪೋಟಿ

ಕೊರೋನಾ ಕಾಟದಿಂದ ಇಡೀ ಚಿತ್ರೋದ್ಯಮವೇ ಸ್ತಬ್ಧವಾಗಿ ತಿಂಗಳುಗಟ್ಟಲೆ ಕಳೆದು ಹೋಗಿದೆ. ಚಿತ್ರೀಕರಣ ರದ್ದುಗೊಂಡು ಚಿತ್ರಮಂದಿರಗಳು ಬಾಗಿಲು ಮುಚ್ಚಿ ಚಲನಚಿತ್ರೋದ್ಯಮವೇ ಗರ ಬಡಿದಂತಾಗಿದೆ. ಆದರೆ ಸಾಮಾಜಿಕ ಜಾಲ ತಾಣದಲ್ಲಿ ಚಿತ್ರರಂಗವನ್ನು ಸಕ್ರಿಯವಾಗಿಡುವ ಪ್ರಯತ್ನ ನಡೆಯುತ್ತಿದೆ.

ದರ್ಶನ್ ಅವರ ನಟನೆಯ 50ನೆ ಚಿತ್ರ ಹಾಗೂ ನಿರ್ಮಾಪಕ ಮುನಿರತ್ನ ನಿರ್ಮಿಸಿರುವ ಕುರುಕ್ಷೇತ್ರ ಬಿಡುಗಡೆಯಾಗಿ ಆಗಸ್ಟ್‌ 9ಕ್ಕೆ ಒಂದು ವರ್ಷವಾಗಲಿದೆ. ಅಂದು ಕುರುಕ್ಷೇತ್ರವನ್ನು ಟ್ರೆಂಡಿಂಗ್ ಮಾಡಲು ಸಾಮಾಜಿಕ ಜಾಲ ತಾಣದಲ್ಲಿ ವೇದಿಕೆ ಸಜ್ಜುಗೊಂಡಿದೆ.

ದರ್ಶನ್ ಅಭಿಮಾನಿ ಗ್ರೂಪ್‌ ಗಳು ಈಗಾಗಲೇ ಈ ವಿಷಯದಲ್ಲಿ ಸಕ್ರಿಯವಾಗಿದ್ದು, ಆಗಸ್ಟ್‌ 9ರಂದು ಟ್ರೆಂಡಿಂಗ್ ನಲ್ಲಿ ಭಾಗವಹಿಸುವಂತೆ ಮನವಿ ಮಾಡಿವೆ.

ಈಗಾಗಲೇ ತೆಲುಗು ಚಿತ್ರರಂಗದಲ್ಲಿ ಈ ರೀತಿಯ ಟ್ರೆಂಡಿಂಗ್ ವಾರ್ ಜೋರಾಗಿದೆ. ತಮಿಳು ಚಿತ್ರರಂಗಕ್ಕೂ ನಿಧಾನಕ್ಕೆ ಕಾಲಿಟ್ಟಿದೆ. ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಜಾರಿಯಲ್ಲಿದೆ ಎನ್ನಬಹುದು.

ಸ್ಯಾಂಡಲ್ ವುಡ್ ನಲ್ಲಿ ಸಾಮಾಜಿಕ ಜಾಲತಾಣದ ಟ್ರೆಂಡಿಂಗ್ ವಾರ್ ಈವರೆಗೂ ಅಷ್ಟಾಗಿ ಕಂಡಿರಲಿಲ್ಲ. ಈಗ ನಿಧಾನಕ್ಕೆ ಶುರುವಾಗಿದೆ. ನಿರ್ದೇಶಕರು, ನಿರ್ಮಾಪಕರು ತಮ್ಮ ಚಿತ್ರಗಳ ಪೋಸ್ಟರ್ ಗಳನ್ನು ಬಿಡುಗಡೆ ಮಾಡುವುದನ್ನೇ ದೊಡ್ಡದಾಗಿ ಬಿಂಬಿಸುತ್ತಿದ್ದಾರೆ.

ಟ್ರೇಲರ್ ಬಿಡುಗಡೆಯಂತೂ ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಚರ್ಚೆಯಾಗುತ್ತಿದೆ. ಆಡಿಯೋ ಬಿಡುಗಡೆ, ಚಿತ್ರ ಬಿಡುಗಡೆ ಎಲ್ಲವೂ ಸಾಮಾಜಿಕ ಜಾಲ ತಾಣದಲ್ಲಿ ಟ್ರೆಂಡಿಂಗ್ ವಾರ್ ಗೆ ಕಾರಣವಾಗುತ್ತಿವೆ.

ಹಿಂದೆ ಚಿತ್ರ ಬಿಡುಗಡೆಯನ್ನು ಮಾತ್ರ ಸಂಭ್ರಮಿಸಲಾಗುತ್ತಿತ್ತು. ನಿಧಾನಕ್ಕೆ ಆಡಿಯೋ ಬಿಡುಗಡೆಗೆ ದೊಡ್ಡ ಮಟ್ಟದ ಕಾರ್ಯಕ್ರಮ ಮಾಡುವ ಪರಿಪಾಠ ಬೆಳೆದಿತ್ತು. ಈಗ ಸಾಮಾಜಿಕ ಜಾಲತಾಣಗಳ ಅಬ್ಬರ ಹೆಚ್ಚಾದಂತೆ ಚಿತ್ರದ ಒಂದೊಂದು ಪೋಸ್ಟರ್ ಬಿಡುಗಡೆಯೂ ದೊಡ್ಡ ಸುದ್ದಿಯಾಗುತ್ತಿದೆ.

ಇತ್ತೀಚೆಗೆ ಶಿವರಾಜ್ ಕುಮಾರ್ ನಟನೆಯ ಭಜರoಗಿ-2 , ದರ್ಶನ್ ಅಭಿನಯದ ರಾಬರ್ಟ್‌ , ಯಶ್ ಅಭಿನಯದ ಕೆಜಿಎಫ್ – 2 , ಸುದೀಪ್ ಅಭಿನಯದ ಪ್ಯಾಂಟಮ್ , ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ , ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರಗಳ ಕಂಟೆಂಟ್ ಗಳು ಸೋಷಿಯಲ್ ಮಿಡೀಯಾದಲ್ಲಿ ದೊಡ್ಡ ಸುದ್ದಿ ಮಾಡಿದ್ದವು. ಈಗ ಚಿತ್ರ ಬಿಡುಗಡೆಯ ದಿನವನ್ನೂ ಟ್ರೆಂಡಿಂಗ್ ಮಾಡುವ ಪರಿಪಾಠ ಹುಟ್ಟಿಕೊಂಡಿದೆ.

ಭಾವನಾತ್ಮಕವಾಗಿ ಅಭಿಮಾನಿಗಳನ್ನು ಹುರಿದುಂಬಿಸಿ ಚಿತ್ರದ ಬಗ್ಗೆ ಚರ್ಚೆ ಮಾಡುವಂತೆ ಮಾಡುವುದು , ಆ ಮೂಲಕ ಸಾಮಾಜಿಕ ಜಾಲ ತಾಣಗಳಲ್ಲಿ ಲಭ್ಯ ಇರುವ ಚಿತ್ರದ ವಿಡಿಯೋ ಮತ್ತು ಆಡಿಯೋ ಕಂಟೆಂಟ್ ಗೆ ವಚ್ರ್ಯುವಲ್ ಡಿಮ್ಯಾಂಡ್ ಕ್ರಿಯೇಟ್ ಮಾಡಿ ಲಾಭ ಗಳಿಸುವ ಪರಿಪಾಠ ಶುರುವಾಗಿದೆ.

ಸಿನಿಮಾ ತಂಡದವರಿಗೆ ಸಹಕಾರಿಯಾಗಿರುವ ಸಾಮಾಜಿಕ ಜಾಲತಾಣದ ಪ್ರಚಾರ ಕೆಲವೊಮ್ಮೆ ಎಡವಟ್ಟು ಆದರೆ ಮತ್ತೆ ಕೆಲವೊಮ್ಮೆ ಸಹಕಾರಿ ಆಗಿರುತ್ತದೆ. ಎಲ್ಲವನ್ನೂ ಮೀರಿ ಸಿನಿಮಾ ಗೆಲ್ಲುವುದಕ್ಕೆ ಪ್ರಚಾರ ಅತ್ಯಗತ್ಯ ಅನ್ನುವುದಂತೂ ಸತ್ಯ.

Share This With Your Friends

Related posts