Cini Reviews Cinisuddi Fresh Cini News 

ನವಪಾಷಾಣ ದರ್ಶನಂ “ತ್ರಯಂಬಕಂ” (ಚಿತ್ರ ವಿಮರ್ಶೆ -ರೇಟಿಂಗ್ : 4/5)

ಚಿತ್ರ : ತ್ರಯಂಬಕಂ ನಿರ್ದೇಶಕ : ದಯಾಳ್ ಪದ್ಮನಾಭನ್
ನಿರ್ಮಾಪಕರು : ಫ್ಯೂಚರ್ ಎಂಟರ್ಟೈನ್ಮೆಂಟ್
ಸಹ ನಿರ್ಮಾಪಕ : ಅವಿನಾಶ್. ಯು. ಶೆಟ್ಟಿ
ಸಂಗೀತ : ಗಣೇಶ್ ನಾರಾಯಣ್ ಛಾಯಾಗ್ರಹಣ : ಬಿ. ರಾಕೇಶ್
ಸಂಭಾಷಣೆ : ನವೀನ್ ಕೃಷ್ಣ ತಾರಾಗಣ : ರಾಘವೇಂದ್ರ ರಾಜಕುಮಾರ್, ಅನುಪಮಾ ಗೌಡ, ಆರ್ .ಜೆ ‌.ರೋಹಿತ್ ಶಿವಮಣಿ , ವಿಜಯಲಕ್ಷ್ಮಿ ಸಿಂಗ್ ಹಾಗೂ ಮುಂತಾದವರು…
ರೇಟಿಂಗ್ : 4/5

ಸರ್ವ ಪಾಪ ಹರಣಂ !! ಮೃತ್ಯುಂಜಯಂ ತ್ರಯಂಬಕಂ !! ಸರ್ವರೋಗೇಶು ನಿವಾರಣಂ !! ನವಪಾಷಾಣ ಲಿಂಗಂ ನಮಮ್ಯಹಂ !!

ಏನಿದು ಶ್ಲೋಕ ಅಂತ ಯೋಚನೆ ಮಾಡ್ತಿದೀರಾ… ಹೌದು ಈ ವಾರ ಬಿಡುಗಡೆಗೆ ಸಿದ್ಧವಿರುವ “ತ್ರಯಂಬಕಂ” ಚಿತ್ರದ ಕೇಂದ್ರ ಬಿಂದು ಎಂದೇ ಹೇಳಬಹುದಾದ ಮಂತ್ರ. ನವಪಾಷಾಣ ಎಂಬ ಒಂದು ಔಷಧ ಮನುಕುಲಕ್ಕೆ ಒಂದು ವರ ಅನ್ನೋ ಅಂಶವನ್ನು ಕೇಂದ್ರವಾಗಿರಿಸಿಕೊಂಡು ಸಿದ್ದ ಪಡಿಸಿರುವ ಅಂತಹ ಚಿತ್ರವೇ “ತ್ರಯಂಬಕ” ಸುಮಾರು 5 ಸಾವಿರ ವರ್ಷಗಳ ಹಿಂದೆ ಋಷಿಮುನಿಗಳು ಒಬ್ಬರು 9 ಪಾಷಾಣಗಳನ್ನು ಸೇರಿಸಿ ಕಂಡು ಹಿಡಿದಂತಹ ಔಷಧಿಯೇ ನವಪಾಷಾಣ.

ಇದು ಸರ್ವ ರೋಗಕ್ಕೂ ಮದ್ದು ಎಂಬ ಅಂಶವನ್ನು ಇಟ್ಟುಕೊಂಡು, ಈಗಿನ ಪ್ರಸ್ತುತ ಬದುಕಿನವರ ಕೈಗೆ ಸಿಕ್ಕರೆ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ತೆರೆದಿಡುವ ಪ್ರಯತ್ನವನ್ನು ಮಾಡಿದ್ದಾರೆ ನಿರ್ದೇಶಕ ದಯಾಳ್ ಪದ್ಮನಾಭನ್.
ಚಿತ್ರದ ಆರಂಭವೇ ಶಿವನ ನಾಮ ನಾಮಸ್ಮರಣೆಯೊಂದಿಗೆ ತೆರೆದುಕೊಳ್ಳುತ್ತದೆ.

ತಂದೆಯಾಗಿ ರಾಘವೇಂದ್ರ ರಾಜಕುಮಾರ್ ತನ್ನ ಮಗಳು ಅನುಪಮಾ ಗೌಡ ಹಾಗೂ ತಂಗಿಯೊಂದಿಗೆ ನೆಮ್ಮದಿಯ ಬದುಕನ್ನು ಸಾಗಿಸುತ್ತಿರುತ್ತಾರೆ. ಪ್ರಾಚ್ಯವಸ್ತು ಇಲಾಖೆಯಲ್ಲಿ ಕೆಲಸ ಮಾಡುವ ತನ್ನ ಮಗಳು ಕಣ್ಣೆದುರೇ ಮರಣ ಹೊಂದುವ ದೃಶ್ಯ ಸದಾ ಕಾಡುವುದನ್ನ ನೆನೆದು ನಾನು ಕಂಡಿದ್ದು ಸತ್ಯವೋ… ಸುಳ್ಳೋ… ಎಂಬ ಗೊಂದಲದಲ್ಲಿ ಇರುವ ರಾಘಣ್ಣನಿಗೆ ಒಂದು ಯಕ್ಷ ಪ್ರಶ್ನೆಯಾಗಿಯೇ ಉಳಿಯುತ್ತದೆ.

ತನ್ನ ಸುತ್ತ ನಡೆಯುವ ಪ್ರತಿ ಘಟನೆಯೂ ಗೊಂದಲಮಯವಾಗಿದ್ದು , ಇದಕ್ಕೆ ಪರಿಹಾರ ಏನು ಎಂದು ಕಂಡುಕೊಳ್ಳುವಷ್ಟರಲ್ಲಿ ಚಿತ್ರದ ಮೊದಲ ಭಾಗದ ಮುಗಿಯುತ್ತದೆ. ಇನ್ನು ಚಿತ್ರದ ಎರಡನೇ ಭಾಗ ಕುತೂಹಲಕಾರಿ ಅಂಶವನ್ನು ತೆರೆಯುತ್ತಾ ಹೋಗುತ್ತದೆ. ತನಗೆ ಇಬ್ಬರು ಪುತ್ರಿಯರು ಇದ್ದರು ಎಂಬ ಸತ್ಯ ತಿಳಿಯುವ ರಾಘಣ್ಣ ತನ್ನ ಮೊದಲ ಮಗಳು ಪ್ರಾಚ್ಯ ವಸ್ತು ಇಲಾಖೆಯ ಅಧಿಕಾರಿಯಾಗಿ ಕೆಲಸ ಮಾಡುತ್ತಿರುತ್ತಾಳೆ.

ಅವಳೊಡನೆ ನಂದಿ ಬೆಟ್ಟಕ್ಕೆ ಹೋಗುವ ಸಂದರ್ಭಗಳು , ಅಲ್ಲಿ ನಡೆದ ಘಟನೆಗಳು , ತದನಂತರ ಅವಳ ಸಾವಿಗೆ ಎದುರಾದ ಪರಿಸ್ಥಿತಿ ಅಸ್ಪಷ್ಟವಾಗಿ ಕಾಣುತ್ತಿದೆ. ಈ ವಿಚಾರವಾಗಿ ಜರ್ನಲಿಸ್ಟಯಾಗಿ ಕೆಲಸ ಮಾಡುತ್ತಿರುವ ತನ್ನ ಎರಡನೇ ಮಗಳೊಂದಿಗೆ ಪ್ರತಿಯೊಂದು ವಿಚಾರವನ್ನು ಮನಬಿಚ್ಚಿ ಮಾತನಾಡುತ್ತಾನೆ.

ಮಗಳ ಗೆಳೆಯ ಡಿಟೆಕ್ಟಿವ್ ಕೆಲಸ ಮಾಡುವ ಆರ್. ಜೆ. ರೋಹಿತ್ ಸಾಥ್ ನೀಡಲು ಮುಂದಾಗುತ್ತಾನೆ. ಈ ಒಂದು ದುರ್ಘಟನೆಗೆ ಯಾರೆಲ್ಲಾ ಕಾರಣ… ಇದರ ಹಿಂದೆ ಯಾರ ಕೈವಾಡವಿದೆ… ತನ್ನ ಎರಡನೇ ಪುತ್ರಿ , ಹಾಗೂ ಡಿಟೆಕ್ಟಿವ್ ಸತ್ಯ ಶೋಧನೆ ಹಿಂದೆ ಬಿದ್ದು ಗೆಲ್ಲುತ್ತಾರಾ… ಇಲ್ಲವಾ… ಎಂಬುದನ್ನು ತಿಳಿಯಬೇಕಾದರೆ “ತ್ರಯಂಬಕಂ” ಚಿತ್ರವನ್ನು ತೆರೆಯ ಮೇಲೆ ವೀಕ್ಷಿಸಿ.

ನಿರ್ದೇಶಕ ದಯಾಳ್ ಪದ್ಮನಾಭನ್ ಈ ಬಾರಿಯೂ ಸಮರ್ಥ ನಿರ್ದೇಶಕ ಎನಿಸಿಕೊಂಡಿದ್ದಾರೆ. ಈ ನವ ಪಾಷಾಣ ಎಂದರೇನು…? ಇದರ ಮೂಲ ಎಲ್ಲಿ… ಯಾವ ಕಾಲಘಟ್ಟದಲ್ಲಿ ನಡೆದಂತಹ ಘಟನೆಗಳು… ಪ್ರಸ್ತುತ ಇದರ ಪ್ರಯೋಜನ ಹಾಗೂ ದುರುಪಯೋಗಗಳನ್ನು ಹೇಗೆ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಸೂಕ್ಷ್ಮವಾಗಿ ಸಂಶೋಧನೆ ಮಾಡಿ ತೆರೆ ಮೇಲೆ ತಂದಂತೆ ಕಾಣುತ್ತಿದೆ.

ಅಚ್ಚರಿಗಳ ಗುಚ್ಚ ದಂತೆ ಇರುವ ಈ “ತ್ರಯಂಬಕಂ” ಚಿತ್ರದ ಉಪಶೀರ್ಷಿಕೆಯಲ್ಲೇ ಹೇಳಿದಂತೆ ಶಿವನ ಮೂರನೇ ಕಣ್ಣು ಎಂಬ ಮಾತು ಚಿತ್ರದ ಓಟಕ್ಕೆ ಪೂರಕವಾಗಿದ್ದು , ಚಿತ್ರದ ಮೊದಲ ಭಾಗ ಸ್ವಲ್ಪ ನಿಧಾನ ಗತಿಯಲ್ಲಿ ಸಾಗಿರುವುದು ಬಿಟ್ಟರೆ ಉಳಿದೆಲ್ಲವೂ ಕುತೂಹಲಕಾರಿಯಾಗಿ ಮೂಡಿಬಂದಿದೆ.

ನಟ ರಾಘವೇಂದ್ರ ರಾಜಕುಮಾರ್ ತಮ್ಮ ಆರೋಗ್ಯದ ಸಮಸ್ಯೆ ಇದ್ದರೂ ಸಹ ಯಾವುದನ್ನೂ ಲೆಕ್ಕಿಸದೆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ನೈಜವಾಗಿ ಒಬ್ಬ ತಂದೆ ಯಾವ ರೀತಿ ಚಡಪಡಿಸುತ್ತಾನೆ , ಅವನ ಮನಸ್ಸಿನ ವೇದನೆ, ತಳಮಳಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.ಸ್ವಲ್ಪ ಆಯಾಸದಂತೆ ಕಂಡರೂ ಪಾತ್ರಕ್ಕೆ ಜೀವ ತುಂಬಿದ್ದಾರೆ.

ನಾಯಕಿಯಾಗಿ ಅನುಪಮಗೌಡ ಅದ್ಭುತವಾಗಿ ನಟಿಸಿದ್ದಾರೆ. ದ್ವಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅನುಪಮಾ 2 ಪಾತ್ರಕ್ಕೂ ಜೀವ ತುಂಬಿದ್ದಾರೆ. ಸಂಶೋಧನಾ ಅಧಿಕಾರಿಯಾಗಿ ಗಮನ ಸೆಳೆದಿದ್ದಾರೆ. ಇನ್ನು ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಆರ್. ಜೆ. ರೋಹಿತ್ ಕೂಡ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.ಇನ್ನು ವಿಲನ್ ಪಾತ್ರದಲ್ಲಿ ನಟ ಶಿವಮಣಿ ಗಮನ ಸೆಳೆಯುತ್ತಾರೆ.

ಉಳಿದಂತೆ ಹಿರಿಯ ನಟಿ ವಿಜಯಲಕ್ಷ್ಮಿ ಸಿಂಗ್ , ಸುಂದರ್ (ವೀಣಾ), ಸೇರಿದಂತೆ ಅಭಿನಯಿಸಿರುವ ಬಹುತೇಕ ಯುವ ಪ್ರತಿಭೆಗಳು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನು ಹಾಡುಗಳಿಗೆ ಸಂಗೀತ , ಹಾಗೂ ಹಿನ್ನೆಲೆ ಸಂಗೀತ ನೀಡಿರುವ ಆರ್.ಎಸ್.ಗಣೇಶ್ ‍ನಾರಾಯಣ್ ಕೆಲಸ ಚಿತ್ರದ ಹೈಲೈಟ್ ಎನ್ನಬಹುದು‌.

ಹಾಗೆಯೇ ಛಾಯಾಗ್ರಾಹಕ ಬಿ. ರಾಕೇಶ್ ಅವರ ಕ್ಯಾಮೆರಾ ಕೈಚಳಕ ಅಚ್ಚುಕಟ್ಟಾಗಿದೆ. ಇನ್ನು ಈ ಚಿತ್ರಕ್ಕೆ ನವೀನ್ ಕೃಷ್ಣ ಅವರ ಸಂಭಾಷಣೆ ಪ್ಲಸ್ ಪಾಯಿಂಟ್ ಆಗಿದೆ.ಇಂತಹ ಒಂದು ಸದಭಿರುಚಿಯ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾದ ನಿರ್ಮಾಪಕರ ಕೆಲಸ ಮೆಚ್ಚಲೇಬೇಕು.

ಒಂದು ಸೂಕ್ಷ್ಮ ವಿಚಾರವನ್ನು ಆಧುನಿಕ ಜಗತ್ತಿನಲ್ಲಿ ವಾಸ ಮಾಡುತ್ತಿರುವ ಜನಸಾಮಾನ್ಯರಿಗೆ ಯಾವ ರೀತಿ ತಲುಪಿಸಬೇಕು ಎಂಬುವುದನ್ನು ಅರಿತು ಅಚ್ಚುಕಟ್ಟಾಗಿ ಸಿದ್ಧಪಡಿಸಿ ತಲೆ ಮೇಲೆ ತರುತ್ತಿರುವಂತಹ ಚಿತ್ರವೇ “ತ್ರಯಂಬಕಂ” ಈ ಚಿತ್ರವನ್ನು ಇಡೀ ಕುಟುಂಬ ಸಮೇತವಾಗಿ ಹೋಗಿ ನೋಡಬಹುದು.

Share This With Your Friends

Related posts