Cinisuddi Fresh Cini News 

‘ಟಿಪ್ಪು ವರ್ಧನ್’ನ ಟ್ರೈಲರ್ ಹಾಗೂ ಪೋಸ್ಟರ್ ಬಿಡುಗಡೆ

ಕೆಟ್ಟ ರಾಜಕಾರಣಿ ಹಾಗೂ ಉತ್ತಮ ರಾಜಕಾರಣಿಯ ನಡುವಿನ ಸಂಘರ್ಷದ ಕಥೆ ಒಳಗೊಂಡ ಚಿತ್ರ ಟಿಪ್ಪುವರ್ಧನ್ ಬಿಡುಗಡೆಗೆ ಚಿತ್ರದ ಟ್ರೈಲರ್ ಹಾಗೂ ಪೋಸ್ಟರ್ ಬಿಡುಗಡೆ ಸಮಾರಂಭ ರೇಣುಕಾಂಬ ಥಿಯೇಟರಿನಲ್ಲಿ ನೆರವೇರಿತು.

ಹಿಂದೆ ಆತ್ಮಾರ್ಪಣೆ ಚಿತ್ರ ನಿರ್ದೇಶನ ಮಾಡಿದ್ದ ಟಿಪ್ಪುವರ್ಧನ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿ, ನಿರ್ದೇಶಿಸಿ ನಿರ್ಮಾಣ ಸಹ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಾಹಿತಿ ನಾಗೇಂದ್ರ ಅರಸ್, ಬಿಬಿಎಂಪಿ ಸದಸ್ಯ ಎಸ್.ಎಸ್. ಪ್ರಸಾದ್, ನಟ ರಾಜೀವ್ ಅಲ್ಲದೆ ವಿ4 ಸ್ಟ್ರೀಮ್‍ನ ಮಂಜುನಾಥ ದೈವಜ್ಞ ಹಾಗೂ ಅಮಿತ್ ಹಾಜರಿದ್ದರು.

ನಾಗೇಂದ್ರ ಅರಸ್ ಮಾತನಾಡುತ್ತ ನಿರ್ಮಾಪಕರು ನನಗೆ 15 ವರ್ಷಗಳಿಂದ ಪರಿಚಯ, ನನ್ನ ಹಿಂದಿನ ಚಿತ್ರ ಅದನ್ನೇನ್ ಕೇಳ್ತಿ ಕೂಡ ಓಟಿಟಿಯಲ್ಲಿ ರಿಲೀಸಾಯ್ತು, ಈಗ ಟಿಪ್ಪುವರ್ಧನ ಅವರು ತಮ್ಮ ಚಿತ್ರವನ್ನು ಓಟಿಟಿಯಲ್ಲಿ ರಿಲೀಸ್ ಮಾಡುತ್ತಿದ್ದಾರೆ ಎಂದು ಹೇಳಿದರು.

ಹಿರಿಯ ಕಲಾವಿದ ಚಿಕ್ಕಹೆಜ್ಜಾಜಿ ಮಹದೇವ ಮಾತನಾಡಿ ಚಿತ್ರದಲ್ಲಿ ದುಶ್ಚಟಗಳಿಗೆ ದಾಸನಾದ ರಾಜಕಾರಣಿಯಾಗಿ ನಾನು ಕಾಣಿಸಿಕೊಂಡಿದ್ದೇನೆ ಎಂದರು. ಸೆ. 18ರಂದು ವಿ4 ಸ್ಟ್ರೀಮ್ ಎನ್ನುವ ಓಟಿಟಿ ಪ್ಲಾಟ್‍ಫಾರಂ ಮೂಲಕ ಟಿಪ್ಪುವರ್ಧನ ಚಿತ್ರ ಬಿಡುಗಡೆಯಾಗುತ್ತಿದೆ.

ಟಿಪ್ಪುವರ್ಧನ, ಕೇಶವಮೂರ್ತಿ, ತೇಜಸ್ವಿನಿ, ನಂದಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಈಗಿನ ಸಾಮಾಜಿಕ ವ್ಯವಸ್ಥೆಯ ವಿರುದ್ದ ಹೋರಾಡುವ ನಾಯಕನ ಕಥೆಯಿದೆ. ರಾಜಕಾರಣ ಮಾಡಲು ಹೋಗಿ ಸಮಾಜದ ಶಾಂತಿ ಕದಡಬಾರದು ಎಂಬ ಸಂದೇಶವನ್ನು ಚಿತ್ರದ ಮೂಲಕ ಹೇಳಲು ನಿರ್ದೇಶಕ ಟಿಪ್ಪುವರ್ಧನ್ ಟ್ರೈ ಮಾಡಿದ್ದಾರೆ.

ಮಾಸ್ಟರ್ ಸೂರಜ್, ರಮ್ಯ, ಗೀತಪ್ರಿಯ ಅಲ್ಲದೆ ಮೈಕಲ್ ಮಧು, ಚಿಕ್ಕ ಹೆಜ್ಜಾಜಿ ಮಹದೇವ್‍ರಂಥ ಹಿರಿಯ ಕಲಾವಿದರು ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಪತ್ರಕರ್ತ ಜಗದೀಶ್ ಅವರ ಸಿನಿ ಮ್ಯೂಸಿಕ್ ಸಂಸ್ಥೆ ಟಿಪ್ಪುವರ್ಧನ್ ಚಿತ್ರದ ಹಾಡುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ನಿರ್ಮಾಪಕ, ನಿರ್ದೇಶಕ ಎಂ ಟಿಪ್ಪುವರ್ಧನ್ ಮಾತನಾಡಿ ಪೆನ್, ಪೊಲೀಸ್, ಪಾಲಿಟಿಕ್ಸ್ ಸಮಾಜದ ಮೂರು ಮುಖ್ಯ ಅಂಗಗಳು. ಸಮಾಜದಲ್ಲಿ ಪೊಲೀಸ್, ಪತ್ರಕರ್ತರು ಹಾಗೂ ರಾಜಕಾರಣಿಗಳು ಒಂದಾಗಿ ಸೇರಿ ನಿಷ್ಠೆಯಿಂದ ಕೆಲಸ ಮಾಡಿದರೆ ಎಂಥ ಕೆಟ್ಟ ಸಮಾಜವನ್ನೇ ಆದರೂ ಸುಧಾರಿಸಬಹುದು ಎಂಬ ಸಂದೇಶವನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದೇನೆ.

ಈ ಮೂರು ಅಂಗಗಳು ಒಂದು ಸಮಾಜವನ್ನು ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಬಹುದು ಎನ್ನುವ ಅಂಶ ಕೂಡ ಈ ಚಿತ್ರದಲ್ಲಿದೆ, ಜೊತೆಗೆ ಐಏಎಸ್ ಹುಡುಗನ ಕನ್ನಡ ಪ್ರೇಮ, ಆತ ರಾಜಕಾರಣಿಗಳಿಗೆ ಬಗ್ಗದೆ ದಿಟ್ಟತನದಿಂದ ಕರ್ತವ್ಯ ನಿರ್ವಹಿಸುವ ಕಥೆಯೂ ಚಿತ್ರದಲ್ಲಿದೆ.

ಬೆಂಗಳೂರು, ಕೋಲಾರ ಅಲ್ಲದೆ ಹುಬ್ಬಳ್ಳಿ, ಬಾದಾಮಿ, ಪಟ್ಟದಕಲ್ಲು , ಐಹೊಳೆ ಹೀಗೆ ಬಹುತೇಕ ಉತ್ತರ ಕರ್ನಾಟಕದಲ್ಲೇ ಟಿಪ್ಪುವರ್ಧನ ಚಿತ್ರಕ್ಕೆ ಚಿತ್ರೀಕರಣ ಮಾಡಿದ್ದೇವೆ. ಈ ಚಿತ್ರದ ಕಥೆಯಲ್ಲಿ ವಿಭಿನ್ನ ಜಾತಿಯ ಪ್ರೇಮ ಕಥೆ ಕೂಡ ಒಂದು ಭಾಗವಾಗಿ ಮೂಡಿಬರುತ್ತದೆ.

ಇದೆಲ್ಲ ಅಂಶಗಳನ್ನು ಇಟ್ಟುಕೊಂಡು ಉತ್ತಮವಾ ಮೆಸೇಜೊಂದನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದೇವೆ ಎಂದು ನಿರ್ದೇಶಕ ಟಿಪ್ಪುವರ್ಧನ ಅವರು ಹೇಳಿದರು. ಈ ಚಿತ್ರಕ್ಕೆ ದಾಮೋದರ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಸುರೇಶ್ ಚಂದ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಸುಧಾಕರ ಬಾಬು ಚಿತ್ರಕ್ಕೆ ಕ್ಯಾಮೆರಾ ವರ್ಕ ಮಾಡಿದ್ದಾರೆ.

Share This With Your Friends

Related posts