Cinisuddi Fresh Cini News 

‘ಟಕ್ಕರ್’ ಚಿತ್ರದ ಡ್ಯೂಯೆಟ್ ಸಾಂಗ್ ರಿಲೀಸ್ ಮಾಡಿದರು ಐಪಿಎಸ್ ಅಧಿಕಾರಿ ಡಿ.ರೂಪಾ

ಛಾಲೆಜಿಂಗ್‍ಸ್ಟಾರ್ ದರ್ಶನ್‍ರ ಕುಟುಂಬದ ಹುಡುಗ ಮನೋಜ್‍ಕುಮಾರ್ ನಾಯಕನಾಗಿ ನಟಿಸಿರುವ ಟಕ್ಕರ್ ಚಿತ್ರದ ವಿಡಿಯೋ ಸಾಂಗ್’ಅನ್ನು ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಬಿಡುಗಡೆಗೊಳಿಸಿದ್ದಾರೆ.

ಇವತ್ತಿನ ಮೊಬೈಲ್ ಯುಗದಲ್ಲಿ ಮಹಿಳೆಯರು ಹೇಗೆಲ್ಲಾ ಸಮಸ್ಯೆಗಳಿಗೆ ಸಿಲುಕುತ್ತಿದ್ದಾರೆ? ಎಂಬ ವಿಚಾರವನ್ನಿಟ್ಟಿಕೊಂಡು ಕಮರ್ಷಿಯಲ್ಲಾಗಿ ರೂಪಿಸಿರುವ ಸಿನಿಮಾ ಟಕ್ಕರ್. ಹೀಗಾಗಿ ಮಹಿಳಾ ಪೊಲೀಸ್ ಅಧಿಕಾರಿ ರೂಪಾ ಅವರಿಂದ ವಿಡಿಯೋ ಸಾಂಗನ್ನು ರಿಲೀಸ್ ಮಾಡಿಸಲಾಯಿತು. ರೈಲ್ವೇಸ್ ಪೊಲೀಸ್ ಐ.ಜಿಯಾಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ರೂಪಾ ಅವರು ಈ ಚಿತ್ರದ ಹಾಡನ್ನು ಬಿಡುಗಡೆಗೊಳಿಸಿ ಅಪಾರವಾಗಿ ಮೆಚ್ಚಿಕೊಂಡರು.

ಟಕ್ಕರ್ ಚಿತ್ರದ ಟ್ರೇಲರನ್ನು ನೋಡಿದ ರೂಪಾ ಅವರು ಹೆಣ್ಣುಮಕ್ಕಳಿಗೆ ಎದುರಾಗುತ್ತಿರುವ ಸಮಸ್ಯೆಗಳ ಕುರಿತಾಗಿ ಕಂಟೆಂಟ್ ಹೊಂದಿರುವುದು ಮತ್ತು ಮಹಿಳೆಯರು ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂಬಿತ್ಯಾದಿ ವಿಚಾರವಾಗಿ ದೃಶ್ಯ ರೂಪದಲ್ಲಿ ಕಟ್ಟಿಕೊಟ್ಟಿರುವುದು ಮೆಚ್ಚಬೇಕಾದ ವಿಚಾರ ಎಂದು ತಿಳಿಸಿದರು.

ಕೆ.ಎನ್.ನಾಗೇಶ್ ಕೋಗಿಲು ಅವರ ನಿರ್ಮಾಣದ ಈ ಚಿತ್ರಕ್ಕೆ ವಿ.ರಘುಶಾಸ್ತ್ರಿ ಆಕ್ಷನ್ ಕಟ್ ಹೇಳಿದ್ದಾರೆ. ಮನೋಜ್‍ಗೆ ನಾಯಕಿಯಾಗಿ ಪುಟ್ಟಗೌರಿ ಮದುವೆ ಖ್ಯಾತಿಯ ರಂಜನಿ ರಾಘವನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ 65 ದಿನಗಳ ಕಾಲ ಮೈಸೂರು, ಬೆಂಗಳೂರು ಮತ್ತು ಮಲೇಶಿಯಾದಲ್ಲಿ ಮೂರು ಷೆಡ್ಯೂಲ್‍ನಲ್ಲಿ ಚಿತ್ರೀಕರಿಸಲಾಗಿದೆ. ನಮ್ಮ ಮನೆಯ ಹೆಣ್ಣುಮಕ್ಕಳು ನಮ್ಮ ಮನೆಯಲ್ಲೇ ಸೇಫ್ ಆಗಿಲ್ಲ ಎನ್ನುವುದೇ ಈ ಸಿನಿಮಾದ ಕಾನ್ಸೆಪ್ಟ್. ಸೈಬರ್ ಕ್ರೈಂ ಹಿನ್ನೆಲೆಯಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ.

ಚಿತ್ರದಲ್ಲಿ ಕದ್ರಿ ಮಣಿಕಾಂತ್ ಅವರು ಚಿತ್ರಕ್ಕೆ ಪಕ್ಕಾ ಮಾಸ್ ಮತ್ತು ಮೆಲೋಡಿ ಟ್ಯೂನ್ ಕೊಟ್ಟಿದ್ದಾರೆ. ವಿಲನ್ ಆಗಿ ಭಜರಂಗಿ ಖ್ಯಾತಿಯ ಸೌರವ್ ಲೋಕಿ ಕಾಣಿಸಿಕೊಂಡಿದ್ದಾರೆ. 30 ನಿಮಿಷಗಳ ಗ್ರಾಫಿಕ್ಸ್ ಕೂಡ ಇದರಲ್ಲಿದೆ. ಟಕ್ಕರ್ ಎಂದರೆ ಪಾಸಿಟಿವ್ ಹಾಗೂ ನೆಗಟೀವ್ ಎರಡೂ ಅರ್ಥವಿದ್ದು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಸಂಘರ್ಷಣೆ ಈ ಚಿತ್ರದಲ್ಲಿದೆ. ಲವ್ ಸ್ಟೋರಿ ಜೊತೆಗೆ ಆಕ್ಷನ್ ಪ್ಯಾಕ್ ಇರುವ ಚಿತ್ರ ಇದಾಗಿದೆ. ಸದ್ಯ ಎಲ್ಲ ಕೆಲಸಗಳನ್ನು ಮುಗಿಸಿಕೊಂಡು ಬಿಡುಗಡೆಗೆ ಟಕ್ಕರ್ ಸಜ್ಜಾಗುತ್ತಿದೆ.

ಡಾ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ, ಡಿಫರೆಂಟ್ ಡ್ಯಾನಿ ಸಾಹಸ, ವಿಲಿಯಮ್ಸ್ ಡೇವಿಡ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಮೋಹನ್ ನೃತ್ಯ ನಿರ್ದೇಶನ, ಈಶ್ವರಿ ಕುಮಾರ್ ಕಲಾ ನಿರ್ದೇಶನ, ಗುರುರಾಜ್ ದೇಸಾಯಿ ಸಂಭಾಷಣೆ ಈ ಚಿತ್ರಕ್ಕಿದೆ. ಮನೋಜ್ ಕುಮಾರ್ ಮತ್ತು ರಂಜನಿರಾಘವನ್, ಕೆ.ಎಸ್. ಶ್ರೀಧರ್, ಶಂಕರ್ ಅಶ್ವಥ್, ಸುಮಿತ್ರಾ, ಭಜರಂಗಿ ಖ್ಯಾತಿಯ ಸೌರವ್ ಲೋಕಿ, ಸಾಧು ಕೋಕಿಲಾ, ಲಕ್ಷ್ಮಣ್ ಶಿವಶಂಕರ್, ಅಶ್ವಿನ್ ಹಾಸನ್, ಕುರಿ ಸುನಿಲ್, ಜೈಜಗದೀಶ್ ಮುಂತಾದವರ ತಾರಾಬಳಗವಿದೆ.

Related posts