Cini Reviews Cinisuddi Fresh Cini News 

ಸೈಬರ್ ಕ್ರೈಂನ ದುಷ್ಕೃತ್ಯಕ್ಕೆ “ಟಕ್ಕರ್” (ಚಿತ್ರ ವಿಮರ್ಶೆ : ರೇಟಿಂಗ್ :3.5/5)

ರೇಟಿಂಗ್ :3.5/5

ಚಿತ್ರ : ಟಕ್ಕರ್
ನಿರ್ದೇಶಕ : ವಿ. ರಘುಶಾಸ್ತ್ರಿ
ನಿರ್ಮಾಪಕ : ನಾಗೇಶ ಕೋಗಿಲು
ಸಂಗೀತ : ಮಣಿಕಾಂತ್ ಕದ್ರಿ
ಛಾಯಾಗ್ರಾಹಕ : ವಿಲಿಯಮ್ಸ್ ಡೇವಿಡ್
ತಾರಾಗಣ : ಮನೋಜ್ ಕುಮಾರ್,ರಂಜಿನಿ ರಾಘವನ್, ಭಜರಂಗಿ ಲೋಕಿ, ಸಾಧುಕೋಕಿಲಾ, ನಯನಾ , ಕುರಿ ಸುನಿಲ್, ಜೃೆ ಜಗದೀಶ್ , ಕೆ. ಎಸ್ ಶ್ರೀಧರ್, ಸುಮಿತ್ರಾ , ಶಂಕರ್ ಅಶ್ವತ್ಥ್ ಹಾಗೂ ಮುಂತಾದವರು…

ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಬಹಳಷ್ಟು ವೇಗವಾಗಿ ಬೆಳೆಯುತ್ತಿದೆ. ಅದು ಜನಸಾಮಾನ್ಯರಿಗೆ ಒoದು ಕಡೆ ವರವಾದರೆ, ಮತ್ತೊಂದು ಕಡೆ ಶಾಪವಾಗಿ ಕಾಡುತ್ತದೆ. ಯಾಕೆಂದರೆ ಈ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡುವವರೆಲ್ಲರೂ ಕೂಡ ಜಾಗ್ರತೆಯಿಂದ ಮುಂದೆ ಸಾಗುವುದು ಬಹಳ ಮುಖ್ಯ. ಇತ್ತೀಚೆಗೆ ನಡೆದಿರುವ ಸೈಬರ್ ಕ್ರೈಮ್ , ಹೆಣ್ಣುಮಕ್ಕಳ ಮೇಲೆ ದುಷ್ಟರ ಅಟ್ಟಹಾಸ , ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸುವ ಪರಿ. ಇದರ ನಡುವೆ ನಿಷ್ಕಲ್ಮಶ ಪ್ರೀತಿ, ಸಂಬಂಧಗಳ ಬೆಸುಗೆ ಇಂಥ ಹಲವು ವಿಚಾರವನ್ನು ಬಹಳ ಸೂಚ್ಯವಾಗಿ ಪ್ರೇಕ್ಷಕರ ಮುಂದೆ ತೆರೆದಿಟ್ಟಿರುವ ಚಿತ್ರವೇ ಟಕ್ಕರ್.

ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡಿಕೊಂಡು ಅವರ ಮೊಬೈಲ್ ಮೂಲಕವೇ ಹ್ಯಾಕರ್ಸ್ ಗಳು ಮಾಡುವ ದುಷ್ಕೃತ್ಯಕ್ಕೆ ಬಹಳಷ್ಟು ಹೆಣ್ಣು ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿನಿಯರು ಬಲಿಯಾಗುತ್ತಾರೆ.ಇದನ್ನ ಟ್ರೇಸ್ ಮಾಡುವುದು ಪೊಲೀಸ್ ಅಧಿಕಾರಿಗಳಿಗೂ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ.

ಇದಕ್ಕೆ ಸೂಕ್ತ ವ್ಯಕ್ತಿ ಯಾರೆಂಬ ಪ್ರಶ್ನೆಗೆ ರಿಟೈರ್ಡ್ ಮೆಂಟ್ ಆಗುವ ಸಂದರ್ಭದಲ್ಲಿ ಪೋಲಿಸ್ ಕಮಿಷನರ್ (ಜೈಜಗದೀಶ್) ಮೂಲಕ ಫ್ಲ್ಯಾಶ್ ಬ್ಯಾಕ್ ತೆರೆದುಕೊಳ್ಳುತ್ತದೆ. ನಾವು ದಾಸನ ಹುಡುಗರು ಎನ್ನುತ್ತಲೇ ಭರ್ಜರಿ ಫೈಟ್ ಮೂಲಕ ಯುವ ನಟ ಮನೋಜ್ ಕುಮಾರ್ ಎಂಟ್ರಿ. ಕಾಲೇಜು ವಿದ್ಯಾರ್ಥಿ ಯಾಗಿರುವ ಸಾತ್ವಿಕಿ (ಮನೋಜ್ ಕುಮಾರ್) ತನ್ನ ಕಾಲೇಜಿನ ಎದುರಾಳಿ ಗುಂಪಿನೊಂದಿಗೆ ಆಗಾಗ ಹೊಡೆದಾಟಕ್ಕೆ ಬೀಳ್ತಾರೆ.

ಪ್ರಿನ್ಸಿಪಲ್ ಕೂಡ ವಾರ್ನಿಂಗ್ ಕೊಟ್ಟು ಎಚ್ಚೆತ್ತುಕೊಳ್ಳದ ಈ ಗ್ಯಾಂಗ್ ಸ್ಟೇಷನ್ ಮೆಟ್ಟಿಲು ಹತ್ತಬೇಕಾಗಿತ್ತದೆ. ಪ್ರತಿಬಾರಿ ಬಿಡಿಸಿಕೊಳ್ಳಲು ಕೋರ್ಟ್ ಬೇಲ್ ಹಿಡಿದು ಲಾಯರ್ ನಿಂತಿರುತ್ತಾರೆ.ಇದಕ್ಕೂ ಕೂಡ ಬಲವಾದ ಕಾರಣ ಇರುತ್ತದೆ.

ತಂದೆ ಪೋಲಿಸ್ ಅಧಿಕಾರಿ ಹಾಗೂ ತಾಯಿ ಲಾಯರ್ ಆಗಿರುವುದು ನಾಯಕನಿಗೆ ವರದಾನವಾಗಿರುತ್ತೆ. ಯಾವುದೇ ಕೆಟ್ಟ ಕೆಲಸ ಮಾಡದೆ ಸಹಾಯ ಮಾಡುವ ಮಗನ ಬುದ್ದಿಯೇ ಇದಕ್ಕೆ ಕಾರಣವಾಗಿರುತ್ತದೆ. ಕಾಲೇಜು ಗುಂಪಿನ ಹೊಡೆದಾಟದ ಸಮಯಕ್ಕೆ ಪ್ರವೇಶ ಮಾಡುವ ನಾಯಕಿ ಪುಣ್ಯ (ರಂಜನಿ ರಾಘವನ್). ಮೆಡಿಕಲ್ ವಿದ್ಯಾರ್ಥಿಯಾಗಿರುವ ನಾಯಕಿ ಪೆಟ್ಟು ತಿಂದ ವ್ಯಕ್ತಿಗೆ ನಾಯಕನ ಮೂಲಕವೇ ರಕ್ತ ದಾನ ಮಾಡಿಸುವ ಅವನ ಸ್ನೇಹ ಪಡೆಯುತ್ತಾಳೆ.

ನಾಯಕ ತನ್ನ ವಿಚಾರವನ್ನು ಮುಚ್ಚಿಟ್ಟು ನಾಯಕಿಯನ್ನು ಪ್ರೀತಿಸಲು ಮುಂದಾಗುತ್ತಾನೆ. ಇದರ ನಡುವೆ ಹೆಣ್ಣು ಮಕ್ಕಳನ್ನ ತನ್ನ ಮೋಸದ ಜಾಲಕ್ಕೆ ಬೀಳಿಸಿಕೊಂಡು ಅವ್ರನ್ನ ಹಿಪ್ಪಿ ಹಿಂಡೆ ಮಾಡುತ್ತಿರುವ ಜಾಲ. ಕಾಲೇಜು ವಿದ್ಯಾರ್ಥಿಯಾಗಿರುವ ನಾಯಕ ಪೊಲೀಸ್ ಇನ್ಫಾರ್ಮರ್ ಆಗಿ ಸಹಾಯ ಮಾಡಲು ಮುಂದಾಗುತ್ತಾನೆ.ಇಲ್ಲಿಂದ ಕಥೆಗೆ ಹೊಸ ಟ್ವಿಸ್ಟ್ ತೆರೆದುಕೊಳ್ಳುತ್ತಾ ಹೋಗುತ್ತದೆ.

ಟಕ್ಕರ್ ಯಾರಿಗೆ ಯಾರು ಕೊಡ್ತಾರೆ…
ನಾಯಕನಗೆ ಪ್ರೀತಿ ಸಿಗುತ್ತಾ…
ಸೈಬರ್ ಕ್ರೈಂಗೆ ಕಡಿವಾಣ ಬೀಳುತ್ತಾ…
ಕ್ಲೈಮ್ಯಾಕ್ಸ್ ಹೇಗಿದೆ…
ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದ್ರೆ ನೀವೆಲ್ಲರೂ ಒಮ್ಮೆ ಈ ಟಕ್ಕರ್ ಚಿತ್ರವನ್ನು ನೋಡಲೇಬೇಕು.

ತನ್ನ ಪ್ರಥಮ ಪ್ರಯತ್ನದಲ್ಲೇ ಯುವ ನಟ ಮನೋಜ್ ಕುಮಾರ್ ಅಭಿನಯ ಗಮನಾರ್ಹವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಸೋದರಳಿಯ ಯಾಗಿರುವ ಎತ್ತರದ ಕಟ್ಟುಮಸ್ತಿನ ಪ್ರತಿಭೆ ಮನೋಜ್ ಕೆಲವೊಂದು ದೃಶ್ಯಗಳಲ್ಲಿ ಮಾತಿನ ಶೈಲಿ, ಮ್ಯಾನರಿಸಂ ಪಕ್ಕಾ ದರ್ಶನ್‍ರನ್ನೇ ಹೋಲುತ್ತಾರೆ.

ಆ್ಯಕ್ಷನ್ ದೃಶ್ಯಗಳನ್ನ ಸೈ ಎನ್ನುವಂತೆ ಎದುರಿಸಿದ್ದು, ನಟನ ವಿಚಾರದಲ್ಲಿ ಒಂದಷ್ಟು ತಾಲೀಮು ಬೇಕಿತ್ತು ಅನಿಸುತ್ತದೆ. ಪ್ರಥಮ ಪ್ರಯತ್ನ ಉತ್ತಮವಾಗಿದ್ದು, ಮುಂದಿನ ದಿನಗಳಲ್ಲಿ ಭರವಸೆಯ ನಟನಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಇನ್ನು ನಾಯಕಿ ಪಾತ್ರವನ್ನು ಮಾಡಿರುವ ರಂಜನಿ ರಾಘವನ್ ಕೂಡ ಬಹಳ ಲೀಲಾಜಾಲವಾಗಿ ತನ್ನ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ.

ಪ್ರೀತಿಯ ನಿವೇದನೆ ಸನ್ನಿವೇಶವನ್ನು ಸೊಗಸಾಗಿ ನಿರ್ವಹಿಸುವ ಮೂಲಕ ಗಮನ ಸೆಳೆಯುತ್ತಾರೆ. ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರಧಾರಿ ಭಜರಂಗಿ ಲೋಕಿ ಖಳನಾಯಕನಾದರು ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪಾತ್ರ ಯಾವುದಾದರೇನು ಪರಕಾಯಪ್ರವೇಶ ಬಹಳ ಮುಖ್ಯ ಎಂಬುದನ್ನು ಬಿಂಬಿಸಿದ್ದಾರೆ.

ಇನ್ನು ನಾಯಕನ ತಂದೆಯಾಗಿ ಕೆ. ಎಸ್. ಶ್ರೀಧರ್, ತಾಯಿಯಾಗಿ ಸುಮಿತ್ರಾ , ಪೋಲಿಸ್ ಕಮಿಷನರ್ ಜೈಜಗದೀಶ್ ಸೇರಿದಂತೆ ಹಲವಾರು ಪಾತ್ರಧಾರಿಗಳು ಚಿತ್ರದ ಓಟಕ್ಕೆ ಸಾಥ್ ನೀಡಿದ್ದಾರೆ.

ಇನ್ನು ಈ ಚಿತ್ರದ ನಿರ್ದೇಶಕ ರಘು ಶಾಸ್ತ್ರಿ ಕೂಡ ಜಾಗೃತಿ ಮೂಡಿಸುವ ಕತೆಯನ್ನು ಬಹಳ ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿದ್ದಾರೆ. ಟೆಕ್ನಾಲಜಿ ಮುಂದುವರೆದಿರುವ ಇತ್ತೀಚಿನ ದಿನಗಳಲ್ಲಿ ಅದಕ್ಕೆ ಮಹಿಳೆಯರು ಹೇಗೆ ಬಲಿಯಾಗುತ್ತಿದ್ದಾರೆ ಎಂಬುದನ್ನು ಈ ಚಿತ್ರದಲ್ಲಿ ಅರ್ಥಪೂರ್ಣವಾಗಿ ವೀಕ್ಷಕರ ಮನಮುಟ್ಟುವ ಹಾಗೆ ಹೇಳಲಾಗಿದೆ.

ಸೈಬರ್ ಕ್ರೈಮನ್ನು ಹೇಗೆ ತಡೆಯಬಹುದುಎಂಬುದನ್ನು ನಾಯಕ ಮನೋಜ್ ಅವರ ಪಾತ್ರದ ಮೂಲಕ ಹೇಳಿಸಿರುವುದು ಚಿತ್ರದ ಪ್ಲಸ್ ಪಾಯಿಂಟ್, ಸೈಬರ್ ಕ್ರೈಂ ಹೇಗೆಲ್ಲಾ ನಡೆಯುತ್ತದೆ, ಅದರ ಹಿಂದೆ ಯಾರ್ಯಾರು ಕಿಂಗ್‍ಪಿನ್‍ಗಳಾಗಿದ್ದಾರೆ. ಮೊಬೈಲ್‍ ,ಇಂಟರ್ನೆಟ್ , ಪೇಸ್‍ಬುಕ್, ಲ್ಯಾಪ್‍ಟ್ಯಾಪ್‍ ಗಳಲ್ಲಿರುವ ವೆಬ್‍ಕ್ಯಾಮೆರಾ ಆಫ್ ಮಾಡದೇ ಹೋದರೆ ಏನೆಲ್ಲ ನಡೆಯಬಹುದು ಎಂಬ ಬಗ್ಗೆ ಜಾಗೃತಿಯನ್ನೂ ಸಹ ಈ ಚಿತ್ರ ಮೂಡಿಸುತ್ತದೆ.

ಚಿತ್ರದ ಮೊದಲ ಭಾಗ ನಿಧಾನಗತಿಯಲ್ಲಿ ಸಾಗುತ್ತದೆ. ಸಾಧು ಕೋಕಿಲ ರವರ ಹಾಸ್ಯ ದೃಶ್ಯಗಳು ಅತಿ ಎನಿಸುತ್ತವೆ. ಒಟ್ಟಾರೆ ಜನಸಮುದಾಯ ವನ್ನು ಎಚ್ಚರಿಸುವ ಕಥಾನಕ ಒಪ್ಪುವಂತದ್ದು. ಒಂದು ಉತ್ತಮ ವಿಭಿನ್ನ ಪ್ರಯತ್ನದ ಚಿತ್ರವನ್ನು ನಿರ್ಮಿಸಿರುವ ನಾಗೇಶ ಕೋಗಿಲು ರವರ ಕೆಲಸ ಉತ್ತಮವಾಗಿದೆ. ಸಮಾಜಕ್ಕೆ ಇಂಥ ಸಂದೇಶವಿರುವ ಚಿತ್ರವು ಬರುವುದು ಅಗತ್ಯ ಎನಿಸುತ್ತದೆ.

ಇನ್ನು ಈ ಚಿತ್ರಕ್ಕೆ ಸಂಗೀತ ನೀಡಿರುವ ಮಣಿಕಾಂತ್ ಕದ್ರಿ ಅವರ ಕೆಲಸವು ಸೊಗಸಾಗಿದೆ. ಛಾಯಾಗ್ರಾಹಕ ವಿಲಿಯಮ್ ಡೇವಿಡ್ ಕೂಡ ಅಷ್ಟೇ ಅಚ್ಚುಕಟ್ಟಾಗಿ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಕ್ಷಣ ಕ್ಷಣಕ್ಕೂ ಕುತೂಹಲ ಹುಟ್ಟಿಸುವ ಥ್ರಿಲ್ಲಿಂಗ್ ಅಂಶಗಳೊಂದಿಗೆ ಬಂದಿರುವ ಈ ಟಕ್ಕರ್ ಚಿತ್ರವನ್ನ ಎಲ್ಲರೂ ಒಮ್ಮೆ ಹೋಗಿ ಚಿತ್ರಮಂದಿರದಲ್ಲಿ ನೋಡಬಹುದು.q

Related posts