Cinisuddi Fresh Cini News 

ಕೊರೋನಾ ಕಾಡಿದ ಅನುಭವ ಹಂಚಿಕೊಂಡ ಸುಮಲತಾ

ನಟಿ, ಸಂಸದೆ ಸುಮಲತಾ ಅಂಬರೀಷ್ ಇತ್ತೀಚೆಗೆ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಗುಣಮುಖರಾಗಿದ್ದಾರೆ. ಸಣ್ಣ ಪುಟ್ಟ ಲಕ್ಷಣಗಳಿದ್ದ ಕಾರಣದಿಂದ ಅವರು ಆಸ್ಪತ್ರೆಗೆ ದಾಖಲಾಗದೆ ಮನೆಯಲ್ಲಿಯೇ ಸ್ವಯಂ ದಿಗ್ಬಂಧನಕ್ಕೆ ಒಳಗಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.

ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಚೇತರಿಸಿಕೊಂಡಿರುವ ಸುಮಲತಾ, ಜನರಲ್ಲಿ ಇದರ ಬಗ್ಗೆ ಸ್ಫೂರ್ತಿ ತುಂಬುವ ಪ್ರಯತ್ನ ಮಾಡಿದ್ದಾರೆ. ಅದಕ್ಕಾಗಿ ವಿಡಿಯೋವೊಂದರ ಮೂಲಕ ತಮ್ಮ ಅನುಭವಗಳನ್ನು ಹಂಚಿಕೊಂಡಿದರಲ್ಲದೆ ಕೊರೋನಾ ಗೆಲ್ಲುವ ಮುನ್ನ ಮೊದಲು ಅದರ ಭಯವನ್ನು ಗೆಲ್ಲಿ ಎಂದು ಅವರು ಕಿವಿಮಾತು ಹೇಳುವ ಮೂಲಕ ತಾವು ಕೊರೋನಾ ವೈರಸ್‍ನ್ನು ಯಾವ ರೀತಿ ಎದುರಿಸಿದೆ ಎಂಬುದನ್ನು ವಿವರಿಸಿದ್ದಾರೆ.

ನನಗೆ ಅಂಬರೀಷ್ ಯಾವತ್ತೂ ಒಂದು ಮಾತು ಹೇಳೋರು, ಕಷ್ಟ ಎನ್ನುವುದು ಹೇಗೆ, ಯಾವಾಗ ಬಂದರೂ ಅದನ್ನು ಧೈರ್ಯವಾಗಿ ಎದುರಿಸಿ ಹೋರಾಡಬೇಕು ಎಂದು. ಇತ್ತೀಚೆಗೆ ನನಗೂ ಒಂದು ಕಷ್ಟ ಬಂದಿತ್ತು. ಅದರ ಹೆಸರು ಕೋವಿಡ್ 19.

ಹೌದು, ನಾನು ಕೊರೋನಾ ಸೋಂಕಿತೆ, ಈಗ ಸಂಪೂರ್ಣ ಗುಣಮುಖಳಾಗಿದ್ದೇನೆ. ಹಾಗೆ ನೋಡಿದರೆ, ನನ್ನ ಜೀವನದಲ್ಲಿ ಎಷ್ಟೋ ಕಷ್ಟ ಎದುರಿಸಿದ್ದೇನೆ. ಅದೆಕ್ಕೆಲ್ಲಾ ಹೋಲಿಸಿದರೆ ಇದು ಅಂತಹ ಕಷ್ಟವೇ ಅಲ್ಲ. ಆದರೂ ನನಗೆ ಕೋವಿಡ್ ಪಾಸಿಟಿವ್ ಎಂದಾಗ ಎಲ್ಲರಂತೆ ಗೊಂದಲವಿತ್ತು, ಏನಾಗಿಬಿಡುತ್ತೋ ಎಂಬ ಭಯ ಕಾಡುತ್ತಿತ್ತು.

ನನಗೆ ಇರುವ ಜವಾಬ್ದಾರಿ, ನನ್ನ ಸುತ್ತಮುತ್ತ ಫ್ಯಾಮಿಲಿಯನ್ನು ಹೇಗೆ ನಿಭಾಯಿಸಬಹುದು ಎನ್ನುವ ಗೊಂದಲ, ಒಂದಷ್ಟು ಭಯ ಎಲ್ಲರ ಹಾಗೆ ನನಗೂ ಇತ್ತು. ಮೊದಲು ಮಾಡಬೇಕಿದ್ದು ನನ್ನಲ್ಲಿ ನಾನು ಧೈರ್ಯ ತುಂಬಿಸಿಕೊಳ್ಳುವ ಕೆಲಸ. ಆ ಯೋಚನೆ ಬಂದ ಮೇಲೆ ವೈದ್ಯರನ್ನು ಸಂರ್ಪಕಿಸಿದೆ.

ಮೊದಲು ಜ್ವರ ಬಂದಾಗ ಸ್ವ್ಯಾಬ್ ಟೆಸ್ಟ್ ಮಾಡಿಸಿದೆ, ವರದಿ ಪಾಸಿಟಿವ್ ಬಂದಿತ್ತು. ಆಗಿನಿಂದಲೇ ವೈದ್ಯರ ಸಲಹೆ ಮೇರೆಗೆ ಸ್ವಯಂ ಐಸೋಲೇಷನ್ ಆಗಿದ್ದೆ. ನನ್ನ ಜೊತೆ ಸಂಪರ್ಕಕ್ಕೆ ಬಂದಿರುವ ಪ್ರತಿಯೊಬ್ಬರಿಗೂ ವಿಷಯ ತಿಳಿಸಬೇಕಿತ್ತು. ಸಾಮಾಜಿಕ ಜಾಲತಾಣ, ಫೋನ್ ಮೂಲಕ ಎಲ್ಲರಿಗೂ ವಿಷಯ ತಿಳಿಸಿದೆ.

ಇದು ನನ್ನ ಜವಾಬ್ದಾರಿಯಾಗಿತ್ತು. ನಾನು ಮನೆಯ ಕೊಠಡಿಯೊಂದರಲ್ಲಿ ಕ್ವಾರೆಂಟೈನ್ ಆಗಿದೆ ಮನೆಬಿಟ್ಟು ಎಲ್ಲೂ ಹೊರಬರಲಿಲ್ಲ. ಲಕ್ಷಣಗಳು ಲಘುವಾಗಿದ್ದರಿಂದ ಮನೆಯಲ್ಲಿಯೇ ಇರಿ ಎಂದು ವೈದ್ಯರು ತಿಳಿಸಿದ್ದರು. ವೈದ್ಯರು ಹೇಳಿದ ಔಷಧಗಳನ್ನು ತೆಗೆದುಕೊಳ್ಳುತ್ತಿದೆ ಯೋಗ, ಪ್ರಾಣಾಯಾಮಗಳನ್ನು ಮಾಡುತ್ತಿದೆ.

ಇದರ ಜೊತೆ ಸಾಂಪ್ರದಾಯಿಕ ಔಷಧಗಳು, ತುಳಸಿ ನೀರು, ಕಷಾಯಗಳನ್ನು ತೆಗೆದುಕೊಳ್ಳುತ್ತಿದೆ. ನನಗಾಗಿ ಲಕ್ಷಾಂತರ ಜನ ಹಾರೈಸಿದರು. ಪೂಜೆಗಳನ್ನು ಸಲ್ಲಿಸಿದರು. ಅವರ ಪ್ರೀತಿಗೆ ಚಿರರುಣಿ.

ಇನ್ನು ಮಗ ಅಭಿಷೇಕ್, ಚಿಕ್ಕಂದಿನಲ್ಲಿ ನಾನು ಅವನನ್ನು ಹೇಗೆ ನೋಡಿಕೊಂಡೆನೋ, ಹಾಗೆಯೇ ದಿನವೂ ಫೋನ್ ಮಾಡಿ ನನಗೆ ಧೈರ್ಯ ತುಂಬುತ್ತಿದ್ದ. ಇಬ್ಬರೂ ಒಂದೇ ಮನೆಯಲ್ಲಿದ್ದರೂ ಪ್ರತಿದಿನ ಫೋನ್‍ನಲ್ಲಿ ಮಾತಾಡುತ್ತಿದೇವು ನಾನು ಕೊರೊನಾವನ್ನು ಸೋಲಿಸಿ, ಸಂಪೂರ್ಣ ಹುಷಾರಾಗಿದ್ದೇನೆ.

ಈ ಕೊರೊನಾ ವೈರಸ್ ಒಂದಷ್ಟು ತಿಂಗಳಿನಿಂದ ಎಲ್ಲರ ನೆಮ್ಮದಿ ಹಾಳು ಮಾಡಿದೆ. ಕೊರೊನಾ ಬರುವುದು ಸಾಮಾಜಿಕ ಅಪರಾಧ ಅಲ್ಲ. ಹಾಗೆ ಬಂದ ರೋಗಿಗಳನ್ನು ಕೆಟ್ಟದಾಗಿ ನೋಡುವುದು ತಪ್ಪು. ಕೊರೊನಾ ಪಾಸಿಟವ್ ಇರುವವರನ್ನು ಸ್ವಲ್ಪ ಅನುಕಂಪ, ಒಳ್ಳೆಯ ಮನಸಿಂದ ಅರ್ಥ ಮಾಡಿಕೊಂಡು ಸ್ವೀಕರಿಸಬೇಕು.

ಭಯದಿಂದ ಯಾರೂ, ಏನೂ ಸಾಧಿಸಿಲ್ಲ. ಧೈರ್ಯವಾಗಿದ್ದರೆ ಎಲ್ಲರೂ ಇದರಿಂದ ವಿಮುಕ್ತರಾಗುತ್ತೇವೆ, ಎಚ್ಚರಿಕೆಯಿಂದ ಇರಿ. ಭಯ ಪಡಬೇಡಿ. ಆತಂಕ ಪಡಬೇಡಿ ಎಂದು ಸುಮಲತಾ ಸಲಹೆ ನೀಡಿದ್ದಾರೆ.

Share This With Your Friends

Related posts