Cinisuddi Fresh Cini News 

ಕುತೂಹಲ‌ ಮೂಡಿಸಿದೆ “ಸ್ಪೂಕಿ ಕಾಲೇಜ್” ಚಿತ್ರದ ಟೀಸರ್

ಉತ್ಸಾಹಿ ಯುವ ನಿರ್ದೇಶಕ ಭರತ್ ಜಿ ನಿರ್ದೇಶಿಸಿರುವ “ಸ್ಪೂಕಿ ಕಾಲೇಜ್” ಚಿತ್ರದ ಟೀಸರ್ ಶ್ರೀದೇವಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಬಿ.ಜಿ.ಎಸ್ ಮತ್ತು ಎಸ್ ಜೆ ಬಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಪರಮಪೂಜ್ಯ ಶ್ರೀ ಡಾ|| ಪ್ರಕಾಶನಾಥಸ್ವಾಮೀಜಿ ಬಿಡುಗಡೆ ಮಾಡಿ ಆಶೀರ್ವದಿಸಿದ್ದಾರೆ.

ಚಿತ್ರ ಆರಂಭದ ದಿನದಿಂದಲೂ ಪೋಸ್ಟರ್, ಫಸ್ಟ್ ಲುಕ್ ಸಾಕಷ್ಟು ಕುತೂಹಲ ಹುಟ್ಟಿಸಿತು. ಈಗ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದ ಕುರಿತಾದ ಕುತೂಹಲ ಮತ್ತಷ್ಟು ಹೆಚ್ಚಿದೆ. ಈಗಾಗಲೇ ಅಧಿಕ ಸಂಖ್ಯೆಯಲ್ಲಿ ಟೀಸರ್ ವೀಕ್ಷಣೆಯಾಗುತ್ತಿದೆ. ನಟ ಡಾಲಿ ಧನಂಜಯ್ ಸೇರಿದಂತೆ ಅನೇಕ ಗಣ್ಯರು ಟೀಸರ್ ಬಗ್ಗೆ ಟ್ವಿಟ್ ಮಾಡಿ ಶುಭ ಕೋರಿದ್ದಾರೆ. “ಸ್ಪೂಕಿ” ಎಂದರೆ ಭಯ. ಟೀಸರ್ ನೋಡಿದವರಿಗೆ “ಸ್ಪೂಕಿ” ಪದದ ವಿಶ್ಲೇಷಣೆಯನ್ನು ನಿರ್ದೇಶಕರು ತಿಳಿಸುವ ಪ್ರಯತ್ನ ಮಾಡಿದ್ದಾರೆ.

ಹಿಂದೆ ಕನ್ನಡ ಚಿತ್ರರಂಗದ ಬ್ಲಾಕ್ ಬಾಸ್ಟರ್ ಹಿಟ್ ಸಿನಿಮಾಗಳಾದ “ನಾ ನಿನ್ನ ಬಿಡಲಾರೆ”, ” ಆಪ್ತಮಿತ್ರ ” ಸಿನಿಮಾಗಳ ರೀತಿ ಈ ಚಿತ್ರಕೂಡ ಪ್ರೇಕ್ಷಕರ ಮನಗೆಲುವುದರಲ್ಲಿ ಯಾವ ಸಂದೇಹವಿಲ್ಲ ಎಂಬ ಮಾತುಗಳು ಟೀಸರ್ ನೋಡಿದವರಿಂದ ಕೇಳಿ ಬರುತ್ತಿದೆ. ಕಾಲೇಜ್ ನಲ್ಲಿ ದೆವ್ವ ಇದೆ ಎನ್ನುವುದು ಈ ಚಿತ್ರದ ಹೈಲೆಟ್.

ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಧಾರಾವಾಡದ ನೂರಕ್ಕೂ ಹೆಚ್ಚಿನ ವರ್ಷ ಹಳೆಯದಾದ ಕಾಲೇಜು ಹಾಗೂ ದಾಂಡೇಲಿ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಭಾಗದ ಚಿತ್ರೀಕರಣ ನಡೆದಿದೆ. ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ‌ ಬಿರುಸಿನಿಂದ ಸಾಗಿದೆ. ಸದ್ಯದಲ್ಲೇ ನಿಮ್ಮ ಮುಂದೆ “ಸ್ಪೂಕಿ ಕಾಲೇಜ್” ಬರಲಿದೆ.

“ರಂಗಿತರಂಗ” , “ಅವನೇ ಶ್ರೀಮನ್ನಾರಾಯಣ” ಚಿತ್ರಗಳ ನಿರ್ಮಾಪಕ ಹೆಚ್.ಕೆ.ಪ್ರಕಾಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಥೆ, ಚಿತ್ರಕಥೆ ಹಾಗು ಸಂಭಾಷಣೆಯನ್ನು ನಿರ್ದೇಶಕ ಭರತ್ ಅವರೆ ಬರೆದಿದ್ದಾರೆ.  ಮನೋಹರ್ ಜೋಶಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಹಾಗೂ ಶ್ರೀಕಾಂತ್ (ಕೆ ಜಿ ಎಫ್) ಅವರ ಸಂಕಲನ ಈ ಚಿತ್ರಕ್ಕಿದೆ.

“ಪ್ರೀಮಿಯರ್ ಪದ್ಮಿನಿ” ಖ್ಯಾತಿಯ ವಿವೇಕ್ ಸಿಂಹ “ಸ್ಪೂಕಿ ಕಾಲೇಜ್” ನ ನಾಯಕ. “ದಿಯಾ” ಮೂಲಕ ಹೆಸರಾಗಿರುವ ಖುಷಿ ರವಿ ನಾಯಕಿ. ಅಜಯ್ ಪೃಥ್ವಿ, ಹನುಮಂತೇ ಗೌಡ, ಕೆ.ಎಸ್.ಶ್ರೀಧರ್, ವಿಜಯ್ ಚೆಂಡೂರ್, ಶರಣ್ಯ ಶೆಟ್ಟಿ, ರಘು ರಮಣಕೊಪ್ಪ ಹಾಗೂ “ಕಾಮಿಡಿ ಕಿಲಾಡಿಗಳು” ಶೋನ‌ ಜನಪ್ರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

Related posts