Cinisuddi Fresh Cini News 

ಯುವ ಪ್ರತಿಭೆಗಳ “ಸ್ನೇಹಿತ” ಚಿತ್ರದ ಹಾಡುಗಳು ಬಿಡುಗಡೆ

ಪ್ರತಿಯೊಬ್ಬರ ಜೀವನದಲ್ಲೂ ಸ್ನೇಹಿತ ಬಹಳ ಮುಖ್ಯ. ಯಾಕೆಂದರೆ ನಮ್ಮ ಬದುಕಿನ ಪಯಣದ ಹಾದಿಯಲ್ಲಿ ಸ್ನೇಹಿತರು ಒಂದಲ್ಲಾ ಒಂದು ವಿಚಾರದಲ್ಲಿ ಭಾಗಿಯಾಗಿರುತ್ತಾರೆ. ಆ ನಿಟ್ಟಿನಲ್ಲಿ ಇಲ್ಲೊಂದು ತಂಡ ಸ್ನೇಹಿತ ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನ ಪೂರ್ಣಗೊಳಿಸಿ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಈ ಒಂದು ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಕಾರ್ಯದರ್ಶಿ ನಿರ್ಮಾಪಕರಾದ ಭಾ. ಮ. ಹರೀಶ್, ಭಾ ಮ ಗಿರೀಶ್, ವಿತರಕ ನರ್ಗಿಸ್ ಬಾಬು, ನಿರ್ದೇಶಕ ಬಿ‌.ಆರ್.ಕೇಶವ್ , ನಟ ಪ್ರಣಯ ಮೂರ್ತಿ, ಆಕಾಶ್ ಆಡಿಯೋದ ಕುಬೇರ್ ಹಾಗೂ ನಿತ್ಯಾನಂದ ಪ್ರಭು ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು.

ಈ ಚಿತ್ರದ ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕರಾಗಿರುವ ಸಂಗೀತ್ ಸಾಗರ್ ಮಾತನಾಡುತ್ತಾ “ಸ್ನೇಹಿತ” ಚಿತ್ರ ಸ್ನೇಹದ ಮಹತ್ವ ಸಾರುವ ಚಿತ್ರವಾಗಿದೆ. ಮನೆಮಂದಿಯಲ್ಲಾ ಒಟ್ಟಾಗಿ ಕುಳಿತು ನೋಡುವಂತ ಪರಿಶುದ್ಧ ಮನೋರಂಜನಾತ್ಮಕ ಚಿತ್ರವನ್ನು ನಿರ್ದೇಶಿಸಿರುವ ತೃಪ್ತಿ ಇದೆ.ಈ ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು, ಇಂದು 3 ಹಾಡುಗಳು ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ಕೂಡ ತೆರೆಗೆ ಬರಲಿದೆ. ನನ್ನ ಈ ಕನಸಿಗೆ ಬೆಂಬಲ ನೀಡಿದ ನಿರ್ಮಾಪಕರಿಗೆ, ಕಲಾವಿದರಿಗೆ ಹಾಗೂ ನನ್ನ ಇಡೀ ತಂಡಕ್ಕೆ ಧನ್ಯವಾದ ಎಂದರು.

ಈ ಹಿಂದೆ “ಪ್ಯಾರ್ ಕಾ ಗೋಲ್ ಗುಂಬಜ್” ಚಿತ್ರದಲ್ಲಿ ನಟಿಸಿ ಮನೆಮಾತಾಗಿರುವ ಧನುಷ್ ಈ “ಸ್ನೇಹಿತ” ಚಿತ್ರದಲ್ಲಿ ನಾಯಕರಾಗಿ ಅಭಿನಯಿಸಿದ್ದಾರೆ .ಅವರು ಮಾತನಾಡುತ್ತಾ ನನ್ನ “ಪ್ಯಾರ ಕಾ ಗೋಲ್ ಗುಂಬಜ್” ಚಿತ್ರಕ್ಕೆ ಎಲ್ಲರು ತೋರಿದ ಪ್ರೀತಿಗೆ ನಾನು ಚಿರಋಣಿ.ಈ ಚಿತ್ರಕ್ಕೂ ಅದೇ ರೀತಿಯ ಪ್ರೋತ್ಸಾಹ ಬಯಸುತ್ತೇನೆ. ನನ್ನದು ಈ ಚಿತ್ರದಲ್ಲಿ ಒಳ್ಳೆಯ ಪಾತ್ರ. “ಸ್ನೇಹಿತ” ಎಂದರೆ ಏನು ಎಂದು ನಾನು ಹೇಳುವುದಕ್ಕಿಂತ, ಸ್ವಲ್ಪ ದಿನದಲ್ಲೇ ನಮ್ಮ ಚಿತ್ರ ತೆರೆಗೆ ಬರಲಿದ್ದು, ಅದರಲ್ಲಿ ಎಲ್ಲವೂ ತಿಳಿಯಲಿದೆ.

ನಮ್ಮ ಚಿತ್ರ ಯಾವುದೇ ಒಂದು ರೀತಿಯ ಸಿನಿಮಾ ಅಲ್ಲ. ಇದರಲ್ಲಿ ಸ್ನೇಹ, ಪ್ರೀತಿ, ಆಕ್ಷನ್ , ಉತ್ತಮ ಕಥೆ ಹಾಗೂ ಹಾಡುಗಳು ಎಲ್ಲಾ ಇದೆ. ನೋಡುಗರಿಗೆ ಉತ್ತಮ ಮನೋರಂಜನೆ ನೀಡುವ ಚಿತ್ರ ಅಂತ ಹೇಳಬಹುದು. ಉಮೇಶಣ್ಣ ಅವರಂತಹ ಹಿರಿಯ ನಟರೊಂದಿಗೆ ನಟಿಸಿದ್ದು, ಸಂತೋಷ ತಂದಿದೆ. ನಾಯಕಿ ಸುಲಕ್ಷ ಕೈರಾ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ ಎಂದರು.

ನಾನು ಈ ಚಿತ್ರದಲ್ಲಿ ಪ್ರಿಯ ಎಂಬ ಪಾತ್ರದಲ್ಲಿ ಕಾಣಿಸಿಕೊಂದ್ದೇನೆ. ಈ ಚಿತ್ರದಲ್ಲಿ ಮುಗ್ಧ ಹಳ್ಳಿ ಹುಡುಗಿ ನಾನು. ಉತ್ತಮ ಪಾತ್ರಕೊಟ್ಟ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಧನ್ಯವಾದ ಎಂದರು ನಾಯಕಿ ಸುಲಕ್ಷ ಕೈರಾ.

ಕೊರೋನದಿಂದ ಎರಡುವರ್ಷಗಳ ಕಾಲ ಮನೆಯಲ್ಲೇ ಇದೆ . ಇಂದು ಎಲ್ಲರನ್ನೂ ನೋಡಿ ಸಂತೋಷವಾಗಿದೆ. ಉತ್ತಮ ಪಾತ್ರ ನೀಡಿದ ನಿರ್ದೇಶಕರಿಗೆ ಧನ್ಯವಾದ ಎಂದರು ಹಿರಿಯ ನಟ ಎಂ.ಎಸ್.ಉಮೇಶ್.ನಿರ್ಮಾಪಕ ಅಶೋಕ್ ಆರ್ ಈ ಚಿತ್ರದ ಗೆಲುವಿಗೆ ಎಲ್ಲರು ಪ್ರೋತ್ಸಾಹಿಸಬೇಕೆಂದರು.

ಬಾಬು ಭಾಗವತರ್ ಈ ಚಿತ್ರದ ಕೋ ಡೈರೆಕ್ಟರ್. ಕಮಲ್ ಸಿಂಗ್ ಛಾಯಾಗ್ರಹಣ, ಹರೀಶ್ ಕೃಷ್ಣ ಹಾಗೂ ರಾಜಶೇಖರ ರೆಡ್ಡಿ ಸಂಕಲನ, ವಿನಯ್, ಹರೀಶ್ ಟೋನಿ ನೃತ್ಯ ನಿರ್ದೇಶನ ಹಾಗೂ ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ “ಸ್ನೇಹಿತ” ಚಿತ್ರಕ್ಕಿದೆ.

ಧನುಶ್, ಸುಲಕ್ಷ ಕೈರಾ, ಶಿವರಾಮಣ್ಣ, ಎಂ.ಎಸ್‌.ಉಮೇಶ್, ಮನದೀಪ್ ರಾಯ್, ಆರ್ ಟಿ ರಮ, ಕಿಲ್ಲರ್ ವೆಂಕಟೇಶ್, ಪ್ರಣಯ ಮೂರ್ತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಸದ್ಯದಲ್ಲೇ ಚಿತ್ರ ಅದ್ದೂರಿಯಾಗಿ ತೆರೆಮೇಲೆ ರಾರಾಜಿಸಲಿದೆ.

Related posts