Cinisuddi Fresh Cini News Tv / Serial 

ರಾರಾಜಿಸಲಿದೆ ಸಿರಿಕನ್ನಡದ ವಾಹಿನಿಯಲ್ಲಿ  “ವಿಜಯ ದಶಮಿ” ಹಾಗೂ “ಅಮ್ಮನ ಮದುವೆ” ಧಾರಾವಾಹಿ 

ಅಚ್ಚ ಕನ್ನಡಿಗರ ಸಿರಿಕನ್ನಡ ವಾಹಿನಿಯಲ್ಲಿ ವಿಜಯ ದಶಮಿ – ಅಮ್ಮನ ಮದುವೆ ಎಂಬ ಹೊಚ್ಚಹೊಸ ಧಾರಾವಾಹಿಗಳು ಆಗಸ್ಟ್ 1 ರಿಂದ ಆರಂಭವಾಗುತ್ತಿದೆ .

ಆ ಪೈಕಿ “ವಿಜಯ ದಶಮಿ” ಧಾರಾವಾಹಿಯನ್ನು ಪೂರ್ಣಿಮ ಎಂಟರ್ ಪ್ರೈಸಸ್ ಮೂಲಕ ರಾಘವೇಂದ್ರ ರಾಜಕುಮಾರ್ ಹಾಗೂ ಮಂಗಳ ರಾಘವೇಂದ್ರ ರಾಜಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಈ ಸಂಸ್ಥೆಯ ಮೂಲಕ ಅದ್ದೂರಿ ಧಾರಾವಾಹಿಯೊಂದು ನಿರ್ಮಾಣವಾಗುತ್ತಿದೆ. ಹತ್ತೊಂಭತ್ತಕ್ಕೂ ಅಧಿಕ ಮುಖ್ಯಪಾತ್ರಧಾರಿಗಳಿರುವ ಈ ಧಾರಾವಾಹಿಯಲ್ಲಿ ಎಪ್ಪತ್ತಕ್ಕೂ ಅಧಿಕ ಕಲಾವಿದರು ಅಭಿನಯಿಸುತ್ತಿದ್ದಾರೆ.
ಮೊಟ್ಟಮೊದಲ ಬಾರಿಗೆ ರಾಘವೇಂದ್ರ ರಾಜಕುಮಾರ್ ಅವರು ಧಾರಾವಾಹಿಯೊಂದನ್ನು ನಿರ್ಮಾಣ ಮಾಡುತ್ತಿರುವುದು ವಿಶೇಷ. ಈ ಅದ್ದೂರಿ ದೃಶ್ಯ ಕಾವ್ಯ “ವಿಜಯ ದಶಮಿ”ಯ ಚಿತ್ರೀಕರಣ ಭಾರತದಾದ್ಯಂತ ಅದ್ಭುತ ಸ್ಥಳಗಳಲ್ಲಿ ನಡೆಯಲಿದೆ. ಪ್ರತಿ ಸೋಮವಾರದಿಂದ ಶುಕ್ರವಾರ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ. ಈ ಧಾರಾವಾಹಿಯ ಪ್ರೋಮೊ ನೋಡಿದರೆ, ಕಮರ್ಷಿಯಲ್ ಚಿತ್ರವೊಂದರ ಟ್ರೇಲರ್ ನೋಡಿದ ಅನುಭವವಾಗುತ್ತದೆ. ಅಷ್ಟು ಅದ್ದೂರಿಯಾಗಿ ಮೂಡಿಬಂದಿದೆ ಪ್ರೋಮೊ..ಧಾರಾವಾಹಿ ಕೂಡ ಎಲ್ಲರ ಮೆಚ್ಚುಗೆ ಪಡೆಯಲಿದೆ ‌ಎಂಬ ಭರವಸೆ ತಂಡದ್ದು. ಶಶಿ ಈ ಧಾರಾವಾಹಿಯ ನಿರ್ದೇಶಕರು.

ಅಮ್ಮ – ಮಗಳ ವಾತ್ಸಾಲ್ಯದ ” ಅಮ್ಮನ ಮದುವೆ ” ಧಾರಾವಾಹಿ ಸಹ ಇದೇ ಆಗಸ್ಟ್ 1ರ ಸೋಮವಾರದಿಂದ ರಾತ್ರಿ 8 ಕ್ಕೆ ಆರಂಭವಾಗಲಿದೆ. ನ್ಯೂ D2 ಮಿಡಿಯಾ ನಿರ್ಮಾಣ ಮಾಡುತ್ತಿದೆ. ಮದುವೆಯಾಗಿ ಜೀವನರೂಪಿಸಿಕೊಳ್ಳಲು ಹೊರಟ ಮಗಳು ,‌ತಾಯಿಯ ಒಂಟಿತನಕ್ಕೆ ಉತ್ತರವಾಗಿ ಅವಳಿಗೊಂದು ಬದುಕು ಕಟ್ಟಿಕೊಡಲು ನಡೆಸುವ ಹೋರಾಟದ ಭಾವುಕ ಕಥೆ ಇದಾಗಿದೆ.

ಈ ಎರಡು ಧಾರಾವಾಹಿಗಳ ಕುರಿತು ಮಾಹಿತಿ ನೀಡಲು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಘವೇಂದ್ರ ರಾಜಕುಮಾರ್, ಮಂಗಳ ರಾಘವೇಂದ್ರ ರಾಜಕುಮಾರ್, ಸಿರಿಕನ್ನಡದ ಸಂಸ್ಥಾಪಕ ನಿರ್ದೇಶಕರಾದ ಸಂಜಯ್ ಶಿಂಧೆ, ಮುಖ್ಯಸ್ಥರಾದ ರಾಜೇಶ್ ರಾಜಘಟ್ಟ ಹಾಗೂ ಅಪಾರ ಸಂಖ್ಯೆಯ ಕಲಾವಿದರು ಉಪಸ್ಥಿತರಿದ್ದರು. ನಿರ್ದೇಶಕರಾದ ಸುನೀಲ್ ಕುಮಾರ್ ದೇಸಾಯಿ, ಚೇತನ್ ಕುಮಾರ್, ಸೇತುರಾಮ್, ಕಿಶೋರ್ ಮುಂತಾದ ಗಣ್ಯರು ಆಗಮಿಸಿ ಶುಭ ಕೋರಿದರು.

Related posts