Cinisuddi Fresh Cini News 

ಶುಭಾಪೂಂಜಾಗೆ ಕೂಡಿಬಂತು ಕಂಕಣಭಾಗ್ಯ

ಚಂದನವನಕ್ಕೆ ಈಗ ಶುಭ ಕಾಲ ಕೂಡಿ ಬಂದಿದೆ. ನಟೀಮಣಿಯರಾಗಿ ಬೆಳ್ಳಿಪರದೆಯ ಮೇಲೆ ಮಿಂಚುತ್ತಿದ್ದ ನಾಯಕಿಯರು ಕಲ್ಯಾಣವಾಗುವ ಮೂಲಕ ನಿಜ ಜೀವನದಲ್ಲಿ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಲು ಹೊರಟಿದ್ದಾರೆ.

ಇತ್ತೀಚೆಗಷ್ಟೇ ಕೃಷ್ಣಲೀಲಾ ನಟಿ ಮಯೂರಿಗೆ ಕಂಕಣಭಾಗ್ಯ ಕೂಡಿಬಂದಿದ್ದರೆ, ಕಿರುತೆರೆ ನಟಿ ನವ್ಯಾರಾವ್ ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೊಗ್ಗಿನ ಮನಸು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಶುಭಾಪೂಂಜಾ ಮದುವೆಯಾಗಲು ಹೊರಟಿದ್ದಾರೆ.

ಬಹಳ ದಿನಗಳಿಂದಲೂ ಶುಭಾಳ ಮದುವೆ ಯಾವಾಗ ಎಂಬ ಸುದ್ದಿಗಳು ಕೂಡ ಕೇಳಿಬಂದಿದ್ದವು, ಅದಕ್ಕೆ ಈಗ ಉತ್ತರ ಸಿಕ್ಕಿದ್ದು ಸದ್ಯದಲ್ಲೇ ಶುಭಾ ತನ್ನ ದೀರ್ಘಕಾಲದ ಗೆಳೆಯ ಮಂಗಳೂರು ಮೂಲದ ಸುಮಂತ್ ಮಹಾಬಲರ ಕೈ ಹಿಡಿಯಲಿದ್ದಾರೆ.

ಸುಮಂತ್ ಜಯಕರ್ನಾಟಕ ಸಂಘಟನೆಯ ಬೆಂಗಳೂರು ದಕ್ಷಿಣ ವಲಯದ ಅಧ್ಯಕ್ಷರಾಗಿ ಸಮಾಜಸೇವೆಯಲ್ಲಿ ತೊಡಗಿರುವುದರೊಂದಿಗೆ ತಮ್ಮದೇ ಆದ ಸ್ವಂತ ಉದ್ಯಮವನ್ನು ಹೊಂದಿದ್ದು ಬಹಳ ಕಾಲದವರೆಗೂ ಶುಭಾರೊಂದಿಗೆ ಉತ್ತಮ ಗೆಳೆತನವನ್ನು ಹೊಂದಿದ್ದರು.

ಜಯಕರ್ನಾಟಕದ ಹಲವು ಕಾರ್ಯಕ್ರಮಗಳಲ್ಲಿ ಸುಮಂತ್‍ರೊಂದಿಗೆ ಕಾಣಿಸಿಕೊಂಡಿದ್ದ ಶುಭಾಪೂಂಜಾಗೆ ಮಹಾಬಲರೊಂದಿಗೆ ಕ್ರಮೇಣ ಪ್ರೇಮ ಅಂಕುರವಾಗಿದ್ದು ವಿವಾಹವಾಗಲು ನಿಶ್ಚಯಿಸಿ ಎರಡು ಕುಟುಂಬದವರಲ್ಲೂ ತಮ್ಮ ಪ್ರೇಮದ ಬಗ್ಗೆ ಹೇಳಿಕೊಂಡಿದ್ದು ಇವರ ವಿವಾಹಕ್ಕೆ ಸಮ್ಮತಿಸಿದ್ದಾರೆ.

ಶುಭಾಪೂಂಜಾ ಹಾಗೂ ಸುಮಂತ್‍ರ ವಿವಾಹವನ್ನು ಡಿಸೆಂಬರ್‍ನಲ್ಲಿ ನೆರವೇರಿಸಲು ನಿಶ್ಚಯಿಸಿದ್ದು ಈ ವರ್ಷವೇ ಶುಭಾ ವಿವಾಹ ಜೀವನಕ್ಕೆ ಅಡಿಯಿಡಲಿದ್ದಾರೆ.

ಇವರ ವಿವಾಹವನ್ನು ಮಂಗಳೂರು ಹಾಗೂ ಬೆಂಗಳೂರಿನಲ್ಲಿ ನಡೆಸಲು ಯೋಚಿಸಿದ್ದು ಮಂಗಳೂರಿನಲ್ಲಿ ವಿವಾಹದ ಕಾರ್ಯಕ್ರಮಗಳು ನಡೆದರೆ, ಬೆಂಗಳೂರಿನಲ್ಲಿ ಆರತಕ್ಷತೆಯನ್ನು ಆಯೋಜಿಸಲಾಗುವುದು ಎಂದು ಶುಭಾ ಹಾಗೂ ಸುಮಂತ್‍ರ ಕುಟುಂಬದವರು ನಿರ್ಧರಿಸಿದ್ದಾರೆ.

ಮಂಗಳೂರು ಮೂಲದ ತುಳುವ ಜನಾಂಗಕ್ಕೆ ಸೇರಿದ ಶುಭಾಪೂಂಜಾ ಆರಂಭದಲ್ಲಿ ಮಾಡೆಲ್ ಆಗಿ ಗುರುತಿಸಿಕೊಳ್ಳುವ ಮೂಲಕ ಚಿತ್ರರಂಗದತ್ತಲೂ ಗಮನ ಹರಿಸಿದರು.

ದುಶಾಂತ್ ನಟಿಸಿದ್ದ ಮಚ್ಚಿ ಎಂಬ ತಮಿಳು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದ ಶುಭಾ ನಂತರ ತಿರುಡಿಯಾ ಇಧಾಯತೈ ಸಿನಿಮಾದಲ್ಲಿ ನೀಡಿದ ಅಭಿನಯದಿಂದಾಗಿ ಜಾಕ್‍ಪಾಟ್ ಎಂಬ ಸಿನಿಮಾದಲ್ಲಿ ಬಣ್ಣ ಹಚ್ಚುವ ಅವಕಾಶ ದೊರೆಯಿತು.

ಜಾಕ್‍ಪಾಟ್ ನಂತರ ಮೊಗ್ಗಿನ ಮನಸ್ಸಿನಲ್ಲಿ ಹಳ್ಳಿಯ ಮುಗ್ಧ ಕಾಲೇಜು ಹುಡುಗಿಯಾಗಿ ಗಮನ ಸೆಳೆದ ಶುಭಾಪೂಂಜಾ ಆ ಚಿತ್ರದ ನಟನೆಗಾಗಿ ಫಿಲಂ ಅವಾರ್ಡ್ ಗಿಟ್ಟಿಸಿಕೊಂಡು ಕನ್ನಡಕ್ಕೊಬ್ಬ ಅದ್ಭುತ ನಟಿ ಸಿಕ್ಕರೆಂಬ ಭರವಸೆ ಮೂಡಿಸಿದರು.

ಮೊಗ್ಗಿನ ಮನಸ್ಸಿನ ನಂತರ ಸ್ಯಾಂಡಲ್‍ವುಡ್‍ನಲ್ಲಿ ಬಲುಬೇಡಿಕೆಯ ನಟಿಯಾದ ಶುಭಾಪೂಂಜಾ ಚಂಡ, ಸ್ಲಂಬಾಲಾ, ಅಂಜದಿರು, ತಾಕತ್, ಪ್ರೀತಿ ಹಂಗಮ, ಕಂಠೀರವ, ಗೂಗಲ್ ಮುಂತಾದ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದರು.

ಈಗಲೂ ಬ್ಯುಸಿ ನಟಿಯಾಗಿರುವ ಶುಭಾಪೂಂಜಾಳ ಕೈಯಲ್ಲಿ ಖಾಲಿ ದೋಸೆ ಕಲ್ಪನಾ, ತ್ರಿದೇವಿ ಎಂಬ ಚಿತ್ರಗಳಿದ್ದು ಡಿಸೆಂಬರ್ ವೇಳೆಗೆ ಅದರ ಶೂಟಿಂಗ್ ಅನ್ನು ಮುಗಿಸಲು ಯೋಚಿಸಿರುವ ಪೂಂಜಾ ಮದುವೆಯ ನಂತರವೂ ಬಣ್ಣದ ಲೋಕದಲ್ಲಿ ಮುಂದುವರೆಯುವಂತಾಗಲಿ.

Related posts