Cinisuddi Fresh Cini News 

ಸ್ಯಾಂಡಲ್‌ವುಡ್‌ನಲ್ಲೊಂದು ‘ಶ್ರೀಮಂತ’ ಚಿತ್ರ..!

ಯುಗಾದಿ ಎಂದರೆ ಹೊಸ ವರ್ಷದ ಹಾದಿ. ಈ ದಿನವು ರೈತರಿಗೆ ಉಲ್ಲಾಸದ ದಿನ. ಅದರಲ್ಲೂ ನಮ್ಮ ದೇಶದಲ್ಲಿ ಅನ್ನದಾತನನ್ನು ನಿಜವಾದ ವಿಜ್ಞಾನಿ, ದೇಶದ ಬೆನ್ನೆಲುಬು, ಬೇರೊಬ್ಬರಿಗೆ ಅನ್ನ ನೀಡುವ ನಿಜವಾದ ಶ್ರೀಮಂತ ಎಂದು ನಾನಾ ರೀತಿಯಿಂದ ಬಣ್ಣಿಸುತ್ತಾರೆ.

ನಮ್ಮ ರಾಜ್ಯದಲ್ಲಿ ಮಂಡ್ಯ, ಹಾಸನ, ಕೊಳ್ಳೇಗಾಲದಲ್ಲಿ ರೈತರ ಜೀವನಾಡಿಯೇ ಹೆಚ್ಚು. ಈಗ ಇದೇ ಪ್ರಾಂತ್ಯದಲ್ಲಿ ನಿರ್ದೇಶಕ ಹಾಸನ್ ರಮೇಶ್ ಅವರು ಶ್ರೀಮಂತ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಯುಗಾದಿ ಹಬ್ಬದ ದಿನದಂದೇ ಎಸ್.ಬಿ.ಬಾಲಸುಬ್ರಮಣ್ಯಂ ಹಾಡಿರುವ ರೈತ ನಮ್ಮ ಬಾಳಿನ ಭಾಗ್ಯವಿದಾತ ಎನ್ನುವ ಒಂದು ಗೀತೆಯನ್ನು ನಾದಬ್ರಹ್ಮ ಹಂಸಲೇಖರವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಮಂಡ್ಯ, ಹಾಸನ, ಕೊಳ್ಳೇಗಾಲದಲ್ಲಿ ಶೇ. 80ರಷ್ಟು ಚಿತ್ರೀಕರಣವು ಮುಗಿಸಿಕೊಂಡಿರುವ ಶ್ರೀಮಂತ ಚಿತ್ರತಂಡವು ಎರಡು ಹಾಡು ಹಾಗೂ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಚಿತ್ರೀಕರಿಸಿ ಶೀಘ್ರವೇ ಬೆಳ್ಳಿಪರದೆಗೆ ಬರಲು ಸಜ್ಜಾಗುತ್ತಿದೆ.

ಶ್ರೀಮಂತ ಚಿತ್ರವು ಹಳ್ಳಿಗಾಡಿನ ಚಿತ್ರವಾಗಿರುವುದರಿಂದ ಹಳ್ಳಿಯಲ್ಲಿ ನಡೆಯುವುದರಿಂದ ರೈತರಿಂದಲೇ ಹಬ್ಬ, ಉತ್ಸವ, ಜಾತ್ರೆ, ಸಂತೋಷ, ಸಂಭ್ರಮ ಎಲ್ಲವೂ ಬಂದಿರೋದು, ಸರ್ಕಾರಗಳು, ಬಂಡವಾಳಶಾಹಿಗಳು ಕೂಡ ರೈತರನ್ನೇ ಅವಲಂಬಿಸಿದ್ದಾರೆ ಎಂದು ಹೇಳಲು ಹೊರಟಿದ್ದಾರೆ ಹಾಸನ್ ರಮೇಶ್.

ಶ್ರೀಮಂತ ಚಿತ್ರಕ್ಕೆ ಹಾಸನ್ ರಮೇಶ್ ಅವರೇ ಕತೆ, ಚಿತ್ರಕತೆ ಬರೆದು ಸಂಭಾಷಣೆಯನ್ನು ಒದಗಿಸಿದ್ದಾರೆ. ಚಿತ್ರದಲ್ಲಿರುವ 9 ಹಾಡುಗಳಿಗೆ ನಾದಬ್ರಹ್ಮರ ಇಂಪಾದ ಸಂಗೀತ, ವಿಷ್ಣುವರ್ಧನ್, ರವಿಕುಮಾರ್‍ಸನ ಛಾಯಾಗ್ರಹಣ, ಮದನ್- ಹರಿಣಿ ನೃತ್ಯ, ಮಾಸ್ ಮಾದ ಸಾಹಸ, ಕೆ.ಎಂ.ಪ್ರಕಾಶ್ ಸಂಕಲನವಿದ್ದು ವರ್ತೂರು ಮೂಲದ ಜಿ.ನಾರಾಯಣಪ್ಪ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಎಂಟ್ರಿ ಕೊಟ್ಟಿದ್ದಾರೆ.

ನಾಯಕನಾಗಿ ಕ್ರಾಂತಿ, ಬಾಂಬೆಮೂಲದ ವೈಷ್ಣವಿಪಟವರ್ಧನ್, ವೈಷ್ಣವಿಚಂದ್ರನ್ ನಾಯಕಿಯರು. ಇವರೊಂದಿಗೆ ಚರಣ್‍ರಾಜ್, ರಮೇಶ್‍ಭಟ್, ರಾಜುತಾಳಿಕೋಟೆ, ಕಲ್ಯಾಣಿ, ಗಿರಿ, ಸಾಧುಕೋಕಿಲ, ಕುರಿರಂಗ ಮುಂತಾದವರು ಅಭಿನಯಿಸುತ್ತಿದ್ದಾರೆ.

ಶ್ರೀಮಂತ ಎಂಬ ಚಿತ್ರದ ಮೂಲಕ ಅನ್ನದಾತನೇ ದೇಶದ ನಿಜವಾದ ಶ್ರೀಮಂತನೆಂದು ಬಿಂಬಿಸಲು ಹೊರಟಿರುವ ಹಾಸನ್ ರಮೇಶ್‍ಗೆ ಈ ಚಿತ್ರ ಗೆಲುವು ತಂದುಕೊಡುವಂತಾಗಲಿ.

Share This With Your Friends

Related posts