Cinisuddi Fresh Cini News 

“ಶ್ರೀ ಜಗನ್ನಾಥದಾಸರ” ಸಿನಿಮಾ ಹಾಗೂ ಧಾರಾವಾಹಿಗೆ  ಮಂತ್ರಾಲಯ ಶ್ರೀಗಳಿಂದ ಚಾಲನೆ.

ಶ್ರೀ ಮಾತಾಂಬುಜಾ ಮೂವೀಸ್ ಲಾಂಛನದಲ್ಲಿ ಮಧುಸೂದನ್ ಹವಾಲ್ದಾರ್ ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಶ್ರೀಜಗನ್ನಾಥದಾಸರು ಎಂಬ ಚಲನಚಿತ್ರ ಹಾಗೂ ಧಾರಾವಾಹಿಯ ಮುಹೂರ್ತ ಕಾರ್ಯಕ್ರಮ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಕಳೆದ ಸೋಮವಾರ ನೆರವೇರಿತು. ಮಂತ್ರಾಲಯ ಮಠಾಧೀಶರಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀ ಪಾದಂಗಳವರು ಈ ಚಿತ್ರದ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡುವುದರ ಮೂಲಕ ಚಿತ್ರ ಹಾಗೂ ಧಾರಾವಾಹಿಯ ಚಿತ್ರೀಕರಣಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.

ಜಗನ್ನಾಥದಾಸರು ಶ್ರೀ ರಾಘವೇಂದ್ರ ಶ್ರೀಗಳ ಅನುಯಾಯಿಗಳು. ಅವರ ಬಾಲ್ಯದ ಜೀವನ, ಯೌವ್ವನ ಹಾಗ ಆಧ್ಯಾತ್ಮಿಕ ಜೀವನದ ಕುರಿತಂತೆ ರಚಿಸಲಾಗಿರುವ ಕಥಾಸಾರವನ್ನು ಈ ಚಿತ್ರದ ಮೂಲಕ ನಿರ್ದೇಶಕ ಮಧುಸೂದನ್ ಅವರು ಹೇಳಹೊರಟಿದ್ದಾರೆ. ಕಳೆದ 25 ವರ್ಷಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಮಧುಸೂದನ್ ಹವಾಲ್ದಾರ್ ಆರಂಭದಲ್ಲಿ ಟಿಎನ್ ಸೀತಾರಾಂ ಅವರ ಸಹಾಯಕ ನಿರ್ದೇಶಕರಾಗಿದ್ದರು, ನಂತರ ಕೆಲವು ತೆಲುಗು ಚಿತ್ರಗಳನ್ನು ನಿರ್ದೇಶಿಸಿದ್ದರಲ್ಲದೆ, ಕೆಲ ಕಿರುಚಿತ್ರಗಳನ್ನೂ ಸಹ ನಿರ್ದೇಶಿಸಿದ್ದಾರೆ. ಕನ್ನಡದಲ್ಲಿ ಇದು ಅವರ ಮೊದಲಚಿತ್ರ.

ಹರಿಕಥಾಮೃತಸಾರದಂಥ ಉತ್ಕೃಷ್ಟ ಕಾವ್ಯವನ್ನು ಜಗತ್ತಿಗೆ ನೀಡಿದಂಥ ಜಗನ್ನಾಥದಾಸರ ಕುರಿತಾದ ಈ ಕಥೆಯನ್ನು ಚಲನಚಿತ್ರ ಹಾಗೂ ಕಿರುತೆರೆ ಧಾರಾವಾಹಿ ರೂಪದಲ್ಲೂ ಸಹ ತರಬೇಕೆಂಬ ಉದ್ದೇಶ ಇಟ್ಟುಕೊಂಡು ಈ ಎರಡೂ ಪ್ರಕ್ರಿಯೆಗಳಿಗೆ ಚಾಲನೆ ನೀಡಿದ ಶ್ರೀ ಸುಬುಧೇಂದ್ರ ತೀರ್ಥರು ಚಿತ್ರತಂಡಕ್ಕೆ ಹಾಗೂ ಕಲಾವಿದರಿಗೆ ಶುಭಾಶೀರ್ವಾದ ನೀಡಿದರು.

ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ಮಧುಸೂದನ್ ಪುರಂದರದಾಸರು, ಕನಕದಾಸರು, ರಾಘವೇಂದ್ರ ಶ್ರೀಗಳ ಕುರಿತಂತೆ ಚಲನಚಿತ್ರಗಳು ಈಗಾಗಲೇ ನಿರ್ಮಾಣವಾಗಿವೆ. ಆದರೆ ಮಹಾನ್ ಕೃತಿಗಳನ್ನು ರಚಿಸಿದಂಥ ಜಗನ್ನಾಥದಾಸರ ಜೀವನ ಕುರಿತಂತೆ ಯಾರೂ ಸಹ ಚಲನಚಿತ್ರ ಮಾಡಿಲ್ಲ. ಈ ಕುರಿತಂತೆ ಜೆ.ಎಂ.ಪ್ರಹ್ಲಾದ್ ಅವರ ಜೊತೆ ಕೂಲಂಕುಶವಾಗಿ ಚರ್ಚಿಸಿ ಸಂಪೂರ್ಣ ಚಿತ್ರಕಥೆಯನ್ನು ಸಿದ್ದಪಡಿಸಿಕೊಂಡು, ಅದಕ್ಕೆ ಸರಿಯಾದ ಪಾತ್ರಧಾರಿಗಳನ್ನು ಹುಡುಕಿ ಈಗ ಚಿತ್ರೀಕರಣಕ್ಕೆ ಹೊರಟಿದ್ದೇವೆ.

ರಾಯರ ಮಠದಲ್ಲಿ ಮೂರು ದಿನಗಳ ಕಾಲ ಚಿತ್ರೀಕರಿಸಿ ನಂತರ ಮಾನವಿಯಲ್ಲಿ ಶೂಟಿಂಗ್ ಮಾಡುವುದೆಂದು ಯೋಜನೆ ಹಾಕಿಕೊಂಡಿದ್ದೆವು, ಆದರೆ ಎಲ್ಲಿ ನೋಡಿದರೂ ಸಿಮೆಂಟ್ ಕಟ್ಟಡಗಳೇ ಕಾಣಿಸುವುದರಿಂದ ಶೇ.90ರಷ್ಟು ಭಾಗವನ್ನು ಗ್ರಾಫಿಕ್ಸ್ ನಲ್ಲೇ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ಹಾಗಾಗಿ ಬೆಂಗಳೂರಿನ ಹನುಮಂತನಗರದಲ್ಲಿ ಒಂದು ಫ್ಲೋರ್‌ನ್ನು ತೆಗೆದುಕೊಂಡು ಅಲ್ಲಿ ಗ್ರೀನ್‌ಮ್ಯಾಟ್‌ನಲ್ಲಿ ಸಂಪೂರ್ಣ ಚಿತ್ರವನ್ನು ಸುಮಾರು 90 ದಿನಗಳ ಕಾಲ ಚಿತ್ರೀಕರಿಸಬೇಕೆಂದು ತೀರ್ಮಾನಿಸಿದ್ದೇವೆ.

ಅಲ್ಲದೆ ನೀನಾಸಂ ಪ್ರತಿಭೆ ಶರತ್ ಜೋಷಿ ಅವರನ್ನು ಜಗನ್ನಾಥದಾಸರ ಪಾತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದೇವೆ, ಉಳಿದಂತೆ ಹಿರಿಯ ಕಲಾವಿದರಾದ ರಮೇಶ್‌ಭಟ್, ಸುಧಾರಾಣಿ, ಸುಚೇಂದ್ರ ಪ್ರಸಾದ್, ಶಿವರಾಮಣ್ಣ ಸೇರಿದಂತೆ ಸಾಕಷ್ಟು ಕಲಾವಿದರು ನಮ್ಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಾವು ಜಗನ್ನಾಥದಾಸರ ಪಾತ್ರಕ್ಕಾಗಿ ಹುಡುಕಾಟ ನಡೆಸುತ್ತಿರುವಾಗ ಶರತ್‌ಜೋಷಿ ಕಾಲಿಗೆ ಸಿಕ್ಕ ಬಳ್ಳಿಯಂತೆ ಸಿಕ್ಕರು. ಅವರಿಗೆ ಕಾಸ್ಟುಮ್ ಹಾಕಿ ನೋಡಿದಾಗ ಸಾಕ್ಷಾತ್ ಜಗನ್ನಾಥದಾಸರೇ ಎದುರು ನಿಂತ ಹಾಗಿತ್ತು. ಅಲ್ಲದೆ ಚಿತ್ರವನ್ನು ಇದೇ ಆಗಸ್ಟ್ ನಲ್ಲಿ ಬಿಡುಗಡೆ ಮಾಡುವುದಾಗಿ6 ಹಾಗೂ ಧಾರಾವಾಹಿಯನ್ನು ಜಗನ್ನಾಥದಾಸರ ಆರಾಧನೆ ಸಮಯದಲ್ಲಿ ಪ್ರಸಾರ ಮಾಡಬೇಕೆಂದು ನಿರ್ಧರಿಸಿದ್ದೇವೆ.

ದಾಸಸಾಹಿತ್ಯ ಪರಂಪರೆಯಲ್ಲಿ ತುಂಬಾ ಉತ್ಕೃಷ್ಟವಾಗಿ ಬರೆದಂಥವರು ಜಗನ್ನಾಥದಾಸರು. ಅವರ ಕಥೆಯನ್ನು ತೆರೆಮೇಲೆ ತರಬೇಕೆಂಬುದು ನಮ್ಮ ಬಹುದಿನಗಳ ಬಯಕೆಯಾಗಿತ್ತು. ಇದಾದನಂತರ ಶ್ರೀಪಾದರಾಜರು ಸೇರಿದಂತೆ ಹಲವಾರು ಮಹಿಮಾ ಪುರುಷರ ಕಥೆಗಳನ್ನು ತೆರೆಮೇಲೆ ತರಬೇಕೆಂಬ ಉದ್ದೇಶ ಇಟ್ಟುಕೊಂಡಿದ್ದೇನೆ. ದಾಸಸಾಹಿತ್ಯವನ್ನು ಪ್ರೀತಿಸುವವರು ಹಾಗೂ ಕನ್ನಡಿಗರು ನಮ್ಮನ್ನು ಕೈಬಿಡುವುದಿಲ್ಲ ಎಂಬ ನಂಬಿಕೆಯಿಂದ ಈ ಚಿತ್ರ ಮಾಡುತ್ತಿದ್ದೇನೆ.

ರಾಘವೇಂದ್ರ ಶ್ರೀಗಳ ಪಾತ್ರವನ್ನು ರಾಯಚೂರಿನ ಸಿದ್ದಪ್ಪ ಎನ್ನುವವರು ಮಾಡುತ್ತಿದ್ದು, ವಿಠ್ಠಲನ ಪಾತ್ರಕ್ಕೆ ಅಜಿತ್‌ಕುಮಾರ್ ಆಯ್ಕೆಯಾಗಿದ್ದಾರೆ ಎಂದು ಹೇಳಿದರು. ಜಗನ್ನಾಥದಾಸರು ಬರೆದ ಸಾಹಿತ್ಯವನ್ನೇ ಚಿತ್ರದಲ್ಲಿ ಬಳಸಿಕೊಳ್ಳುತ್ತಿದ್ದೇವೆ, ಅಲ್ಲದೆ ಧಾರಾವಾಹಿಯ 32 ಕಂತುಗಳಲ್ಲಿ 25ಕ್ಕೂ ಹೆಚ್ಚು ಸಾಹಿತ್ಯವನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು. ತಮಿಳು, ತೆಲುಗಿನಲ್ಲೂ ಸಹ ಈ ಧಾರಾವಾಹಿಯನ್ನು ಡಬ್ ಮಾಡಲಾಗುತ್ತಿದೆ. ಹೈದರಾಬಾದ್‌ನ ವಿವಿ ಜೋಷಿ ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ.

Related posts