“ಶೋಕಿವಾಲ” ಚಿತ್ರ ಹೇಗಿದೆ..? ಇಲ್ಲಿದೆ ಚಿತ್ರವಿಮರ್ಶೆ (ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಶೋಕಿವಾಲ
ನಿರ್ದೇಶಕ : ಜಾಕಿ
ನಿರ್ಮಾಪಕ : ಡಾ. ಟಿ .ಆರ್. ಚಂದ್ರಶೇಖರ್
ಸಂಗೀತ : ಶ್ರೀಧರ್. ವಿ. ಸಂಭ್ರಮ್
ಛಾಯಾಗ್ರಾಹಕ : ಎಸ್.ನವೀನ್ ಕುಮಾರ್
ತಾರಾಗಣ : ಅಜಯ್ ರಾವ್, ಸಂಜನಾ ಆನಂದ್, ಅರುಣಾ ಬಾಲರಾಜ್ , ಚಂದನ, ತಬಲಾನಾಣಿ, ಶರತ್ ಲೋಹಿತಾಶ್ವ , ಮುನಿ, ಪ್ರಮೋದ್ ಶೆಟ್ಟಿ ಹಾಗೂ ಮುಂತಾದವರು…
ಈ ಭೂಮಿ ಮೇಲೆ ಜೀವನ ನಡೆಸುವ ಪ್ರತಿಯೊಬ್ಬ ಮನುಷ್ಯನಿಗೂ ಅವನೆದೆಯಾದಂತ ಆಸೆ , ಆಕಾಂಕ್ಷೆಗಳು ಜೊತೆಗೆ ಬದುಕುವ ಶೈಲಿಯನ್ನು ರೂಪಿಸಿಕೊಳ್ಳುವ ತವಕನ್ನ ಹೊಂದಿರುತ್ತಾರೆ. ಹಳ್ಳಿ ಅಂದ್ಮೇಲೆ ಊರ ಯಜಮಾನ , ಅಲ್ಲೊಂದಿಷ್ಟು ಗತ್ತು, ಗೈರತ್ತು, ಇದರ ನಡುವೆ ಪಡ್ಡೆ ಹೈಕ್ಲ ತುಂಟಾಟ, ತರಲೆ ಜೊತೆಗೆ ಎಲ್ಲರ ಕಣ್ಣು ನನ್ನ ಮೇಲೆ ಅನ್ನೋ ಹಾಗೆ… ಚೆಂದುಳ್ಳಿ ಚೆಲುವೆಯರ ಓಡಾಟ , ಕಣ್ಣು ನೋಡು ಅಂತದೇ , ಮನಸ್ಸು ಬೇಡ ಅಂತದೇ, ಎಂಬುವರ ಮಧ್ಯೆ ಬದುಕು. ಕುಟುಂಬಗಳ ಹಗ್ಗಜಗ್ಗಾಟ , ಪ್ರೀತಿಸುವ ಹೃದಯಗಳ ತೊಳಲಾಟ , ಪೋಲಿಸರಿಗೆ ಪೀಕಲಾಟ , ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಏರಿಳಿತಗಳ ಅಬ್ಬರದ ನಡುವೆ ಸಾಗುವ ಕಥಾಹಂದರವೇ ಶೋಕಿವಾಲ.
ಆರಂಭದಲ್ಲೇ ಭರ್ಜರಿ ಬಾಡೂಟದ ದರ್ಶನದೊಂದಿಗೆ ತೆರೆದುಕೊಳುವ ಕಥಾಹಂದರ. ಯಾವ ಪುರುಷಾರ್ಥಕ್ಕೆ ಎಂಬ ಪ್ರಶ್ನೆ ಹುಟ್ಟುತ್ತಿರುವಾಗಲೇ ಅಲ್ಲೊಂದು ತಾಯಿಯ ರೋಧನದ ಕಥೆ,ವ್ಯಥೆ. ಪೊಲೀಸರ ಎದುರು ನ್ಯಾಯ ಕೇಳಲು ಮುಂದಾಗುವ ನಾಯಕನ ತಾಯಿ (ಅರುಣಾ ಬಾಲರಾಜ್) ಫ್ಲ್ಯಾಶ್ ಬ್ಯಾಕ್ ಕತೆಯನ್ನು ಹೇಳುತ್ತಾಳೆ. ಕಥಾ ನಾಯಕ ಕೃಷ್ಣ (ಅಜಯ್ ರಾವ್) ತನ್ನ ಊರಲ್ಲಿ ಸದಾ ಶೋಕಿ ಮಾಡುತ್ತಾ ಹುಡುಗಿಯರ ಹಿಂದೆ ಅಲೆಯುವ ಚಿರ ಯುವಕ.
ತನ್ನದೇ ಪಡ್ಡೆ ಗ್ಯಾಂಗ್ ಕಟ್ಟಿಕೊಂಡು ತಾನು ಮಾಡಿದ್ದೇ ಸರಿ ಎಂದು ಮುಂದೆ ಸಾಗುವ ಕೃಷ್ಣ. ಇವನೊಬ್ಬ ಶೋಕಿವಾಲನೇ ಆದರೂ ಯಾವುದೇ ಹುಡುಗಿಯನ್ನು ಯಾಮಾರಿಸಿದವನಲ್ಲ, ಮೋಸ ಮಾಡಿದವನಲ್ಲ, ಮನೆಯಲ್ಲಿ ಸದಾ ಮದ್ಯದ ಮತ್ತಿನಲ್ಲಿರುವ ತಂದೆ, ಕುಡುಕ ಗಂಡನನ್ನು ಬಿಟ್ಟು ಬಂದಿರುವ ಅಕ್ಕ, ಮಗನನ್ನು ಸದಾ ಮುದ್ದು ಮಾಡುವ ತಾಯಿ ಇವರೆಲ್ಲರ ಜವಾಬ್ದಾರಿ ತನ್ನ ಮೇಲಿದ್ದರೂ ಅದಾವುದನ್ನೂ ಮನಸಿಗೆ ಹಚ್ಚಿಕೊಳ್ಳದೆ ಇರುವ ಕೃಷ್ಣನ ಮುದ್ದಾದ ರಾಧೆ (ಸಂಜನಾ ಆನಂದ್) ಕಾಣಿಸಿಕೊಳ್ಳುತ್ತಾಳೆ.
ಏನೇ ಆಗಲಿ ಇವಳನ್ನೇ ಪ್ರೀತಿಸಬೇಕು ಎಂದು ನಿರ್ಧರಿಸಿ ಅವಳ ಹಿಂದೆ ಸುತ್ತಲು ಆರಂಭಿಸುತ್ತಾನೆ. ಇದಕ್ಕೆ ಗೆಳೆಯರ ಸಹಕಾರವೂ ಇರುತ್ತದೆ. ಇವಳು ಊರಗೌಡ (ಶರತ್ ಲೋಹಿತಾಶ್ವ)ರ ಮಗಳೆಂದು ತಿಳಿಯುತ್ತದೆ. ಅಂತಸ್ತಿಗಿಂತ ಪ್ರೀತಿ ಮುಖ್ಯ ಎಂದು ನಿರ್ಧರಿಸಿ ಅವಳನ್ನು ಒಲಿಸಲು ಮುಂದಾಗುತ್ತಾನೆ. ನಾನಾ ತುಂಟಾಟ , ತರ್ಲೆಗಳ ನಡುವೆ ನಾಯಕನ ಒಳ್ಳೆತನ, ಹೆಣ್ಣುಮಕ್ಕಳ ಮೇಲಿರುವ ಗೌರವವನ್ನು ಅರಿತು ನಾಯಕಿ ರಾಧೆ ಇಷ್ಟಪಡಲು ನಿರ್ಧರಿಸುತ್ತಾಳೆ.
ನಾಯಕಿಯ ತಂದೆಗೆ ವಿಷಯ ತಿಳಿದು ಮಗಳನ್ನ ಎಳೆದೊಯ್ಯುತ್ತಾನೆ. ಆದರೂ ಎಲ್ಲ ಅಡೆತಡೆಗಳ ನಡುವೆ ಕೃಷ್ಣ ರಾಧೆಯನ್ನು ಮದುವೆಯಾಗಿ ತನ್ನ ಮನೆಗೆ ಕರೆತಂದು ಸಂಸಾರ ಮಾಡುತ್ತಾನೆ. ಕುಟುಂಬದಲ್ಲಿ ಎದುರಾಗುವ ಬಿರುಕು, ಇದರ ನಡುವೆ ಅಳಿಯನನ್ನು ಮಾವ ಕೊಲ್ಲಲು ನಿರ್ಧರಿಸುತ್ತಾನೆ. ಹಾಗೆ ಮಗಳ ತಿಥಿಯನ್ನು ಮಡಲು ತೀರ್ಮಾನಿಸುತ್ತಾನೆ. ಬರಡು ಬಾವಿಯಲ್ಲಿ ಏರಡು ದೇಹಗಳು ಸುಟ್ಟು ಹಾಕಲಾಗಿರುತ್ತದೆ. ಇಲ್ಲಿಂದ ಕಥೆಗೆ ಮತ್ತೊಂದು ಟ್ವಿಸ್ಟ್ ತೆರೆದುಕೊಳ್ಳುತ್ತಾ ಹೋಗುತ್ತದೆ.
ಕೃಷ್ಣ ಹಾಗೂ ರಾಧೆ ಒಂದಾಗ್ತಾರಾ…
ಸುಟ್ಟ ದೇಹಗಳು ಯಾರದ್ದು …
ಶೋಕಿವಾಲ ನಾ ಸೂತ್ರಧಾರಿ…?
ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ನೀವೆಲ್ಲರೂ ಒಮ್ಮೆ ಈ ಚಿತ್ರವನ್ನ ಚಿತ್ರಮಂದಿರದಲ್ಲಿ ನೋಡಬೇಕು.
ಇಡೀ ಚಿತ್ರವನ್ನ ನಾಯಕ ಕೃಷ್ಣ ಅಜಯ್ ರಾವ್ ಆವರಿಸಿಕೊಂಡಿದ್ದಾರೆ. ಹಾಸ್ಯದ ಮಿಶ್ರಣದೊಂದಿಗೆ ಕಥೆ ಸಾಗುವ ಹಾದಿಯಲ್ಲಿ ಯುವತಿಯರನ್ನ ಪಟಾಯಿಸುವ ಪಾತ್ರದಲ್ಲಿ ಗಮನ ಸೆಳೆಯುವ ಕೃಷ್ಣ ಎದುರಾಗುವ ಸಂಕಷ್ಟಕ್ಕೆ ಭರ್ಜರಿ ಫೈಟ್ ಕೂಡ ಮಾಡಿದ್ದಾರೆ.
ಇನ್ನು ನಾಯಕಿಯಾಗಿ ಅಭಿನಯಿಸಿರುವ ಸಂಜನಾ ಆನಂದ್ ನೋಡಲು ಮುದ್ದು ಮುದ್ದಾಗಿ ಕಂಡರು ಪಾತ್ರಕ್ಕೆ ಮತ್ತಷ್ಟು ಪರಿಶ್ರಮ ಅಗತ್ಯ ಎನಿಸುತ್ತದೆ. ಡ್ಯಾನ್ಸ್ ನ ಲೀಲಾಜಾಲವಾಗಿ ಮಾಡಿರುವ ನಟಿ ತಕ್ಕಮಟ್ಟಿಗೆ ಅಭಿನಯವನ್ನು ನೀಡಿದ್ದಾರೆ.
ಉಳಿದಂತೆ ತಾಯಿ ಪಾತ್ರದಲ್ಲಿ ಅಭಿನಯಿಸಿರುವ ಅರುಣಾ ಬಾಲರಾಜ್ ಗಮನ ಸೆಳೆಯುತ್ತಾರೆ. ನಾಯಕನ ತಂದೆಯಾಗಿ , ಕುಡುಕ ಗಂಡನ ಪಾತ್ರದಲ್ಲಿ ನಾಗರಾಜ್ ಮೂರ್ತಿ ಉತ್ತಮವಾಗಿ ಪಾತ್ರಪೋಷಣೆ ನಿರ್ವಹಿಸಿದ್ದಾರೆ. ಅಕ್ಕನಾಗಿ ಚಂದನ , ಕುಡುಕ ಭಾವನಾಗಿ ತಬಲಾನಾಣಿ , ನಾಯಕಿಯ ತಂದೆಯ ಪಾತ್ರದಲ್ಲಿ ಶರತ್ ಲೋಹಿತಾಶ್ವ ಮಾವನಾಗಿ ಮುನಿ , ಪೊಲೀಸ್ ಅಧಿಕಾರಿಯಾಗಿ ಪ್ರಮೋದ್ ಶೆಟ್ಟಿ ಹಾಗೂ ಕಾನ್ ಸ್ಟೆಬಲ್ ಆಗಿ ರಾಕ್ ಲೈನ್ ಸುಧಾಕರ್ ಸೇರಿದಂತೆ ಎಲ್ಲ ಪಾತ್ರಗಳು ಜೀವ ತುಂಬಿ ಅಭಿನಯಿಸಿದ್ದಾರೆ.
ಇನ್ನೂ ಈ ಚಿತ್ರದಲ್ಲಿ ಯಾವುದೇ ಲಾಜಿಕ್ ಹುಡುಕದೆ ಮ್ಯಾಜಿಕ್ ರೂಪವಾಗಿ ಮನರಂಜನೆ ದೃಷ್ಟಿಯಿಂದ ಚಿತ್ರವನ್ನ ಅದ್ದೂರಿಯಾಗಿ ನಿರ್ಮಿಸಿದ್ದಾರೆ ಕ್ರಿಸ್ಟಲ್ ಪಾರ್ಕ್ ಸಿನಿಮಾ ನಿರ್ಮಾಪಕರಾದ ಡಾ.ಟಿ. ಆರ್. ಚಂದ್ರಶೇಖರ್.
ತನ್ನ ಪ್ರಥಮ ಪ್ರಯತ್ನದಲ್ಲೇ ಒಂದು ಹಾಸ್ಯಮಿಶ್ರಿತ, ಹಳ್ಳಿ ಸೊಗಡಿನ ಪ್ರೇಮಕಥೆ ಚಿತ್ರವನ್ನು ಬಹಳ ಅಚ್ಚುಕಟ್ಟಾಗಿ ತೆರೆಮೇಲೆ ತಂದಿದ್ದಾರೆ. ಈ ಚಿತ್ರದಲ್ಲಿ ಮನರಂಜನೆಗೆ ಹೆಚ್ಚು ಒತ್ತುಕೊಟ್ಟು ನಿರ್ದೇಶಕ ಜಾಕಿ ನಿರೂಪಣೆ ಮಾಡಿದ್ದಾರೆ. ಇಲ್ಲಿ ಯಾವುದೇ ಸಂದೇಶ ಅಂತೇನೂ ಇಲ್ಲ, ಕಾಮಿಡಿ ಜೊತೆಗೆ ಹಳ್ಳಿ ಸೊಗಡಿನ ಕಥೆಯಲ್ಲಿ ಕೊಂಚ ಸಂಭಾಷಣೆ ಅತಿ ಎನಿಸುತ್ತದೆ.
ಶೋಕಿವಾಲನ ಕಥೆಯಲ್ಲಿ ಇದ್ದ ಜಾಗದಲ್ಲೇ ಗಿರಕ್ಕಿ ಹೊಡೆದಂತೆ ಕಾಣಿಸುತ್ತದೆ. ಇನ್ನು ಸಂಗೀತ ನಿರ್ದೇಶಕ ಶ್ರೀಧರ್. ವಿ. ಸಂಭ್ರಮ್ ಅವರ ಕೆಲಸ ಅಚ್ಚುಕಟ್ಟಾಗಿದ್ದು ಒಂದು ಹಾಡು ಗುನುಗುವಂತಿದೆ. ಹಾಗೆಯೇ ಛಾಯಾಗ್ರಾಹಕ ಎಸ್. ನವೀನ್ ಕುಮಾರ್ ಕೆಲಸ ಸೊಗಸಾಗಿ ಮೂಡಿಬಂದಿದೆ. ತಾಂತ್ರಿಕ ವರ್ಗ ಹಾಗೂ ಕಲಾವಿದರ ಬಳಗ ಅಚ್ಚುಕಟ್ಟಾಗಿ ಕೆಲಸ ಮಾಡಿ ಗಮನ ಸೆಳೆದಿದ್ದಾರೆ. ಒಟ್ಟಾರೆ ಮನೋರಂಜನೆಯ ದೃಷ್ಟಿಯಿಂದ ಇಡೀ ಕುಟುಂಬ ಕುಳಿತು ಈ ಚಿತ್ರವನ್ನು ನೋಡಬಹುದು.