ಆ್ಯಕ್ಷನ್ , ಮಾಸ್ “ಶಿವಾರ್ಜುನ” (ಚಿತ್ರ ವಿಮರ್ಶೆ)
ಚಿತ್ರ : ಶಿವಾರ್ಜುನ
ನಿರ್ದೇಶಕ : ಶಿವತೇಜಸ್ ನಿರ್ಮಾಪಕ : ಮಂಜುಳ ಶಿವಾರ್ಜುನ್
ಸಂಗೀತ : ಸುರಾಗ್ ಕೋಕಿಲಾ
ಛಾಯಾಗ್ರಹಣ : ಎಚ್. ಸಿ. ವೇಣು
ತಾರಾಗಣ : ಚಿರಂಜೀವಿ ಸರ್ಜಾ, ಅಕ್ಷತಾ ಶ್ರೀನಿವಾಸ್’, ಅಮೃತಾ ಅಯ್ಯಂಗಾರ್ , ಅಕ್ಷತಾ, ಸಾಧು ಕೋಕಿಲ, ತಾರಾ, ಅವಿನಾಶ್ ಹಾಗೂ ಮುಂತಾದವರು…
ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿರುವ ಬಹುತೇಕ ಚಿತ್ರಗಳು ಪ್ರೇಕ್ಷಕರನ್ನು ಬಹಳ ಬೇಗ ಸೆಳೆಯುತ್ತವೆ. ಆ ನಿಟ್ಟಿಲ್ಲಿ ಮನೋರಂಜನೆ ನೀಡಲು ಬಂದಿರುವಂತಹ ಚಿತ್ರ ಶಿವಾರ್ಜುನ. ಚಿತ್ರದ ಕಥಾ ಹಂದರದ ಪ್ರಕಾರ ರಾಮದುರ್ಗ ಹಾಗೂ ರಾಯದುರ್ಗದ ಇಬ್ಬರು ಸಾಹುಕಾರರ ದ್ವೇಷಕ್ಕೆ ದೊಡ್ಡ ಇತಿಹಾಸವೇ ಇರುತ್ತದೆ, ಅದೇ ಕಾರಣಕ್ಕೆ ಕಳೆದ 20 ವರ್ಷಗಳಿಂದಲೂ ಆ ಊರಲ್ಲಿ ದೇವರ ಜಾತ್ರೆಯೇ ನಡೆಯುತ್ತಿಲ್ಲ.
ಹೀಗಿರುವಾಗ ಆ ಸಾಹುಕಾರರ ದ್ವೇಷ ತಣಿಸಿ, ಊರ ಜಾತ್ರೆ ನಡೆಸಲು ನಾಯಕ ಬರುತ್ತಾನೆ. ಜಾತ್ರೆ ನಡೆಯುವುದರ ಜೊತೆ ರಕ್ತದೋಕುಳಿಯೂ ಆಗುತ್ತದೆ. ಶಿವಾರ್ಜುನ ಪಕ್ಕಾ ಕಮರ್ಷಿಯಲ್ ಎಂಟಟೈನರ್. ಒಂದು ಕಮರ್ಷಿಯಲ್ ಸಿನಿಮಾದಲ್ಲಿ ಏನಿರಬೇಕೋ ಎಲ್ಲಾ ಅಂಶಗಳು ಈ ಚಿತ್ರದಲ್ಲಿವೆ.
ಇಡೀ ಚಿತ್ರವನ್ನು ಸನ್ನಿವೇಶಗಳ ಮೂಲಕ ಕಟ್ಟಿಕೊಡಬೇಕೆಂಬ ನಿರ್ದೇಶಕರ ಉದ್ದೇಶ ತೆರೆಮೇಲೆ ಎದ್ದು ಕಾಣುತ್ತದೆ. ಚಿತ್ರದ ಆರಂಭದಿಂದಲೇ ಬರುವ ಕಾಮಿಡಿ ದೃಶ್ಯಗಳು ಮಜಾ ಕೊಡುತ್ತವೆ.
ಚಿತ್ರದ ದ್ವಿತೀಯಾರ್ಧದ ಕಥೆಯಲ್ಲಿ ಸೀರಿಯಸ್ ಆಗುತ್ತದೆ. ಕಥೆಯ ಭಾಗವು ಫ್ಲ್ಯಾಷ್ಬ್ಯಾಕ್ ಆವರಿಸಿಕೊಳ್ಳುತ್ತದೆ. ಈಗಾಗಲೇ ಹೇಳಿದಂತೆ ಇದು ಪಕ್ಕಾ ಕಮರ್ಶಿಯಲ್ ಎಂಟರ್ಟೈನರ್ ಚಿತ್ರ ಆಗಿರೋದ್ರಿಂದ ಇಲ್ಲಿ ಯಾವುದೇ ಲಾಜಿಕ್ ಹುಡುಕುವಂತಿಲ್ಲ. ಪಕ್ಕಾ ತೆಲುಗು ಕಮರ್ಷಿಯಲ್ ಸಿನಿಮಾ ನೋಡಿದಂತಾಗುತ್ತದೆ. ಮಾಸ್ ಆ್ಯಕ್ಷನ್ ಇಷ್ಟಪಡುವವರಿಗೆ ಶಿವಾರ್ಜುನ ಖಂಡಿತ ಖುಷಿ ಕೊಡುತ್ತದೆ.
ನಾಯಕ ಚಿರಂಜೀವಿಗೆ ಇಂಥಾ ಪಾತ್ರಗಳು ಹೊಸದೇನಲ್ಲ. ಈ ಹಿಂದೆ ಸಿಂಗ ಸೇರಿದಂತೆ ಆನೇಕ ಚಿತ್ರಗಳಲ್ಲಿ ಈ ಥರ ಪಕ್ಕಾ ಆ್ಯಕ್ಷನ್ ಹೀರೋ ಆಗಿ, ಒಬ್ಬ ರೆಬೆಲ್ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಪಾತ್ರಕ್ಕೆ ಎಂದಿನಂತೆ ನ್ಯಾಯ ಒದಗಿಸಿದ್ಧಾರೆ. ಇನ್ನು ಚಿತ್ರದಲ್ಲಿ ನಾಯಕಿಯರಿಗೆ ಹೆಚ್ಚು ಸ್ಕೋಪ್ ಇಲ್ಲ.
ಅಕ್ಷತಾ ಶ್ರೀನಿವಾಸ್ ಗ್ಲಾಮರ್ಗಷ್ಟೇ ಸೀಮಿತವಾದರೆ, ಅಮೃತಾ ಬಜಾರಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ತಾರಾ ಜೊತೆಗೆ ಅವರ ಪುತ್ರ ಬಾಲ ನಟನಾಗಿ ಭರವಸೆ ಮೂಡಿಸಿದ್ದಾರೆ. ಉಳಿದಂತೆ ಕಿಶೋರ್. ಅವಿನಾಶ್, ಸಾಧುಕೋಕಿಲ ತಮ್ಮ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿದ್ದಾರೆ.
ನಿರ್ದೇಶಕ ಶಿವತೇಜಸ್ ಒಂದು ಪಕ್ಕಾ ಮಾಸ್ ಚಿತ್ರವನ್ನು ಪ್ರೇಕ್ಷಕರೇ ನೀಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದ ಓಟ ಮತ್ತಷ್ಟು ಬಿಗಿ ಇದ್ದರೆ ಚೆನ್ನಾಗಿರುತ್ತಿತ್ತು. ಚಿತ್ರರಂಗದಲ್ಲಿ ಬಹಳಷ್ಟು ಅನುಭವ ಪಡೆದಂತ ಶಿವಾರ್ಜುನ್ ಈ ಚಿತ್ರದ ಜವಾಬ್ದಾರಿ ವಹಿಸಿಕೊಂಡಿದ್ದು, ಅವರ ಪತ್ನಿ ಮಂಜುಳ ಶಿವಾರ್ಜುನ್ ಚಿತ್ರವನ್ನು ನಿರ್ಮಿಸಿದ್ದಾರೆ.
ಯುವ ಸಂಗೀತ ನಿರ್ದೇಶಕ ಸುರಾಗ್ ಕೋಕಿಲಾ ಕೆಲಸ ಉತ್ತಮವಾಗಿದ್ದು, ಛಾಯಾಗ್ರಾಹಕ ವೇಣು ಕೈಚಳಕ ಸೊಗಸಾಗಿ ಮೂಡಿಬಂದಿದೆ. ಸಾಹಸ ನಿರ್ದೇಶನ ಮಾಡಿರುವ ಡಾ. ಕೆ. ರವಿವರ್ಮ ಹಾಗೂ ವಿನೋದ್ ಮಾಸ್ಟರ್ ಗಮನ ಸೆಳೆಯುತ್ತಾರೆ. ಒಟ್ಟಾರೆ ಮಾಸ್ ಹಾಗೂ ಆ್ಯಕ್ಷನ್ ಇಷ್ಟಪಡುವ ಪ್ರಿಯರಿಗೆ ಈ ಶಿವಾರ್ಜುನ್ ಚಿತ್ರ ಇಷ್ಟವಾಗಲಿದೆ. ಎಲ್ಲರೂ ಒಮ್ಮೆ ಹೋಗಿ ನೋಡಬಹುದು.