Cinisuddi Fresh Cini News 

ಶಿವಣ್ಣನ ಹೊಸ ಚಿತ್ರಕ್ಕೆ ರಾಮ್ ಧುಲಿಪುಡಿ ಆಕ್ಷನ್ ಕಟ್

ಕೊರೋನಾ ಲಾಕ್‍ಡೌನ್‍ನಿಂದ ಈಗ ಯಾವುದೇ ಸಿನಿಮಾ ಚಿತ್ರೀಕರಣದ ಚಟುವಟಿಕೆಗಳೂ ನಡೆಯುತ್ತಿಲ್ಲ. ಆದರೂ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮಾತ್ರ ಹೊಸ ಕತೆಗಳನ್ನು ಕೇಳುತ್ತಲೇ ಇದ್ದಾರೆ. ಹೌದು, ಚಿತ್ರರಂಗದಲ್ಲಿ ಹಲವಾರು ದಶಕಗಳನ್ನು ಕಳೆದಿದ್ದರೂ ಸಹ ಶಿವಣ್ಣ ಈಗಲೂ ಬ್ಯುಸಿಸ್ಟಾರ್. ಕೊರೋನಾ ಸಮಯದಲ್ಲೂ ಶಿವರಾಜ್‍ಕುಮಾರ್ ಅವರನ್ನು ಹುಡುಕಿಕೊಂಡು ಹಲವಾರು ನಿರ್ಮಾಪಕ, ನಿರ್ದೇಶಕರು ಹೊಸ ಕಥೆಗಳ ಜೊತೆಗೆ ಬರುತ್ತಿದ್ದಾರೆ.

ಇತ್ತೀಚೆಗೆ ಮತ್ತೊಂದು ಹೊಸ ಕತೆಯನ್ನು ಕೇಳಿ ಇಷ್ಟಪಟ್ಟಿರುವ ಶಿವರಾಜ್‍ಕುಮಾರ್ ಅವರು ಚಿತ್ರಕ್ಕೆ ಗ್ರೀನ್‍ಸಿಗ್ನಲ್ ನೀಡಿದ್ದು, ಲಾಕ್‍ಡೌನ್ ಬಳಿಕ ಆ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಬಹುತೇಕ ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರೀಕರಣ ಆರಂಭಿಸಲಿರುವ ಈ ಚಿತ್ರಕ್ಕೆ ಇನ್ನೂ ಯಾವುದೇ ಶೀರ್ಷಿಕೆ ಇಟ್ಟಿಲ್ಲ.

ತೆಲುಗಿನಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ, ಅಲ್ಲದೆ ಹಲವಾರು ಸಿನಿಮಾಗಳಿಗೆ ಚಿತ್ರಕಥೆ, ಸಂಭಾಷಣೆ ಬರೆಯುವ ಮೂಲಕ ರಾಮ್‍ಧುಲಿಪುಡಿ ಉತ್ತಮ ಬರಹಗಾರನೆಂದೇ ಗುರುತಿಸಿಕೊಂಡಿದ್ದಾರೆ. ಈಗ ಇದೇ ಮೊದಲಬಾರಿಗೆ ಚಿತ್ರ ನಿರ್ದೇಶನಕ್ಕಿಳಿದಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಟ ಶಿವರಾಜ್‍ಕುಮಾರ್ ಒಬ್ಬ ಯೋಧನ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಭಾವನಾತ್ಮಕ ವಿಚಾರಗಳೊಂದಿಗೆ ಪ್ರೀತಿಯನ್ನು ಎತ್ತಿಹಿಡಿಯುವಂಥ ಕಥಾಹಂದರವನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ನಿರ್ದೇಶಕರದಾಗಿದೆ. ಆರಂಭದಲ್ಲಿ ಶಿವರಾಜ್‍ಕುಮಾರ್ ಅವರಿಗೆ ರಾಮ್ ಧುಲಿಪುಡಿ ಈ ಕಥೆಯ ಸಣ್ಣ ಎಳೆಯನ್ನು ಹೇಳಿದ್ದರಂತೆ. ಅದನ್ನು ತುಂಬಾ ಇಷ್ಟಪಟ್ಟ ಶಿವಣ್ಣ, ಪೂರ್ತಿ ಕಥೆ ಕೇಳಿ, ಅಭಿನಯಿಸಲು ತಕ್ಷಣವೇ ಒಪ್ಪಿಗೆ ನೀಡಿದ್ದರು.

ಹೀಗೆ ಆರಂಭವಾದ ಈ ಸಿನಿಮಾದ ಕೆಲಸ ಈಗ ಪರಿಪಕ್ವವಾದ ರೂಪುರೇಷೆಯನ್ನು ಸಿದ್ದಪಡಿಸಿಕೊಂಡಿದೆ. ಅದರಂತೆ ಬೆಂಗಳೂರು, ಶಿವಮೊಗ್ಗ ಅಲ್ಲದೆ ಉತ್ತರ ಭಾರತದ ಜಮ್ಮು ಕಾಶ್ಮೀರ ಸೇರಿದಂತೆ ದೇಶದ ಹಲವಾರು ಸುಂದರ ಲೊಕೇಶನ್‍ಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯಲಿದೆ.

ಶ್ರೀಚರಣ್ ಪಕಲ ಅವರು ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ರವಿಕುಮಾರ್ ಸನಾ ಛಾಯಾಗ್ರಾಹಕರಾಗಿ ಕೆಲಸ ಮಾಡಲಿರುವ ಈ ಚಿತ್ರವನ್ನು ಬಾಲಶ್ರೀರಾಂ ಸ್ಟುಡಿಯೋಸ್ ಲಾಂಛನದಲ್ಲಿ ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ ಮತ್ತು ನರಲ ಶ್ರೀನಿವಾಸರೆಡ್ಡಿ ಸೇರಿ ನಿರ್ಮಿಸುತ್ತಿದ್ದಾರೆ. ಕುಡಿಪುಡಿ ವಿಜಯ್ ಕುಮಾರ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಸೆಪ್ಟೆಂಬರ್‍ನಲ್ಲಿ ಆರಂಭಿಸಿ ಒಟ್ಟು ಐವತ್ತೈದು ದಿನಗಳ ಕಾಲ ಚಿತ್ರೀಕರಣಗೊಳ್ಳಲಿರುವ ಈ ನೂತನ ಚಿತ್ರಕ್ಕೆ ಉಳಿದ ಕಲಾವಿದರ ಹಾಗೂ ತಂತ್ರಜ್ಞರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಚಿತ್ರದ ಶೀರ್ಷಿಕೆ ಸೇರಿದಂತೆ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಚಿತ್ರತಂಡ ಸದ್ಯದಲ್ಲೇ ಬಹಿರಂಗಪಡಿಸಲಿದೆ.

Share This With Your Friends

Related posts