Cinisuddi Fresh Cini News 

ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮ ಆರೋಗ್ಯ ಮುಖ್ಯ : ಅಭಿಮಾನಿಗಳಲ್ಲಿ ಶಿವಣ್ಣ ಮನವಿ

ಕರುನಾಡ ಚಕ್ರವರ್ತಿ , ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್  ರವರು ಇದೇ 12 ರಂದು 58ನೇ ವಸಂತಕ್ಕೆ ಕಾಲಿಡಲಿದ್ದಾರೆ.
ಆದರೆ ಪ್ರತಿ ಬಾರಿ ಶಿವಣ್ಣನ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ದಂಡು ಮಧ್ಯರಾತ್ರಿಯಿಂದಲೇ ಆಚರಿಸಲು ಬರುತ್ತಿದ್ದರು. ಆದರೆ ಈ ಬಾರಿ ಕೊರೊನಾ ಕಾರಣದಿಂದ ಯಾರೂ ಕೂಡ ಮನೆಯ ಬಳಿ ಬರಬೇಡಿ ಎಂದ ಶಿವಣ್ಣ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ನಟ ಶಿವರಾಜ್‍ಕುಮಾರ್ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಮೂಲಕ ಅಭಿಮಾನಿಗಳಲ್ಲಿ ಹೀಗೆ ಮನವಿ ಮಾಡಿಕೊಂಡಿದ್ದಾರೆ. ಎಲ್ಲರಿಗೂ ನಮಸ್ಕಾರ, ನೀವೆಲ್ಲರೂ ಆರೋಗ್ಯವಾಗಿ ಚೆನ್ನಾಗಿದ್ದೀರಿ ಎಂದುಕೊಂಡಿದ್ದೇನೆ.

ನಾನು ಕೂಡ ಆರೋಗ್ಯವಾಗಿದ್ದೀನಿ, ನೀವು ಚೆನ್ನಾಗಿರಬೇಕೆಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ನನ್ನ ಹುಟ್ಟುಹಬ್ಬದ ದಿನದಂದು ನಾನು ಮನೆಯಲ್ಲಿ ಇರಲ್ಲ. ಯಾಕೆಂದರೆ ಇಂತಹ ಸಂದರ್ಭದಲ್ಲಿ ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮ ಆರೋಗ್ಯ ಮುಖ್ಯ ಎಂದು ತಿಳಿಸಿದ್ದಾರೆ.

ಹುಟ್ಟುಹಬ್ಬದ ದಿನ ನೀವೆಲ್ಲರೂ ಮನೆಯ ಬಳಿ ಬಂದರೆ ಸಾಮಾಜಿಕ ಅಂತರ ಕಾಪಾಡಲು ಕಷ್ಟವಾಗುತ್ತದೆ. ಇದರಿಂದ ನಿಮ್ಮೆಲ್ಲರಿಗೂ ನೋವಾಗುತ್ತದೆ ಎಂದು ನನಗೆ ಗೊತ್ತು. ನನಗೂ ಅಷ್ಟೆ ನೋವಾಗುತ್ತೆ. ಆದರೆ ಈ ಹುಟ್ಟುಹಬ್ಬದಲ್ಲಿ ನನ್ನ ಆರೋಗ್ಯಕ್ಕಿಂತ ನಿಮ್ಮ ಆರೋಗ್ಯ ನನಗೆ ತುಂಬಾ ಮುಖ್ಯ.

ಹೀಗಾಗಿ ನೀವೆಲ್ಲರೂ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಕೊರೋನಾ ಮುಗಿದ ಮೇಲೆ ನಾವೆಲ್ಲರೂ ಒಂದು ಕಡೆ ಭೇಟಿ ಮಾಡೋಣ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.

ಮತ್ತೊಂದು ವಿಚಾರ, ಯಾರೂ ಕೂಡ ಈ ಕೊರೋನಾಗೆ ಭಯಪಡುವ ಅವಶ್ಯಕತೆ ಇಲ್ಲ. ಎಲ್ಲರೂ ಧೈರ್ಯವಾಗಿ ಇರಬೇಕು. ಈ ಕೊರೋನಾ ಹೋಗಲು ಸಾಮಾಜಿಕ ಅಂತರ ಕಾಪಾಡಿ, ನಿಯಮಗಳನ್ನು ಪಾಲಿಸಿ. ನಮ್ಮೆಲ್ಲರನ್ನೂ ಕಾಪಾಡಲು ಆ ದೇವರು ಇದ್ದಾನೆ.

ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಇರುತ್ತದೆ ಎಂಬ ನಂಬಿಕೆ ಇದೆ. ಧೈರ್ಯವಾಗಿರಿ, ಸುರಕ್ಷಿತವಾಗಿರಿ ಎಂದು ಅಭಿಮಾನಿಗಳಿಗೆ ಶಿವಣ್ಣ ಧೈರ್ಯ ತುಂಬಿದ್ದಾರೆ.

ಈ ವಿಚಾರವನ್ನು ಗಮನಿಸಿದ ಅಭಿಮಾನಿಗಳು ಕೂಡ ತಮ್ಮ ಫೇಸ್‍ಬುಕ್, ಟ್ವಿಟ್ಟರ್‍ನಲ್ಲಿ ಶಿವಣ್ಣನ ಮಾತಿಗೆ ನಾವೆಲ್ಲರೂ ಬದ್ಧ ಎಂದು ಹೇಳಿದ್ದಾರೆ. ತಾವು ಇದ್ದ ಸ್ಥಳದಲ್ಲಿಯೇ ಶಿವಣ್ಣನ ಹುಟ್ಟುಹಬ್ಬವನ್ನು ಆಚರಿಸಲು ನಿರ್ಧರಿಸಿದ್ದಾರೆ. ಇದೊಂದು ರೀತಿ ಒಳ್ಳೆಯ ಬೆಳವಣಿಗೆ ಆಗಿದೆ.

ಒಬ್ಬನ ನಟನ ಮೇಲಿನ ಪ್ರೀತಿ ಮತ್ತು ಅವರು ಹೇಳಿರುವ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಅಂತರವನ್ನು ಕಾಯ್ದುಕೊಂಡು ಸುರಕ್ಷಿತವಾಗಿ ಇರುವುದರ5 ಜೊತೆಗೆ ಅವರ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸುವ ಆಲೋಚನೆ ಮೆಚ್ಚುವಂತದ್ದು.

ಈಗಾಗಲೇ ಶಿವಣ್ಣನ ಬಹುತೇಕ ಚಿತ್ರಗಳು ಚಿತ್ರೀಕರಣದಲ್ಲಿ ನಿರತವಾಗಿದೆ, ಅದೇ ರೀತಿ ಹೊಸ ಚಿತ್ರಗಳು ಕೂಡ ಶಿವಣ್ಣನ ಹುಟ್ಟುಹಬ್ಬಕ್ಕೆ ಅನೌನ್ಸ್ ಆಗುವ ಸಾಧ್ಯತೆಗಳಿವೆ.

ಈಗಾಗಲೇ ಬಿಡುಗಡೆಗೆ ಸಿದ್ಧವಿರುವ ಭಜರಂಗಿ 2 ಚಿತ್ರದ ಫಸ್ಟ್‍ಲುಕ್ ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದು ಹುಟ್ಟುಹಬ್ಬದ ದಿನದಂದು ವಿಶೇಷ ಟೀಸರ್ ಹೊರಬರಲಿದೆಯಂತೆ.

Related posts