Cinisuddi Fresh Cini News 

ಅಕ್ಟೋಬರ್ ನಲ್ಲಿ ಶಿವಾಜಿ ಸುರತ್ಕಲ್-2 ಚಿತ್ರದ ಶೂಟಿಂಗ್ ಆರಂಭ

ಕಳೆದ ವರ್ಷ ನಟ ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ ಬಿಡುಗಡೆಗೊಂಡು ಪ್ರೇಕ್ಷಕರ ಮನಸ್ಸನ್ನು ಗೆದ್ದಿತ್ತು. ಈಗ ಅದೇ ತಂಡ ಭಾಗ -2 ಆರಂಭಿಸಲು ಸಿದ್ಧವಾಗಿದೆ. ಶಿವಾಜಿ ಸುರತ್ಕಲ್ ಸ್ವತಃ ವಿತರಕರಿಂದಲೇ ಬ್ಲಾಕ್ ಬಸ್ಟರ್ ಎನಿಸಿಕೊಂಡಿತ್ತು. ಈಗ ನಿರ್ದೇಶಕರಾದ ಆಕಾಶ್ ಶ್ರೀವತ್ಸ ರವರ ಸಾರಥ್ಯದಲ್ಲಿ ಮತ್ತು ನಿರ್ಮಾಪಕರಾದ ರೇಖಾ ಕೆ. ಎನ್. ಹಾಗೂ ಅನುಪ್ ರವರ ನೇತೃತ್ವದಲ್ಲಿ ಮತ್ತದೇ ಶೀರ್ಷಿಕೆಯಲ್ಲಿ ಭಾಗ -2 ಮಾಡಹೊರಟಿದ್ದಾರೆ. ಸಂಪೂರ್ಣವಾಗಿ ಕಥೆ – ಚಿತ್ರಕಥೆ ಮುಗಿಸಿಕೊಂಡಿರುವ ಚಿತ್ರತಂಡ ಅಕ್ಟೋಬರ್ ನಲ್ಲಿ ಶೂಟಿಂಗ್ ಶುರುಮಾಡುವ ಯೋಚನೆಯಲ್ಲಿದೆ.

ಶಿವಾಜಿಯಾಗಿ ರಮೇಶ್ ಅರವಿಂದ್ ರವರು ಬಣ್ಣ ಹಚ್ಚಲಿದ್ದು, ರಾಧಿಕಾ ನಾರಾಯಣ್, ರಘು ರಾಮನಕೊಪ್ಪ ಮತ್ತು ವಿದ್ಯಾಮೂರ್ತಿ ಭಾಗ-2 ರಲ್ಲೂ ಮುಂದುವರಿಯಲಿದ್ದಾರೆ. ಉಳಿದ ತಾರಾಗಣದಲ್ಲಿ ಹೊಸಮುಖಗಳು ಪರಿಚಯಗೊಳ್ಳಲಿದ್ದಾರೆ.

ಶಿವಾಜಿ ಸುರತ್ಕಲ್ ಎರಡು ಕಾಲಘಟ್ಟದಲ್ಲಿ ನಡೆಯುವ ಚಿತ್ರವಾಗಿತ್ತು, ಆದರೆ ಭಾಗ-2 ಬಹುಕೋನಗಳಿರುವ ಚಿತ್ರಕಥೆ ಹೊಂದಿದ್ದು, ಪತ್ತೇದಾರಿ ಕತೆಯಾಗಿರುವುದರಿಂದ ಕೊಲೆಗಾರನ ಹುಡುಕಾಟದ ಮಾರ್ಗದಲ್ಲಿ ಚಲಿಸುತ್ತಿರುತ್ತದೆ.

ಚಿತ್ರಮಂದಿರ ಭೇಟಿಯ ಸಂದರ್ಭ ಎದುರಾಗಿದ್ದ ಅನೇಕ ಪ್ರಶ್ಮೆಗಳಿಗೆ, ವಿಶೇಷವಾಗಿ ಶಿವಾಜಿ ಸುರತ್ಕಲ್ ಎಂಬ ಶೀರ್ಷಿಕೆಗೆ ಈ ಚಿತ್ರದಲ್ಲಿ ನಿರ್ದೇಶಕರು ಉತ್ತರವಿಟ್ಟಿದ್ದಾರೆ. ಗುರುಪ್ರಸಾದ್ M. G. ಛಾಯಾಗ್ರಾಹಕರಾಗಿ ಮುಂದುವರಿಯಲಿದ್ದು, ಉಳಿದಂತೆ ತಾಂತ್ರಿಕ ತಂಡವನ್ನು ಸಧ್ಯದಲ್ಲೇ ಬಹಿರಂಗಗೊಳಿಸಲಿದೆ ಚಿತ್ರತಂಡ.

ಭಾಗ-1 ರ ಯಶಸ್ಸು ಮತ್ತು ತಮಿಳು, ಮಲಯಾಳಂ, ತೆಲುಗಿಗೆ ರೀಮೇಕ್ ರೈಟ್ಸ್ ಮಾರಾಟವಾಗಿದ್ದರಿಂದ ಚಿತ್ರತಂಡ ಮತ್ತಷ್ಟು ಹುರುಪಿನಿಂದ ಅದ್ದೂರಿಯಾಗಿ ಚಿತ್ರ ನಿರ್ಮಿಸುವ ತಯಾರಿಯಲ್ಲಿದೆ. ಪ್ರೇಕ್ಷಕರು ಹಾಗು ಪತ್ರಕರ್ತರ ಸಹಕಾರ ಮತ್ತು ಪ್ರೋತ್ಸಾಹ ಶಿವಾಜಿ ಸುರತ್ಕಲ್ ಭಾಗ-1 ಕ್ಕೆ ನೀಡಿದಂತೆ ಈ ಚಿತ್ರಕ್ಕೂ ನೀಡಬೇಕೆನ್ನುವುದು ಚಿತ್ರತಂಡದ ವಿನಮ್ರ ಕೋರಿಕೆಯಾಗಿದೆ.

Related posts