Cinisuddi Fresh Cini News 

ನಿರ್ದೇಶಕನ ಶಶಾಂಕ್ ರಾಜ್ ಸಿನಿ ಯಾನ

ಬಣ್ಣದ ಪ್ರಪಂಚ ಎಲ್ಲರನ್ನು ಕೈ ಬೀಸಿ ಕರೆಯುತ್ತೆ. ಆದರೆ ಕೆಲವರನ್ನು ಮಾತ್ರ ತನ್ನತ್ತ ಸೆಳೆಯುತ್ತೆ. ಅದು ಕಲಾವಿದರಾಗಲಿ ಅಥವಾ ತಂತ್ರಜ್ಞಾನರಾಗಲಿ.

ಆ ನಿಟ್ಟಿನಲ್ಲಿ ಸುಮಾರು 15 ವರ್ಷ ಗಳಿಂದ ಚಿತ್ರರಂಗದಲ್ಲಿ ಸಹಾಯಕ ಹಾಗೂ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಾ, ಚಂದನವನದ ಕನಸುಗಾರ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರ ಗರಡಿಯಲ್ಲಿ `ಪ್ರೀತ್ಸೋದ್ ತಪ್ಪಾ ‘, `ಏಕಾಂಗಿ’, `ಕೋದಂಡರಾಮ’, `ಮಲ್ಲ’, `ಹಠವಾದಿ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿ ಈಶ್ವರಿ ಸಂಸ್ಥೆಯ ಮೇಲ್ವಿಚಾರಣೆ ಯಲ್ಲಿ ಆಡಿಯೋ ಹಾಗೂ ವಿಡಿಯೋ ಕಂಪನಿ ಜವಾಬ್ದಾರಿಯಲ್ಲಿ ಪಳಗಿ ಬಹಳಷ್ಟು ಅನುಭವ ಪಡೆದುಕೊಂಡ ನಂತರ

ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಅವರ ಜೊತೆಗೂ ಕೂಡ ಧಾರಾವಾಹಿ, ಸಿನಿಮಾ ಹಾಗೂ ಹಲವಾರು ರಿಯಾಲಿಟಿ ಶೋ, `ಅಂಬಿ ಸಂಭ್ರಮ’, `ಸುವರ್ಣ ಮಹೋತ್ಸವ’ ದಂತಹ ಚಿತ್ರೋದ್ಯಮದ ಬೃಹತ್ ಕಾರ್ಯಕ್ರಮ ಗಳಲ್ಲಿ ಕೂಡ ಮೇಲ್ವಿಚಾರಣೆ ಯನ್ನು ವಹಿಸಿಕೊಂಡು ಗಮನ ಸೆಳೆದ ಶಶಾಂಕ್, ಯಶಸ್ವಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನಿರ್ಮಾಣದ ಧಾರಾವಾಹಿಗಳಲ್ಲಿ ಕೂಡ ಬರವಣಿಗೆಯಲ್ಲಿ ಅವರೊಟ್ಟಿಗೆ ಕೆಲಸ ಮಾಡಿ ಬಹಳಷ್ಟು ಅನುಭವ ಪಡೆದುಕೊಂಡು 2007 ರಲ್ಲಿ ಯು.ಕೆ. ಬ್ಯಾನರ್ ನಡಿಯಲ್ಲಿ `ಯುಗ ಯುಗಗಳೇ ಸಾಗಲಿ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬೆಳ್ಳಿ ಪರದೆಯ ಮೇಲೆ ನೆಲೆಯನ್ನು ಕಂಡುಕೊಂಡರು.

ತದನಂತರ `ಉಡ’ ಚಿತ್ರವನ್ನು ನಿರ್ದೇಶಿಸಿ ಭರವಸೆಯ ನಿರ್ದೇಶಕರಾಗಿ ಗುರುತಿಸಿಕೊಂಡರು. `ಡೆಡ್ಲಿ ಸೋಮ’ ನಿರ್ಮಾಪಕರ ಜತೆಗೆ `ಮಾವಳ್ಳಿ ಮಿಲ್ಟ್ರಿ ಹೋಟೆಲ್’ ಸಾರಥ್ಯ ವಹಿಸಿಕೊಂಡರು. `ಕಥಾ ನಾಯಕಿ’ , `ಸುಸ್ವಾಗತ’ ನಂತರ `ಗೂಳಿಹಟ್ಟಿ ‘ಎಂಬ ವಿಭಿನ್ನ ಕಥಾನಕವನ್ನು ತೆರೆಯ ಮೇಲೆ ತರುವ ಮೂಲಕ ಪ್ರೇಕ್ಷಕರ ಗಮನವನ್ನು ಸೆಳೆದು ಯಶಸ್ವಿ 100 ದಿನವನ್ನು ಕೂಡ ಆ ಚಿತ್ರ ಪೂರೈಸಿತು. ಇತ್ತೀಚೆಗೆ ನಿರ್ಮಾಪಕ ದೊಡ್ಮನೆ ವೆಂಕಟೇಶ್ ಅವರ ಬ್ಯಾನರ್‍ನಲ್ಲಿ `ಹಾಲುತುಪ್ಪ ‘ ಚಿತ್ರವನ್ನು ನಿರ್ದೇಶಿಸಿದರು.

ವಿಭಿನ್ನ ಹಾಗೂ ಹೊಸ ರೀತಿಯ ಕಥೆಯನ್ನು ತೆರೆಯ ಮೇಲೆ ತರಲು ಸದಾ ನಿರತರಾಗಿರುವ ನಿರ್ದೇಶಕ ಶಶಾಂಕ್ ರಾಜ್ ಈಗ ಕಲಾತ್ಮಕ ಚಿತ್ರ ನಿರ್ದೇಶಿಸಲು ಮುಂದಾಗಿದ್ದಾರೆ. ಸದ್ಯ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದಲ್ಲಿ ಉಪಾಧ್ಯಕ್ಷರಾಗಿ ಶಶಾಂಕ್‍ರಾಜ್ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಬಾರಿ ಅವರು ಮಕ್ಕಳ ಬಗ್ಗೆ ಜಾಗೃತಿ ಮೂಡಿಸುವಂತಹ ಚಿತ್ರವನ್ನು ನಿರ್ದೇಶಿಸಲಿದ್ದು ಈ ಚಿತ್ರಕ್ಕೆ `ಗುನ್ನ’ ಹಾಗೂ `ಉಡೀಸ್’ ಚಿತ್ರದ ನಿರ್ಮಾಪಕ ಸತೀಶ್ ‍ಚೇತನ್ ನಿರ್ಮಾಣ ಮಾಡುತ್ತಿದ್ದಾರೆ.

ಇವರು ರಾಜಕೀಯದಲ್ಲಿ ಕೂಡ ಸಕ್ರಿಯರಾಗಿದ್ದು ಒಂದು ಸದಭಿರುಚಿಯ ಚಿತ್ರ ನಿರ್ಮಿಸಲು ಮುಂದಾಗಿರುವುದು ವಿಶೇಷ. ಈ ಸಂಸ್ಥೆಯಿಂದ ಇದು ಮೂರನೇ ಪ್ರೋಡಕ್ಷನ್ ಆಗಿದ್ದು ಸ್ಕ್ರಿಪ್ಟ್ ಹಂತದ ಕೆಲಸ ನಡೆಯುತ್ತಿದ್ದು ಅತಿ ಶೀಘ್ರದಲ್ಲಿ ತಂಡ ಚಿತ್ರೀಕರಣಕ್ಕೆ ತೆರಳಲಿದೆಯಂತೆ.

Related posts