Cini Reviews Cinisuddi Fresh Cini News 

“ಶಾರ್ದೂಲ” ಪಯಣದಲ್ಲಿ ದೆವ್ವವೋ… ಭ್ರಮೆಯೋ… (ಚಿತ್ರ ವಿಮರ್ಶೆ)

ಚಿತ್ರ : ಶಾರ್ದೂಲ
ನಿರ್ದೇಶಕ : ಅರವಿಂದ್ ಕೌಶಿಕ್ ನಿರ್ಮಾಪಕ : ರೋಹಿತ್ ಹಾಗೂ ಕಲ್ಯಾಣ್
ಸಂಗೀತ : ಸತೀಶ್ ಬಾಬು ಛಾಯಾಗ್ರಹಣ : ಮನು
ತಾರಾಗಣ : ಚೇತನ್ ಚಂದ್ರ, ಕೃತಿಕಾ ರವೀಂದ್ರ , ಐಶ್ವರ್ಯಾ ಪ್ರಸಾದ್ , ರವಿ ತೇಜಾ , ನವೀನ್ ಕುಮಾರ್ ಹಾಗೂ ಮುಂತಾದವರು …

ರೇಟಿಂಗ್ : 4/5

ಸಿನಿಪ್ರಿಯರನ್ನು ಚಿತ್ರಮಂದಿರಕ್ಕೆ ಸೆಳೆಯುವ ಪ್ರಯತ್ನವನ್ನು ಮಾಡಿದಂತ ತಂಡ “ಶಾರ್ದೂಲ” ಕೊರೋನಾ ಸಂಕಷ್ಟದಿಂದ ತಕ್ಕ ಮಟ್ಟಿಗೆ ಲಾಕ್ ಡೌನ್ ಸಡಿಲಿಕೆ ಆದದ್ದು, ಐವತ್ತು% ಚಿತ್ರಮಂದಿರ ತೆರವಿನ ಬಳಿಕ ಬಿಡುಗಡೆಗೊಳ್ಳುತ್ತಿರುವ ಮೊದಲ ಚಿತ್ರ ಇದಾಗಿದೆ.

ಹಾರರ್ ಹಾಗೂ ಥ್ರಿಲ್ಲರ್ ಕಥಾನಕ ಚಿತ್ರಗಳು ಪ್ರೇಕ್ಷಕನನ್ನು ಬಹಳ ಬೇಗ ಸೆಳೆಯುತ್ತಿದೆ. ಆ ನಿಟ್ಟಿನಲ್ಲಿ ಬಂದಿರುವ ಈ ಶಾರ್ದೂಲ ಚಿತ್ರ ಆರಂಭದಿಂದ ಅಂತ್ಯದವರೆಗೆ ಬಹಳಷ್ಟು ಏರಿಳಿತಗಳೊಂದಿಗೆ ಪ್ರೇಕ್ಷಕರ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದೇ ಹೇಳಬಹುದು. ಬಹಳ ದಿನಗಳ ನಂತರ ತೆರೆಮೇಲೆ ಕಾಣಿಸಿಕೊಂಡಿರುವ ನಟ ಚೇತನ್ ಚಂದ್ರ ಇಡೀ ಚಿತ್ರದಲ್ಲಿ ಹೈಲೈಟ್ ಆಗಿದ್ದಾರೆ.

ನಟಿ ಕೃತಿಕಾ ರವೀಂದ್ರ ಅವರ ಪಾತ್ರವೆ ಇಲ್ಲಿ ನಿಗೂಢ. ಅವರ ಪಾತ್ರ ಕೊನೆಯಲ್ಲಿ ಚಿತ್ರಕಥೆಗೆ ಬಿಗ್‌ಟ್ವಿಸ್ಟ್ ನೀಡುತ್ತದೆ. ಅದೇ ರೀತಿ ನಟ ರವಿತೇಜಾ ಹಾಗೂ ಮತ್ತೊಬ್ಬ ನಟಿ ಐಶ್ವರ್ಯಾ ಪ್ರಸಾದ್ ಹಾಗೂ ವಿಭಿನ್ನ ಪಾತ್ರದಲ್ಲಿ ನವೀನ್ ಕುಮಾರ್ ಕೂಡ ಗಮನ ಸೆಳೆದಿದ್ದಾರೆ.

ವಿಭಿನ್ನ ನಿರೂಪಣೆಯ ಚಿತ್ರಗಳನ್ನು ಮಾಡಿದ್ದ ಅರವಿಂದ್ ಕೌಶಿಕ್ ಮೊದಲಬಾರಿಗೆ ಎಂಬoತೆ ಹಾರರ್ ಕಥೆಯೊಂದನ್ನು ನಿರೂಪಿಸಲು ಪ್ರಯತ್ನಿಸಿದ್ದಾರೆ. ಚಿತ್ರದಲ್ಲಿ ಬರುವುದು ಕೆಲವೇ ಪಾತ್ರಗಳು. ಅಷ್ಟರಲ್ಲೇ ನಿರ್ದೇಶಕರು ಆಟ ಆಡಿದ್ದಾರೆ. ನಿಜಕ್ಕೂ ದೆವ್ವ ಇದೆಯಾ, ಇಲ್ವಾ ಎಂಬ ಗೊಂದಲದಲ್ಲೇ ಸಾಗುವ ಕಥೆಗೆ ಕೊನೆಯಲ್ಲಿ ಉತ್ತರವಿದೆ.

ನಿರ್ದೇಶಕರು ಚಿತ್ರದ ಮೊದಲ ಭಾಗದ ಓಟದಲ್ಲಿ ಮತ್ತಷ್ಟು ಬಿಗಿ ಮಾಡಿದರೆ ಉತ್ತಮವಾಗಿರುತ್ತಿತ್ತು ಅನಿಸುತ್ತದೆ. ಒಂದಷ್ಟು ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿದುಬಿಡುತ್ತವೆ, ಕೃತಿಕಾ ರವೀಂದ್ರ ತನಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದಾರೆ. ಚಿತ್ರದಲ್ಲಿ ತಾನು ಭಯಪಡುವುದಲ್ಲದೆ ನೋಡುಗರಲ್ಲೂ ಆತಂಕ ಮೂಡಿಸುತ್ತಾರೆ. ಚಿತ್ರ ವೀಕ್ಷಿಸಿ ಹೊರಬಂದ ಮೇಲೂ ಆಕೆಯ ಪಾತ್ರ ಪ್ರೇಕ್ಷಕರನ್ನು ಕಾಡುತ್ತದೆ.

ಸನ್ನಿ(ಚೇತನ್ ಚಂದ್ರ), ಸಾಕ್ಷಿ(ಐಶ್ವರ್ಯ ಪ್ರಸಾದ್) ಹಾಗೂ ದರ್ಶನ್(ರವಿತೇಜಾ), ದೀಕ್ಷಾ(ಕೃತಿಕಾ ರವೀಂದ್ರ) ಈ ನಾಲ್ವರು ಸ್ನೇಹಿತರು ಸಾಫ್ಟ್ ವೇರ್ ಕಂಪನಿಯನ್ನು ಆರಂಭಿಸುವ ಮೊದಲು ಒಮ್ಮೆ ಜಾಲಿ ಟ್ರಿಪ್‌ಗೆಂದು ಪ್ರಯಾಣ ಬೆಳೆಸಿದಾಗ ಅವರಿಗೆ ಶಾರ್ದೂಲ ಸ್ಥಳ ಎದುರಾಗುತ್ತದೆ, ಅದೊಂದು ದಟ್ಟ ಕಾಡು, ದರ್ಶನ್‌ಗೆ ನಿಧನರಾಗಿರುವ ತನ್ನ ತಂದೆ, ತಾಯಿ ಇದೇ ಕಾಡಿನಲ್ಲಿ ಈಗಲೂ ಓಡಾಡುತ್ತಿದ್ದಾರೆಂಬ ನಂಬಿಕೆ, ಅದೇ ಕುತೂಹಲದಿಂದ ತನ್ನ ಸ್ನೇಹಿತರನ್ನೂ ಆ ಕಾಡಿನೊಳಗೆ ಕರೆದುಕೊಂಡು ಹೋಗುತ್ತಾನೆ.

ಕಾಡಿನ ಹಾದಿಯಲ್ಲಿ ಅವರು ಚಿತ್ರವಿಚಿತ್ರ ಅನುಭವಗಳನ್ನು ಎದುರಿಸಬೇಕಾಗುತ್ತದೆ. ಅವರು ವಾಪಸ್ ಬಂದಾಗ ಅವರ ಕಾರಿನ ಡಿಕ್ಕಿಯಲ್ಲಿ ಅಪರಿಚಿತ ದೇಹವೊಂದನ್ನು ಯಾರೋ ಇಟ್ಟು ಹೋಗಿರುತ್ತಾರೆ. ಮರ ಕತ್ತರಿಸುವ ಗರಗಸದ ಶಬ್ದ ಅವರಲ್ಲಿ ಮತ್ತಷ್ಟು ಭಯ ಹುಟ್ಟಿಸುತ್ತದೆ.

ಆ ಶಬ್ದವೇ ಚಿತ್ರದ ತುಂಬೆಲ್ಲ ಮಾರ್ದನಿಸುತ್ತದೆ. ಒಂದು ರೀತಿಯಲ್ಲಿ ಅದೇ ಚಿತ್ರದ ಹೀರೋ ಎನ್ನಬಹುದು. ಆ ಗರಗಸವನ್ನು ಕಾಡಿನಲ್ಲಿ ನೋಡಿದಾಗ ಎಲ್ಲಾ ಸ್ನೇಹಿತರಲ್ಲಿ ಒಂದು ರೀತಿಯ ಭಯ ಆವರಿಸುತ್ತದೆ, ಅವರು ಹಾಗೆ ಭಯಪಡಲು ಕಾರಣವೇನು, ಆ ಗರಗಸದ ಹಿನ್ನೆಲೆ ಏನು, ನಿಜಕ್ಕೂ ಕಾರಿನಲ್ಲಿದ್ದ ದೇಹ ಯಾರದ್ದು ಎನ್ನುವ ಕುತೂಹಲಗಳಿಗೆ ಉತ್ತರ ಸಿಗಬೇಕೆಂದರೆ ಶಾರ್ದೂಲ ಸಿನಿಮಾವನ್ನು ನೋಡಲೇ ಬೇಕು.

ಕಥೆಗೆ ತಕ್ಕಂತೆ ಸತೀಶ್‌ ಬಾಬು ಅವರ ಹಿನ್ನೆಲೆ ಸಂಗೀತ ಮೂಡಿಬಂದಿದ್ದು, ಕ್ಯಾಮೆರಾ ವರ್ಕ್ ಕೂಡ ಚೆನ್ನಾಗಿ ಮಾಡಿದ್ದಾರೆ ವೈ.ಜೆ.ಆರ್ ಮನು. ಅದೇ ರೀತಿ ಮಾಸ್ ಮಾದ ,ಅಲ್ಟಿಮೆಟ್ ಶಿವು ಹಾಗೂ ವೈಲೆಂಟ್ ವೇಲು ರವರ ಸಾಹಸ ದೃಶ್ಯಗಳು ಕೂಡ ಗಮನ ಸೆಳೆಯುತ್ತದೆ. ಇಂಥ ವಿಭಿನ್ನ ಚಿತ್ರವನ್ನು ಭೈರವ ಸಿನಿಮಾಸ್ ಹಾಗೂ ಸಿವಿಆರ್ ಸಿನಿಮಾಸ್ ಮೂಲಕ ರೋಹಿತ್ ಶಾಂತಪ್ಪ ಹಾಗೂ ಕಲ್ಯಾಣ್ ನಿರ್ಮಾಣದ ಈ ಚಿತ್ರ ಪ್ರೇಕ್ಷಕರನ್ನು ಸೆಳೆಯುವುದು ಪಕ್ಕಾ ಎಂದೇ ಹೇಳಬಹುದು.

Related posts