Cinisuddi Fresh Cini News Tv / Serial 

ಚಲನಚಿತ್ರ ಪತ್ರಕರ್ತರ ಸಂಘದಿಂದ ಛಾಯಾಗ್ರಾಹಕ ಡಿ.ಸಿ. ನಾಗೇಶ್ ನೆನಪಿನ ಬುತ್ತಿ “ಜೀವಬಿಂಬ” ಪುಸ್ತಕ ಬಿಡುಗಡೆ.

ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಚಾಲನೆ ಪಡೆದಿದ್ದು, ಹಂತ ಹಂತವಾಗಿ ಅರ್ಥಪೂರ್ಣ, ಜವಾಬ್ದಾರಿಯುತ ಕಾರ್ಯಕ್ರಮಗಳನ್ನು ನಡೆಸಲು ಹೆಜ್ಜೆ ಹಾಕಿದೆ. ಆ ನಿಟ್ಟಿನಲ್ಲಿ ಮೊದಲ ಕಾರ್ಯಕ್ರಮವಾಗಿ ಹಿರಿಯ ಛಾಯಾಗ್ರಾಹಕ ಡಿ.ಸಿ ನಾಗೇಶ್ ಅವರ ನೆನಪಿನ ಬುತ್ತಿಯನ್ನು ತೆರೆದಿಡುವಂತಹ ಕೆಲಸವನ್ನು ಮಾಡುವ ಉದ್ದೇಶದಿಂದ “ಜೀವಬಿಂಬ” ಎಂಬ ಪುಸ್ತಕವನ್ನು ಹೊರತಂದಿದೆ. ಅದರ ಬಿಡುಗಡೆ ಸಮಾರಂಭ ಪ್ರೆಸ್‌ಕ್ಲಬ್ ಆವರಣದಲ್ಲಿ ನೆರವೇರಿತು. ಇದೇ ಸಂದರ್ಭದಲ್ಲಿ ಚಲನಚಿತ್ರ ಪತ್ರಕರ್ತರ ಸಂಘದ ಅಧಿಕೃತ ಜಾಲತಾಣವನ್ನು ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರಣ, ಹಿರಿಯ ನಟ ದೇವರಾಜ್, ನಟಿ ಭಾವನಾ ರಾಮಣ್ಣ ಉದ್ಘಾಟಿಸಿದರು.

ನಂತರ ಹಿರಿಯ ನಟ ದೇವರಾಜ್ ಮಾತನಾಡುತ್ತಾ ಡಿ.ಸಿ.ನಾಗೇಶ್ ಒಬ್ಬ ಸರಳಜೀವಿ, ನನ್ನ ಮೊದಲ ಫೋಟೋ ಶೂಟ್ ಅವರೇ ಮಾಡಿದ್ದರು. ಅವರ, ನನ್ನ ಸ್ನೇಹ 35 ವರ್ಷದ್ದು, ನಮ್ಮ ಇಡೀ ಕುಟುಂಬಕ್ಕೆ ಬಹಳ ಆತ್ಮೀಯರಾಗಿದ್ದರು, ಅವರು ಅಗಲಿದ ಸಂದರ್ಭದಲ್ಲಿ ನಾನು ಊರಿನಲ್ಲಿ ಇರಲಿಲ್ಲ. ಆ ನೋವು ನನಗೆ ಈಗಲೂ ಇದೆ. ಆದರೆ ಈ ಕಾರ್ಯಕ್ರಮದ ಮೂಲಕ ಡಿ.ಸಿ. ನಾಗೇಶ್ ರನ್ನ ನೆನಪಿಸಿಕೊಳ್ಳುವ ಅವಕಾಶ ಸಿಕ್ಕಿದ್ದು ತಕ್ಕ ಮಟ್ಟಿಗೆ ಸಮಾಧಾನವಾಗಿದೆ ಎಂದು ಹೇಳಿದರು.

ನಟಿ ಭಾವನಾ ಮಾತನಾಡುತ್ತ ನನ್ನ ಪ್ರಥಮ ಛಾಯಾ ಚಿತ್ರವನ್ನು ಕ್ಲಿಕ್ ಮಾಡಿದ್ದು ಡಿ.ಸಿ. ನಾಗೇಶ್ ಸರ್, ಅದು ಮಯೂರ ಮುಖಪುಟದಲ್ಲಿ ಪ್ರಕಟವಾಗಿತ್ತು. ನನ್ನ ತಂದೆಯ ಜೊತೆ ಸಾಕಷ್ಟು ಬಾರಿ ಅವರ ಮನೆಗೆ ಹೋಗಿದ್ದೆ ಎಂದು ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡರು.
ಸಂಘದ ಅಧ್ಯಕ್ಷ ಬಿ.ಎನ್. ಸುಬ್ರಹ್ಮಣ್ಯ ಮಾತನಾಡುತ್ತ ನಮ್ಮ ಸಂಘ ಬಹಳಷ್ಟು ಮಹತ್ವಾಕಾಂಕ್ಷೆಗಳನ್ನು ಇಟ್ಟುಕೊಂಡಿದೆ. ಸಂಘದ ಜಾಲತಾಣವನ್ನು ಗೆಳೆಯರಾದ ಚಂದ್ರಶೇಖರ್ ಮಾಡಿಕೊಟ್ಟಿದ್ದಾರೆ. ಸಂಘದ ಸದಸ್ಯತ್ವವನ್ನು ಅರ್ಹತೆ ಪರಿಗಣಿಸಿ ನೀಡಲಾಗುತ್ತದೆ, ನೇರವಾಗಿ ಯಾರಿಗೂ ಕೊಡುತ್ತಿಲ್ಲ, ಮುಂದಿನ ದಿನಗಳಲ್ಲಿ ಹಲವಾರು ಲೇಖನಗಳನ್ನು ಪ್ರಕಟಿಸುವ ಆಶಯವಿದೆ ಎಂದರು.

ಕೊನೆಯಲ್ಲಿ ಮಾತನಾಡಿದ ನಿರ್ದೇಶಕ ಟಿ.ಎಸ್. ನಾಗಾಭರಣ, ಬಹಳ ಅರ್ಥಪೂರ್ಣವಾಗಿ “ಜೀವಬಿಂಬ” ವನ್ನು ಬಿಡುಗಡೆ ಮಾಡಿದ್ದಾರೆ, ನನ್ನ ಸಿನಿಮಾ, ಜೀವನ ಪಯಣವನ್ನೂ ಸಹ ಡಿಸಿ ತನ್ನ ಬಿಂಬದಲ್ಲಿ ದಾಖಲಿಸಿ ಕೊಟ್ಟಿದ್ದಾನೆ. ಕನ್ನಡ ಚಿತ್ರರಂಗದ ಇತಿಹಾಸವನ್ನು ಪ್ರಗತಿ ಸ್ಟುಡಿಯೋ ಕಟ್ಟಿಕೊಟ್ಟಿದ್ದರೂ, ಅದನ್ನು ಡಿಸಿ ಮುಂದುವರೆಸಿಕೊಟ್ಟಿದ್ದಾರೆ. ಆತ ಬಹುಮುಖ ವ್ಯಕ್ತಿತ್ವ ಹೊಂದಿದ ಬಿಂಬಗ್ರಾಹಿ, ಆತನಲ್ಲೊಂದು ತುಡಿತವಿತ್ತು. ಆತನಿಂದ ಬೆಳ್ಳಿ ಹೆಜ್ಜೆಯ ಸ್ವರೂಪ ಬೇರೆಯದೇ ರೂಪ ಪಡೆಯುತ್ತಿತ್ತು. ಆತ ದಾಖಲೆಗಳ ಸೃಷ್ಟಿಕರ್ತ. ತಪಸ್ಸನ್ನು ಮಾಡಿದಂಥ ವ್ಯಕ್ತಿ. ಲಕ್ಷಾಂತರ ಮನಸುಗಳಿಗೆ ಆತ ಬೇಕಾದವನಾಗಿ ಬದುಕಿದ್ದಾನೆಂದು ಡಿಸಿ ಸ್ಮರಿಸಿದ ನಂತರ, ಚಲನಚಿತ್ರ ಅಕಾಡೆಮಿ ಮಾಡಲಾಗದ ಹಲವು ಕೆಲಸಗಳನ್ನು ಪತ್ರಕರ್ತರ ಸಂಘ ಮಾಡಬೇಕಿದೆ, ಪತ್ರಕರ್ತರ ಸಂಘ ಹಿಂದೆಯೂ ಇತ್ತು. ನಾವೆಲ್ಲ ಆಗ ಬೇರೆ ಬೇರೆ ಕಾರಣಗಳಿಂದಾಗಿ ಪತ್ರಕರ್ತರ ಸಂಘವನ್ನು ಒಂದು ಮಾನದಂಡವಾಗಿ ಪರಿಗಣಿಸುತ್ತಿದ್ದೆವು ಎಂದು ಹೇಳಿದರು.

 

ಪ್ರೆಸ್‌ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್ ಮಾತನಾಡುತ್ತ ತಮ್ಮ ಹಾಗೂ ಡಿಸಿ ಜೊತೆಗಿನ ಒಡನಾಟದ ಸಂದರ್ಭವನ್ನು ನೆನಪು ಮಾಡಿಕೊಂಡರು. ಈ ಕಾರ್ಯಕ್ರಮದಲ್ಲಿ ಡಿ.ಸಿ. ನಾಗೇಶ್ ಅವರ ಕುಟುಂಬ ವರ್ಗವು ಹಾಜರಿದ್ದು ಮಗಳು, ಸಹೋದರ ಸೇರಿದಂತೆ ಹಲವಾರು ಡಿ.ಸಿ. ನಾಗೇಶ್ ಬಗ್ಗೆ ಮನಮುಟ್ಟುವಂಥ ವಿಷಯಗಳನ್ನು ಹಂಚಿಕೊಂಡರು. ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಮೊದಲ ಹೆಜ್ಜೆಯಾಗಿ ಆಯೋಜಿಸಿದ ಈ ಒಂದು ಕಾರ್ಯಕ್ರಮ ಬಹಳ ಅರ್ತಪೂರ್ಣವಾಗಿ ನಡೆಯುವ ಮೂಲಕ ಎಲ್ಲರ ಮೆಚ್ಚಿನ ಪಡೆಯಿತು.

Related posts