Cinisuddi Fresh Cini News 

ಸ್ಯಾಂಡಲ್ವುಡ್ ಸಾರಥಿ ಶಿವಣ್ಣ, ಚಂದನದವನದ ಜವಾಬ್ದಾರಿ ಹೊತ್ತ ಸೆಂಚುರಿ ಭಜರಂಗಿ ..!

ಅಂಬರೀಶ್ ಅವರ ನಂತರ ಕನ್ನಡ ಚಿತ್ರರಂಗದಲ್ಲಿ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಕರೋನಾ ಸಂಕಷ್ಟದ ಸಮಯದಲ್ಲಿ ಚಿತ್ರೋದ್ಯಮ ಎದುರಿಸುತ್ತಿರುವ ನೂರಾರು ತೊಂದರೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಮೂಲಕ ಎಲ್ಲಾ ರಂಗಗಳಂತೆ ಕನ್ನಡ ಚಿತ್ರರಂಗಕ್ಕೂ ಸಹ ಪ್ಯಾಕೇಜ್ ದೊರಕಿಸಿಕೊಳ್ಳುವಲ್ಲಿ ಒಬ್ಬ ಲೀಡರ್ ಅವಶ್ಯಕತೆ ಇತ್ತು.

ಚಿತ್ರರಂಗದ ಒಳ ಮತ್ತು ಹೊರಗಿನ ಬಿಕ್ಕಟ್ಟುಗಳಿಗೆ ಎಲ್ಲರನ್ನೂ ಒಂದೆಡೆ ಸೇರಿಸಿ ಒಗ್ಗಟ್ಟಿನ ಮಂತ್ರ ಜಪಿಸಿ, ಪ್ರತಿಯೊಬ್ಬರೂ ಒಪ್ಪುವಂತಹ ತೀರ್ಮಾನ ತೆಗೆದುಕೊಳ್ಳುವ ನಾಯಕನ ಅಗತ್ಯ ಇತ್ತು. ಆ ಕೊರತೆಯನ್ನು ತುಂಬಲು ಈಗ ದೊಡ್ಮನೆಯ ಮುಂದಾಳು ಡಾ|ಶಿವರಾಜ್‍ಕುಮಾರ್ ಮುಂದಾಗಿದ್ದಾರೆ.

ಕನ್ನಡ ಚಿತ್ರೋದ್ಯಮದ ಎಲ್ಲಾ ಅಂಗಸಂಸ್ಥೆಗಳ ಪ್ರಮುಖರು ಸೇರಿ ಶಿವಣ್ಣ ಅವರೇ ಚಿತ್ರರಂಗದ ಮುಂದಾಳತ್ವ ವಹಿಸಿಕೊಳ್ಳಬೇಕೆಂದು ತೀರ್ಮಾನಿಸಿ ಶುಕ್ರವಾರ ನಾಗವಾರದ ಅವರ ಮನೆಗೆ ತೆರಳಿ ಕೊನೆಗೂ ಎರಡು ಗಂಟೆಗಳ ಕಾಲ ಕೂತು ಚರ್ಚೆ ಮಾಡಿ ಕೊನೆಗೂ ಒಪ್ಪಿಸಿದ್ದಾರೆ.

ಚಿತ್ರರಂಗದ ನಾಯಕತ್ವದ ವಿಚಾರ ಹಲವು ದಿನಗಳಿಂದಲೂ ಚರ್ಚೆಯಲ್ಲಿತ್ತು. ಜೊತೆಗೆ ಶಿವಣ್ಣ ಅವರೇ ನಾಯಕತ್ವ ವಹಿಸಿಕೊಳ್ಳಬೇಕು ಎನ್ನುವುದು ಎಲ್ಲರ ಬಯಕೆ ಕೂಡ ಆಗಿತ್ತು. ಆದರೆ ಇದನ್ನು ಕಾರ್ಯಗತಗೊಳಿಸಲು ಯಾರೂ ಮುಂದೆ ಬಂದಿದ್ದಿಲ್ಲ. ಈ ಹಂತದಲ್ಲಿ ಚಲನಚಿತ್ರ ನಿರ್ಮಾಪಕರ ಸಂಘದ ನೇತೃತ್ವದಲ್ಲಿ ಆ ಕೆಲಸ ಸಸೂತ್ರವಾಗಿ ನಡೆದಿದೆ.

ಶಿವರಾಜ್‍ಕುಮಾರ್ ಅವರ ನೇತೃತ್ವದಲ್ಲಿ ಡಬ್ಬಿಂಗ್ ಹೋರಾಟ ಮತ್ತು ಕಾವೇರಿ ನೀರಿನ ವಿವಾದದ ಹೋರಾಟಗಳಲ್ಲಿ ಸಭೆಗಳು ನಡೆದಿದ್ದರೂ, ಅಲ್ಲಿ ಒಗ್ಗಟ್ಟು ಕಂಡಿರಲಿಲ್ಲ. ಆದರೆ, ಕೊರೊನಾ ವೈರಸ್ ಹಾವಳಿಯಿಂದ ಚಿತ್ರರಂಗ ತತ್ತರಿಸಿರುವ ಸನ್ನಿವೇಶದಲ್ಲಿ ಎಲ್ಲರೂ ಸೇರಿ ಒಂದೇ ತೀರ್ಮಾನ ತೆಗೆದುಕೊಳ್ಳಬೇಕಾದ ಅಗತ್ಯವಿತ್ತು.

ಚಿತ್ರರಂಗದ ವಿವಿಧ ವಿಭಾಗಗಳ ಪ್ರಮುಖರು ಈಗ ಶಿವರಾಜ್‍ಕುಮಾರ್ ಅವರನ್ನು ಆಯ್ಕೆ ಮಾಡಿದ್ದಾರೆ. ಅವರ ಮುಂದಾಳತ್ವದಲ್ಲಿ ಚಿತ್ರೋದ್ಯಮವನ್ನು ಕೊಂಡೊಯ್ಯಲು ತೀರ್ಮಾನಿಸಿದ್ದಾರೆ.

ಒಮ್ಮತದ ತೀರ್ಮಾನದ ನಂತರ ಮಾಧ್ಯಮಗಳ ಮುಂದೆ ಬಂದ ನಿರ್ಮಾಪಕರ ಸಂಘದ ಪ್ರಮುಖರು ಈ ವಿಚಾರವನ್ನು ತಿಳಿಸಿದರು. ಮೊದಲಿಗೆ ಹಿರಿಯ ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು ಮಾತನಾಡುತ್ತ ಮುಂಚೆಯಿಂದಲೂ ಡಾ. ರಾಜ್ ಕುಮಾರ್ ಅವರ ಮನೆಯಲ್ಲಿ ಇಂಥಾ ವಿಚಾರ ಬಂದಾಗ ಚರ್ಚೆಗಳು ನಡೆಯುತ್ತಿದ್ದವು.

ಈಗ ಚಿತ್ರೋದ್ಯಮಕ್ಕೆ ನಾಯಕನ ಅಗತ್ಯವಿದೆ. ಹೀಗಾಗಿ ಶಿವರಾಜ್‍ಕುಮಾರ್ ಅವರನ್ನು ನಾಯಕತ್ವ ವಹಿಸಿಕೊಳ್ಳುವಂತೆ ಮನವಿ ಮಾಡಿದ್ದೇವೆ. ಚಿತ್ರರಂಗದಲ್ಲಿ ಇದಕ್ಕೆ ಸ್ವಲ್ಪವೂ ವಿರೋಧವಿಲ್ಲದೆ, ನೂರಕ್ಕೆ ಇನ್ನೂರರಷ್ಟು ಮಂದಿ ಅನುಮೋದನೆ ನೀಡಿದ್ದಾರೆ.

ಎಲ್ಲರೂ ಶಿವಣ್ಣ ಅವರೇ ನಾಯಕತ್ವ ವಹಿಸಿಕೊಳ್ಳಲಿ ಎಂದಿದ್ದಾರೆ. ಮುಂದೆ ನಾವು ಹೇಗೆ ಹೆಜ್ಜೆ ಇಡಬೇಕು, ಅನ್ನದಾತ ಉಳೀಬೇಕು ಎಂದು ಶಿವಣ್ಣ ಅವರಿಗೆ ಮನವರಿಕೆ ಮಾಡಿಕೊಟ್ಟು ಒಪ್ಪಿಸಿದ್ದೇವೆ ಎಂದು ಹೇಳಿದರು.

ಸಾ.ರಾ. ಗೋವಿಂದು ಮಾತನಾಡಿ ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗವನ್ನು ಉಳಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ನಾವೆಲ್ಲ ಸೇರಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಶಿವರಾಜ್‍ಕುಮಾರ್ ಅವರು ಒಪ್ಪಿಕೊಂಡಿದ್ದಾರೆ.

ಡಾ.ರಾಜ್‍ಕುಮಾರ್ ನಂತರ ಅಂಬರೀಶ್ ನಮಗೆ ಹಿರಿಯರಾಗಿ ನಿಂತಿದ್ದರು. ಈಗ ಶಿವಣ್ಣ ಅವರ ನೇತೃತ್ವದಲ್ಲಿ ಇಡೀ ಚಿತ್ರೋದ್ಯಮ ಬೇಡಿಕೆಗಳನ್ನು ಮಂಡಿಸಲಿದೆ ಎಂದು ಹೇಳಿದರು.

ಎಲ್ಲರ ನಿರ್ಧಾರಕ್ಕೆ ಗೌರವ ಸೂಚಲವೆಂಬಂತೆ ಶಿವರಾಜ್‍ಕುಮಾರ್ ಮಾತನಾಡುತ್ತ ಸಾವಿರ ಜನರನ್ನು ಹಿಂದೆ ಇಟ್ಟುಕೊಂಡು ಮುಂದೆ ಹೋಗೋನು ನಾಯಕ ಆಗುವುದಿಲ್ಲ. ಎಲ್ಲರನ್ನೂ ಸರಿಸಮಾನವಾಗಿ ತನ್ನ ಜೊತೆಗೇ ತೆಗೆದುಕೊಂಡು ಹೋಗುವವನು ಲೀಡರ್ ಆಗುತ್ತಾನೆ.

ಎಲ್ಲರ ಜತೆಯಲ್ಲಿ, ಇವರಲ್ಲಿ ಒಬ್ಬನಾಗಿ ಸೋಕಾಲ್ಡï ನಾಯಕ ಎಂದಿರುವುದರಿಂದ ಒಪ್ಪಿಕೊಳ್ಳುತ್ತೇನೆಯೇ ಹೊರತು, ನಾಯಕ ಎಂದು ದುರಹಂಕಾರದಿಂದ ಹೋಗುವುದಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಮುಂದೆ ಹೋಗೋಣ.

ನಮ್ಮ ಚಲನಚಿತ್ರ ಉದ್ಯಮ ಈ ಮಟ್ಟಕ್ಕೆ ಬೆಳೆದಿರಲು ಅಭಿಮಾನಿಗಳು ಕಾರಣ. ಕನ್ನಡ ಚಿತ್ರೋದ್ಯಮಕ್ಕೆ ಏನೂ ಆಗುವುದಿಲ್ಲ. ನಮ್ಮನ್ನೆಲ್ಲ ಕಾಪಾಡಲು ಜನರು ಇದ್ದೇ ಇರುತ್ತಾರೆ. ಈ ಕರೋನಾ ಶಾಶ್ವತವೇನಲ್ಲ, ಇಂದು ಬರುತ್ತೆ, ನಾಳೆ ಹೋಗುತ್ತೆ. ಎದುರಾದ ಕಷ್ಟಗಳನ್ನು ನಾವೆಲ್ಲ ಸೇರಿ ಧೈರ್ಯವಾಗಿ ಎದುರಿಸೋಣ, ಆಗಲೇ ಗೆಲುವು ಕಾಣಲು ಸಾಧ್ಯ ಎಂದು ಹೇಳಿದರು.

ನಿರ್ಮಾಪಕರ ಪರವಾಗಿ ಅಧ್ಯಕ್ಷ ಪ್ರವೀಣ್ ಕುಮಾರ್ ಮಾತನಾಡುತ್ತ ಚಿತ್ರರಂಗಕ್ಕೆ ನಾಯಕನಾಗಬೇಕು ಎಂದು ನಾವೆಲ್ಲ ಒಮ್ಮತದ ತೀರ್ಮಾನಕ್ಕೆ ಬಂದು ಶಿವಣ್ಣ ಅವರನ್ನು ಕೇಳಿಕೊಂಡೆವು. ಅದಕ್ಕೆ ಅವರು ಸಮ್ಮತಿ ಸೂಚಿಸಿದ್ದಾರೆ. ಅವರು ನಾವೆಲ್ಲ ಒಗ್ಗಟ್ಟಾಗಿ ಮುನ್ನಡೆಯೋಣ ಎನ್ನುವ ಒಳ್ಳೇ ಮಾತನ್ನು ಹೇಳಿದರು.

ಇಂದು ಚಿತ್ರರಂಗಕ್ಕೆ ಸ್ಪೂರ್ತಿದಾಯಕವಾಗುವಂಥ ಒಳ್ಳೇ ಆರೋಗ್ಯದಾಯಕ ಚರ್ಚೆ ನಡೆದಿದೆ. ಅದು ಮುಂದಿನ ದಿನಗಳಲ್ಲಿ ಕಾರ್ಯಗತವಾಗಲಿದೆ. ಚೇಂಬರ್‍ನಲ್ಲಿ ಮತ್ತೊಮ್ಮೆ ಚರ್ಚೆ ನಡೆಸಿ , ಇನ್ನು ಮೂರ್ನಾಲ್ಕು ದಿನಗಳಲ್ಲಿ ಮುಖ್ಯಮಂತ್ರಿಗಳ ಬಳಿಗೆ ನಾವೆಲ್ಲ ಹೋಗಿ ನಮ್ಮ ಬೇಡಿಕೆಗಳನ್ನು ಮಂಡಿಸಲಿದ್ದೇವೆ ಎಂದು ಹೇಳಿದರು.

ಡಾ. ಶಿವರಾಜ್‍ಕುಮಾರ್ ಅವರ ಮನೆಯಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಎಂ. ಜಿ. ರಾಮಮೂರ್ತಿ, ಎನ್.ಎಂ. ಸುರೇಶ್, ಕೆ. ಮಂಜು, ಅಶೋಕ್, ರಾಮು, ಎನ್. ಕುಮರ್, ಕೆ. ಪಿ. ಶ್ರೀಕಾಂತ್, ಎಸ್. ಕೃಷ್ಣ, ಕಾರ್ತೀಕ್‍ಗೌಡ, ಜಯಣ್ಣ, ಭೋಗೇಂದ್ರ, ಸೂರಪ್ಪ ಬಾಬು, ಎ. ಗಣೇಶ್, ಉಮೇಶ್ ಬಣಕಾರ್, ಭಾ.ಮಾ. ಹರೀಶ್, ಎಸ್. ಎ. ಚಿನ್ನೇಗೌಡ್ರು, ಜೆ. ಜೆ. ಕೃಷ್ಣ, ಗುರುಕಿರಣï, ಸಾಧು ಕೋಕಿಲಾ, ಬಿ. ಆರ್. ಕೇಶವ ಸೇರಿದಂತೆ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.

ಕೊರೊನಾ ವೈರಸ್ ಸಂಕಷ್ಟದಿಂದ ಚಿತ್ರರಂಗದವನ್ನೇ ನಂಬಿಕೊಂಡಿದ್ದ ಸಾವಿರಾರು ಕುಟುಂಬಗಳು ದುಡಿಮೆಯಿಲ್ಲದೆ ತೀವ್ರವಾದ ತೊಂದರೆಯಲ್ಲಿವೆ. ಆರಂಭದಲ್ಲಿ ಕೆಲವರು ಹಣಕಾಸಿನ ಸಹಾಯ ಮತ್ತು ದಿನಸಿ ಕಿಟ್ ವಿತರಣೆ ಮಾಡಿದ್ದರು, ಆದರೆ ಈಗ ಅದಾವುದೂ ಇಲ್ಲದೆ ಇನ್ನೂ ಹೆಚ್ಚಿನ ತೊಂದರೆಗಳನ್ನು ಕಾರ್ಮಿಕರು ಎದುರಿಸುತ್ತಿದ್ದಾರೆ.

ನಾಲ್ಕು ತಿಂಗಳು ಕಳೆದರೂ ಚಿತ್ರೀಕರಣ ಆರಂಭವಾಗದೆ ಇರುವುದರಿಂದ ಅವರ ಕಷ್ಟಗಳು ಮುಗಿದಿಲ್ಲ. ತೆಲುಗು ಚಿತ್ರರಂಗದಲ್ಲಿ ಹಿರಿಯ ನಟ ಚಿರಂಜೀವಿ ಅವರ ನಿವಾಸಕ್ಕೆ ಸಚಿವರೇ ತೆರಳಿ ಚಿತ್ರರಂಗಕ್ಕೆ ಸಹಾಯ ನೀಡುವ ಕುರಿತು ಮಾತನಾಡಿದ್ದರು.

ಇಲ್ಲಿ ಹಾಗೆ ನಡೆಯದೆ ಇದ್ದರೂ ಚಿತ್ರೋದ್ಯಮ ಒಂದಾಗಿ ಶಿವರಾಜ್‍ಕುಮಾರ್ ಅವರ ನಾಯಕತ್ವದಲ್ಲಿ ತೀರ್ಮಾನ ತೆಗೆದುಕೊಳ್ಳಲು ಮುಂದಾಗಿರುವುದು ಸಿನಿ ಕಾರ್ಮಿಕರಲ್ಲಿ ಹೊಸ ಭರವಸೆಯ ಬೆಳಕು ಮೂಡಿದಂತಾಗಿದೆ.

Share This With Your Friends

Related posts