Cini Reviews Cinisuddi Fresh Cini News 

ಸತ್ಯದ ಸುಳಿಯಲ್ಲಿ “ಸಖತ್” : ಚಿತ್ರ ವಿಮರ್ಶೆ – ರೇಟಿಂಗ್ : 4/5

ಚಿತ್ರ : ಸಖತ್​
ನಿರ್ಮಾಣ : ನಿಶಾ ವೆಂಕಟ್ (ಕೆವಿಎನ್​ ಪ್ರೊಡಕ್ಷನ್​​​)
ನಿರ್ದೇಶನ: ಸಿಂಪಲ್​ ಸುನಿ
ಸಂಗೀತ : ಜುಡಾ ಸ್ಯಾಂಡಿ
ಛಾಯಾಗ್ರಹಣ : ಸಂತೋಷ್ ರೈ ಪತಾಜೆ
ತಾರಾಗಣ : ಗಣೇಶ್​, ನಿಶ್ವಿಕಾ ನಾಯ್ಡು, ಸುರಭಿ, ಸಾಧು ಕೋಕಿಲ , ರಂಗಾಯಣ ರಘು ಧರ್ಮಣ , ಮಾಸ್ಟರ್ ವಿಹಾನ್ ಹಾಗೂ ಮುಂತಾದವರು…

ಮನೋರಂಜನೆಗಾಗಿ ಕಾದು ಕುಳಿತಿರುವಂಥ ಸಿನಿಪ್ರಿಯರಿಗಾಗಿ ಈ ವಾರ ತೆರೆಮೇಲೆ ಬಂದಂತಹ ಚಿತ್ರ “‘ಸಖತ್”. ಕಾಮಿಡಿ , ಆ್ಯಕ್ಷನ್ , ಸಸ್ಪೆನ್ಸ್ ಹೀಗೆ ಒಂದಲ್ಲಾ ಬಹುತೇಕ ಅಂಶಗಳನ್ನು ಒಳಗೊಂಡಿರುವ ಸಖತ್ ಮನಮುಟ್ಟುವ ಎಳೆಯು ಬೆಸೆದುಕೊಂಡಿದೆ. ಪ್ರಥಮ ಬಾರಿಗೆ ಕೆವಿಎನ್ ಸಂಸ್ಥೆಯ ನಿರ್ಮಾಣದಲ್ಲಿ ನಿಶಾ ವೆಂಕಟ್ ಹಾಗೂ ವೆಂಕಟ್ ನಾರಾಯಣ್ ಸಖತ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ.

ಚಿತ್ರದ ಸಂಪೂರ್ಣ ಬೆನ್ನೆಲುಬಾಗಿ ಸುಪ್ರೀತ್ ನಿಂತಿದ್ದು , ಸಿಂಪಲ್ ಸುನಿ ಮನರಂಜನೆ ಜೊತೆಗೆ ಮನಮಿಡಿಯುವಂಥ ಚಿತ್ರಕತೆ ತೆರೆದಿಟ್ಟಿದ್ದಾರೆ. ಚಮಕ್ ನಲ್ಲಿ ಮಿಂಚಿದ ಸಿಂಪಲ್ ಸುನಿ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಶನ್ ಸಖತ್ ನಲ್ಲೂ ಸದ್ದು ಮಾಡುತ್ತಿದೆ.

ಚಿತ್ರದ ಆರಂಭದ ಶೀರ್ಷಿಕೆ ಹೆಸರುಗಳಲ್ಲಿ ಬರುವ ಪುನೀತ್ ರಾಜ್ ಕುಮಾರ್ ರವರ ಭಾವಚಿತ್ರಗಳನ್ನು ಹಾಡಿನ ಮೂಲಕ ತೋರಿಸಿರುವ ರೀತಿ ಬಹಳ ಅರ್ಥಪೂರ್ಣವಾಗಿದ್ದು , ಅವರು ಜೀವಂತವಾಗಿದ್ದರೆ ಎನಿಸುತ್ತದೆ. ನಂತರ ಬರುವ ಧ್ವನಿಯಲ್ಲಿ ಸಿನಿಮಾದ ಓಟ ಗಮನ ಸೆಳೆಯುತ್ತದೆ ಎಂಬುದು ತಿಳಿಯುತ್ತದೆ.

ದೇವಲೋಕದಲ್ಲಿ ಬ್ರಹ್ಮ ಹಾಗೂ ವಿಘ್ನೇಶ್ವರ ಚರ್ಚಿಸುವಾಗ ಭೂಲೋಕದಲ್ಲಿರುವ ಕಿಲಾಡಿಗಳ ಬಗ್ಗೆ ಮಾತನಾಡುವಾಗ ಕೋರ್ಟ್ ಕಟಕಟೆ ತೆರೆದುಕೊಳ್ಳುತ್ತದೆ. ಅದು ಚಿತ್ರದ ಮಧ್ಯಂತರ ಭಾಗವಾದರೂ ಚಿತ್ರ ಹಿಂದಕ್ಕೆ ಸರಿದು ಆರಂಭ ಪಡೆಯುತ್ತದೆ. ಬಾಲ್ಯದಿಂದಲೇ ತನ್ನ ವರ್ಚಸ್ಸನ್ನು ವಿಭಿನ್ನವಾಗಿ ಬೆಳೆಸಿಕೊಳ್ಳುವ ಬಾಲು (ಮಾಸ್ಟರ್ ವಿಹಾನ್) ಎಸ್.ಪಿ.ಬಿ ಇಳಯರಾಜ ಹೀಗೆ ನಾನಾ ಗಣ್ಯ ವ್ಯಕ್ತಿಗಳಾಗಿ ಬೆಳೆಯಬೇಕೆಂಬ ಆಸೆ ಹೊಂದಿರುತ್ತಾನೆ.

ನಂತರ ದಿನಗಳಲ್ಲಿ (ಸಾಧು ಕೋಕಿಲ) ಆರ್ಕೆಸ್ಟ್ರಾ ತಂಡವನ್ನ ಸೇರುವ ನಾಯಕ ಬಾಲು (ಗಣೇಶ್) ಗಾಯಕ ನಾಗಿರುತ್ತಾನೆ. ಆದರೆ ಸಾಧು ಕೋಕಿಲಾ ರಿಯಾಲಿಟಿ ಶೋಗಳಲ್ಲಿ ಮಿಂಚಬೇಕೆಂಬ ಕನಸು… ಆದೇ ಕಾರ್ಯಕ್ರಮದ ನಿರೂಪಕಿ ಆಗಿರುತ್ತಾಳೆ ನಾಯಕಿ ಮಯೂರಿ (ಸುರಭಿ) ಅವಳನ್ನು ವಾಹಿನಿಯಲ್ಲಿ ನೋಡಿ ಪ್ರೀತಿಸುಲು ನಿರ್ಧರಿಸುತ್ತಾನೆ. ಇದರ ನಡುವೆ ರಿಯಾಲಿಟಿ ಶೋಗಳು ತಮ್ಮ ಚಾನೆಲ್ ಟಿ.ಆರ್. ಪಿಗಾಗಿ ಮಾಡುವ ಗಿಮಿಕ್ ಗಳ ಅನಾವರಣ ತೆರೆದುಕೊಳುತ್ತದೆ.

ತನ್ನ ಗುರುವಿಗಾಗಿ ಬಾಲು ಅಂಧನ ರೀತಿಯಲ್ಲಿ ಬಂದು ನಂತರ ತಾನೇ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಸೇರಿಕೊಳ್ಳುತ್ತಾನೆ. ಅಂಧನಂತೆ ಆಯಕ್ಟ್​ ಮಾಡುತ್ತಾ ಸುರಭಿಯ ಪ್ರೀತಿ ಪಡೆಯಲು ಮುಂದಾಗುತ್ತಾನೆ. ಇದರ ನಡುವೆ ಬಾಲು ಎದುರೇ ಅಂಧರ ದೃಷ್ಟಿ ಆಶ್ರಮದ ಮುಖ್ಯಸ್ಥ (ರಾಮಕೃಷ್ಣ)ರ ಕೊಲೆ ನಡೆಯುತ್ತದೆ.

ಕಣ್ಣಿದ್ದು ಸತ್ಯವನ್ನು ಹೇಳಲಾಗದ ಬಾಲು ಜೀವನದಲ್ಲಿ ಹಲವಾರು ಏರುಪೇರುಗಳು ಎದರಾಗತೊಡಗುತ್ತವೆ. ಅಂಧರ ಆಶ್ರಮದ ಮಕ್ಕಳಿಗೆ ಗಾಯನ ಹೇಳಿಕೊಡುವ ಗುರುವಾಗಿ ಬರುವ ಬಾಲುಗೆ ಮತ್ತೊಬ್ಬ ಅಂಧೆ (ನಿಶ್ವಿಕಾ ನಾಯ್ಡು) ಪರಿಚಯ. ಆದರೆ ಬಾಲು ಇರುವ ಆಶ್ರಮವೇ ಆ ಸತ್ತ ವ್ಯಕ್ತಿಯದಾಗಿರುತ್ತದೆ. ಹೀಗೆ ಒಂದರ ಹಿಂದೆ ಒಂದಂತೆ ಬಾಲುಗೆ ಸಮಸ್ಯೆಗಳನ್ನು ಕೊಂಡಿಯಾಗಿ ಬೆಸೆದುಕೊಳ್ಳುತ್ತದೆ.

ನಿಜವಾಗಿಯೂ ಬಾಲು ತಾನು ಪ್ರೀತಿಯನ್ನ ಪಡೆಯುತ್ತಾನಾ…
ಕೊಲೆಯ ಸತ್ಯ ತೆರೆದಿಡುತ್ತಾನಾ…
ಅಂಧನಾಗಿ ಇರುತ್ತಾನಾ…
ಇಂತಹ ಹಲವು ವಿಚಾರಗಳನ್ನು ತಿಳಿದುಕೊಳ್ಳಬೇಕಾದರೆ ನೀವೆಲ್ಲರೂ ಒಮ್ಮೆ ಈ “ಸಖತ್” ಸಿನಿಮಾವನ್ನು ನೋಡಲೇಬೇಕು.

ನಿರ್ದೇಶಕ ಸಿಂಪಲ್ ಸುನಿ ಸಿನಿಮಾ ಎಂದರೆ ಅಲ್ಲಿ ಒಂದಷ್ಟು ಪಂಚಿಂಗ್​ ಡೈಲಾಗ್​, ಕಾಮಿಡಿಗಳು , ಹೊಸತನ ನಿರೂಪಣಾ ಶೈಲಿ ಇರುತ್ತದೆ. ಸಖತ್​ ಚಿತ್ರದಲ್ಲೂ ಕೆಲ ದೃಶ್ಯಗಳು ಕಚುಗುಳಿ ಇಟ್ಟರೆ, ಇನ್ನೂ ಕೆಲ ದೃಶ್ಯಗಳು ಗಂಭೀರವಾಗಿ ಸಾಗುತ್ತವೆ. ಇದೆಲ್ಲದರ ಜೊತೆಗೆ ನೇತ್ರ ದಾನದ ಬಗ್ಗೆ ಜನರಿಗೆ ಸಂದೇಶವನ್ನು ಸಾರಿದ್ದಾರೆ.

ಒಂದು ಅಪಘಾತದ ಸುತ್ತ ಸಾಗುವ ಈ ಕಥೆಯಲ್ಲಿ ಸಸ್ಪೆನ್ಸ್ , ಕಾಮಿಡಿ, ಆ್ಯಕ್ಷನ್ , ಸೆಂಟಿಮೆಂಟ್ ಎಲ್ಲವೂ ಒಳಗೊಂಡಿದೆ. ಚಿತ್ರದ ಮೊದಲ ಭಾಗ ನಿಧಾನ ಗತಿ ಎನಿಸಿದರೂ ಚಿತ್ರದ ಎರಡನೇ ಭಾಗ ಕುತೂಹಲಕಾರಿಯಾಗಿ ಮನರಂಜನೆಯನ್ನು ನೀಡುತ್ತದೆ. ಚಿತ್ರದ ಹೈಲೈಟ್ ಗಳಲ್ಲಿ ಡೈಲಾಗ್ ನ ಟೈಮಿಂಗ್ಸ್ ಅದ್ಭುತವಾಗಿದೆ.

ಇನ್ನೂ ಸಖತ್ ನ ಕೇಂದ್ರ ಬಿಂದು ನಟ ಗಣೇಶ್ ಕೂಡ ಮೊದಲ ಬಾರಿಗೆ ಅಂಧನಾಗಿ ಅಭಿನಯಿಸಿದ್ರು , ಲೀಲಾಜಾಲವಾಗಿ ಪರಕಾಯ ಪ್ರವೇಶ ಮಾಡಿದ್ದಾರೆ. ಇಡೀ ಸಿನಿಮಾದಲ್ಲಿ ಬಾಲು ಪಾತ್ರವೇ ಆವರಿಸಿಕೊಂಡಿದ್ದು , ಚಿತ್ರದುದ್ದಕ್ಕೂ ಬರುವ ಪಂಚಿಂಗ್ ಡೈಲಾಗ್ ಗಳು , ಸಂದರ್ಭಕ್ಕೆ ತಕ್ಕಂತೆ ಮಾತು, ಕಟಕಟೆಯಲ್ಲಿ ಸಾಂದರ್ಭಿಕ ಸಾಕ್ಷಿಯಾಗಿ ಗಮನ ಸೆಳೆಯುವ ರೀತಿ, ಇನ್ನೂ ಆ್ಯಕ್ಷನ್ ದೃಶ್ಯಗಳನ್ನು ಕೂಡ ಅಚ್ಚುಕಟ್ಟಾಗಿ ನಿಭಾಯಿಸಿದ್ದು, ತಮ್ಮ ಆರಂಭಿಕ ಚಿತ್ರಗಳಲ್ಲಿ ಬರುವ ಇಂಟ್ರಡಕ್ಷನ್ ಮಾದರಿಯಲ್ಲಿ ಸಖತ್ ನಲ್ಲೂ ಹಾಡುಗಳಿಗೆ ಸ್ಟೆಪ್ ಹಾಕಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾಗೆ ಬರುವ ಪ್ರೇಕ್ಷಕರಿಗೆ ಮನರಂಜನೆ ಗ್ಯಾರಂಟಿ ಎನ್ನುಬಹುದು.

ವಿಶೇಷ ಎಂದರೆ ಬಾಲ ಪ್ರತಿಭೆ ಮಾಸ್ಟರ್ ವಿಹಾನ್ ಗಣೇಶ್ ಕೂಡ ತನ್ನ ಮೊದಲ ಚಿತ್ರದಲ್ಲೇ ಭರ್ಜರಿಯಾಗಿ ನಟಿಸಿದ್ದಾನೆ. ತನ್ನ ತುಂಟ ಮಾತುಗಳಿಂದ ಹಾಗೂ ಅಂಧರಂತೆ ಕಣ್ಣ ತಿರಿಗಿಸುವ ರೀತಿ ಗಮನ ಸೆಳೆಯುತ್ತದೆ. ಭವಿಷ್ಯದಲ್ಲಿ ಭರವಸೆಯ ಪ್ರತಿಭೆಯಾಗಿ ಬೆಳೆಯುವ ಸಾಧ್ಯತೆ ಕಾಣುತ್ತಿದೆ.

ಇನ್ನು ಈ ಚಿತ್ರದಲ್ಲಿ ಮುದ್ದು ಮುದ್ದಾಗಿ ಕಾಣುವ ಈ ಮರಾಠಿ ಬೆಡಗಿ ಸುರಭಿ ಟಿವಿ ನಿರೂಪಕಿಯಾಗಿ ಉತ್ತಮವಾಗಿ ಅಭಿನಯಿಸಿದ್ದಾರೆ. ಅದೇ ರೀತಿ ಅಂಧೆಯ ಪಾತ್ರದಲ್ಲಿನಿಶ್ವಿಕಾ ಕೂಡ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಉಳಿದಂತೆ ಬರುವ ಪಾತ್ರಧಾರಿಗಳಾದಸಾಧು ಕೋಕಿಲ, ರಂಗಾಯಣ ರಘು, ಧರ್ಮಣ್ಣ, ಮಾಳವಿಕಾ ಅವಿನಾಶ್, ರಾಮಕೃಷ್ಣ , ಹಂಸ ಗಿರೀಶ್​ ಶಿವಣ್ಣ, ಕುರಿ ಪ್ರತಾಪ್​ ,ಶೋಭರಾಜ್​ ಸೇರಿದಂತೆ ಹಲವು ಪಾತ್ರಗಳು ಗಮನಸೆಳೆಯುತ್ತವೆ.

ಇನ್ನು ಈ ಚಿತ್ರಕ್ಕೆ ಸಂಗೀತ ನೀಡಿರುವ ಜೂಡಾ ಸ್ಯಾಂಡಿ ಕೆಲಸ ಮತ್ತಷ್ಟು ಉತ್ತಮವಾಗ ಬಹುದಿತ್ತು ,ಹಾಡುಗಳು ನಿರೀಕ್ಷಿತ ಮಟ್ಟಕ್ಕೆ ಕಾಣುತ್ತಿಲ್ಲ. ಇನ್ನು ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಕೈಚಳಕ ಸೊಗಸಾಗಿ ಮೂಡಿಬಂದಿದೆ. ಅದೇ ರೀತಿ ಸಂಭಾಷಣೆ ಮನರಂಜನೆಯ ರಸದೌತಣ ನೀಡಿದೆ. ಒಟ್ಟಾರೆ ಇಡೀ ಚಿತ್ರವನ್ನು ಕುಟುಂಬ ಸಮೇತ ಕುಳಿತು ನೋಡಬಹುದಾಗಿದೆ.

Related posts