ಜನ್ಮಾಂತರದ ಪ್ರತೀಕಾರ “ರುಧೀರ ಕಣಿವೆ” (ಚಿತ್ರವಿಮರ್ಶೆ -ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ರುಧೀರ ಕಣಿವೆ
ನಿರ್ದೇಶಕ : ಸಮರ್ಥ. ಎಂ
ನಿರ್ಮಾಪಕ : ವಿಜಯ ಕುಮಾರ್
ಸಂಗೀತ : ಎ.ಟಿ.ರವೀಶ್
ಛಾಯಾಗ್ರಹಕ : ಲಕ್ಕಿ ಗೌಡ
ತಾರಾಗಣ : ಕಾರ್ತಿಕ್, ದಿಶಾ ಪೂವಯ್ಯ, ಅಮೃತ, ಭವ್ಯ, ಹೇಮಂತ್, ಬಾಲ ರಾಜವಾಡಿ, ಶೋಭ್ ರಾಜ್, ಸಂಗೀತಾ, ಲೋಕನಾಥ್ ಧರ್ಮಲಿಂಗಮ್, ಹಾಗೂ ಮುಂತಾದವರು…
ಪ್ರತಿ ಒಂದು ಸಸ್ಪೆನ್ಸ್ , ಥ್ರಿಲ್ಲರ್, ಹಾರರ್ ಚಿತ್ರಗಳಿಗೂ ಕೂಡ ಒಂದು ಹಿನ್ನೆಲೆ ಇದ್ದೇ ಇರುತ್ತದೆ. ಅಂತಹದ್ದೇ ಒಂದು ಜನ್ಮಾಂತರದ ಪ್ರೇಮಿಗಳ ಬದುಕಿನಲ್ಲಿ ಎದುರಾಗುವ ದುರಂತಕ್ಕೆ ಪ್ರತ್ಯುತ್ತರವಾಗಿ ಸಿಡಿದೆಳುವ ಕಥಾನಕ ರುಧೀರ ಕಣಿವೆ. ಮಂತ್ರವಾದಿ (ಬಾಲ ರಾಜವಾಡಿ) ಗೆ ಗೋಚರವಾಗುವ ದುಷ್ಟ ಶಕ್ತಿಯ ಆಟಹಾಸ.
ಇದರ ನಡುವೆ ಪಾಕಿಸ್ತಾನದ ಕರಾಚಿ, ಭಾರತದ ಬಾಂಬೆ ಹಾಗೂ ಬೆಂಗಳೂರಿನಲ್ಲಿ ಮರುಜನ್ಮ ಪಡೆದ ಮೂವರು ಹುಡುಗರು.
ಮತ್ತೊಂದೆಡೆ ಭೂ ತಜ್ಞರ ಸಹಕಾರದೊಂದಿಗೆ ದಟ್ಟ ಅರಣ್ಯದಲ್ಲಿ ನಿಧಿಯ ಸುಳಿವು ಪತ್ತೆ ಹಚ್ಚುವ ರೌಡಿಗಳು ಇದಕ್ಕೆ ಪೊಲೀಸರ ಸಾಥ್. ಐದು ಬೆಟ್ಟಗಳ ನಡುವೆ ಇರುವ ರುಧೀರ ಕಣಿವೆ ಬೆಟ್ಟದ ನಿಧಿಗಾಗಿ ತಂಡ ರಚನೆ.
ಹಣದ ಅವಶ್ಯಕತೆಗಾಗಿ ಮೂರು ಯುವಕರು ಸತ್ಯ , ದೇವು ಹಾಗೂ ಅರ್ಜುನ್ ಈ ನಿಧಿಯ ಹುಡುಕಾಟಕ್ಕಾಗಿ ಅರಣ್ಯದೊಳಗೆ ಪ್ರವೇಶ ಮಾಡುತ್ತಾರೆ. ಇನ್ನು ಮತ್ತೊಂದು ತಂಡವಾಗಿ ಸಲ್ಮಾನ್, ವೀರ ಹಾಗೂ ಗ್ಯಾನ ಕಾಡಿನೊಳಗೆ ಪ್ರವೇಶ ಮಾಡ್ತಾರೆ.
ಹೊಡೆದಾಟ, ಬಡೆದಾಟದ ನಡುವೆ ಸಾಗಿ ನಿಧಿಯ ಸ್ಥಳ ಸೇರುವ ಮೂವರು, ಭೂಮಿ ಅಗೆಯುವಾಗ ಆತ್ಮ ಪ್ರತ್ಯಕ್ಷವಾಗುತ್ತದೆ. ಅದು ತನ್ನ ಸಾವಿಗೆ ಕಾರಣರಾದವರನ್ನ ಸಂಹರಿಸಲು ಮಾಡುವ ಸಂಚು. ಇದರ ಹಿಂದೆ ಒಂದು ಫ್ಲಾಶ್ ಬ್ಯಾಕ್. ಊರಿನಲ್ಲಿರುವ ಶ್ರೀಮಂತ ವ್ಯಕ್ತಿಯ ಮಗ ಹಾಗೂ ವೇಶ್ಯಾವಾಟಿಕೆ ಸಿಲುಕಿರುವಳ ಮಗಳು ಪ್ರೀತಿಸುವ ವಿಚಾರ ಚಿತ್ರದ ತಿರುವಿಗೆ ಕಾರಣ.
ಹುಡುಗಿಯ ಸಾವಿಗೆ ಕಾರಣ ಏನು…
ಮೂವರ ಪುನರ್ಜನ್ಮ ಯಾಕೆ…
ಶಿಕ್ಷೆ ಸಿಗುವುದು ಯಾರಿಗೆ…
ರುಧೀರ ಕಣಿವೆಯಲ್ಲಿ ನಿಧಿ ಸಿಗುತ್ತಾ…
ಇಂತಹ ಪ್ರಶ್ನೆಗಳಿಗೆ ಉತ್ತರಕ್ಕಾಗಿ ಈ ಚಿತ್ರ ನೋಡಬೇಕು.
ಈ ಚಿತ್ರದಲ್ಲಿ ಯುವ ಪ್ರತಿಭೆಗಳ ಜೊತೆ ಅನುಭವಿ ಕಲಾವಿದರು ಕೂಡ ಅಭಿನಯಿಸಿದ್ದು, ಒಂದಷ್ಟು ಪ್ರಮುಖ ಪಾತ್ರಗಳು ಗಮನ ಸೆಳೆಯುತ್ತದೆ. ಇನ್ನೊಂದಷ್ಟು ಪಾತ್ರಗಳು ತರಬೇತಿ ಪಡೆಯುವುದು ಅಗತ್ಯ ಅನ್ನಿಸುತ್ತದೆ. ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಹಾರರ್ ಅಂಶಗಳೊಂದಿಗೆ ಪ್ರೇಮಿಗಳಿಬ್ಬರ ಜನ್ಮ ಜನ್ಮಾಂತರದ ಎಳೆಯನ್ನು ನಿರ್ದೇಶಕರು ತೆರೆದಿಟ್ಟಿದ್ದಾರೆ.
ಚಿತ್ರಕಥೆಯ ಏರಿಳಿತದಲ್ಲಿ ಮತ್ತಷ್ಟು ಹಿಡಿತ ಮಾಡಬಹುದಿತ್ತು. ಛಾಯಾಗ್ರಹಣ ಕಾರ್ಯವೈಖರಿ ಮತ್ತಷ್ಟು ಉತ್ತಮವಾಗಬಹುದಿತ್ತು, ಸಾಹಸ ಸನ್ನಿವೇಶಗಳು, ಹಿನ್ನೆಲೆ ಸಂಗೀತ ಹಾಗೂ ಗ್ರಾಫಿಕ್ ಕೆಲಸ ಗಮನ ಸೆಳೆಯುತ್ತದೆ. ಇಂತಹ ಚಿತ್ರಕ್ಕೆ ಬಂಡವಾಳ ಹೂಡಿರುವ ನಿರ್ಮಾಪಕರು ಸಾಹಸ ಮೆಚ್ಚಬೇಕು.
ಸಸ್ಪೆನ್ಸ್ ಹಾಗೂ ಹಾರರ್ ಚಿತ್ರವನ್ನು ಇಷ್ಟಪಡುವವರಿಗಾಗಿ ಈ ರುಧೀರ ಕಣಿವೆ ಬಂದಿದ್ದು , ಚಿತ್ರ ಪ್ರೇಮಿಗಳು ಸಿನಿಮಾ ವೀಕ್ಷಿಸಲು ಚಿತ್ರಮಂದಿರದಲ್ಲಿ ಜಮಾಯಿಸಿದ್ದಾರೆ. ಒಟ್ನಲ್ಲಿ ಮನೋರಂಜನೆಯ ದೃಷ್ಟಿಯಿಂದ ಈ ಚಿತ್ರವನ್ನು ಒಮ್ಮೆ ವೀಕ್ಷಿಸಬಹುದು.