Cinisuddi Fresh Cini News 

ರಿಷಬ್‍ಗೆ ಕ್ಲಾಸ್ ತಗೊಳ್ಳೋ ಹುಡುಗಿ ಬೇಕಂತೆ.. !

ರಿಷಬ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗಷ್ಟೇ ಬಹಳ ಸರಳವಾಗಿ ನೆರವೇರಿತ್ತು. ಸಂದೇಶ ನಾಗರಾಜ್ ಅವರ ನಿರ್ಮಾಣದ ಈ ಚಿತ್ರಕ್ಕೆ ಗಿರಿಕೃಷ್ಣ ಕಥೆ ಬರೆದು ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರ ಇದಾಗಿದೆ.

ರಿಷಬ್ ಶೆಟ್ಟಿ ಅವರ ಕಚೇರಿಯಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ರಿಷಬ್ ಶೆಟ್ಟಿ ಕುಟುಂಬದವರು, ನಟ ರಕ್ಷಿತ್ ಶೆಟ್ಟಿ ಮತ್ತು ಸಂದೇಶ್ ನಾಗರಾಜ್ ಹಾಗೂ ಚಿತ್ರತಂಡದ ಕೆಲವರು ಭಾಗಿಯಾಗಿದ್ದರು. ಈಗ ರಿಷಬ್ ಶೆಟ್ಟಿ ತಮ್ಮ ಚಿತ್ರಕ್ಕೆ ನಾಯಕಿಯ ಹುಡುಕಾಟದಲ್ಲಿದ್ದಾರೆ.

ಈಗಾಗಲೇ ‘ಬೆಲ್ ಬಾಟಂ’ ಚಿತ್ರದ ಮೂಲಕ ನಾಯಕರಾಗಿ ತಮ್ಮ ಪ್ರತಿಭೆ ಸಾಬೀತುಪಡಿಸಿರುವ ರಿಷಬ್ ಶೆಟ್ಟಿ, ನಿರ್ದೇಶನ ಮತ್ತು ನಟನೆ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಜೊತೆಗೆ ನಿರ್ಮಾಣದ ಕಾರ್ಯದಲ್ಲಿಯೂ ಅವರು ಹಿಂದೆ ಬಿದ್ದಿಲ್ಲ.

ಈಗ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಮುಂದಾಗಿದ್ದಾರೆ. ನಮ್ಮ ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರಕ್ಕೆ ಹೀರೋಯಿನ್ ಬೇಕು, ಹೊಸ ಪ್ರತಿಭೆಗಳಿಗೆ ಒಳ್ಳೆಯ ಅವಕಾಶ ಎಂದಿರುವ ರಿಷಬ್ ಶೆಟ್ಟಿ, ಆಸಕ್ತರು ಆಡಿಷನ್‍ನಲ್ಲಿ ಭಾಗವಹಿಸಬಹುದು ಎಂಬ ಆಫರ್ ನೀಡಿದ್ದಾರೆ.

ಚಿತ್ರದ ಶೀರ್ಷಿಕೆಯೇ ಸೂಚಿಸುವಂತೆ ಇದು ಪಕ್ಕಾ ಮನರಂಜನಾತ್ಮಕ ಚಿತ್ರ. ಅದಕ್ಕೆ ಸೂಕ್ತವಾಗಿ ಹೊಂದಿಕೊಳ್ಳುವ ನಟಿಯ ಹುಡುಕಾಟದಲ್ಲಿದ್ದಾರೆ.
ತನ್ನ ತಂದೆಯನ್ನು ಮೀಟ್ ಮಾಡಲು ತಡವಾಗಿ ಬಂದ ಪ್ರೇಮಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುವ ಪ್ರೇಯಸಿಯ ಪಾತ್ರ ಅದಂತೆ.

ತಾವು ಅಭಿನಯಿಸುವ ದೃಶ್ಯದ ಒಂದು ನಿಮಿಷದ ವಿಡಿಯೋವನ್ನು ಚಿತ್ರೀಕರಿಸಿ ಕಳುಹಿಸುವಂತೆ ಅವರು ಹೇಳಿದ್ದಾರೆ. 18-28 ವರ್ಷ ವಯಸ್ಸಿನ ಆಸಕ್ತರು ನಾಯಕಿಯಾಗುವ ಪ್ರಯತ್ನದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲು ರಿಶಭ್ ಶೆಟ್ಟಿ ವರು ಅವಕಾಶ ನೀಡಿz್ದÁರೆ.

ಹರಿಕಥೆ ಅಲ್ಲ ಗಿರಿಕಥೆ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ರಂಗನಾಥ್ ವರ ಛಾಯಾಗ್ರಹಣವಿದೆ. ರಿಷಬ್ ಶೆಟ್ಟಿ ಅವರೊಂದಿಗೆ ಪ್ರಮೋದ್ ಶೆಟ್ಟಿ ಕೂಡ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಜುಲೈನಲ್ಲಿ ಚಿತ್ರದ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಚಿತ್ರೀಕರಣದ ಜೊತೆ ಜೊತೆಗೆ ಪಾತ್ರಕ್ಕೆ ಸೂಕ್ತವಾದ ನಾಯಕಿಯ ಹುಡುಕಾಟವೂ ಸಹ ನಡೆಯಲಿದೆ. ಉಳಿದಂತೆ ಪ್ರಮುಖ ಪಾತ್ರಗಳಲ್ಲಿ ಕೆಲವು ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

Share This With Your Friends

Related posts