Cini Reviews Cinisuddi Fresh Cini News 

“ರೃೆಡರ್” ಚಿತ್ರ ಹೇಗಿದೆ..? (ಚಿತ್ರ ವಿಮರ್ಶೆ-ರೇಟಿಂಗ್ : 4/5)

ರೇಟಿಂಗ್ : 4/5

ಚಿತ್ರ : ರೈಡರ್
ನಿರ್ದೇಶಕ : ವಿಜಯ್‌ ಕುಮಾರ್ ಕೊಂಡ
ನಿರ್ಮಾಪಕರು : ಚಂದ್ರು ಹಾಗೂ ಸುನಿಲ್ ಗೌಡ
ಸಂಗೀತ : ಅರ್ಜುನ್ ಜನ್ಯ
ಛಾಯಾಗ್ರಹಣ : ಶ್ರೀಶ ಕುದುವಳ್ಳಿ
ತಾರಾಗಣ : ನಿಖಿಲ್ ಕುಮಾರ್ , ಕಾಶ್ಮೀರ ಪರ್ದೇಸಿ , ಸಂಪದ, ದತ್ತಣ್ಣ , ಅಚ್ಯುತ್ ಕುಮಾರ್ , ರಾಜೇಶ್ ನಟರoಗ, ಚಿಕ್ಕಣ್ಣ, ಶಿವರಾಜ್.ಕೆ .ಆರ್ ಪೇಟೆ ಹಾಗೂ ಮುಂತಾದವರು…

ಸ್ನೇಹ , ಪ್ರೀತಿ ಹಾಗೂ ಬಾಂಧವ್ಯದ ಸುತ್ತ ಹೆಣೆದಿರುವ ಒಂದು ಸುಂದರ ಫೀಲ್ ಗುಡ್ ಮೂವಿ ಎಂದೇ ಹೇಳಬಹುದಾದ ಚಿತ್ರ “ರೃೆಡರ್”. ಚಿತ್ರದ ಶೀರ್ಷಿಕೆ ಕೇಳಿದಾಕ್ಷಣ ನೆನಪಿಗೆ ಬರೋದು ಇದೊಂದು ಸ್ಪೋರ್ಟ್ಸ್ ಚಿತ್ರ ಇರಬಹುದು ಎಂದು. ಈ ಚಿತ್ರದಲ್ಲಿ ನಾಯಕ ಒಬ್ಬ ಬ್ಯಾಸ್ಕೆಟ್ ಬಾಲ್ ಪ್ಲೇಯರ್ ಕೂಡ ಹೌದು.

ಹಾಗಂತ ಇದು ಸಂಪೂರ್ಣ ಸ್ಪೋರ್ಟ್ಸ್ ಮೇಲೆ ಸಾಗುವ ಕಥೆ ಅಲ್ಲದಿದ್ದರೂ ಈ ರೈಡರ್ ಚಿತ್ರದಲ್ಲಿ ಬಾಲ್ಯದ ಗೆಳೆತನ , ಬಂಧು ಬಾಂಧವರ ಪ್ರೀತಿ ಸೇರಿದಂತೆ ಬಹು ಮುಖ್ಯವಾದ ಪ್ರೇಮದ ಸಿಂಚನದ ಕಂಪು ಚಿತ್ರದುದ್ದಕ್ಕೂ ಸಾಗುತ್ತದೆ. ಇದಕ್ಕೆ ಪೂರಕವಾಗಿ ಸಂಗೀತ, ಹಿನ್ನೆಲೆ ಸಂಗೀತದ ಜೊತೆಗೆ ಸುಂದರವಾದ ಛಾಯಾಗ್ರಹಣವೂ ಕೂಡ ಸಾಥ್ ನೀಡಿದೆ. ಇದು ಸರಳ ಪ್ರೇಮಕಥೆ ಅನಿಸಿದರೂ ಪ್ರೀತಿಸುವ ಎರಡು ಹೃದಯಗಳ ತಳಮಳಗಳ ಚಿತ್ರಣ ಮನ ಮುಟ್ಟುವಂತೆ ಮೂಡಿದೆ.

ಚಿತ್ರದ ಕಥಾಹಂದರ ತೆರೆದುಕೊಳ್ಳುವುದೇ ಬಾಲ್ಯದ ಪಯಣದಲ್ಲಿ. ಜಾತ್ರೆಯಲ್ಲಿ ಕಳೆದು ಹೋದ ಪುಟಾಣಿ ಹೆಣ್ಣು ಮಗಳೊಬ್ಬಳು (ದತ್ತಣ್ಣ) ನಡೆಸುವ ಅನಾಥಾಶ್ರಮ ಆಶ್ರಯ ಪಡೆಯುತ್ತಾಳೆ. ಅಲ್ಲಿ ಇರುವ ಪುಟಾಣಿಗಳ ಗುಂಪಿನಲ್ಲಿ ಪುಟ್ಟ ಬಾಲಕ ಈ ಪುಟ್ಟ ಹುಡುಗಿ ಸ್ನೇಹ ಬೆಳೆಸಿಕೊಳ್ಳುತ್ತಾನೆ.

ಅವರ ಆಟ, ಪಾಠ, ನೆನಪಿನ ಬುತ್ತಿ ಗಟ್ಟಿಯಾಗುತ್ತದೆ. ಪೋಲಿಸ್ ಅಧಿಕಾರಿ (ಶೋಭರಾಜ್) ಮೂಲಕ ಪುಟಾಣಿ ಚಿನ್ನು ತನ್ನ ಆಶ್ರಮದ ಗೆಳೆಯ ಕಿಟ್ಟಿ ಯನ್ನ ಬಿಟ್ಟು ಮತ್ತೆ ತಂದೆ ತಾಯಿಯ ಮಡಿಲು ಸೇರುತ್ತಾಳೆ. ಮುಂದೆ ದಿನಕಳೆದಂತೆ ನಾಯಕಿ ಸೌಮ್ಯ (ಕಾಶ್ಮೀರ) ಆಸ್ಟ್ರೇಲಿಯಾದಲ್ಲಿ ವಿದ್ಯಾಭ್ಯಾಸ ಮಾಡುತ್ತಾಳೆ. ಇತ್ತ ನಾಯಕ ಸೂರ್ಯ (ನಿಖಿಲ್ ಕುಮಾರ್) ದತ್ತು ಪಡೆದವರ ಮನೆ ಮಗನಾಗಿ ಬೆಳೆದು ಬ್ಯಾಸ್ಕೆಟ್ ಬಾಲ್ ಪ್ಲೇಯರ್ ಯಾಗಿ ರಾಷ್ಟ್ರಮಟ್ಟದಲ್ಲಿ ನೆಲೆ ಕಾಣುವ ಗುರಿ ಹೊಂದಿರುತ್ತಾನೆ.

ವಿದೇಶದಲ್ಲಿರುವ ಸೌಮ್ಯ (ಚಿನ್ನು) ತಂದೆಯ ಒಪ್ಪಿಗೆ ಪಡೆದು ಭಾರತಕ್ಕೆ ಬರಲು ನಿರ್ಧರಿಸುತ್ತಾಳೆ.ತನ್ನ ಸಂಸ್ಥೆಯನ್ನು ನೋಡಿಕೊಳ್ಳುವುದರ ಜೊತೆಗೆ ತನ್ನ ಹದಿನೈದು ವರ್ಷದ ಬಾಲ್ಯದ ಗೆಳೆಯನನ್ನು ಹುಡುಕಾಟ ಆರಂಭಿಸುತ್ತಾಳೆ.

ಇತ್ತ ನಾಯಕ ಸೂರ್ಯ ಕೂಡ ತನ್ನ ವಾಲಿಬಾಲ್ ಗೇಮ್ ನಲ್ಲಿ ತನ್ನ ಸಾಮರ್ಥ್ಯವನ್ನ ತೋರುತ್ತಾ ಮನೆಯವರ ಪ್ರೀತಿಯ ಮಗನಾಗಿ ಹಾಗೂ ಗೆಳೆಯನೊಂದಿಗೆ ( ಶಿವರಾಜ್.ಕೆ. ಆರ್.ಪೇಟೆ) ತನ್ನ ಬಾಲ್ಯದ ಗೆಳತಿಯೊಂದಿಗೆ ಕಳೆದ ಸಮಯವನ್ನು ಹೇಳುತ್ತಾ ಅವಳನ್ನ ಪ್ರೀತಿಸುವ ಇಂಗಿತವನ್ನು ವ್ಯಕ್ತಪಡಿಸುತ್ತಾನೆ. ಇದರ ನಡುವೆ ನಿರ್ದೇಶಕನಾಗುವ ಕನಸನ್ನು ಹೊತ್ತುಕೊಂಡ ಚಿಕು (ಚಿಕ್ಕಣ) ತನ್ನ ಯೂಟ್ಯೂಬ್ ನಲ್ಲಿ ತಮ್ಮ ಅನುಭವವನ್ನು ಹೇಳಿಕೊಳ್ಳುವ ವ್ಯಕ್ತಿಗಳ ಮಾತನ್ನು ರೆಕಾರ್ಡ್ ಮಾಡಿ ಅದರ ಅನುಗುಣವಾಗಿ ಚಿತ್ರಣ ಮಾಡಿ ಹಾಕುವ ಮೂಲಕ ಟಾಪರ್ ಆಗಿ ಯೂ ಟ್ಯೂಬ್ ನಲ್ಲಿ ಸಂಚಲನ ಮೂಡಿಸುತ್ತಿರುತ್ತಾನೆ.

ಇವನ ಈ ಕೆಲಸ ನಾಯಕಿ ಸೌಮ್ಯ ಗೆ ತಿಳಿದು ಅವನನ್ನು ಭೇಟಿಯಾಗಲು ನಾನಾ ಕಸರತ್ತು ನಡೆಸುತ್ತಾಳೆ. ಅಲ್ಲಿ ಒಂದಷ್ಟು ಹಾಸ್ಯ ಸನ್ನಿವೇಶಗಳು ಕೂಡ ಚಿತ್ರದ ಓಟಕ್ಕೆ ಸಾಥ್ ನೀಡುತ್ತದೆ. ಹಾಗೂ ನಾಯಕ ಸೂರ್ಯಗೂ ತನ್ನ ಬಾಲ್ಯದ ಗೆಳತಿಯ ಹುಡುಕಾಟದ ಹಾದಿಯಲ್ಲಿ ಹಲವಾರು ಅಡೆತಡೆಗಳ ನಡುವೆ ಪೊಲೀಸ್ ಹಾಗೂ ವಿಲನ್ ಗಳ ಸಮಾಗಮವು ಎದುರಾಗುತ್ತಾರೆ.

ಹೀಗೆ ಒಂದರ ಹಿಂದೆ ಒಂದು ಕೊಂಡಿಯಂತೆ ಬೆಸೆದುಕೊಂಡು ಸಾಗುವ ಚಿತ್ರದ ಕ್ಲೈಮ್ಯಾಕ್ಸ್ ಹಂತ ಬಹಳಷ್ಟು ಕುತೂಹಲವನ್ನು ಮೂಡಿಸುತ್ತದೆ.
ನಾಯಕ ಬ್ಯಾಸ್ಕೆಟ್ ಬಾಲ್ ಪಯಣ ಏನಾಗತ್ತೆ…
ನಾಯಕಿಗೆ ತನ್ನ ಬಾಲ್ಯದ ಗೆಳೆಯ ಸಿಗ್ತಾನಾ…
ಇವರಿಬ್ಬರ ಪ್ರೀತಿಗೆ ಕುಟುಂಬ ಸಾಥ್ ನೀಡುತ್ತಾ…
ಇಂಥ ಹಲವಾರು ಪ್ರಶ್ನೆಗಳಿಗೆ ಉತ್ತರ ಬೇಕಾದರೆ ಎಲ್ಲರೂ ಒಮ್ಮೆ ಕುಟುಂಬ ಸಮೇತವಾಗಿ ಈ ಚಿತ್ರವನ್ನು ನೋಡಲೇಬೇಕು.

ಈ ಚಿತ್ರದಲ್ಲಿ ಪ್ರಮುಖವಾಗಿ ಗಮನ ಸೆಳೆಯೋದು ಸಂಗೀತ . ಅರ್ಜುನ್ ಜನ್ಯ ರವರ ಹಿನ್ನೆಲೆ ಸಂಗೀತ ಚಿತ್ರದ ಉದ್ದಕ್ಕೂ ಸಾಥ್ ನೀಡಿದೆ. ಹಾಗಯೇ ಚಿತ್ರದ ಹಾಡುಗಳು ಕೂಡ ಗುನುಗುವಂತಿದೆ. ಇನ್ನು ಈ ಚಿತ್ರದ ಮತ್ತೊಂದು ಫ್ಲೆಸ್ ಪಾಯಿಂಟ್ ಅಂದರೆ ಛಾಯಾಗ್ರಾಹಕ ಶ್ರೀಶ ಕುದುವಳ್ಳಿ ಅವರ ಕೈಚಳಕ. ಸುಂದರ ದೃಶ್ಯ ವೈಭವಗಳ ಜೊತೆಗೆ ಸಾಹಸ ದೃಶ್ಯಗಳ ಚಿತ್ರಣ ಕೂಡ ಉತ್ತಮವಾಗಿ ಮೂಡಿಬಂದಿದೆ.

ನಟ ನಿಖಿಲ್ ಕುಮಾರ್ ಕೂಡ ಈ ಚಿತ್ರದ ಮೂಲಕ ಮತ್ತಷ್ಟು ಪರಿಪಕ್ವವಾಗಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲಿ ಖಡಕ್ಕಾಗಿ ಕಾಣಿಸಿಕೊಳ್ಳುವುದರ ಜೊತೆಗೆ ಡ್ಯಾನ್ಸ್ ಸ್ಟೆಪ್ಸ್ ನಲ್ಲಿ ಭರ್ಜರಿಯಾಗಿ ಕುಣಿದಿದ್ದಾರೆ. ಇನ್ನೂ ಪಾತ್ರವನ್ನ ಕೂಡ ಬಹಳ ಲೀಲಾಜಾಲವಾಗಿ ಅಭಿನಯಿಸಿದ್ದು , ಹಾಸ್ಯ ಸನ್ನಿವೇಶಗಳಲ್ಲಿ ಟೈಮಿಂಗ್ಸ್ ಗಮನಾರ್ಹವಾಗಿದೆ. ಒಟ್ಟಾರೆ ನಿಖಿಲ್ ಕುಮಾರ್ ಕಳೆದ ಚಿತ್ರಕ್ಕಿಂತ ಈ ಚಿತ್ರದಲ್ಲಿ ಮತ್ತಷ್ಟು ಉತ್ತಮವಾಗಿ ಅಭಿನಯಿಸಿದ್ದಾರೆ.

ಇನ್ನೂ ಪರಭಾಷಾ ಬೆಡಗಿ ಕಾಶ್ಮೀರಿ ಕೂಡ ಪರದೆಯ ಮೇಲೆ ಮುದ್ದು ಮುದ್ದಾಗಿ ಕಾಣುತ್ತಾರೆ. ಅವರಿಗೆ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಗಮನ ಸೆಳೆದಿದ್ದಾರೆ.ಇನ್ನು ಈ ಚಿತ್ರದಲ್ಲಿ ಶಿವರಾಜ್ ಕೆ ಆರ್ ಪೇಟೆ ಹಾಗೂ ಚಿಕ್ಕಣ್ಣ ನಾಯಕ ನಾಯಕಿಯರ ಗೆಳೆಯರಾಗಿ ಉತ್ತಮವಾಗಿ ಅಭಿನಯಿಸಿದ್ದಾರೆ.

ನಾಯಕನ ತಂದೆಯಾಗಿ ಅಚ್ಯುತ್ ಕುಮಾರ್ ಹಾಗೂ ನಾಯಕಿಯ ತಂದೆ ರಾಜೇಶ್ ನಟರಂಗ ಮನ ಮುಟ್ಟುವಂತೆ ಅಭಿನಯಿಸಿದ್ದಾರೆ. ಇನ್ನು ಪ್ರಮುಖ ವಿಲನ್ ಆಗಿ (ಕೆಜಿಎಫ್ ಖ್ಯಾತಿಯ ಗರುಡ) ರಾಮಚಂದ್ರ ರಾಜು ಕಾಣಿಸಿಕೊಂಡರು ಯಾವುದೇ ಪರಿಣಾಮಕಾರಿ ನಟನೆ ಇಲ್ಲ.
ಇನ್ನು ಉಳಿದಂತೆ ದತ್ತಣ್ಣ , ಶೋಭರಾಜ್ , ಸಂಪದ , ಅನುಷಾ ರೈ , ಪುಟಾಣಿಗಳಾದ ಚೆರಿ ಆರ್ಯನ್ , ಪ್ರಾಣ್ಯ ಪಿ ರಾವ್ ಸೇರಿದಂತೆ ಎಲ್ಲರೂ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಇಂತಹ ಸುಂದರ ಪ್ರೇಮಮಯಿ ಚಿತ್ರವನ್ನ ಅಷ್ಟೇ ಅಚ್ಚುಕಟ್ಟಾಗಿ ನಿರ್ಮಿಸಿರುವ ನಿರ್ಮಾಪಕರಾದ ಚಂದ್ರು ಹಾಗೂ ಸುನಿಲ್ ಗೌಡ ಅವರ ಕೆಲಸ ಮೆಚ್ಚಲೇ ಬೇಕು. ಇನ್ನು ಈ ಚಿತ್ರದ ನಿರ್ದೇಶನ ಮಾಡಿರುವ ತೆಲುಗಿನ ವಿಜಯ್ ಕುಮಾರ್ ಕೊಂಡ ಅವರು ವಿಭಿನ್ನ ಫೀಲ್ ಗುಡ್ ಕಥೆಯನ್ನ ತಂದಿದ್ದಾರೆ.

ಸಿನಿಮಾ ಬಾಲ್ಯದ ಗೆಳೆತನ , ಸಂಬಂಧಗಳ ಬೆಸುಗೆ , ಪ್ರೀತಿಯ ಸೆಳೆತವನ್ನು ಬಹಳ ಸೂಕ್ಷ್ಮವಾಗಿ ತೆರೆಮರೆ ತೆರೆದಿಟ್ಟಿದ್ದಾರೆ. ಆದರೆ ಚಿತ್ರದ ಓಟ ನಿಧಾನಗತಿಯಲ್ಲಿ ಸಾಗುತ್ತಾ ಹೋಗುವುದು ನೋಡುಗರಿಗೆ ಸ್ವಲ್ಪ ಕಷ್ಟ ಅನಿಸುತ್ತದೆ. ಚಿತ್ರದ ಕ್ಲೈಮ್ಯಾಕ್ಸ್ ಹಂತ ಬಂದಾಗ ನಿರ್ದೇಶಕರು ಮಾಡಿರುವ ಏರಿಳಿತ ಬಹಳ ಉತ್ತಮವಾಗಿದೆ. ಇನ್ನು ಈ “ರೈಡರ್” ಚಿತ್ರ ಒಂದು ಸರಳವಾದ ಫೀಲ್ ಗುಡ್‌ ಸಿನಿಮಾವಾಗಿದೆ. ಒಟ್ಟಾರೆ ಎಲ್ಲರೂ ಕುಟುಂಬ ಸಮೇತ ಬಂದು ಈ ಚಿತ್ರವನ್ನು ನೋಡಬಹುದು.

Related posts