Cinisuddi Fresh Cini News 

ಸೈಕಿಕ್ ‘ರಿಚ್ಚಿ’ಯ ರೊಮ್ಯಾಂಟಿಕ್ ಹಾಡು ರಿಲೀಸ್

ಇತ್ತೀಚೆಗೆ ರಿಚ್ಚಿ ಎಂಬ ಟೈಟಲ್ ಇಟ್ಟುಕೊಂಡು ಇಬ್ಬರು ನಿರ್ದೇಶಕರು ಸಿನಿಮಾ ಮಾಡುತ್ತಿರುವ ವಿಷಯ ಗಾಂನಗರದಲ್ಲಿ ಸುದ್ದಿಯಾಗಿತ್ತು. ಎರಡು ವರ್ಷಗಳ ಹಿಂದೆಯೇ ರಿಚ್ಚಿ ಎಂಬ ಶೀರ್ಷಿಕೆಯನ್ನು ಫಿಲಂ ಚೇಂಬರ್‍ನಲ್ಲಿ ರಿಜಿಸ್ಟರ್ ಮಾಡಿಸಿದ್ದ ನಟ, ನಿರ್ಮಾಪಕ ರಿಚ್ಚಿ(ಹೇಮಂತ್) ಅವರು ಚಿತ್ರವನ್ನು ಆರಂಭಿಸಿ ಈಗಾಗಲೇ ಮುಕ್ಕಾಲು ಭಾಗದಷ್ಟು ಸಿನಿಮಾದ ಚಿತ್ರೀಕರಣವನ್ನೂ ಸಹ ಮಾಡಿ ಮುಗಿಸಿದ್ದಾರೆ.

ಇತ್ತೀಚೆಗೆ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅವರು ತಮ್ಮ ಬ್ಯಾನರ್‍ನಲ್ಲಿ ಇದೇ ಹೆಸರಿನ ಚಿತ್ರ ಮಾಡುತ್ತಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದರು. ಇದರಿಂದ ಕಂಗಾಲಾದ ನಿರ್ಮಾಪಕ ಹೇಮಂತ್ ಫಿಲಂ ಚೇಂಬರ್‍ಗೆ ದೂರನ್ನು ಸಹ ಸಲ್ಲಿಸಿದ್ದರು. ಅದಕ್ಕೆ ಆ ಕಡೆಯಿಂದ ಈವರೆಗೆ ಯಾವುದೇ ಉತ್ತರ ಬಂದಿಲ್ಲ.

ಈಗ ರಿಚ್ಚಿ ಎನ್ನುವ ಟೈಟಲ್ ಹೇಮಂತ್ ಅವರದೇ ಆಗಿದೆ. ರಿಚ್ಚಿ ಎನ್ನುವ ಸೈಕಿಕ್ ವ್ಯಕ್ತಿಯ ಕಥೆಯಿದು. ಸಸ್ಪೆನ್ಸ್, ಥ್ರಿಲ್ಲರ್ ಅಂಶದ ಜೊತೆಗೆ ಈ ಚಿತ್ರದಲ್ಲಿ ಒಂದು ಸುಂದರವಾದ ಲವ್ ಸ್ಟೋರಿಯೂ ಕೂಡ ಇದೆ.

ನಿನ್ನೆ ದೀಪಾವಳಿ ಹಬ್ಬದ ಪ್ರಯುಕ್ತ ಈ ಚಿತ್ರದ ಒಂದು ರೊಮ್ಯಾಂಟಿಕ್ ವೀಡಿಯೋ ಹಾಡನ್ನು ಬಿಡುಗಡೆ ಮಾಡಲಾಯಿತು, ಪ್ರಸಾದ್ ಫಿಲಂ ಲ್ಯಾಬ್‍ನಲ್ಲಿ ನಡೆದ ಈ ಪುಟ್ಟ ಕಾರ್ಯಕ್ರಮದಲ್ಲಿ ರಿಚ್ಚಿ ಚಿತ್ರತಂಡ ಹಾಜರಿದ್ದು ಚಿತ್ರದ ಕುರಿತಂತೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿತು. ಈ ಚಿತ್ರದ ನಿರ್ಮಾಪಕ, ನಿರ್ದೇಶಕ ಹೇಮಂತ್ ಅವರೇ ಚಿತ್ರದಲ್ಲಿ ನಾಯಕನಾಗಿಯೂ ಸಹ ಕಾಣಿಸಿಕೊಂಡಿದ್ದು, ಯಶ್ವಿಕಾ ನಿಶ್ಕಳಾ ಅವರು ನಾಯಕಿಯ ಪಾತ್ರದಲ್ಲಿದ್ದಾರೆ.

ಮಾರುತಿ ಮೂವೀಮೇಕರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು, ಎಲ್ಲಾ ಟ್ರ್ಯಾಕ್ ಮೆಲೋಡಿಯಾಗಿವೆ. ಅಗಸ್ತ್ಯ ಸಂತೋಷ್ ಅವರು ಈ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಈಗಾಗಲೇ ಈ ಚಿತ್ರದ ಬಹುಪಾಲು ಚಿತ್ರೀಕರಣವನ್ನು ಬೆಂಗಳೂರು ಹಾಗೂ ಮಡಿಕೇರಿಯ ಸುತ್ತಮುತ್ತಲ ಸುಂದರ ಹೊರಾಂಗಣದಲ್ಲಿ ನಡೆಸಲಾಗಿದೆ. ನಿನ್ನೆ ಬಿಡುಗಡೆಯಾಗಿರುವ ರೊಮ್ಯಾಂಟಿಕ್ ಹಾಡಿಗೆ ಸೋನು ನಿಗಂ ಅವರು ದನಿಯಾಗಿದ್ದಾರೆ. ಚಿನ್ನಿ ಪ್ರಕಾಶ್ ಅವರು ಇದಕ್ಕೆ ಕೊರಿಯಾಗ್ರಾಫ್ ಮಾಡಿದ್ದಾರೆ. ಮಡಿಕೇರಿಯ ಕೋಡಿ ಬೆಟ್ಟದಲ್ಲಿ ಮೂರು ದಿನಗಳ ಕಾಲ ಈ ಹಾಡಿನ ಶೂಟಿಂಗ್ ನಡೆಸಲಾಗಿದೆ.

ರಿಚ್ಚಿ ಚಿತ್ರದ ವಿಶೇಷತೆಗಳ ಕುರಿತಂತೆ ಮಾತನಾಡಿದ ನಾಯಕ ಕಂ ನಿರ್ದೆಶಕ ಹೇಮಂತ್ ಇದೇ ಮೊದಲ ಬಾರಿಗೆ ನಾನು ಈ ಸಿನಿಮಾ ಮೂಲಕ ನಿರ್ದೇಶನ ಹಾಗೂ ನಿರ್ಮಾಣವನ್ನು ಮಾಡಿದ್ದೇನೆ. ಚಿತ್ರದಲ್ಲಿ ಒಬ್ಬ ಪ್ರೆಸ್ ರಿಪೋರ್ಟರ್ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದು, ಸೈಕೋ ಕಿಲ್ಲರ್ ಒಬ್ಬನ ಸುತ್ತ ನಡೆಯುವ ಕಥೆ ಇದರಲ್ಲಿದೆ.

ಆತ ಮಾಡುವ ಕೆಲಸಗಳು ಯಾರಿಗೂ ಗೊತ್ತಾಗುತ್ತಲೇ ಇರುವುದಿಲ್ಲ, ಒಮ್ಮೆ ನಡೆದ ಘಟನೆಯಲ್ಲಿ ಚಿಕ್ಕ ಕ್ಲೂ ಒಂದು ಸಿಗುತ್ತದೆ, ನಂತರ ಏನಾಗುತ್ತದೆ ಎನ್ನುವುದೇ ಚಿತ್ರ ಪ್ರಮುಖ ಘಟ್ಟ, ಈಗಾಗಲೇ ನಮ್ಮ ಚಿತ್ರಕ್ಕೆ ಶೇ 70ರಷ್ಟು ಭಾಗದ ಚಿತ್ರೀಕರಣವನ್ನು ಮುಗಿಸಿದ್ದು, ಉಳಿದ ಭಾಗವನ್ನು ಮೈಸೂರು ಹಾಗೂ ಗೋವಾದಲ್ಲಿ ಶೂಟ್ ಮಾಡುವ ಪ್ಲಾನ್ ಇದೆ ಎಂದು ಹೇಳಿದರು.

ನಂತರ ಚಿತ್ರದ ನಾಯಕಿಯಾದ ಯಶ್ವಿಕಾ ನಿಶ್ಕಳಾ ಮಾತನಾಡುತ್ತ ಇದು ನನ್ನ ಪ್ರಥಮ ಚಿತ್ರವಾಗಿದ್ದು ಈ ಚಿತ್ರದಲ್ಲಿ ನನ್ನದು ಹೋಮ್ಲಿ ಗರ್ಲ್ ಥರದ ಪಾತ್ರ. ನನಗೆ ನಾಯಕನ ಪರಿಚಯ ಹೇಗಾಗುತ್ತದೆ, ಆತನ ಲವ್‍ನಲ್ಲಿ ಬಿದ್ದಾಗ ಏನೆಲ್ಲ ಎದುರಿಸಬೇಕಾಗುತ್ತದೆ ಎಂದು ನನ್ನ ಪಾತ್ರದ ಮೂಲಕ ತೋರಿಸಿದ್ದಾರೆ.

ಇಂದು ಬಿಡುಗಡೆಯಾಗಿರುವ ಹಾಡು ತುಂಬಾ ಮೆಲೋಡಿಯಾಗಿದೆ, ಚಿನ್ನಿಮಾಸ್ಟರ್ ನಮಗೆ ಸಿಕ್ಕಿದ್ದು ತುಂಬಾ ಖುಷಿಯಾಗಿದೆ ಎಂದು ಹೇಳಿದರು. ಚಿತ್ರದ ಛಾಯಾಗ್ರಾಹಕ ವೀರೇಶ್ ಎಂಡಿ ಮಾತನಾಡುತ್ತ ಈ ಹಾಡು ತುಂಬಾನೇ ಮೆಲೋಡಿಯಾಗಿ ಮೂಡಿಬಂದಿದೆ. ನಿರ್ದೇಶಕರ ಪರಿಕಲ್ಪನೆಯಂತೆ ಚಿತ್ರವನ್ನು ತೆರೆಮೇಲೆ ತರಲು ಪ್ರಯತ್ನಿಸಿದ್ದೇನೆ ಎಂದು ಹೇಳಿದರು.

ಬಾಂಬೆ ಮೂಲಕ ನಟ ಮನೋಜ್ ಮಿಶ್ರ ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ರಾಕೇಶ್ ಅವರ ಸಹ ನಿರ್ಮಾಣ ರಿಚ್ಚಿ ಚಿತ್ರಕ್ಕಿದೆ. ಅರ್ಜುನ್ ಕಿಟ್ಟಿ ಅವರ ಸಂಕಲನ, ಪುರುಷೋತ್ರಮ್ ಅವರ ಕಲೆ, ವಿಕ್ರಂ ಮೋರ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಲವ್ ಸೆಂಟಿಮೆಂಟ್ ಜೊತೆಗೆ ಥ್ರಿಲ್ಲರ್, ಸಸ್ಪೆನ್ಸ್ ಹಾಗೂ ಆಕ್ಷನ್‍ನಂಥಾ ವಿಭಿನ್ನ ಶೈಲಿಯ ಕಥಾವಸ್ತುವನ್ನು ಹೊಂದಿರುವ ಈ ಚಿತ್ರದ ಚಿತ್ರದ ಪ್ರಮುಖ ತಾರಾಗಣದಲ್ಲಿ ರಮೇಶ್ ಪಂಡಿತ್ ಹಾಗೂ ಮಿಮಿಕ್ರಿ ಗೋಪಿ ಮುಂತಾದವರು ನಟಿಸಿದ್ದಾರೆ. ಪ್ರೇಕ್ಷಕರು ಕರೋನಾ ಭಯದಿಂದ ಹೊರಬಂದ ನಂತರ ಚಿತ್ರವನ್ನು ರಿಲೀಸ್ ಮಾಡುವ ಪ್ಲಾನ್ ಚಿತ್ರತಂಡಕ್ಕಿದೆ.

Related posts