Cinisuddi Fresh Cini News 

“ರಿಯಾ” ಚಿತ್ರದ ಆಡಿಯೋ ಲಾಂಚ್

ಕನ್ನಡ ಚಿತ್ರರಂಗದಲ್ಲಿ ಮಹಿಳಾ ನಿರ್ದೇಶಕರು ಕೆಲವೆ ಮಂದಿ ಇದ್ದಾರೆ. ಈಗ ಆ ಸಾಲಿಗೆ ಮತ್ತೊಬ್ಬರು ಸೇರ್ಪಡೆ ಯಾಗಿದ್ದಾರೆ. ಅವರೆ ವಿಜಯಾ ನರೇಶ್.ಪಕ್ಕದ ಆಂದ್ರಪ್ರದೇಶ ದವರಾದ ಇವರು‌ ಮೂಲತಃ ಶಿಕ್ಷಕಿ.‌ ಉತ್ತಮ ಕಥೆ ಸಿಕ್ಕರೆ ಚಿತ್ರವೊಂದನ್ನು ನಿರ್ದೇಶಿಸುವ ಆಸೆ ಹೊತ್ತಿದ್ದ ಇವರು ಈಗ “ರಿಯಾ” ಚಿತ್ರವನ್ನು ನಿರ್ದೇಶಿಸಿದ್ದಾರೆ.

ತೆಲುಗು ಮಾತೃಭಾಷೆಯಾಗಿದ್ದರು ತಮ್ಮ ಮೊದಲ ಚಿತ್ರವನ್ನು ಕನ್ನಡದಲ್ಲಿ ನಿರ್ದೇಶಿಸಿದ್ದಾರೆ. ಇವರ ಪತಿ ಕನಿಗೊಂಡ ನರೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆಡಿಷನ್ ಮೂಲಕ ಆಯ್ಕೆಯಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ನಿರ್ಮಾಪಕ ಹಾಗೂ ನಿರ್ದೇಶಕರನ್ನು ಹೊರತುಪಡಿಸಿ ಉಳಿದ ಎಲ್ಲಾ ತಂತ್ರಜ್ಞರು ಹಾಗೂ ಕಲಾವಿದರು ಕನ್ನಡದವರೆ ಆಗಿರುವುದು ವಿಶೇಷ. ಇತ್ತೀಚೆಗೆ ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ರೇಣುಕಾಂಬ ಸ್ಟುಡಿಯೋದಲ್ಲಿ ನೆರವೇರಿತು. ಎರಡು ಹಾಡುಗಳನ್ನು ಪ್ರದರ್ಶಿಸಲಾಯಿತು.
ಈ ವೇಳೆ ಚಿತ್ರದ ಕುರಿತು ಮಾತನಾಡಿದ ನಿರ್ದೇಶಕಿ ವಿಜಯಾ ನರೇಶ್ “ರಿಯಾ” ಹಾರಾರ್, ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಸೆಂಟಿಮೆಂಟ್ ಸನ್ನಿವೇಶಗಳ ಕಥೆಯುಳ್ಳ ಚಿತ್ರ.

ಕನ್ನಡ ಹೆಚ್ಚಾಗಿ ಮಾತನಾಡಲು ಬಾರದ ನನಗೆ, ಚಿತ್ರ ಯಾವುದೇ ತೊಂದರೆ ಇಲ್ಲದೇ ಸಿದ್ದವಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದರು. ನಿರ್ಮಾಣಕ್ಕೆ ಮುಂದಾದ ಪತಿ ಕನಿಗೊಂಡ ನರೇಶ್ ಹಾಗೂ ಕುಟುಂಬದವರಿಗೆ ಕೃತಜ್ಞತೆ ಸಲ್ಲಿಸಿದರು.

ಚಿತ್ರದ ನಾಯಕ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿರುವ ಕಾರ್ತಿಕ್ ವರ್ಣೇಕರ್ ತಮ್ಮ ಪಾತ್ರದ ಬಗ್ಗೆ ಹೇಳತ್ತಾ, ಚಿತ್ರದ ಬಗ್ಗೆಯೂ ಸಂಪೂರ್ಣ ಮಾಹಿತಿ ನೀಡಿದರು. ನಾಯಕಿ ಸಾವಿತ್ರಿ, ಚಿತ್ರದಲ್ಲಿ ಅಭಿನಯಿಸಿರುವ ವಿಕಾಸ್ ಕುಲಕರ್ಣಿ, ರಣ್ವೀರ್, ಶ್ವೇತ ಅವರು ತಮ್ಮ ಪಾತ್ರ ಹಾಗೂ ಚಿತ್ರೀಕರಣದ ವೇಳೆಯಲ್ಲಾದ ಕೆಲವು ಅನುಭವಗಳನ್ನು ಹಂಚಿಕೊಂಡರು.

“ರಿಯಾ” ಪಾತ್ರಧಾರಿ ಮೈಸೂರಿನ ಬಾಲಕಿ ಅನನ್ಯ ಕೂಡ ತನಗೆ ಈ ಪಾತ್ರ ನೀಡಿದ್ದ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಧನ್ಯವಾದ ತಿಳಿಸಿದರು. ಚಿತ್ರದ ಎರಡು ಹಾಡುಗಳಿಗೆ ಸಂಗೀತ ನೀಡಿರುವ ಹೇಮಂತ್ ಕುಮಾರ್ ಸಂಗೀತದ ಬಗ್ಗೆ ಮಾಹಿತಿ ನೀಡಿದ್ದರು.

ಹಾಡುಗಳನ್ನು ಬಿಡುಗಡೆ ಮಾಡಿದ್ದ ಹಿರಿಯ ನಟ ಬ್ಯಾಂಕ್ ಜನಾರ್ದನ್ ಹಾಗೂ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ್ರು ಪಕ್ಕದ ರಾಜ್ಯದಿಂದ ಬಂದು ಇಲ್ಲಿ ಚಿತ್ರ ನಿರ್ಮಾಣ ಮಾಡಿರುವ ನಿರ್ಮಾಪಕ ಹಾಗೂ ನಿರ್ದೇಶಕರನ್ನು ಶ್ಲಾಘಿಸಿ, ಚಿತ್ರತಂಡಕ್ಕೆ ಶುಭ ಕೋರಿದರು.ಚಿತ್ರ ಈಗಾಗಲೇ ತೆರೆಗೆ ಬರಲು ಸಿದ್ದವಾಗಿದೆ. ದುಬಾರೆ ಅರಣ್ಯದ ಬಳಿಯೇ ಹೆಚ್ಚಿನ ಚಿತ್ರೀಕರಣವಾಗಿದೆ.

ಈಗಾಗಲೇ ಆಕಾಶ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಚಿತ್ರದ ಟ್ರೇಲರ್ ಕೂಡ ಜನಪ್ರಿಯವಾಗಿದೆ. ಹೇಮಂತ್, ಸಮರ್ಥ್ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಎ.ಟಿ.ರವೀಶ ಹಿನ್ನೆಲೆ ಸಂಗೀತ ನೀಡಿದ್ದಾರೆ. ಕಾರ್ತಿಕ್ ವರ್ಣೇಕರ್ ಹಾಗೂ ಅಜ್ಮತಲಾ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಸುರೇಶ್ ಅಚ್ಚು ಛಾಯಾಗ್ರಹಣ ಹಾಗೂ ವೇಣುಗೋಪಾಲ್ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ. ಕಾರ್ತಿಕ್ ವರ್ಣೇಕರ್, ಸಾವಿತ್ರಿ, ಅನನ್ಯ, ವಿಕಾಸ್, ವಿಲಾಸ್ ಕುಲಕರ್ಣಿ, ಆರ್ಗವಿ ರಾಯ್, ಸುಧೀರ್, ರಣ್ವೀರ್, ಶ್ವೇತ, ರೋಹಿಣಿ, ರಾಜ್ ಉದಯ್, ನಾಗಭೂಷಣ್, ನಾಗರತ್ನ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Related posts