Cinisuddi Fresh Cini News 

ಮತ್ತೊಮ್ಮೆ ‘ರಂಗನಾಯಕಿ’

ಖ್ಯಾತ ನಿರ್ದೇಶಕ ಪುಟ್ಟಣ್ಣಕಣಗಾಲ್ ನಿರ್ದೇಶಿಸಿದ್ದ ರಂಗನಾಯಕಿ ಎಂಬ ಟೈಟಲ್‍ಗೆ ಈಗ ಎಲ್ಲೆಡೆ ಡಿಮ್ಯಾಂಡ್ ಸಿಕ್ಕಿದೆ. ಒಂದೆಡೆ ಕಿರುತೆರೆಯಲ್ಲಿ ರಂಗನಾಯಕಿ ಸೀರಿಯಲ್ ಪ್ರಸಾರವಾಗುತ್ತಿದ್ದರೆ, ಬೆಳ್ಳಿತೆರೆಯಲ್ಲೂ ರಂಗನಾಯಕಿ ಎಂಬ ಚಿತ್ರ ನಿರ್ಮಾಣವಾಗುತ್ತಿದ್ದು ಮೊನ್ನೆ ಕಲಾವಿದರ ಸಂಘದ ಸಭಾಂಗಣದಲ್ಲಿ ಈ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಲಾಯಿತು.

ಐಎಎಸ್ ಪೊಲೀಸ್ ಅಧಿಕಾರಿ ರೂಪಾ ಅವರು ರಂಗನಾಯಕಿ ಎಂಬ ಕೃತಿಯ ಬಿಡುಗಡೆ ಮಾಡಿದರು. ಈ ಕೃತಿಯನ್ನಾಧರಿಸಿ ದಯಾಳ್ ಪದ್ಮನಾಭನ್ ಅವರು ಅದೇ ಹೆಸರಿನ ಚಿತ್ರವನ್ನು ನಿರ್ದೇಶಿಸಲು ಹೊರಟಿದ್ದಾರೆ. ಇವರು ಈ ಹಿಂದೆ ನಿರ್ದೇಶಿಸಿದ್ದ ಪುಟ 109 ಕೂಡ ಸುಪಾರಿ ಕಿಲ್ಲರ್ ಎಂಬ ಕೃತಿಯ ಸ್ಫೂರ್ತಿಯಾಗಿತ್ತು.

ರಂಗನಾಯಕಿ ಎಂಬ ಚಿತ್ರದ ಟೈಟಲ್ ಕೆಳಗೆ ಕನ್ಯತ್ವ ಎಂಬ ಸಬ್‍ಟೈಟಲ್ ಇದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಜಾಸ್ಮಿನ್ ಎಂಬ ಚಿತದಲ್ಲಿ ನಿರ್ಭಯಳ ರೇಪ್ ಕೇಸ್ ಅನ್ನು ಅಳವಡಿಸಲಾಗಿತ್ತು. ರಂಗನಾಯಕಿಯಲ್ಲೂ ಅದೇ ರೀತಿಯ ಹಿನ್ನೆಲೆಯ ಕಥೆಯನ್ನು ಅಳವಡಿಸಿದ್ದು ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅದಿತಿ ಪ್ರಭುದೇವ ನಟಿಸಿದ್ದಾರೆ.

ಐಪಿಎಸ್ ಅಧಿಕಾರಿ ರೂಪಾ ಮಾತನಾಡಿ, ಇಂದಿನ ಸಮಾಜದಲ್ಲಿ ಮಹಿಳೆಯರು ಏನಾದರೂ ಸಾಧಿಸಬೇಕೆಂಬ ಛಲವಿರಬೇಕು, ಅದಕ್ಕೆ ಆಕೆ ಕೆಟ್ಟ ಹುಡುಗಿಯೆನಿಸಿಕೊಂಡರೂ ಪರವಾಗಿಲ್ಲ. ತಾನು ಅಂದುಕೊಂಡ ಗುರಿಯನ್ನು ಮುಟ್ಟಲೇ ಬೇಕು, ಆದರೆ ಸಾಧನೆ ಮಾಡುವ ಹಠದಲ್ಲಿ ತಪ್ಪು ದಾರಿಯನ್ನು ತುಳಿಯಬಾರದು ಎಂದು ಹೇಳುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಿರ್ದೇಶಕ ದಯಾಳ್ ಪದ್ಮನಾಭನ್ ಮಾತನಾಡಿ, ಮೂವತ್ತೆಂಟು ವರ್ಷಗಳ ಹಿಂದೆ ತೆರೆಕಂಡಿದ್ದ ರಂಗನಾಯಕಿ ಚಿತ್ರವು ಈಗಲೂ ಕನ್ನಡದ ಬಲು ಬೇಡಿಕೆಯ ಚಿತ್ರವಾಗಿದೆ, ಆ ಟೈಟಲ್‍ನಲ್ಲೇ ನಮ್ಮ ಚಿತ್ರ ತಯಾರಾಗುತ್ತಿರುವುದರಿಂದ ನಮ್ಮ ಜವಾಬ್ದಾರಿ ಹೆಚ್ಚಿದ್ದು, ಅದಕ್ಕೆ ನ್ಯಾಯ ಒದಗಿಸುವ ವಿಶ್ವಾಸದಿಂದ ಕೆಲಸ ಮಾಡುತ್ತಿದ್ದೇವೆ.

ದೆಹಲಿಯಲ್ಲಿ ನಿರ್ಭಯ ದುರಂತ ನನ್ನನ್ನು ತುಂಬಾ ಕಾಡಿತ್ತು. ಆಗಲೇ ಅದಕ್ಕೆ ಅಕ್ಷರ ರೂಪ ಕೊಡಬೇಕೆಂದು ನಿರ್ಧರಿಸಿದೆ. ಈಗ ಕಿರಣ್ ಆರ್.ಹೆಮ್ಮಿಗೆ ಅವರ ಸಹಕಾರದಿಂದ ಈ ಚಿತ್ರದಲ್ಲಿ ಅಂತಹ ಪ್ರಯತ್ನವನ್ನು ಮಾಡಿದ್ದೇನೆ ಇಡೀ ಚಿತ್ರದ ಚಿತ್ರೀಕರಣವನ್ನು ಬೆಂಗಳೂರಿನಲ್ಲೇ ನಡೆಸಲಿದ್ದು ಸೆಪ್ಟೆಂಬರ್‍ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.

ನಟಿ ಅದಿತಿ ಪ್ರಭುದೇವ ಮಾತನಾಡಿ, ಈ ಚಿತ್ರದಲ್ಲಿ ನಾನು ಸಂಗೀತ ಶಿಕ್ಷಕಿಯ ಪಾತ್ರ ಮಾಡುತ್ತಿದ್ದೇನೆ. ನನಗೆ ಮೊದಲಿನಿಂದಲೂ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸಬೇಕೆಂಬ ಆಸೆಯಿತ್ತು, ಅದು ಈ ಚಿತ್ರದ ಮೂಲಕ ಈಡೇರಿದೆ.

ಸಮಾಜದಲ್ಲಿ ಹೆಣ್ಣಿನ ಮೇಲೆ ಅತ್ಯಾಚಾರ ನಡೆದರೆ ಆಕೆಯನ್ನು ಸಮಾಜ ಹೇಗೆ ಕಾಣುತ್ತದೆ ಹಾಗೂ ಆಕೆ ತನಗೆ ತಾನೇ ಹೇಗೆ ಧೈರ್ಯವನ್ನು ತಂದುಕೊಳ್ಳುತ್ತಾಳೆ ಎಂಬುದನ್ನು ನನ್ನ ಪಾತ್ರದ ಮೂಲಕ ನಿರ್ದೇಶಕರು ಹೇಳಲು ಹೊರಟಿದ್ದಾರೆ ಎಂದು ಹೇಳಿದರು.

ನಿರ್ಮಾಪಕ ಎಸ್.ವಿ.ನಾರಾಯಣ್ ಮಾತನಾಡಿ, ಈ ಚಿತ್ರದಲ್ಲಿ ಸಮಾಜದಲ್ಲಿ ಹೆಣ್ಣು ಅತ್ಯಾಚಾರಕ್ಕೊಳಗಾದಾಗ ಆಕೆಯು ಹೇಗೆ ಅದನ್ನು ಮೆಟ್ಟಿ ನಿಲ್ಲುತ್ತಾರೆ ಎಂಬುದನ್ನು ನಿರ್ದೇಶಕರು ಈ ಚಿತ್ರದ ಮೂಲಕ ಹೇಳಲು ಹೊರಟಿದ್ದು, ನನಗೆ ಆ ಕಥೆ ಹಿಡಿಸಿದ್ದರಿಂದ ಚಿತ್ರ ನಿರ್ಮಾಣಕ್ಕೆ ಮುಂದಾದೆ ಎಂದು ಹೇಳಿಕೊಂಡರು.

ಕದ್ರಿ ಮಣಿಕಾಂತ್ ಸಂಗೀತ, ಬಿ.ರಾಕೇಸ್ ಛಾಯಾಗ್ರಹಣ, ನವೀನ್‍ಕೃಷ್ಣ ಸಂಭಾಷಣೆ ಇರುವ ಈ ಚಿತ್ರವು ಅದಿತಿ ಪ್ರಭುದೇವಗೆ ಮತ್ತಷ್ಟು ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸುವ ಅವಕಾಶ ತಂದುಕೊಡಲಿ.

Share This With Your Friends

Related posts