Cini Reviews Cinisuddi Fresh Cini News 

“ರಾಣ”ಆ್ಯಕ್ಷನ್, ಥ್ರಿಲ್ಲರ್ ಅಬ್ಬರ ಹೇಗಿದೆ..?(ಚಿತ್ರ ವಿಮರ್ಶೆ-ರೇಟಿಂಗ್ : 3.5/5)

ರೇಟಿಂಗ್ : 3.5/5
ಚಿತ್ರ : ರಾಣ
ನಿರ್ದೇಶಕ : ನಂದಕಿಶೋರ್ ನಿರ್ಮಾಪಕ : ಗುಜ್ವಲ್ ಪುರುಷೋತ್ತಮ್
ಸಂಗೀತ : ಚಂದನ್ ಶೆಟ್ಟಿ ಛಾಯಾಗ್ರಾಹಣ : ಶೇಖರ್ ಚಂದ್ರ
ತಾರಾಗಣ : ಶ್ರೇಯಸ್ ಮಂಜು, ರೀಷ್ಮಾ ನಾಣಯ್ಯ, ಸಂಯುಕ್ತ ಹೆಗ್ಡೆ, ಠಾಕೂರ್.ಆರ್. ಬಾರ್ಗಿ, ಮೋಹನ್ ಧನರಾಜ್, ಉಗ್ರಂ ಮಂಜು, ಕೋಟೆ ಪ್ರಭಾಕರ್, ಪ್ರವೀಣ್ ಕುಮಾರ್ ಗಸ್ತಿ ಹಾಗೂ ಮುಂತಾದವರು…

ಬೆಂಗಳೂರು ಮಹಾನಗರ ಎಲ್ಲರನ್ನು ಆಕರ್ಷಿಸಿದೆ. ಇಲ್ಲಿ ಬದುಕು ಕಟ್ಟಿಕೊಳ್ಳೋಕೆ ಪ್ರತಿಯೊಬ್ಬರು ಹರಸಾಹಸ ವನ್ನೇ ಪಡುತ್ತಾ, ಒಂದೊಂದು ವೃತ್ತಿಯ ಮೂಲಕ ಜೀವನ ನಡೆಸುತ್ತಿದ್ದಾರೆ. ಅಂಥದ್ದೇ ಕಥಾನಕದಲ್ಲಿ ಪೊಲೀಸ್ ಇಲಾಖೆ ಸೇರಲು ಬಯಸುವ ನಾಯಕ,ಕುಟುಂಬದವರು ವಾತ್ಸಲ್ಯ, ಗೆಳೆಯರ ಸ್ನೇಹ, ಗೆಳತಿಯ ಪ್ರೇಮ, ರೌಡಿಗಳ ವಿರುದ್ಧ ಸಮರ ಹೀಗೆ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಬೆಳ್ಳಿಪರದೆ ಮೇಲೆ ಬಂದಿರುವಂತಹ ಚಿತ್ರವೇ “ರಾಣ”.

ಚಿತ್ರದ ಕಥಾನಾಯಕ ರಾಣ (ಶ್ರೇಯಸ್) ತನ್ನ ಕುಟುಂಬ, ಸ್ನೇಹಿತರ ಹಾಗೂ ತನ್ನನ್ನು ನಂಬಿದ ಜನರ ಒಡನಾಟದೊಂದಿಗೆ ಸಾಗುತ್ತಿರುತ್ತಾನೆ. ಹಾಗೆಯೇ ಪೊಲೀಸ್ ಇಲಾಖೆ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡಿರುತ್ತಾರೆ. ವಾಹನ ತೆಗೆಯುವ ವಿಚಾರದಲ್ಲಿ ಪೋಲಿಸ್ ಹಾಗೂ ರೌಡಿಗಳ ಮಧ್ಯೆ ಜಟಾಪಟಿಗೆ ಮಧ್ಯಪ್ರವೇಶ ಮಾಡುವ ನಾಯಕ ಭರ್ಜರಿ ಆಕ್ಷನ್ ಮೂಲಕ ರೌಡಿಗಳನ್ನು ಸದೆಬಡಿಯುತ್ತಾನೆ.

ಪೊಲೀಸ್ ಇಲಾಖೆಗೆ ಸೇರಲು ಆಯ್ಕೆಯಾಗಿ ತರಬೇತಿ ಪಡೆಯುತ್ತಾ ತನ್ನ ಗೆಳೆಯರ ರೂಮಿನಲ್ಲಿ ಉಳಿದುಕೊಂಡು ಟ್ರಾವೆಲ್ಸ್ ಸೇರಿ ಟ್ಯಾಕ್ಸಿ ಸಹ ಓಡಿಸುತ್ತಾನೆ. ಇದರ ನಡುವೆ ತನ್ನನ್ನು ಇಷ್ಟಪಡುವ ನಾಯಕಿ ಪ್ರಿಯಾ (ರಿಷ್ಮಾ ನಾಣಯ್ಯ) ತಂದೆಯ ವಿರೋಧದ ನಡುವೆಯೂ ರಾಣ ನನ್ನು ಮದುವೆಯಾಗಲು ನಿರ್ಧರಿಸುತ್ತಾಳೆ.

ಇದರ ನಡುವೆ ಅಚಾನಕ್ಕಾಗಿ ಸಿಗುವ ಸ್ನೇಹಿತೆಯ ಕಷ್ಟ ಕೇಳುತ್ತಾನೆ. ಬಡ್ಡಿಗೆ ಸಾಲ ಪಡೆದವರ ಕಾಟ ತಾಳಲಾರದೆ ನೊಂದ ಸ್ನೇಹಿತೆಗೆ ಸಹಾಯ ಮಾಡಲು ಹೋಗಿ ರೌಡಿಗಳನ್ನ ಎದುರಿಸಬೇಕಾಗುತ್ತದೆ. ಈ ರೌಡಿಗಳ ಗುಂಪಿನ ನಾಯಕ ರೌಡಿ ಕಪಾಲಿ ಹಣ ಪಡೆದು ವಾರ್ನಿಂಗ್ ಮಾಡಿ ಕಳಿಸುತ್ತಾನೆ.

ಕಪಾಲಿ ಸುಂದರ ಯುವತಿಯನ್ನು ತನ್ನೊಟ್ಟಿಗೆ ಇಟ್ಟುಕೊಂಡಿದ್ದಾನೆ ಎಂಬ ಸುದ್ದಿ ಎಲ್ಲೆಡೆ ಹರಡುತ್ತದೆ. ಇತ್ತ ನಾಯಕನ ಮದುವೆಯ ಹಾದಿಗೆ ಕುಟುಂಬದವರೂ ಒಪ್ಪಿಗೆ ಸಿಗುತ್ತದೆ. ಎಲ್ಲವೂ ಸರಿಯಾಗಿದೆ ಎನ್ನುವಷ್ಟರಲ್ಲಿ ರೌಡಿ ಕಪಾಲಿ ಯನ್ನ ಹೊಡೆದು ಕೋಮಾ ಹಂತಕ್ಕೆ ಕಳಿಸಿರುತ್ತಾರೆ ಮುಂದೆ ಅವನು ಸತ್ತು ಹೋಗುತ್ತಾನೆ.

ಅವನ ತಮ್ಮ ಸೂರಿ ಹಾಗೂ ಸಹಚರ ಪಚ್ಚಿ ತಂಡದವರು ಈ ಕೊಲೆಯ ಮಾಡಿದವರ ಹುಡುಕಾಟಕ್ಕೆ ಮುಂದಾಗುತ್ತಾರೆ. ಈ ಕೊಲೆಗೆ ಕಾರಣ ರಾಣ ಎಂದು ನಂಬಿ ಹುಡುಕುತ್ತಾರೆ. ಅದಕ್ಕಾಗಿ ಅವನ ಗೆಳೆಯರನ್ನು ಹಿಂಸಿಸುತ್ತಾರೆ. ಇಲ್ಲಿಂದ
ಮತ್ತೊಂದು ತಿರುವು ಪಡೆಯುತ್ತದೆ.

ಕಪಾಲಿ ಯನ್ನ ಕೊಂದವರು ಯಾರು…
ನಾಯಕನ ಪೋಲಿಸ್ ಕನಸು ಏನಾಗುತ್ತೆ…
ನಾಯಕಿಯನ್ನು ಮದುವೆಯಾಗುತ್ತಾನಾ…
ಕ್ಲೈಮ್ಯಾಕ್ಸ್ ಏನಾಗತ್ತೆ…
ಈ ಎಲ್ಲಾ ಪ್ರಶ್ನೆಗೂ ಉತ್ತರ ಸಿಗಬೇಕಾದರೆ ಒಮ್ಮೆ “ರಾಣ” ಚಿತ್ರವನ್ನ ತೆರೆಮೇಲೆ ನೋಡಬೇಕು.

ನಾಯಕ ಶ್ರೇಯಸ್ ಮಂಜು ಈ ಚಿತ್ರದಲ್ಲಿ ಆ್ಯಕ್ಷನ್ ಹಾಗೂ ಡ್ಯಾನ್ಸಿಂಗ್ ಗಳಲ್ಲಿ ಮಿಂಚಿದ್ದಾರೆ. ಇನ್ನೂ ನಟನಾ ವಿಚಾರದಲ್ಲಿ ಇನ್ನಷ್ಟು ಪರಿಪಕ್ವತೆ ಅಗತ್ಯ ಎನಿಸುತ್ತದೆ. ಒಬ್ಬ ಮಾಸ್ ಹೀರೋ ಆಗಿ ಪ್ರೇಕ್ಷಕರ ಗಮನ ಸೆಳೆಯುವುದರಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಇವರಿಗೆ ಜೋಡಿಯಾಗಿ ಅಭಿನಯಿಸಿರುವ ರೀಷ್ಮಾ ನಾಣಯ್ಯ ಕೂಡ ಬಹಳ ಲೀಲಾಜಾಲವಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದು, ಡ್ಯಾನ್ಸ್ ಗೂ ಸೈ ರೊಮ್ಯಾನ್ಸ್ ಗೂ ಜೈ ಎನ್ನುವಂತೆ ನಟಿಸಿದ್ದಾರೆ. ಇನ್ನು ಖಳನಾಯಕರ ಪಾತ್ರಧಾರಿಗಳು, ಪೋಷಕ ಪಾತ್ರಗಳು, ಗೆಳೆಯರ ಪಾತ್ರಧಾರಿಗಳು ಸೇರಿದಂತೆ ಎಲ್ಲರೂ ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದ್ದಾರೆ.

ಬಹಳ ಅದ್ದೂರಿಯಾಗಿ ಈ ಚಿತ್ರವನ್ನ ಗುಜ್ಜಾಲ್ ಪುರುಷೋತ್ತಮ್ ನಿರ್ಮಿಸಿರುವುದು ಪರದೆ ಮೇಲೆ ಕಾಣುತ್ತದೆ. ನಿರ್ದೇಶಕ ನಂದಕಿಶೋರ್ ಅಚ್ಚುಕಟ್ಟಾಗಿ ಚಿತ್ರಕಥೆ ಹೆಣೆದು ತೆರೆಮೇಲೆ ತಂದಿದ್ದಾರೆ. ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಳ್ಳುವವರ ಬದುಕು, ಬವಣೆ, ರೌಡಿಗಳ ಅಟ್ಟಹಾಸ, ಪೋಲಿಸ್ ನವರ ಕಣ್ಣಾಮುಚ್ಚಾಲೆ ಹೀಗೆ ಎಲ್ಲವನ್ನು ಪೂರಕವಾಗಿ ತೆರೆಮೇಲೆ ತಂದಿದ್ದಾರೆ. ಚಿತ್ರದ ವೇಗ ಇನ್ನಷ್ಟು ಮಾಡಬಹುದಿತ್ತು.

ಈ ಚಿತ್ರಕ್ಕೆ ಚಂದನ್ ಶೆಟ್ಟಿಯ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಗಮನ ಸೆಳೆಯುವಂತಿದೆ. ಅಷ್ಟೇ ಅಚ್ಚುಕಟ್ಟಾಗಿ ಛಾಯಾಗ್ರಾಹಕ ಶೇಖರ್ ಚಂದ್ರು ಅವರ ಕ್ಯಾಮೆರಾ ಕೈಚಳಕ ಮೂಡಿಬಂದಿದೆ. ಅಷ್ಟೇ ಅದ್ಭುತವಾಗಿ ಸಾಹಸ ದೃಶ್ಯಗಳನ್ನ ರವಿವರ್ಮ ರವರು ಚಿತ್ರೀಕರಿಸಿದ್ದಾರೆ. ಒಟ್ಟಾರೆ ಮಾಸ್, ಆ್ಯಕ್ಷನ್ ಪ್ರಿಯರಿಗಾಗಿ ಈ ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ. ಎಲ್ಲರೂ ಈ ರಾಣ ಚಿತ್ರವನ್ನ  ನೋಡಬಹುದಾಗಿದೆ

Related posts