Cinisuddi Fresh Cini News 

ಮತ್ತೊಂದು ಹೊಸ ಚಿತ್ರದ ತಯಾರಿಯಲ್ಲಿ ರಕ್ಷಿತ್ ಶೆಟ್ಟಿ

ಕೊರೋನಾ ಲಾಕ್‍ಡೌನ್ ಆಗಿ ಸುಮಾರು ನೂರಕ್ಕೂ ಹೆಚ್ಚು ದಿನಗಳಾಗಿದೆ. ಆದರೆ ನಟ ರಕ್ಷಿತ್ ಶೆಟ್ಟಿ ಈ ಸಮಯದಲ್ಲಿ ಸುಮ್ಮನೆ ಕುಳಿತಿಲ್ಲ, ತಮ್ಮ ಎಂದಿನ ಸಿನಿಮಾ ಕೆಲಸಗಳನ್ನು ಕೈಬಿಟ್ಟಿಲ್ಲ.

ಇಂಥಾ ಬಿಡುವಿನ ವೇಳೆಯಲ್ಲಿ ಒಂದಷ್ಟು ಹೊಸ ಸ್ಕ್ರಿಪ್ಟ್ ಗಳನ್ನು ರೆಡಿ ಮಾಡಿಕೊಂಡಿದ್ದಾರೆ. ಅಲ್ಲದೆ ಈಗ ಹೊಸ ಪ್ರಾಜೆಕ್ಟ್‍ನ ಶೂಟಿಂಗ್‍ಗೆ ಹೋಗಲು ಸಹ ರೆಡಿಯಾಗಿದ್ದಾರೆ. ಬರುವ ಅಕ್ಟೋಬರ್ ಮೊದಲ ವಾರದಿಂದ ಆರಂಭವಾಗಲಿರುವ 777 ಚಾರ್ಲಿ ಚಿತ್ರದ ಚಿತ್ರೀಕರಣದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಕಿರಣ್‍ರಾಜ್ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಇದರ ಜೊತೆ ರಕ್ಷಿತ್ ಶೆಟ್ಟಿ ಅವರೀಗ ರಿಚಿ ಎಂಬ ಮತ್ತೊಂದು ಪ್ರಾಜೆಕ್ಟ್ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ.

ಈ ಚಿತ್ರವನ್ನು ಪಿ.ಕೆ. ರಾಹುಲ್ ಅವರು ನಿರ್ದೇಶಿಸಲಿದ್ದಾರೆ. ಸದ್ಯ ರಕ್ಷಿತ್‍ಶೆಟ್ಟಿ ಅವರೀಗ ಗೋವಾ ಪ್ರವಾಸದಲ್ಲಿದ್ದು, ಗೋವಾದಿಂದಲೇ ತಮ್ಮ ಹೊಸ ಚಿತ್ರದ ಕೆಲಸಗಳನ್ನು ಶುರು ಮಾಡಲು ತೀರ್ಮಾನಿಸಿದ್ದಾರೆ. ರಿಚಿ ಸಿನಿಮಾ ನನ್ನ ಮುಂದಿನ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿದೆ. ಈ ಚಿತ್ರ ನನಗೆ ತುಂಬಾ ವಿಶೇಷವಾಗಿದೆ.

ಇದಕ್ಕಾಗಿಯೆ ನಾವು ಒಂದು ಉತ್ತಮವಾದ ಸ್ಕ್ರಿಪ್ಟ್‍ನ್ನು ರೆಡಿ ಮಾಡಿಕೊಂಡಿದ್ದೇವೆ. ಇನ್ನು ಕರಾವಳಿ ಭಾಗಗಳಾದ ಮಂಗಳೂರು, ಉಡುಪಿ ಅಲ್ಲದೆ ಮುಂಬೈ ಮಹಾನಗರದಂಥಾ ವಿಭಿನ್ನ ಲೊಕೇಶನ್‍ಗಳಲ್ಲಿ ರಿಚಿ ಚಿತ್ರದ ಶೂಟಿಂಗ್ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ. ರಿಚಿ ಚಿತ್ರದ ಒಂದು ಭಾಗವನ್ನು ಗೋವಾ ಪ್ರದೇಶದಲ್ಲೂ ಚಿತ್ರೀಕರಿಸಲು ತೀರ್ಮಾನಿಸಲಾಗಿದೆ.

ನನಗೆ ಉಡುಪಿ ಮತ್ತು ಮಂಗಳೂರು ಹೆಸದೇನಲ್ಲ, ಆದರೆ ಗೋವಾ ಒಂದು ವಿಶೇಷವಾದ ಸ್ಥಳ. ಅದರ ಬಗ್ಗೆ ನಾನು ಅಷ್ಟಾಗಿ ತಿಳಿದುಕೊಂಡಿಲ್ಲ. ಹಾಗಾಗಿ ನಾನು ಈ ಲೊಕೇಶನ್‍ಅನ್ನು ನೋಡಬೇಕೆಂದು ಯೋಚಿಸಿದೆ ಮತ್ತು ಅದು ನನ್ನ ಬರವಣಿಗೆಯಲ್ಲಿ ನನಗೆ ತುಂಬಾನೇ ಸಹಾಯವನ್ನು ಸಹ ಮಾಡಿದೆ ಎಂದು ರಕ್ಷಿತ್ ಶೆಟ್ಟಿ ಅವರು ಹೇಳಿದ್ದಾರೆ.

ರಿಚಿ ಎನ್ನುವುದು ಈ ಹಿಂದೆ ರಕ್ಷಿತ್ ಶೆಟ್ಟಿ ಅವರ ಅಭಿನಯದಲ್ಲಿ ತೆರೆಕಂಡ ಉಳಿದವರು ಕಂಡಂತೆ ಚಿತ್ರದಲ್ಲಿ ಬರುವ ನಾಯಕನ ಪಾತ್ರದ ಹೆಸರಾಗಿದೆ. ಈ ಚಿತ್ರದ ಕಥೆ ಮತ್ತು ಪಾತ್ರದ ಬಗ್ಗೆ ನಾನು ಈಗಲೇ ಹೆಚ್ಚೇನೂ ವಿವರಣೆ ಹೇಳಲು ಬಯಸುವುದಿಲ್ಲ. ಆದರೆ ಉಳಿದವರು ಕಂಡಂತೆ ಚಿತ್ರದಲ್ಲಿ ನಾನು ನಿರ್ವಹಿಸಿದ ಆ ಪಾತ್ರದ ಹಿನ್ನೆಲೆಯನ್ನು ರಿಚಿ ಸಿನಿಮಾ ಹೊತ್ತು ತರುತ್ತಿದೆ ಎಂದಷ್ಟೇ ಮಾಹಿತಿ ನೀಡಬಲ್ಲೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ಉಳಿದವರು ಕಂಡಂತೆ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ರಾಹುಲ್ ಅವರು ಈ ಚಿತ್ರದ ಮೂಲಕ ನಿರ್ದೇಶಕರಾಗಲಿದ್ದಾರೆ. ಇನ್ನು ಈ ಚಿತ್ರವನ್ನು ಪುಷ್ಕರ್ ಫಿಲಂಸ್‍ನ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ಪರಂವಾ ಸ್ಟುಡಿಯೋದ ರಕ್ಷಿತ್ ಶೆಟ್ಟಿ ಜಂಟಿಯಾಗಿ ನಿರ್ಮಿಸಲಿದ್ದಾರೆ.

Related posts